More

    ಕ್ವಾರಿ, ಸ್ಪೋಟಕ ತಯಾರಿ ಚಟುವಟಿಕೆ, ಆತಂಕ ಹೆಚ್ಚಿಸಿದೆ ಜಿಲೆಟಿನ್ ಬಳಕೆ

    ಅವಿನ್ ಶೆಟ್ಟಿ ಉಡುಪಿ
    ಶಿವಮೊಗ್ಗ ಜಿಲ್ಲೆ ಹುಣಸೋಡು ರೈಲ್ವೆ ಕ್ರಷರ್ ಸೈಟ್‌ನಲ್ಲಿ ಸಂಭವಿಸಿದ ಸ್ಫೋಟ ಪ್ರಕರಣ ಕಗ್ಗಲ್ಲು ಕಲ್ಲು ಕ್ವಾರಿಗಳ ಕಾರ್ಯಾಚರಣೆ ಬಗ್ಗೆ ಆತಂಕ ಹೆಚ್ಚುವಂತೆ ಮಾಡಿದೆ.

    ಉಡುಪಿ ಜಿಲ್ಲೆಯಲ್ಲಿ ಕಲ್ಲು ಕ್ವಾರಿ ಗಣಿಗಾರಿಕೆ ನಿಯಮ ಮೀರಿ ನಡೆಯುತ್ತಿದೆ. ಉಡುಪಿ, ಕಾರ್ಕಳ ವ್ಯಾಪ್ತಿಯಲ್ಲಿ ಕಲ್ಲಿನ ಗಣಿಗಾರಿಕೆ ಹೆಚ್ಚಾಗಿದ್ದು, ಕಾನೂನುಬಾಹಿರ ಸ್ಪೋಟಕಗಳನ್ನು ಬಳಸಿ ಗಣಿಗಾರಿಕೆ ನಡೆಸಲಾಗುತ್ತಿದೆ ಎಂಬ ಆರೋಪ ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ. ಸಮೃದ್ಧ ಕಪ್ಪು ಶಿಲೆಯನ್ನು ಒಡಲಲ್ಲಿಟ್ಟುಕೊಂಡಿರುವ ಉಡುಪಿ ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ರಾಜಾರೋಷವಾಗಿ ನಡೆಯುತ್ತಿದೆ. 15 ವರ್ಷದ ಹಿಂದೆ ಕಾರ್ಕಳ, ಪೆರುವಾಜೆ ಕ್ರಾಸ್ ಬಳಿ ಜಿಲೆಟಿನ್ ಕಡ್ಡಿ ಸಾಗಿಸುತ್ತಿದ್ದಾಗ ವಾಹನದಲ್ಲಿ ಸ್ಫೋಟ ಉಂಟಾಗಿತ್ತು.

    ಅಪಾರ ಪ್ರಮಾಣದಲ್ಲಿ ಜಿಲೆಟಿನ್ ಬಳಕೆ ಶಂಕೆ: ಎರಡು ವರ್ಷಗಳ ಹಿಂದೆ ಕೋಟ ಹಾಗೂ ಶಂಕರನಾರಾಯಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಗಣಿಗಾರಿಕೆಗೆ ದಾಳಿ ನಡೆಸಿ ಎಂಟು ಮಂದಿಯನ್ನು ಬಂಧಿಸಿ, ಸ್ಫೋಟಕ ಪತ್ತೆ ಹಚ್ಚಲಾಗಿತ್ತು. ಕಲ್ಲು ಕ್ವಾರಿಯೊಂದರಲ್ಲಿ 32 ಜಿಲೆಟಿನ್ ಕಡ್ಡಿಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಕಾರ್ಕಳ ಭಾಗದಲ್ಲಿ ಅಕ್ರಮವಾಗಿ ಶೇಖರಿಸಿಟ್ಟಿದ್ದ ಸ್ಫೋಟಕಗಳನ್ನು ಪೊಲೀಸರು ಕೆಲವ ವರ್ಷಗಳ ಹಿಂದೆ ಪತ್ತೆ ಮಾಡಿದ್ದರು. ನಿಯಮಾನುಸಾರ ಸ್ಫೋಟಕ ಬಳಸದೆ ಮಾನವ ಶ್ರಮದಿಂದ ಕಲ್ಲುಗಳನ್ನು ಒಡೆದು ತೆಗೆಯಬೇಕು ಎಂಬ ನಿಯ ಪುಸ್ತಕಕ್ಕೆ ಸೀಮಿತವಾಗಿದ್ದು, ಹೆಚ್ಚಿನ ಎಲ್ಲ ಕಡೆ ಸ್ಫೋಟಕವನ್ನೇ ಬಳಸಲಾಗುತ್ತಿದೆ. ಇತ್ತೀಚಿನ ಎರಡು ವರ್ಷಗಳಲ್ಲಿ ಪೊಲೀಸರಿಂದ ವಿಶೇಷ ಪರಿಶೀಲನೆ, ದಾಳಿ ನಡೆದಿಲ್ಲ. ಕಾರ್ಕಳ, ಕುಂದಾಪುರದ ಬಹುತೇಕ ಕಲ್ಲು ಕ್ವಾರಿಗಳಲ್ಲಿ ಅಪಾರ ಪ್ರಮಾಣದಲ್ಲಿ ಸ್ಫೋಟಕಗಳನ್ನು ಬಳಕೆ ಮಾಡುತ್ತಿರುವ ಬಗ್ಗೆ ಪರಿಸರ ಹೋರಾಟಗಾರರು ಅನುಮಾನ ವ್ಯಕ್ತಪಡಿಸಿದ್ದಾರೆ.

    ಅಕ್ರಮ ಗಣಿಗಾರಿಕೆ ನಡೆಯುವ ಬಗೆ
    ಉಡುಪಿ ಜಿಲ್ಲೆಯಲ್ಲಿ ಒಟ್ಟು 113 ಕಲ್ಲು ಕ್ವಾರಿಗಳಿವೆ. ಕೆಲವರು ಸರ್ಕಾರದ ನಿಯಮಾನುಸಾರ ಗಣಿಗಾರಿಕೆ ನಡೆಸುತ್ತಿದ್ದರೆ, ಕೆಲವರು ಪರವಾನಗಿ ಪಡೆದುಕೊಂಡದ್ದಕ್ಕಿಂತ ಹೆಚ್ಚು ವಿಸ್ತರಣೆ ಮಾಡಿ ಚಟುವಟಿಕೆ ಮಾಡುತ್ತಿದ್ದಾರೆ ಎಂದು ಗ್ರಾಮೀಣ ಭಾಗದ ಜನರ ಅಭಿಪ್ರಾಯ. ಪ್ರತಿವರ್ಷ ಡಿಜಿಟಲ್ ಜಿಪಿಎಸ್ ಆಧಾರಿತ ಡ್ರೋನ್ ಸರ್ವೇ ಮಾಡಲಾಗುತ್ತದೆ. ಇದರಲ್ಲಿ ಅಕ್ರಮ, ವಿಸ್ತೀರ್ಣ ಹೆಚ್ಚಳದ ಬಗ್ಗೆ ತಿಳಿಯಲ್ಪಡುತ್ತದೆ. ಈ ವರದಿ ಆಧಾರದಲ್ಲಿ ಕಲ್ಲು ಕ್ವಾರಿ ಮಾಲೀಕರಿಗೆ ಒಂದಷ್ಟು ದಂಡ ವಿಧಿಸಲಾಗುತ್ತದೆ. ಆದರೆ ಕಲ್ಲು ಕ್ವಾರಿ ಅಕ್ರಮಕ್ಕೆ ಬ್ರೇಕ್ ಬೀಳುವುದಿಲ್ಲ. ಇಂತಿಷ್ಟು ಆಳಕ್ಕೆ ಮಾತ್ರ ಕಲ್ಲು ತೆಗೆಯಬೇಕು ಎಂದು ನಿಯಮವಿದ್ದರೂ, ಮಿತಿ ಮೀರಿ ಆಳದಲ್ಲಿ ಗಣಿ ಚಟುವಟಿಕೆ ನಡೆಯುತ್ತದೆ. ಕಪ್ಪು ಕಲ್ಲು ಗಣಿಗಾರಿಕೆ ಜಿಲ್ಲೆಯ ಪ್ರಮುಖ ಉದ್ಯಮವಾಗಿದ್ದು, ಹೊರರಾಜ್ಯ ಮತ್ತು ಜಿಲ್ಲೆಯ ಹಲವು ಕಾರ್ಮಿಕರು ಇದರಲ್ಲಿ ಜೀವನ ರೂಪಿಸಿಕೊಂಡಿದ್ದಾರೆ. ಹೆಚ್ಚೆಚ್ಚು ಆದಾಯ, ಬೇಡಿಕೆ ಪಡೆದುಕೊಂಡ ಬಳಿಕ ಕಲ್ಲು ಕ್ವಾರಿ ಅಕ್ರಮ ದಂಧೆಕೋರರನ್ನು ಸೆಳೆದುಕೊಳ್ಳುತ್ತಿದೆ ಎಂಬುದು ಸಾರ್ವಜನಿಕರ ಆರೋಪ.

    ದಕ್ಷಿಣ ಕನ್ನಡದಲ್ಲಿ ಭೀಕರ ಘಟನೆ
    ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ, ಬಂಟ್ವಾಳ, ಬೆಳ್ತಂಗಡಿ ತಾಲೂಕುಗಳಲ್ಲಿ ಕಗ್ಗಲ್ಲು ಕ್ವಾರಿಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಬೃಹತ್ ಕಗ್ಗಲ್ಲು ಬಂಡೆಗಳನ್ನು ಒಡೆಯಲು ಸ್ಫೋಟಕದಲ್ಲಿ ಜಿಲೆಟಿನ್ ಬಳಸುತ್ತಿದ್ದಾರೆ. ಕೆಲವು ಕ್ವಾರಿಗಳು ಪರವಾನಗಿ ಪಡೆದು ಕಾರ್ಯಾಚರಿಸಿದರೆ, ಇನ್ನು ಕೆಲವು ಅನುಮತಿ ಪಡೆಯದೆ ಕಾರ್ಯಾಚರಿಸುತ್ತಿರುವುದರ ಬಗ್ಗೆ ಪರಿಸರ ಹೋರಾಟಗಾರರು ಧ್ವನಿ ಎತ್ತಿದ್ದಾರೆ. ಎರಡೂವರೆ ದಶಕಗಳ ಹಿಂದೆ ಪುತ್ತೂರು ತಾಲೂಕಿನ ಪಾಲ್ತಾಡು ಎಂಬಲ್ಲಿನ ಮನೆಯಲ್ಲಿ ಸ್ಪೋಟಕ ತಯಾರಿಸುತ್ತಿದ್ದಾಗ ಬೆಂಕಿ ತಗುಲಿ ಸ್ಪೋಟಗೊಂಡು ಇಬ್ಬರು ಮೃತಪಟ್ಟು, ಮನೆಯವರು ಗಾಯಗೊಂಡಿದ್ದರು. ಸ್ಫೋಟದ ತೀವ್ರತೆಗೆ ಓರ್ವನ ದೇಹ ಮನೆಯ ಮಾಡಿನಲ್ಲಿ ಸಿಲುಕಿಕೊಂಡಿತ್ತು. ಬೆಂಕಿ ಹೊತ್ತಿಕೊಂಡು ಮನೆ ಸಂಪೂರ್ಣ ಉರಿದು ಭಸ್ಮವಾಗಿತ್ತು.
    ಕಳೆದ ವರ್ಷ ಪುತ್ತೂರು ತಾಲೂಕಿನ ಬೆಟ್ಟಂಪಾಡಿಯ ಸರಳಿಕಾನ ಎಂಬಲ್ಲಿ ಬಾಲಕೃಷ್ಣ ಗೌಡ ಎಂಬುವರ ಮನೆಯಲ್ಲಿ ನಡೆದ ಸ್ಪೋಟದಲ್ಲಿ ನಾಲ್ವರು ಗಂಭೀರ ಗಾಯಗೊಂಡಿದ್ದರು. ವಿಟ್ಲದ ಕಂಬಳಬೆಟ್ಟು ಎಂಬಲ್ಲಿ 2017ರ ಮಾರ್ಚ್ 20ರಂದು ಪಟಾಕಿ ತಯಾರಿಸುತ್ತಿದ್ದಾಗ ಆಕಸ್ಮಿಕವಾಗಿ ಸಿಡಿದು, ಇಬ್ಬರು ಸ್ಥಳದಲ್ಲೇ ಚಿಂದಿಯಾಗಿದ್ದು, ನಾಲ್ವರಿಗೆ ಗಾಯವಾಗಿತ್ತು. ಮೃತದೇಹದ ಅಂಗಾಂಗಗಳು ಸುಮಾರು 200 ಮೀಟರ್ ಸುತ್ತಳತೆಯಲ್ಲಿ ಎಸೆಯಲ್ಪಟ್ಟು, ಒಂದು ದೇಹ ಮನೆಯ ಛಾವಣಿಯಲ್ಲಿತ್ತು.

    ಉಡುಪಿ ಜಿಲ್ಲೆಯಲ್ಲಿ ಎಲ್ಲ ಕಲ್ಲು ಕ್ವಾರಿ ಮಾಲೀಕರೊಡನೆ ಸಭೆ ನಡೆಸಿ ಮುಂಜಾಗ್ರತಾ ಕ್ರಮ, ನಿಯಮಾವಳಿ ಪಾಲನೆ ಕುರಿತು ಸೂಚನೆ ನೀಡುವಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಿರಿಯ ಭೂವಿಜ್ಞಾನಿಗೆ ಸೂಚಿಸಲಾಗಿದೆ. ಅಕ್ರಮ ಗಣಿಗಾರಿಕೆ ಇದ್ದಲ್ಲಿ ಪರಿಶೀಲಿಸಿ ವರದಿ ಪಡೆಯಲಾಗುವುದು. ಕಲ್ಲು ಕ್ವಾರಿಗಳಲ್ಲಿ ಸ್ಫೋಟಕ ಬಳಕೆ, ಸಾಗಾಟಕ್ಕೆ ಸಂಬಂಧಿಸಿ ನಿಗಾ ವಹಿಸುವಂತೆ ಜಿಲ್ಲಾ ಪೊಲೀಸ್ ಅಧೀಕ್ಷಕರೊಂದಿಗೆ ಚರ್ಚಿಸಿ, ನಿರ್ದೇಶನ ನೀಡಲಾಗಿದೆ.
    ಜಿ.ಜಗದೀಶ್, ಉಡುಪಿ ಜಿಲ್ಲಾಧಿಕಾರಿ

    ಕಲ್ಲು ಕ್ವಾರಿಗಳಲ್ಲಿ ಸುರಕ್ಷತಾ ಕ್ರಮದ ಬಗ್ಗೆ ಗಣಿ ಇಲಾಖೆ ನಿಯಾಮವಳಿ ಪಾಲಿಸುವಂತೆ ಎಲ್ಲ ಮಾಲೀಕರಿಗೆ ಸೂಚಿಸಲಾಲಾಗಿದೆ. ಸ್ಫೋಟಕ ಬಳಕೆ, ಸಾಗಾಟದ ಬಗ್ಗೆ ನಾವು ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಇದು ಪೊಲೀಸ್ ಇಲಾಖೆ, ಕಂದಾಯ ಇಲಾಖೆ ವ್ಯಾಪ್ತಿಗೆ ಬರುತ್ತದೆ.
    ಸಂದೀಪ್, ಹಿರಿಯ ಭೂ ವಿಜ್ಞಾನಿ, ಗಣಿ ಇಲಾಖೆ, ಉಡುಪಿ

    ಪ್ರತಿಯೊಂದು ಕಲ್ಲಿನ ಕ್ವಾರಿಯಲ್ಲೂ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಹೆಚ್ಚಿನ ಪ್ರಮಾಣದಲ್ಲಿ ಸ್ಫೋಟಕಗಳನ್ನು ಸಂಗ್ರಹಿಸುವಂತಿಲ್ಲ. ಅಲ್ಲಿ ಸುರಕ್ಷತೆಗೆ ಹೇಗೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂಬುದನ್ನು ಕಂದಾಯ, ಅರಣ್ಯ, ಪರಿಸರ ಇಲಾಖೆಯ ಅಧಿಕಾರಿಗಳು ತಪಾಸಣೆ ನಡೆಸಿ 10 ದಿನಗಳ ಒಳಗೆ ವರದಿ ನೀಡುವಂತೆ ಸೂಚಿಸಲಾಗಿದೆ.
    ಡಾ.ರಾಜೇಂದ್ರ ಕೆ.ವಿ., ದಕ್ಷಿಣ ಕನ್ನಡ ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts