More

  ಗೀತಾ ಶಿವರಾಜ್‌ಕುಮಾರ್ ಪಕ್ಷದ ಆಯ್ಕೆ: ಮಧು ಸ್ಪಷ್ಟನೆ

  ಶಿವಮೊಗ್ಗ: ಗೀತಾ ಶಿವರಾಜ್‌ಕುಮಾರ್ ಸ್ಪರ್ಧಿಸಿರುವ ಲೋಕಸಭೆ ಚುನಾವಣೆಗೆ ಪಕ್ಷದ ಕಾರ್ಯಕರ್ತರು, ಮುಖಂಡರೇ ಉಸ್ತುವಾರಿಗಳು. ಜನರು ಹಾಗೂ ಗೀತಾ ನಡುವೆ ನಾನು ಮಧ್ಯವರ್ತಿಯಲ್ಲ. ಅವರು ಅಭ್ಯರ್ಥಿಯಾಗಿರುವುದು ಪಕ್ಷದ ಆಯ್ಕೆಯೇ ಹೊರತು ನನ್ನದಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.

  ಬುಧವಾರ ಏರ್ಪಡಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ ಗೆದ್ದ ಬಳಿಕ ಗೀತಾ ನೇರವಾಗಿ ಜನರ ಸಮಸ್ಯೆಗಳಿಗೆ ಸ್ಪಂದಿಸಲಿದ್ದಾರೆ. 2014ರಲ್ಲಿ ಅವರು ಸ್ಪರ್ಧಿಸಲು ನನ್ನ ಸಹಮತವಿರಲಿಲ್ಲ. ಆದರೆ ಕೆಲವರ ಒತ್ತಡದಿಂದ ಅವರು ಕಣಕ್ಕೆ ಇಳಿಯಬೇಕಾಯಿತು ಎಂದರು.
  ಮಾ.24ರಿಂದ ಗೀತಾ ಪ್ರತಿ ಗ್ರಾಪಂ ಮಟ್ಟದಲ್ಲಿ ಪ್ರಚಾರ ನಡೆಸಲಿದ್ದಾರೆ. ಪ್ರತಿ ಸಭೆಯಲ್ಲೂ ಕನಿಷ್ಠ 500 ಮಹಿಳೆಯರು ಸೇರುವಂತೆ ನೋಡಿಕೊಳ್ಳಬೇಕು. ನನ್ನ ಅಕ್ಕನನ್ನು ಕಾರ್ಯಕರ್ತರ ಮಡಿಲಿಗೆ ಹಾಕಿದ್ದೇನೆ. ಕಾರ್ಯಕರ್ತರು ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಣೆ ಮಾಡಬೇಕು ಎಂದು ಮನವಿ ಮಾಡಿದರು.
  ಶಿವಮೊಗ್ಗಕ್ಕೆ ಬಂದಿದ್ದ ಪ್ರಧಾನಿ ನರೇಂದ್ರ ಮೋದಿ ವಿಐಎಸ್‌ಎಲ್ ಬಗ್ಗೆ ಮಾತನಾಡಲಿಲ್ಲ. ಶರಾವತಿ ಸಂತ್ರಸ್ತರ ಬಗ್ಗೆ ಉಲ್ಲೇಖಿಸಲಿಲ್ಲ. ಶರಾವತಿ ಸಂತ್ರಸ್ತರಿಗೆ ಭೂಮಿ ಹಕ್ಕು ನೀಡುವ ನಿಟ್ಟಿನಲ್ಲಿ ನಾನು ಇದುವರೆಗೆ 10ಕ್ಕೂ ಹೆಚ್ಚು ಸಭೆಗಳನ್ನು ನಡೆಸಿದ್ದೇನೆ. ಎಲ್ಲವೂ ಒಂದು ಹಂತಕ್ಕೆ ಬಂದಿದೆ ಎಂದರು.
  ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್, ನಟ ಶಿವರಾಜ್‌ಕುಮಾರ್, ಪಕ್ಷದ ಜಿಲ್ಲಾಧ್ಯಕ್ಷ ಎಚ್.ಎಸ್.ಸುಂದರೇಶ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಅನಿತಾಕುಮಾರಿ, ಎಂಎಡಿಬಿ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ, ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ರವಿಕುಮಾರ್, ಎಸ್ಸಿ, ಎಸ್ಟಿ ಹಾಗೂ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪಲ್ಲವಿ, ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಮಾಜಿ ಎಂಎಲ್‌ಸಿಗಳಾದ ಆರ್.ಪ್ರಸನ್ನಕುಮಾರ್, ಆಯನೂರು ಮಂಜುನಾಥ್, ಪ್ರಮುಖರಾದ ಎನ್.ರಮೇಶ್, ಎಚ್.ಸಿ.ಯೋಗೇಶ್, ನಾಗರಾಜ ಗೌಡ ಇತರರಿದ್ದರು.
  ಎದುರಾಳಿ ವಿರುದ್ಧ ವಾಗ್ದಾಳಿ: ನೀವು 2009ರಲ್ಲಿ ಸಿಎಂ ಮಕ್ಕಳು. ಆದರೆ ನಾನು, ನನ್ನ ಅಕ್ಕ ಅದಕ್ಕಿಂತ 20 ವರ್ಷಗಳ ಹಿಂದೆಯೇ ಸಿಎಂ ಮಕ್ಕಳು. ಗೀತಾ ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಯಾವ ಅರ್ಹತೆ ಇದೆ ಎಂದು ಪ್ರಶ್ನಿಸುವವರು 2009ರಲ್ಲಿ ಚುನಾವಣೆಗೆ ಸ್ಪರ್ಧಿಸುವ ಮುನ್ನ ಎಂತಹ ಸಾಧನೆ ಮಾಡಿದ್ದರು ಎಂದು ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ವಿರುದ್ಧ ಮಧು ಬಂಗಾರಪ್ಪ ವಾಗ್ದಾಳಿ ನಡೆಸಿದರು.
  ಪ್ರಚಾರಕ್ಕೆ ಸಮಯ ಸಾಲದಾಯಿತು: ನಾನು 2014ರಲ್ಲಿ ಚುನಾವಣೆಗೆ ಸ್ಪರ್ಧಿಸಿದಾಗ ಪ್ರಚಾರಕ್ಕೆ ಕೇವಲ 17 ದಿನ ಉಳಿದಿತ್ತು. ಸಮಯ ಸಾಲದಾಯಿತು. ಆದರೂ ಕ್ಷೇತ್ರದ ಜನರು ನನಗೆ ಉತ್ತಮ ಬೆಂಬಲ ನೀಡಿದ್ದರು. ನಾನು ಅನೇಕ ಬಾರಿ ಸೊರಬಕ್ಕೆ ಬಂದಿದ್ದೇನೆ. ಆದರೆ ಅದಕ್ಕಾಗಿ ಪ್ರಚಾರ ಪಡೆದಿಲ್ಲ ಎಂದು ಗೀತಾ ಶಿವರಾಜ್‌ಕುಮಾರ್ ಹೇಳಿದರು. ನಾನು ಈ ಜಿಲ್ಲೆಯ ಮಗಳು. ನಾನು ಎರಡು ವರ್ಷದವಳಿದ್ದಾಗ ನಮ್ಮ ತಂದೆ ಬಂಗಾರಪ್ಪ ಮೊದಲ ಬಾರಿ ಶಾಸಕರಾದರು. ಬಳಿಕ ಅವರು ಅನೇಕ ಅಧಿಕಾರಗಳನ್ನು ಪಡೆದರು. ಆದರೂ ನನ್ನನ್ನು ಸಾಮಾನ್ಯಳನ್ನಾಗಿ ಬೆಳೆಸಿದ್ದಾರೆ. ಮಧು ನನ್ನ ತಮ್ಮ. ಆದರೆ ಯಾವಾಗ ತಂದೆ ಸ್ಥಾನಕ್ಕೆ ಬಂದ ಎಂಬುದೇ ತಿಳಿಯುತ್ತಿಲ್ಲ. ಆತ ತುಂಬ ಕಷ್ಟಪಟ್ಟು ಈ ಸ್ಥಾನಕ್ಕೆ ಬಂದಿದ್ದಾನೆ ಎಂದು ಭಾವುಕರಾದರು.
  ಶಿವಣ್ಣನ ಹಾಡಿಗೆ ಜನರ ಚಪ್ಪಾಳೆ: ಗೀತಾ ಅವರಿಗೆ 2014ರ ಚುನಾವಣೆಯಲ್ಲಿ ಸೋಲಾಯಿತು. ಅದೂ ಒಂದು ಅನುಭವ. ಜನರ ಪ್ರೀತಿ, ವಿಶ್ವಾಸಕ್ಕೆ ರಾಜಕಾರಣ ಎಂದೂ ಅಡ್ಡಿಯಾಗಲ್ಲ. ಗೀತಾ 38 ವರ್ಷ ನನ್ನೊಂದಿಗೆ ಸಂಸಾರ ನಡೆಸಿದ್ದಾಳೆ. ರಾಜಕುಮಾರ್ ಸೊಸೆಯಾಗಿ ಜವಾಬ್ದಾರಿ ನಿರ್ವಹಿಸಿದ್ದಾಳೆ. ಇದಕ್ಕಿಂತಲೂ ದೊಡ್ಡ ಅನುಭವ ಬೇಕೇ ಎಂದು ಶಿವರಾಜ್ ಕುಮಾರ್ ಪ್ರಶ್ನಿಸಿದರು. ಆಗದು ಎಂದು ಕೈ ಕಟ್ಟಿ ಕುಳಿತರೆ..ಕೆಲಸವು ಸಾಗದು ಮುಂದೆ ಎಂದು ತಮ್ಮ ತಂದೆ ಡಾ.ರಾಜ್‌ಕುಮಾರ್ ಅಭಿನಯದ ಚಿತ್ರವೊಂದರ ಗೀತೆಯನ್ನು ಶಿವರಾಜ್‌ಕುಮಾರ್ ಹಾಡುತ್ತಿದ್ದಂತೆಯೇ ಸಭೆಯಲ್ಲಿದ್ದವರು ಚಪ್ಪಾಳೆ ಹೊಡೆದರು.
  ಪಕ್ಷ ನಿಷ್ಠೆ ನೆನಪಿಸಿದ ಮುಖಂಡರು: ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಿಗೆ ಗೋಪಾಲಕೃಷ್ಣ ಬೇಳೂರು, ಸೂಡಾ ಮಾಜಿ ಅಧ್ಯಕ್ಷ ಅಎನ್.ರಮೇಶ್ ಅವರು ಪಕ್ಷ ನಿಷ್ಠೆ ನೆನಪಿಸಿದರು. ನಿಮ್ಮ ವೈಯಕ್ತಿಕ ಮುನಿಸು, ಭಿನ್ನಾಭಿಪ್ರಾಯಗಳು ಪಕ್ಷದ ಅಭ್ಯರ್ಥಿ ಮೇಲೆ ಯಾವುದೇ ಪರಿಣಾಮ ಉಂಟು ಮಾಡಬಾರದು. ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಲೇಬೇಕಿದೆ ಎಂದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts