More

    ಭಾರತೀಯ ನೃತ್ಯಕ್ಕೆ ಮಾರುಹೋದ ಜರ್ಮನ್ನರು

    ಅವಿನ್ ಶೆಟ್ಟಿ ಉಡುಪಿ 
    ಭಾರತೀಯ ನೆಲದ ನೃತ್ಯ ಕಲಾಪ್ರಕಾರಗಳು ಜಗತ್ತಿನಲ್ಲಿ ವಿಶೇಷ ಮನ್ನಣೆ ಪಡೆದುಕೊಂಡಿವೆ. ವಿದೇಶಿಯರಿಗೆ ಭಾರತೀಯ ನೃತ್ಯ ಪ್ರಕಾರಗಳ ಬಗ್ಗೆ ವಿಶೇಷ ಆಸಕ್ತಿ. ಉಡುಪಿಯ ದರ್ಪಣ ನೃತ್ಯ ಸಂಸ್ಥೆಯಲ್ಲಿ ಜರ್ಮನಿಯ ನಾಲ್ಕು ವಿದ್ಯಾರ್ಥಿಗಳು ಭರತನಾಟ್ಯ ಕಲಿಯುತ್ತಿದ್ದಾರೆ. ಆರು ತಿಂಗಳಿನಿಂದ ದರ್ಪಣ ನೃತ್ಯ ಸಂಸ್ಥೆ ಸ್ಥಾಪಕರಾದ ರಮ್ಯಾ ಮತ್ತು ರಕ್ಷಾ ಉಡುಪಿ ಮಾರ್ಗದರ್ಶನದಲ್ಲಿ ನೃತ್ಯ ತರಬೇತಿ ಪಡೆಯುತ್ತಿದ್ದಾರೆ.
    ಜರ್ಮನಿಯ ಮ್ಯಾಥ್ಯೂ, ಯೊಹಾನ, ಇದಾ, ವ್ಯಾಲೆಂಟೈನ್ ಕೃಷ್ಣನೂರಿಗೆ ಬಂದು ಆಸಕ್ತಿಯಿಂದ ನೃತ್ಯ ಕಲಿಯುತ್ತಿರುವ ಪ್ರತಿಭಾನ್ವಿತರು. ಇವರು ಧರ್ಮಸ್ಥಳ ಲಕ್ಷದೀಪೋತ್ಸವ ಸೇರಿದಂತೆ ಇತರೆ ಸಾರ್ವಜನಿಕ ಉತ್ಸವಗಳಲ್ಲೂ ನೃತ್ಯ ಪ್ರದರ್ಶನ ನೀಡಿ ವಿಶೇಷ ಗಮನ ಸೆಳೆದಿದ್ದಾರೆ.

    ಕಡಿಮೆ ಸಮಯದಲ್ಲಿ ಭಾರತೀಯ ನೃತ್ಯವನ್ನು ಅಭ್ಯಸಿಸಿ ಸಾರ್ವಜನಿಕ ವೇದಿಕೆಗಳಲ್ಲಿ ಪ್ರದರ್ಶನ ನೀಡಿರುವುದು ಗಮನಾರ್ಹ. ಉಡುಪಿಯಲ್ಲಿ ಒಂದು ವರ್ಷ ಅಧ್ಯಯನ ಪ್ರವಾಸದಲ್ಲಿರುವ ಇವರು ನೃತ್ಯ ಕಲಿಕೆಯೊಂದಿಗೆ ಸರ್ಕಾರಿ ಶಾಲೆಯಲ್ಲಿ ಇಂಗ್ಲಿಷ್ ಪಾಠ, ಕನ್ನಡ ಕಲಿಕೆ ಜತಗೆ ಇಲ್ಲಿನ ಕೃಷಿ ಮತ್ತು ಜಾನಪದ ವಿಷಯಗಳ ಬಗ್ಗೆಯೂ ತಿಳಿದುಕೊಳ್ಳುತ್ತಿದ್ದಾರೆ.

    ನಾಲ್ಕು ವರ್ಷಗಳಿಂದಲೂ ಈ ಸಂಸ್ಥೆಯಲ್ಲಿ ವಿದೇಶಿಯರು ನೃತ್ಯ ಕಲಿತು ತಮ್ಮ ದೇಶಗಳಗೆ ವಾಪಸಾಗುತ್ತಿದ್ದಾರೆ. ಈಗಿರುವ ನಾಲ್ವರು ಜರ್ಮನ್ನರು ವಾರಕ್ಕೆ ಎರಡು ದಿನ ಸಾಯಂಕಾಲ ಒಂದೆರಡು ಗಂಟೆ ನೃತ್ಯ ಕಲಿಯುತ್ತಾರೆ. ಯಕ್ಷಗಾನದ ಬಗ್ಗೆಯೂ ಅಪಾರ ಆಸಕ್ತಿ ಹೊಂದಿರುವ ಇವರು ಆ ಕಲೆಯ ಬಗ್ಗೆಯೂ ಮಾರ್ಗದರ್ಶನ ಪಡೆಯುತ್ತಿದ್ದಾರೆ. ದೇಶದ ಹಲವೆಡೆ ಇವರು ಭರತನಾಟ್ಯ, ಕಥಕ್, ಗರ್ಬಾ ಮೊದಲಾದ ನೃತ್ಯಗಳನ್ನು ಪ್ರಸ್ತುತಪಡಿಸಿದ್ದಾರೆ.

    ಸಹೋದರಿಯರ ಸಾಧನೆ: ಉಡುಪಿಯ ದರ್ಪಣ ನೃತ್ಯ ಸಂಸ್ಥೆ ನಾಲ್ಕು ವರ್ಷಗಳಿಂದ ಮಕ್ಕಳು ಸೇರಿದಂತೆ ಎಲ್ಲ ವರ್ಗದವರಿಗೂ ನೃತ್ಯ ಚಟುವಟಿಕೆ, ತರಬೇತಿ ನೀಡುತ್ತಿದೆ. ಐಟಿ ಕಂಪನಿಯಲ್ಲಿ ಇಂಜಿನಿಯರ್ ಆಗಿದ್ದ ರಮ್ಯಾ, ನೃತ್ಯದ ಮೇಲೆ ಆಸಕ್ತಿಯಿಂದ ಉದ್ಯೋಗ ತೊರೆದು ದರ್ಪಣ ಸಂಸ್ಥೆ ಆರಂಭಿಸಿದ್ದಾರೆ. ಇವರೊಂದಿಗೆ ಸಹೋದರಿ, ಮೀಡಿಯ ಕಮ್ಯೂನಿಕೇಶನ್ ಪದವೀಧರೆ ರಕ್ಷಾ ಕೈಜೋಡಿಸಿದ್ದಾರೆ.

     ಪ್ರತಿವರ್ಷ ಜರ್ಮನಿಯಿಂದ ಉಡುಪಿ ಪ್ರವಾಸಕ್ಕೆ ಬರುವ ಜರ್ಮನ್ ಕಲಾವಿದರು ನಮ್ಮಲ್ಲಿ ತರಬೇತಿ ಪಡೆಯುತ್ತಾರೆ. ಶಾಸ್ತ್ರೀಯ ನೃತ್ಯ ಕಲಾಪ್ರಕಾರಗಳಲ್ಲಿ ಅವರಿಗೆ ಹೆಚ್ಚಿನ ಒಲವಿದೆ. ಭಾರತೀಯ ಕಲೆ, ಸಂಸ್ಕೃತಿಯನ್ನು ಇಷ್ಟಪಡುತ್ತಾರೆ. ಇರುವಷ್ಟು ದಿನ ಪೂರ್ಣ ಪ್ರಮಾಣದಲ್ಲಿ ಅವರಿಗೆ ಕಲಿಯಲು ಸಾಧ್ಯವಿಲ್ಲದಿದ್ದರೂ, ಆಸಕ್ತಿಯಿಂದ ಕಲಿಯುತ್ತಾರೆ. ಧರ್ಮಸ್ಥಳ ಲಕ್ಷದೀಪೋತ್ಸವ ಸಂದರ್ಭ ಅತ್ಯುತ್ತಮ ನೃತ್ಯ ಪ್ರದರ್ಶನ ತೋರಿದ್ದರು.
    ರಕ್ಷಾ ಉಡುಪಿ ದರ್ಪಣ ನೃತ್ಯ ತರಬೇತಿ ಸಂಸ್ಥೆ, ಉಡುಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts