More

    ಮಗಳ ಸಾವಿಗೆ ನ್ಯಾಯ ದೊರಕಿಸಿಕೊಡಿ

    ಚಿಕ್ಕಮಗಳೂರು: ಮಗಳ ಸಾವಿಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಮೃತಳ ಪಾಲಕರು, ಸಂಬಂಧಿಕರು ಪ್ರತಿಭಟನೆ ನಡೆಸಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣಮೂರ್ತಿ ಅವರಿಗೆ ಸೋಮವಾರ ದೂರು ಸಲ್ಲಿಸಿದರು.

    ಕಡೂರು ಪಟ್ಟಣದ ಗೃಹಿಣಿ ರುಕ್ಮಿಣಿ (31) ಭಾನುವಾರ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದಾರೆ. ಮೂಲತಃ ಮಂಡ್ಯ ಜಿಲ್ಲೆ ರಾಗಿಮುದ್ದನಹಳ್ಳಿ ಗ್ರಾಮದ ರುಕ್ಮಿಣಿ ಅವರನ್ನು 13 ವರ್ಷಗಳ ಹಿಂದೆ ಕಡೂರಿನ ಕಣ್ಣನ್ ಎಂಬುವನೊಂದಿಗೆ ವಿವಾಹ ಮಾಡಲಾಗಿತ್ತು. ಮದುವೆ ಆದಾಗಿನಿಂದಲೂ ರುಕ್ಮಿಣಿ ಅತ್ತೆ, ಮಾವ, ಗಂಡ ಕಿರುಕುಳ ನೀಡುತ್ತಿದ್ದಾರೆಂಬ ಆರೋಪವಿತ್ತು. ಭಾನುವಾರ ಬೆಳಗ್ಗೆ 8 ಗಂಟೆಗೆ ರುಕ್ಮಿಣಿ ತವರು ಮನೆಗೆ ಕರೆ ಮಾಡಿದ್ದಾಳೆ. ಆದರೆ ಬೆಳಗ್ಗೆ 10 ಗಂಟೆ ವೇಳೆಗೆ ರುಕ್ಮಿಣಿ ಮೃತಪಟ್ಟಿರುವ ಬಗ್ಗೆ ಮಾಹಿತಿ ದೊರೆತಿದೆ. ಇದಕ್ಕೆಲ್ಲ ಗಂಡನ ಕುಟುಂಬಸ್ಥರೇ ಕಾರಣ ಎಂದು ಪಾಲಕರು ಆರೋಪಿಸಿದರು.
    ರುಕ್ಮಿಣಿ ಗಂಡ ಕಣ್ಣನ್, ತಾಯಿ ಧನಲಕ್ಷ್ಮೀ, ತಮ್ಮ ರವಿ, ತಂಗಿ ಶರಿಧಾ ನನ್ನ ಮಗಳಿಗೆ ಚಿತ್ರಹಿಂಸೆ ನೀಡಿದ್ದಾರೆ. ರುಕ್ಮಿಣಿಯನ್ನು ತವರು ಮನೆಗೆ ಕಳುಹಿಸುತ್ತಿರಲಿಲ್ಲ. ಒಂದು ವೇಳೆ ತವರು ಮನೆಗೆ ಬಂದರೆ ಅದೇ ದಿನ ರಾತ್ರಿ ವಾಪಸ್ ಬರುವಂತೆ ತಾಕೀತು ಮಾಡುತ್ತಿದ್ದರು. ಮಗಳಿಗೆ ಮಾನಸಿಕ ಹಿಂಸೆ ನೀಡುತ್ತಿದ್ದರು ಎಂದು ರುಕ್ಮಿಣಿ ಅಕ್ಕ ರಾಧಾ ಆಕ್ರೋಶ ವ್ಯಕ್ತಪಡಿಸಿದರು.
    ಪಾಲಕರ ದೂರು ಸ್ವೀಕರಿಸಿದ ನಂತರ ರುಕ್ಮಿಣಿ ಮೃತ ದೇಹವನ್ನು ಚಿಕ್ಕಮಗಳೂರು ಸರ್ಕಾರಿ ಆಸ್ಪತ್ರೆ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲು ವೈದ್ಯರಿಗೆ ತಿಳಿಸಿದರು. ದೂರನ್ನು ಆಧರಿಸಿ ಎಫ್‌ಐಆರ್ ದಾಖಲಿಸುವಂತೆ ಎಎಸ್ಪಿ ಕೃಷ್ಣಮೂರ್ತಿ ಕಡೂರು ಇನ್ಸ್‌ಪೆಕ್ಟರ್‌ಗೆ ಸೂಚಿಸಿದರು.
    ಆರೋಪಿಗಳ ರಕ್ಷಣೆ ಆರೋಪ: ರುಕ್ಮಿಣಿಯನ್ನು ಹತ್ಯೆ ಮಾಡಲಾಗಿದೆ. ಆದರೆ ಪೊಲೀಸರು ಇದನ್ನು ಆತ್ಮಹತ್ಯೆ ಎಂದು ಮರೆಮಾಚಲು ಯತ್ನಿಸುತ್ತಿದ್ದಾರೆ. ಆರೋಪಿಗಳಾದ ಕಣ್ಣನ್, ಧನಲಕ್ಷ್ಮೀ, ರವಿ ಅವರನ್ನು ರಕ್ಷಣೆ ಮಾಡಲು ಪೊಲೀಸರು ಮುಂದಾಗಿದ್ದಾರೆ. ಭಾನುವಾರ ಬೆಳಗ್ಗೆ ಮೃತಪಟ್ಟಿರುವ ರುಕ್ಮಿಣಿಯ ಮೃತ ದೇಹವನ್ನು ಕಡೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಯಾರು, ಏನು? ಎಂಬುದರ ಬಗ್ಗೆ ಮಾಹಿತಿ ನೀಡದೆ ಪರಾರಿಯಾಗಿದ್ದಾರೆ. ನಾವು ಮಂಡ್ಯದಿಂದ ಬಂದು ನೋಡುವ ತನಕ ಮೃತದೇಹವು ಆಸ್ಪತ್ರೆಯಲ್ಲಿ ಹಾಗೆಯೇ ಇದೆ. ವೈದ್ಯರೂ ಸಹ ಗಮನಹರಿಸಿಲ್ಲ. ದೂರು ನೀಡಲು ಹೋದವರ ಮೇಲೆಯೇ ದಬ್ಬಾಳಿಕೆ ಮಾಡಿ ನಾವು ಹೇಳಿದ ಹಾಗೆಯೇ ದೂರು ಬರೆದು ಕೊಡಬೇಕು ಎಂದು ಕಡೂರು ಠಾಣೆ ಇನ್ಸ್‌ಪೆಕ್ಟರ್ ಬೆದರಿಕೆ ಹಾಕಿದ್ದಾರೆ ಎಂದು ರಕ್ಮಿಣಿಯ ಪಾಲಕರು ಆರೋಪಿಸಿದರು.
    ನ್ಯಾಯ ಕೊಡಿಸಲು ಮನವಿ: ಕಣ್ಣನ್ ಕುಟುಂಬದವರು ರುಕ್ಮಿಣಿಗೆ ನಿರಂತರವಾಗಿ ಕುರುಕುಳ ನೀಡುತ್ತಿದ್ದರು. ಒಮ್ಮೆ ಪಾಲಕರು ಕಣ್ಣನ್ ಜತೆ ಸಂಧಾನ ಮಾಡಿದ್ದಾರೆ. ಗಂಡನ ಮನೆಯಲ್ಲಿ ನೀಡುತ್ತಿದ್ದ ಕಿರುಕುಳ ನೋಡಲಾಗದೆ ಇಲ್ಲಿರುವುದು ಬೇಡ ಎಂದು ರುಕ್ಮಿಣಿಯನ್ನು ತವರು ಮನೆಗೆ ಕರೆದುಕೊಂಡು ಹೋಗಲಾಗಿತ್ತು. ಮಕ್ಕಳನ್ನು ಬಿಟ್ಟು ಇರಲ್ಲ ಎಂದು ಹೇಳಿ ಮತ್ತೆ ಗಂಡನ ಮನೆಗೆ ವಾಪಸ್ ಹೋದಳು. ಆದರೆ ಈ ಪರಿಸ್ಥಿತಿ ಬರುತ್ತದೆ ಎಂದು ಊಹಿಸಿರಲಿಲ್ಲ. ರುಕ್ಮಿಣಿ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿರುವುದನ್ನು ಕಣ್ಣನ್ ಒಪ್ಪಿಕೊಂಡಿರುವ ಆಡಿಯೋ ಲಭ್ಯವಾಗಿದ್ದು, ನ್ಯಾಯಕೊಡಿಸಬೇಕು ಎಂದು ಮೃತಳ ಅಕ್ಕ ರಾಧಾ ಒತ್ತಾಯಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts