More

    ಕರೊನಾ ನೆರಳಲ್ಲಿಯೇ ಜರ್ಮನಿ ಕನ್ನಡಿಗರ ದಿನಚರಿ

    ಕರೊನಾ ವೈರಾಣು ಕಪಿಮುಷ್ಠಿಯಲ್ಲಿರುವ ಜರ್ಮನಿಯಲ್ಲಿ ಅನೇಕ ಕನ್ನಡಿಗರಿದ್ದಾರೆ. ದಕ್ಷಿಣ ಕನ್ನಡದ ಬೆಳ್ತಂಗಡಿ ತಾಲೂಕಿನ ಅರಸಿನಮಕ್ಕಿ ನಿವಾಸಿ, ಸದ್ಯ ಜರ್ಮನಿಯಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿರುವ ಗುರುಪ್ರಕಾಶ್ ಕರ್ಕೇರ ವಿಜಯವಾಣಿ ಜತೆ ಇಲ್ಲಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

    ದಿನಂಪ್ರತಿ ಜರ್ಮನಿಯಲ್ಲಿ ಪತ್ತೆಯಾಗುತ್ತಿರುವ ಸುಮಾರು 6 ಸಾವಿರ ಕರೊನಾ ಪಾಸಿಟಿವ್ ಪ್ರಕರಣಗಳು ದೇಶದಲ್ಲಿ ಮಹಾಮಾರಿ ಸೋಂಕು ಹಬ್ಬುತ್ತಿರುವ ವೇಗವನ್ನು ಸೂಚಿಸುತ್ತದೆ. ವಿಶ್ವದ ಅಗ್ರ ಔದ್ಯೋಗಿಕ ರಾಷ್ಟ್ರಗಳ ಸಾಲಿನಲ್ಲಿ ಮುಂಚೂಣಿಯಲ್ಲಿರುವ ಜರ್ಮನಿಯ ಜನರ ಬದುಕು ಕರೊನಾ ನೆರಳಿನಲ್ಲಿಯೇ ಸಾಗಿದೆ.

    ನಾವು ತುಂಬಾ ಹೈಜೆನಿಕ್ ಆಗಿದ್ದೇವೆ ಎಂದು ಯುರೋಪಿಯನ್ ರಾಷ್ಟ್ರಗಳು ಹೇಳಿಕೊಳ್ಳುತ್ತವೆ. ನಮ್ಮ ವಿಶ್ವವಿದ್ಯಾಲಯಗಳು ಆರಂಭದಲ್ಲಿ ಸ್ವಲ್ಪ ನಿರ್ಲಕ್ಷೃ ವಹಿಸಿರುವುದೇ ಪರಿಸ್ಥಿತಿ ಇಲ್ಲಿ ಕಳೆದ ಒಂದು ವಾರದಲ್ಲಿ ತುಂಬ ಕಠಿಣಗೊಳ್ಳಲು ಮುಖ್ಯ ಕಾರಣ ಅನಿಸುತ್ತದೆ. ಜರ್ಮನಿಯ ಮುಖ್ಯ ನಗರಗಳಲ್ಲಿ ಒಂದಾಗಿರುವ ಮ್ಯೂನಿಕ್‌ನಿಂದ ಸುಮಾರು ಎರಡು ಗಂಟೆ ದಾರಿಯಷ್ಟು ದೂರದಲ್ಲಿರುವ ಉಲ್ಮ್ನಲ್ಲಿರುವ ಏಛ್ಝಿಞಟ್ಝಠ್ಢಿ ಐ್ಞಠಿಜಿಠ್ಠಿಠಿಛಿನಲ್ಲಿ ಸಂಶೋಧನಾ ವಿಜ್ಞಾನಿಯಾಗಿ ನಾನು ಕರ್ತವ್ಯ ನಿರ್ವಹಿಸುತ್ತಿದ್ದೇನೆ.

    ದೇಶದ ಇತರ ಪ್ರಜೆಗಳಂತೆ ನಮ್ಮ ನಗರದಲ್ಲಿ ಇರುವ ಐವತ್ತರಷ್ಟು ಕನ್ನಡಿಗರ ಬದುಕು ಕೂಡ ಹೊಸ ಸವಾಲನ್ನು ಎದುರಿಸುತ್ತಿದೆ. ಇಲ್ಲಿ ಇರುವ ಭಾರತೀಯರು ಹೆಚ್ಚಿನವರು ಆಟೋಮೊಬೈಲ್ ಕಂಪನಿ, ಇಲೆಕ್ಟ್ರಾನಿಕ್, ಐಟಿ ವಲಯಗಳಲ್ಲಿ ದುಡಿಯುತ್ತಿದ್ದಾರೆ. ಕಳೆದ ಒಂದು ವಾರದಿಂದ ನಾನು ವರ್ಕ್ ಫ್ರಂ ಹೋಂ(ಮನೆಯಿಂದಲೇ ಕೆಲಸ)ನಲ್ಲಿ ಇದ್ದೇನೆ. ಆನ್‌ಲೈನ್ ಮೂಲಕವೇ ಗ್ರೂಪ್ ಮೀಟಿಂಗ್ ನಡೆಯುತ್ತದೆ. ಪ್ರಸ್ತುತ ಇಲ್ಲಿನ ಅನೇಕ ಕಂಪನಿಗಳು ನೌಕರರಿಗೆ ವಾರದಲ್ಲಿ ಎರಡು ದಿನ ಕೆಲಸ, ಮೂರು ದಿನ ರಜೆ, ಮಾಸಿಕ ಶೇ.60 ವೇತನ ಸೂತ್ರ ಅನುಸರಿಸುತ್ತಿದೆ. ಸರ್ಕಾರದ ಭಾಗವಾಗಿರುವ ನಮ್ಮ ಸಂಸ್ಥೆಯ ಅಧಿಕಾರಿಗಳು, ಸಿಬ್ಬಂದಿಗೆ ಈ ಸೂತ್ರ ಅನ್ವಯವಾಗುವುದಿಲ್ಲ.
    ಇಲ್ಲಿ ಸಿಗರೇಟು ಸೇದುವವರು ಅಧಿಕ. ಶಾಲಾ- ಕಾಲೇಜುಗಳಲ್ಲಿ ಓದುತ್ತಿರುವಾಗಲೇ ಹೆಚ್ಚಿನ ಹುಡುಗ, ಹುಡುಗಿಯರು ಸಿಗರೇಟು ಸೇದುವ ಅಭ್ಯಾಸ ರೂಢಿಸಿಕೊಂಡಿರುವುದು ಕಂಡುಬರುತ್ತದೆ. ಇಲ್ಲಿ ಕರೊನಾ ವೇಗವಾಗಿ ಹರಡಲು ಇದು ಕೂಡ ಗಮನಾರ್ಹ ಕಾರಣ ಅನಿಸುತ್ತದೆ.

    ಭಾರತದಂತಹ ರಾಷ್ಟ್ರಗಳಲ್ಲಿ ಕರೊನಾ ವೈರಸ್ ಸಮುದಾಯಕ್ಕೆ ಹರಡಿದರೆ ಪರಿಣಾಮ ಊಹಾತೀತ. ಜರ್ಮನಿಯಲ್ಲಿ 2 ಸಾವಿರ ಜನರಿಗೆ ಆಸ್ಪತ್ರೆಯಲ್ಲಿ 16 ಹಾಸಿಗೆ ಲಭ್ಯವಿದ್ದರೆ, ಭಾರತದಲ್ಲಿ 2 ಸಾವಿರ ಜನರಿಗೆ ಆಸ್ಪತ್ರೆಯಲ್ಲಿ ಒಂದು ಹಾಸಿಗೆ ಮಾತ್ರ. ವೆಂಟಿಲೇಟರ್‌ಗಳ ಪೂರೈಕೆ ನಂತರದ ವಿಷಯ. ಈ ಹಿನ್ನೆಲೆಯಲ್ಲಿ ಭಾರತೀಯರು ಹೆಚ್ಚಿನ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಬೇಕು.

    ಪೂರ್ಣ ಲಾಕ್‌ಡೌನ್ ಇಲ್ಲ
    ಪರಿಸ್ಥಿತಿ ಗಂಭೀರ ಇದ್ದರೂ ಸರ್ಕಾರ ಪೂರ್ಣ ಲಾಕ್‌ಡೌನ್ ಘೋಷಿಸಿಲ್ಲ. ಸೂಪರ್‌ಮಾರ್ಕೆಟ್, ಆಸ್ಪತ್ರೆ ಮುಂತಾದ ಅವಶ್ಯಕ ಸೇವೆಗಳು ಪೂರ್ಣ ಪ್ರಮಾಣದಲ್ಲಿ ಲಭ್ಯ. ಸಾರ್ವಜನಿಕ ಸಾರಿಗೆ ಬಸ್‌ಗಳು ಇವೆ. ಆದರೆ ಅವುಗಳ ಸಂಖ್ಯೆ ಕಡಿತಗೊಳಿಸಲಾಗಿದೆ. ಸ್ವಂತ ವಾಹನಗಳಲ್ಲಿ ಓಡಾಡುವವರಿಗೆ ಸಮಸ್ಯೆ ಇಲ್ಲ. ಇಬ್ಬರಿಗಿಂತ ಹೆಚ್ಚು ಜನರು ಓಡಾಡಲು ಅವಕಾಶವಿಲ್ಲ. ನಿಯಮ ಉಲ್ಲಂಘಿಸಿದರೆ ದುಬಾರಿ ದಂಡ ಪಾವತಿಸಬೇಕು. ತೀವ್ರ ಸ್ವರೂಪದ ಕಾನೂನು ಕ್ರಮಗಳನ್ನು ಎದುರಿಸಬೇಕು. ಆದ್ದರಿಂದ ನಿಯಮ ಉಲ್ಲಂಘಿಸುವವರು ಕಡಿಮೆ.

    ರಾಯಭಾರ ಕಚೇರಿ ಸ್ಪಂದನೆ
    ಇಲ್ಲಿನ ರಾಯಭಾರ ಕಚೇರಿ ಭಾರತೀಯರ ಅಗತ್ಯಗಳಿಗೆ ಅತ್ಯುತ್ತಮ ರೀತಿಯಲ್ಲಿ ಸ್ಪಂದಿಸುತ್ತಿದೆ. ಪ್ರಸಕ್ತ ಸನ್ನಿವೇಶದಲ್ಲಿ ಯಾವುದೇ ರೀತಿ ಸಮಸ್ಯೆ ಎದುರಾದರೆ ಮಾಹಿತಿ ಒದಗಿಸುವಂತೆ ಕಚೇರಿ ಸೂಚನೆ ಇದೆ. ಮಾ.18ರಂದು ಭಾರತಕ್ಕೆ ಏರ್‌ಇಂಡಿಯಾ ಸಂಸ್ಥೆಯ ಕೊನೆಯ ವಿಮಾನ ಹಾರಾಟ ನಡೆಸಲಿದೆ. ಬಳಿಕ ತಾತ್ಕಾಲಿಕವಾಗಿ ವಿಮಾನ ಸೇವೆ ನಿಲುಗಡೆಯಾಗಲಿದೆ ಎಂದು ರಾಯಭಾರಿ ಕಚೇರಿ ಮಾಹಿತಿ ಇತ್ತು. ಆ ಸಂದರ್ಭ ಜರ್ಮನಿ-ಭಾರತ ವಿಮಾನ ಪ್ರಯಾಣ ದರ 40 ಸಾವಿರ ರೂ. ತನಕ ಏರಿಕೆಯಾಗಿತ್ತು. ಸಾಮಾನ್ಯ ದಿನಗಳಲ್ಲಿ ಸುಮಾರು 24 ಸಾವಿರ ರೂ.ಗೆ ಈ ಟಿಕೆಟ್ ಲಭ್ಯವಾಗುತ್ತದೆ.

    ಭಾಷಾ ತೊಡಕು
    ಜರ್ಮನಿ ಭಾಷೆ ಗೊತ್ತಿಲ್ಲದವರು ಇಲ್ಲಿ ವ್ಯವಹರಿಸುವುದು ಕಷ್ಟ. ಏಕೆಂದರೆ ಇಲ್ಲಿ ಸರ್ಕಾರದ ಎಲ್ಲ ಸುತ್ತೋಲೆಗಳು ಜನರ ವ್ಯವಹಾರ ಜರ್ಮನಿ ಭಾಷೆಯಲ್ಲಿಯೇ ನಡೆಯುತ್ತದೆ. ಇಂದಿನ ಪರಿಸ್ಥಿತಿಯಲ್ಲಿ ಏನಾದರೂ ಆರೋಗ್ಯ ಏರುಪೇರಾದರೆ ನಾವು ಹೆಲ್ಪ್ ಲೈನ್‌ಗೆ ಕರೆ ಮಾಡಿದರೆ ಸಹಾಯ ದೊರೆಯುತ್ತದೆ. ಆದರೆ ಇನ್ನೂ ಈ ಭಾಷೆಯ ಸರಿಯಾದ ಅರಿವಿರದ ನಾವು ಹೆಲ್ಪ್ಲೈನ್‌ಗೆ ಕರೆ ಮಾಡಿ ಮಾತನಾಡುವುದು ಕೂಡ ಕಷ್ಟ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts