More

    ಶಾಲೆ ಆಸ್ತಿಗೆ ಡಿಜಿ ಬೇಲಿ!; ಸರ್ಕಾರಿ ಸ್ಕೂಲ್​ಗಳ ಸ್ವತ್ತು ಸಂರಕ್ಷಣೆಗೆ ಸರ್ಕಾರ ಹೊಸ ಹೆಜ್ಜೆ

    ಬೆಂಗಳೂರು: ಸರ್ಕಾರಿ ಶಾಲೆಗಳ ಆಸ್ತಿಗಳನ್ನು ಭೂಗಳ್ಳರಿಂದ ರಕ್ಷಿಸಲು ಡಿಜಿಟಲ್ ಬೇಲಿ ನಿರ್ಮಾಣವಾಗಲಿದೆ. ರಾಜ್ಯದ ಸರ್ಕಾರಿ ಸ್ಕೂಲ್​ಗಳ ಆಸ್ತಿ ಸಂರಕ್ಷಣೆಗೆ ಹೆಜ್ಜೆ ಇಟ್ಟಿರುವ ಸರ್ಕಾರ ಎಲ್ಲ ಸ್ವತ್ತುಗಳನ್ನು ಜಿಯೋ ಫೆನ್ಸಿಂಗ್ ತಂತ್ರಜ್ಞಾನಕ್ಕೆ ಅಳವಡಿಸಲು ಆಲೋಚಿಸಿದೆ.

    ಇದರ ಮೊದಲ ಹೆಜ್ಜೆಯಾಗಿ ಮೊದಲು ಜಿಯೋ ಮ್ಯಾಪಿಂಗ್ ಕಾರ್ಯ ನಡೆಯಲಿದೆ. ಬಳಿಕ ಫೆನ್ಸಿಂಗ್ ಮಾಡಲು ಚಿಂತಿಸಲಾಗಿದೆ. ಈ ಸಂಬಂಧ ಶಿಕ್ಷಣ ಇಲಾಖೆ ಕಂದಾಯ ಇಲಾಖೆ ಜತೆ ಮಾತುಕತೆ ನಡೆಸಿದೆ. ಈ ತಂತ್ರಜ್ಞಾನ ಪ್ರಕ್ರಿಯೆ ಪೂರ್ಣಗೊಂಡ ನಂತರ ಮುಂದೆ ಆ ಸ್ಥಳ ಒಂದಿಂಚು ಒತ್ತುವರಿಯಾದರೂ, ಇಲಾಖೆಗೆ ತಕ್ಷಣ ಮಾಹಿತಿ ದೊರೆಯಲಿದೆ. ಯಾರು ಒತ್ತುವರಿ ಮಾಡಿದ್ದಾರೆಂಬುದು ಸಹ ತಿಳಿಯುವುದರಿಂದ ಮರಳಿ ಸ್ಥಳವನ್ನು ಪಡೆದುಕೊಳ್ಳಲು ಸಹಕಾರಿಯಾಗಲಿದೆ.

    ಏನಿದು ಜಿಯೋ ಫೆನ್ಸಿಂಗ್?: ಕೆಡಾಸ್ಟ್ರಲ್ ಸರ್ವೆ ಮತ್ತು ಜಿಯೋ ಟ್ಯಾಗಿಂಗ್ ತಂತ್ರಜ್ಞಾನದ ಮೂಲಕ ಶಾಲೆಗೆ ಸೇರಿದ ಸ್ಥಳವನ್ನು ಅಡ್ವಾನ್ಸ್ ಮ್ಯಾಪಿಂಗ್ ಮಾಡಲಾಗುತ್ತದೆ. ಇದರಿಂದಾಗಿ ಯಾವ ಪ್ರದೇಶ ಯಾವ ಸರ್ವೆಗೆ ಸೇರಲಿದೆ ಎಂಬೆಲ್ಲ ಮಾಹಿತಿ ಕ್ಷಣಾರ್ಧದಲ್ಲೇ ದೊರೆಯಲಿದೆ. ಆನಂತರ ಜಿಯೋ ಟ್ಯಾಗಿಂಗ್ ಅಥವಾ ಫೆನ್ಸಿಂಗ್ ಮೂಲಕ ಸರ್ವೆ ಉಪಕರಣ, ಕ್ಯಾಮರಾಗಳ ಮೂಲಕ ಶಾಲೆಗೆ ಸೇರಿದ ಸಂಪೂರ್ಣ ಆಸ್ತಿ ಸೆರೆ ಹಿಡಿದು ಮ್ಯಾಪಿಂಗ್ ಮಾಡಲಾಗುತ್ತದೆ. ಮೆಟಡೇಟಾದಿಂದ ಜಿಯೋ ಟ್ಯಾಗ್ ನಿರ್ವಿುಸುವುದರಿಂದ ಆ ಸ್ಥಳಕ್ಕೆ ಭೇಟಿ ನೀಡಿದ ಕೂಡಲೇ ಸ್ಥಳದ ಹೆಸರು, ಅದರ ವಿಸ್ತೀರ್ಣ ಸೇರಿ ಸಂಪೂರ್ಣ ಮಾಹಿತಿ ಲಭ್ಯವಾಗಲಿದೆ. ಹೆಚ್ಚಾಗಿ ಛಾಯಾಚಿತ್ರಗ್ರಾಹಕರು ಇದರ ಬಳಕೆ ಮಾಡುತ್ತಾರೆ. ಸಾಮಾಜಿಕ ತಾಲತಾಣಗಳಲ್ಲಿ ಜಿಯೋಟ್ಯಾಗ್ ಬಳಕೆ ಮಾಡುವುದರಿಂದ ಆ ಪ್ರದೇಶ ಸಂಬಂಧಿತ ಮತ್ತಷ್ಟು ಮಾಹಿತಿ ಪಡೆದುಕೊಳ್ಳಲು ಅನುಕೂಲವಾಗಲಿದೆ.

    ಆಸ್ತಿ ದಾಖಲೆ ಸವಾಲು: ರಾಜ್ಯದಲ್ಲಿ 50,066 ಸರ್ಕಾರಿ ಶಾಲೆಗಳಿವೆ. ಈ ಹಿಂದೆ ಶಾಲೆ ನಿರ್ವಣಕ್ಕೆ ಹಳ್ಳಿಯ ಯಜಮಾನ ಸ್ಥಾನದಲ್ಲಿದ್ದವರು ಹತ್ತಾರು ಎಕರೆ ಪ್ರದೇಶವನ್ನು ದಾನ ರೂಪದಲ್ಲಿ ಆಸ್ತಿ ನೀಡಿದ್ದಿದೆ. ಆದರೆ ಬಹುತೇಕ ಪ್ರಕರಣಗಳಲ್ಲಿ ಆಸ್ತಿ ಪತ್ರಗಳು ಶಾಲೆ ಪರವಾಗಿಲ್ಲ. ಈ ಹಿನ್ನೆಲೆಯಲ್ಲಿ ಶಾಲೆಗಳಿಗೆ ಸೇರಿದ ಸ್ಥಿರಾಸ್ತಿಯನ್ನು ಆಯಾ ಶಾಲೆಗಳ ಹೆಸರಿಗೆ ಖಾತೆ ಬದಲಾವಣೆ ಮಾಡಿ ಆರ್​ಟಿಸಿ, ಪಹಣಿಯನ್ನು ಜಿಲ್ಲಾಧಿಕಾರಿಗಳಿಂದ ಪಡೆದುಕೊಳ್ಳುವಂತೆ ಇಲಾಖೆ ಸೂಚನೆ ನೀಡಿದೆ. ರಾಜ್ಯದಲ್ಲಿರುವ 50 ಸಾವಿರ ಶಾಲೆಗಳಲ್ಲಿ ಎಷ್ಟು ಶಾಲೆಗಳ ಆಸ್ತಿ ವ್ಯಾಜ್ಯದಲ್ಲಿದೆ ಎಂಬ ನಿಖರ ಮಾಹಿತಿ ಇಲಾಖೆಯ ಬಳಿ ಇಲ್ಲ. ಬಹುತೇಕ ಪ್ರಕರಣಗಳಲ್ಲಿ ಸರ್ಕಾರಿ ವಕೀಲರು ಖಾಸಗಿ ವಕೀಲರೊಂದಿಗೆ ಶಾಮೀಲಾಗಿ ಸರ್ಕಾರಿ ಶಾಲೆಗಳ ಕೇಸ್ ಸೋಲುತ್ತಾರೆ ಎಂಬ ಆರೋಪ ಇದೆ. ಇದರಿಂದ ವ್ಯಾಜ್ಯದಲ್ಲಿರುವ ಆಸ್ತಿಗಳನ್ನು ಇಲಾಖೆ ಪರವಾಗಿ ಪಡೆದುಕೊಳ್ಳುವುದು ಶಿಕ್ಷಣ ಇಲಾಖೆಗೆ ಕಷ್ಟದ ಕೆಲಸವಾಗಿದೆ.

    ರಾಜ್ಯದಲ್ಲಿ ದಾನಿಗಳು ಸರ್ಕಾರಿ ಶಾಲೆಗಾಗಿ 10 ರಿಂದ 100 ಎಕರೆವರೆಗೂ ಸ್ಥಳಗಳನ್ನು ದಾನ ನೀಡಿರುವ ಉದಾಹರಣೆಗಳಿವೆ. ಇವನ್ನು ಸಂರಕ್ಷಿಸುವುದು ನಮ್ಮ ಕರ್ತವ್ಯ. ಅದಕ್ಕಾಗಿ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳಲು ಚಿಂತಿಸಿದ್ದೇವೆ.

    | ಬಿ.ಸಿ.ನಾಗೇಶ್ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ

    ಆರ್​ಟಿಸಿ ತಡಕಾಟ: ಶಿಕ್ಷಣ ಇಲಾಖೆ ಮೊದಲಿನಿಂದಲೂ ಶಾಲಾ ಆಸ್ತಿಯ ಬಗ್ಗೆ ಹೆಚ್ಚು ಗಮನ ನೀಡುತ್ತಾ ಬಂದಿದೆ. ಆದರೆ, ಪರಿಣಾಮಕಾರಿಯಾಗಿ ಆಸ್ತಿ ಪಡೆಯುವಲ್ಲಿ ಇಲಾಖೆ ಶ್ರಮ ಕಡಿಮೆ ಎನ್ನಬಹುದು. ಈ ಹಿಂದೆಯೇ ಆಯಾ ಜಿಲ್ಲಾ ವ್ಯಾಪ್ತಿಯಲ್ಲಿರುವ ಎಲ್ಲ ಸರ್ಕಾರಿ ಶಾಲಾ ನಿವೇಶನ, ಕಟ್ಟಡ ಮಾಲೀಕತ್ವ ನಿರ್ವಹಣೆ ಬಗ್ಗೆ ಹೆಚ್ಚು ಗಮನ ನೀಡುವಂತೆ ಸೂಚನೆ ನೀಡಿತ್ತು. ಜಿಲ್ಲೆಗಳಲ್ಲಿ ಸರ್ಕಾರಿ ಆಸ್ತಿಗೆ ಸಂಬಂಧಿಸಿದಂತೆ ನ್ಯಾಯಾಲಯಗಳಲ್ಲಿ ಪ್ರಕರಣಗಳು ದಾಖಲಾಗಿದ್ದಲ್ಲಿ ಸೂಕ್ತ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿ ಕಟ್ಟಡಗಳನ್ನು ಇಲಾಖಾ ಸುಪರ್ದಿಗೆ ತೆಗೆದುಕೊಳ್ಳುವಂತೆ ಜಿಲ್ಲಾ ಉಪನಿರ್ದೇಶಕರಿಗೆ ಸೂಚನೆ ನೀಡಿತ್ತು. ಅಲ್ಲದೆ, ಕ್ಷೇತ್ರ ಶಿಕ್ಷಣಾಧಿಕಾರಿ(ಬಿಇಎ)ಯನ್ನೇ ‘ಎಸ್ಟೇಟ್ ಅಧಿಕಾರಿ’ಯಾಗಿ ನೇಮಕ ಕೂಡ ಮಾಡಿದೆ. ಆದರೆ, ಎಷ್ಟು ಆಸ್ತಿಗಳನ್ನು ಇಲಾಖೆ ಮರಳಿ ಪಡೆದಿದೆ ಎಂಬುದು ಅಂಕಿ-ಅಂಶಗಳು ಇಲಾಖೆ ಬಳಿ ಇಲ್ಲ.

    ಟಾಸ್ಕ್​ಫೋರ್ಸ್ ರಚನೆ: ಸರ್ಕಾರಿ ಶಾಲೆಗಳ ಆಸ್ತಿ ಸಂರಕ್ಷಣೆಗಾಗಿ ಶಿಕ್ಷಣ ಇಲಾಖೆ ಕಳೆದ ವರ್ಷವೇ ಟಾಸ್ಕ್​ಫೋರ್ಸ್ ರಚನೆ ಮಾಡಿತ್ತು. ಬ್ಲಾಕ್ ಹಂತದಲ್ಲಿರುವ ಸರ್ಕಾರಿ ಶಾಲೆಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿರುವ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಶಾಲಾ ಮತ್ತು ಪದವಿಪೂರ್ವ ಕಾಲೇಜುಗಳ ಸಂರಕ್ಷಣೆಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಪದವಿಪೂರ್ವ ಶಿಕ್ಷಣ ಇಲಾಖೆ ಜಿಲ್ಲಾ ಉಪನಿರ್ದೇಶಕರು ಎಸ್ಟೇಟ್ ಅಧಿಕಾರಿ ಆಗಿರುತ್ತಾರೆ. ರಾಜ್ಯಮಟ್ಟದಲ್ಲಿ ಬೆಂಗಳೂರು, ಮೈಸೂರು, ಧಾರವಾಡ ಮತ್ತು ಕಲಬುರಗಿ ವಿಭಾಗದ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಎಸ್ಟೇಟ್ ಅಧಿಕಾರಿ ಆಗಿರುತ್ತಾರೆ.

    ಅಧಿಕಾರಿಗಳೇ ಹೊಣೆ: ಮೊದಲಿಗೆ ಶಾಲಾ-ಕಾಲೇಜುಗಳಿಗೆ ನೀಡಿರುವ ಆಸ್ತಿಯ ಬಗ್ಗೆ ಮಾಹಿತಿ ಕಲೆ ಹಾಕಬೇಕು. ನಿಖರ ದಾಖಲೆ ಪಡೆದುಕೊಳ್ಳಬೇಕು. ಒತ್ತುವರಿಯಾಗದಂತೆ ಕಾಂಪೌಂಡ್ ನಿರ್ವಿುಸಬೇಕು. ನ್ಯಾಯಾಲಯಗಳಲ್ಲಿ ವ್ಯಾಜ್ಯ ಹೂಡಲಾದ ಪ್ರಕರಣಗಳಿಗೆ ತಕ್ಷಣ ಸರ್ಕಾರಿ ವಕೀಲರ ಮೂಲಕ ಆಕ್ಷೇಪಣೆ ಸಲ್ಲಿಸಲು ಕ್ರಮವಹಿಸಬೇಕು. ಇದರಲ್ಲಿ ನಿರ್ಲಕ್ಷ್ಯ ತೋರಿದರೆ ಎಸ್ಟೇಟ್ ಅಧಿಕಾರಿಯನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಶಿಕ್ಷಣ ಇಲಾಖೆ 2020ರಲ್ಲಿ ಆದೇಶ ಹೊರಡಿಸಿತ್ತು. ಆದರೆ, ಈವರೆಗೂ ಈ ಟಾಸ್ಕ್​ಫೋರ್ಸ್​ನಿಂದ ಮಹತ್ವದ ಕೆಲಸಗಳೇನೂ ಆಗಿಲ್ಲ.

    ಎರಡನೇ ಮದ್ವೆ ಆಗಲು ಹೆಂಡ್ತಿ-ಮಕ್ಳನ್ನು ಕೊಂದ, 11 ವರ್ಷಗಳ ಬಳಿಕ ಸಿಕ್ಕಿಬಿದ್ದ; ಈತ ತಪ್ಪಿಸಿಕೊಂಡಿದ್ದು, ಬಳಿಕ ಮಾಡಿದ್ದೆಲ್ಲ ಭಾರಿ ಕಿತಾಪತಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts