More

    ಸಾಮಾನ್ಯ ಸಭೆಗೆ ಸದಸ್ಯರ ಬಹಿಷ್ಕಾರ

    ಬ್ಯಾಡಗಿ: ತಾಲೂಕು ಪಂಚಾಯಿತಿ ಹೊಸ ಕಟ್ಟಡದಲ್ಲಿ ಸಭೆ ನಡೆಸುವ ತೀರ್ಮಾನ ತೆಗೆದುಕೊಂಡು ಎಲ್ಲ ಸದಸ್ಯರು ಸಾಮಾನ್ಯ ಸಭೆ ಬಹಿಷ್ಕರಿಸಿದ ಘಟನೆ ಶನಿವಾರ ಜರುಗಿತು.

    ತಾಪಂ ಸಭಾಭವನದಲ್ಲಿ ಶನಿವಾರ ನಿಗದಿಯಾಗಿದ್ದ ಸಭೆಗೆ ವಿವಿಧ ಇಲಾಖೆ ಅಧಿಕಾರಿಗಳು ಆಗಮಿಸಿ, 2 ಗಂಟೆ ಕಾಯ್ದು ಸುಸ್ತಾದ ್ದರು. ನಂತರ ಸಭೆ ರದ್ದಾಗಿರುವ ಸುದ್ದಿ ತಿಳಿದು, ಮಧ್ಯಾಹ್ನ 12.30ರ ಸುಮಾರಿಗೆ ತಮ್ಮ ಕಚೇರಿಗಳತ್ತ ಮುಖ ಮಾಡಿದರು.

    ತಾಪಂ ಇಒ ಎ.ಟಿ. ಜಯಕುಮಾರ ತಮ್ಮ ಕಚೇರಿಯಲ್ಲಿ ತಾಪಂ ಸದಸ್ಯರು ಹಾಗೂ ಕೆಆರ್​ಐಡಿಎಲ್ ಇಂಜಿನಿಯರರನ್ನು ಕರೆಸಿ ಮಾತುಕತೆಗೆ ಮುಂದಾದಾಗ ತಾಪಂ ಅಧ್ಯಕ್ಷ, ಉಪಾಧ್ಯಕ್ಷರು ಇಂಜಿನಿಯರ್​ಗಳ ಮೇಲೆ ಹಿಗ್ಗಾಮುಗ್ಗಾ ಹರಿಹಾಯ್ದರು.

    ತಾಪಂ ಅಧ್ಯಕ್ಷೆ ಸವಿತಾ ಸುತ್ತಕೋಟಿ ಮಾತನಾಡಿ, ಈ ಹಿಂದಿನ 3 ಸಭೆಗಳಲ್ಲಿ ಕಾರ್ಯಾಲಯ ಕಟ್ಟಡ ಪೂರ್ಣಗೊಳಿಸಿ, ಉದ್ಘಾಟಿಸುವಂತೆ ತಾಕೀತು ಮಾಡಿತ್ತು. ಕೆಡಿಪಿ ಸಭೆಗೆ ಬಂದಾಗ ಶಾಸಕರೇ ಸ್ವತಃ ಕಟ್ಟಡ ವೀಕ್ಷಿಸಿ ತಿಂಗಳಲ್ಲಿ ಹಸ್ತಾಂತರಿಸಲು ಸೂಚಿಸಿದ್ದರು. ಆದರೆ, ಯಾರ ಮಾತಿಗೂ ಕ್ಯಾರೆ ಎನ್ನಲಿಲ್ಲ. ಕೊಳವೆಬಾವಿ ಕೊರೆಸಿ, ಮೋಟರ್ ಅಳವಡಿಸುವುದು, ಧ್ವಜ ಕಂಬ, ಸಭಾ ಹಾಲ್​ನಲ್ಲಿ ಜಯಂತ್ಯುತ್ಸವ ಕಟ್ಟೆ ಸೇರಿದಂತೆ 4 ಲಕ್ಷ ರೂ. ಕೆಲಸ ಇನ್ನೂ ಬಾಕಿಯಿದೆ. ಧ್ವಜ ಕಂಬ ಬೇಡವೆಂದಿರುವ ಕುರಿತು ಪತ್ರಿಕೆಗೆ ಸುಳ್ಳು ಹೇಳಿಕೆ ನೀಡಿದ್ದೀರಿ. ಬೆಳಗಾವಿ ಆಯುಕ್ತರಿಂದ ಹೆಚ್ಚುವರಿ ಕ್ರಿಯಾ ಯೋಜನೆ ಮಾಡಿಸಿದ್ದೇನೆ. ತಪ್ಪು ಹೇಳ್ತೀರಿ, ಸದಸ್ಯರು ಕಟ್ಟಡ ಕ್ರಿಯಾ ಯೋಜನೆ ಕೇಳಿದರೂ ಕೊಡುತ್ತಿಲ್ಲ. ಒಬ್ಬೊಬ್ಬರಿಗೆ ಒಂದೊಂದು ರೀತಿಯಲ್ಲಿ ಹೇಳುತ್ತೀರಿ ಎಂದು ತರಾಟೆಗೆ ತೆಗೆದುಕೊಂಡರು.

    ಕೆಆರ್​ಐಡಿಎಲ್ ಇಂಜಿನಿಯರ್ ಆರ್. ಮಹೇಂದ್ರಕರ ಪ್ರತಿಕ್ರಿಯಿಸಿ, ಕೊಳವೆ ಬಾವಿ ಕೊರೆಸಲು ಅನುದಾನ ಸಾಲುತ್ತಿಲ್ಲ. ತಳಪಾಯದಲ್ಲಿ ಹೆಚ್ಚುವರಿ ಕಬ್ಬಿಣ ಅಳವಡಿಸಲಾಗಿದೆ ಎಂದರು. ಇದಕ್ಕೆ ಇನ್ನಷ್ಟು ಆಕ್ರೋಶಗೊಂಡ ಸದಸ್ಯ ಜಗದೀಶ ಪೂಜಾರ, ಸರ್ಕಾರಿ ಕಟ್ಟಡಕ್ಕೆ ನಿಮ್ಮ ಮನೆ ಹಣ ಖರ್ಚು ಮಾಡ್ತಿದ್ದೀರಾ. ಹಾಗಿದ್ದರೆ ಕ್ರಿಯಾ ಯೋಜನೆ ಸಿದ್ಧಪಡಿಸಿ ಹೇಗೆ ಅನುಮೋದನೆ ಪಡೆದಿದ್ದೀರಿ. ಕ್ರಮಬದ್ಧವಾಗಿ ಕಾಮಗಾರಿ ನಡೆಸಬೇಕು ಎಂದರು.

    ತಾಪಂ ಇಒ ಎ.ಟಿ. ಜಯಕುಮಾರ ಮಾತನಾಡಿ, ಹೊಸ ಕಟ್ಟಡ ಹಸ್ತಾಂತರಿಸಲು ಜಿಪಂ ಇಂಜಿನಿಯರ್ ಕಟ್ಟಡ ಪರಿಶೀಲನಾ ವರದಿ ನೀಡಬೇಕಿದೆ. ಸ್ಟಷ್ಟವಾಗಿ ಕೊಳವೆ ಬಾವಿ, ಧ್ವಜ ಕಂಬ, ಜಯಂತ್ಯುತ್ಸವ ಕಟ್ಟೆ ಸೇರಿದಂತೆ 4 ಲಕ್ಷ ರೂ. ಕಾಮಗಾರಿ ಬಾಕಿಯಿರುವ ಕುರಿತು ಪತ್ರ ಪಡೆದು, ತಾಪಂ ವತಿಯಿಂದ ಠರಾವುಗೊಳಿಸಿ, ಕೆಆರ್​ಐಡಿಎಲ್ ಇಂಜಿನಿಯರ್​ಗೆ ನೋಟಿಸ್ ಜಾರಿ ಮಾಡುತ್ತೇನೆ ಎಂದರು.

    ಉಪಾಧ್ಯಕ್ಷೆ ಶಾಂತವ್ವ ದೇಸಾಯಿ, ಸದಸ್ಯರಾದ ಯಲ್ಲನಗೌಡ್ರ ಕರೇಗೌಡ್ರ, ಶಾಂತಪ್ಪ ದೊಡ್ಡಮನಿ, ಸವಿತಾ ಕೋಡದ, ಗುಡ್ಡಪ್ಪ ಕೋಳೂರು, ಪೂರ್ಣಮಾ ಆನ್ವೇರಿ, ಪಾರ್ವತೆವ್ವ ಮುದುಕಮ್ಮನವರ, ಶಶಿಕಲಾ ಹಲಗೇರಿ, ಮಹೇಶಗೌಡ್ರ ಪಾಟೀಲ, ವ್ಯವಸ್ಥಾಪಕ ಪ್ರಕಾಶ ಹಿರೇಮಠ ಇತರರಿದ್ದರು.

    ವಿಜಯವಾಣಿ ವರದಿ ಪ್ರಸ್ತಾಪ

    ಬ್ಯಾಡಗಿ ತಾಪಂ ಕಾರ್ಯಾಲಯ ಕುರಿತು ಕಟ್ಟಡಕ್ಕಿಲ್ಲ ಉದ್ಘಾಟನೆ ಭಾಗ್ಯ ಶೀರ್ಷಿಕೆಯಡಿ ನ. 21ರಂದು ವಿಜಯವಾಣಿ ವರದಿ ಪ್ರಕಟಿಸಿತ್ತು. ವಿಜಯವಾಣಿ ಪತ್ರಿಕೆ ಹಿಡಿದ ಎಲ್ಲ ಸದಸ್ಯರು ತಪ್ಪು ಹಾಗೂ ಬೇಜವಾಬ್ದಾರಿ ಹೇಳಿಕೆ ನೀಡಿದ ಕೆಆರ್​ಐಡಿಎಲ್ ಇಂಜಿನಿಯರ್ ಮೇಲೆ ಕ್ರಮಕ್ಕೆ ಒತ್ತಾಯಿಸಿದರು. 10 ದಿನದೊಳಗಾಗಿ ಬಾಕಿ ಕಾಮಗಾರಿ ಪೂರ್ಣಗೊಳಿಸಿ ಹಸ್ತಾಂತರಿಸಬೇಕು. ನಿರ್ಲಕ್ಷ್ಯ ತೋರಿದಲ್ಲಿ ಕ್ರಮಕ್ಕೆ ಒತ್ತಾಯಿಸಿ ಜಿಲ್ಲಾಧಿಕಾರಿಗೆ ದೂರು ಸಲ್ಲಿಸುವುದಾಗಿ ಎಚ್ಚರಿಕೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts