More

    ಇಂದಿನಿಂದ ಗೌರಿಸುತನ ಆರಾಧನೆ

    ಚಿಕ್ಕಮಗಳೂರು: ಕರೊನಾ ಆತಂಕದಲ್ಲೂ ಶುಕ್ರವಾರ ಎಲ್ಲೆಡೆ ಸರಳವಾಗಿ ಗೌರಿ ಹಬ್ಬ ಆಚರಿಸಲಾಯಿತು. ಮನೆ, ದೇವಾಲಯಗಳಲ್ಲಿ ಮಹಿಳೆಯರು ಸ್ವರ್ಣಗೌರಿ ಪೂಜಿಸಿ, ಮುತೆôದೆಯರಿಗೆ ಬಾಗಿನ ಸಮರ್ಪಿಸಿ ಸಂಭ್ರಮಿಸಿದರು. ಶನಿವಾರದಿಂದ ಗೌರಿಸುತನ ಪೂಜೆ ನೆರೆವೇರಲಿದ್ದು, ಹಬ್ಬದ ಆಚರಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದರು.

    ಗೌರಿ-ಗಣೇಶ ಹಬ್ಬದ ಅಂಗವಾಗಿ ಬೆಳಗಿನಿಂದಲೆ ಹೂವು, ತಳಿರು ತೋರಣಗಳಿಂದ ಮನೆಗಳನ್ನು ಸಿಂಗರಿಸಿ ಅಲಂಕೃತ ಮಂಟಪಗಳಲ್ಲಿ ವಿವಿಧ ಮಾದರಿಯ ಗೌರಿಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪೂಜೆ ನೆರವೇರಿಸಿದರು. ನಗರದ ಶೃಂಗೇರಿ ಶ್ರೀ ಶಂಕರ ಮಠದಲ್ಲಿ ಏರ್ಪಡಿಸಿದ್ದ ಸಾರ್ವತ್ರಿಕ ಗೌರಿಪೂಜೆಯಲ್ಲಿ 7 ಮುತೆôದೆಯರನ್ನು ಕೂರಿಸಿ ಗಣಪತಿ ಪೂಜೆ ನಂತರ ಗೌರಿ ಆಹ್ವಾನ ಮಾಡಲಾಯಿತು. ಹೊರ ಆವರಣದಲ್ಲಿ ಗಂಗಾಜಲ ಪೂಜೆ, ದೇವಾಲಯದಲ್ಲಿ ಗೌರಿ ಪೂಜೆ ನೆರವೇರಿಸಲಾಯಿತು. ಕರೊನಾ ನಿಯಮಪಾಲನೆಯೊಂದಿಗೆ ಅರ್ಚಕ ರಾಮಕೃಷ್ಣ ಭಟ್ ಅವರು ಕಥೆ ಪಠಿಸಿ ಗೌರಿ ಪೂಜೆ ಮಹತ್ವ ತಿಳಿಸಿದ ನಂತರ ಮಂಗಳಾರತಿ ಸಲ್ಲಿಸಿ ಮಹಿಳೆಯರಿಗೆ ಉಪಾಯನದಾನ ನೀಡಲಾಯಿತು. ಲೋಹಿತ್ ಭಟ್, ಯೋಗೀಶ್ ಶರ್ಮ ಇದ್ದರು.

    ಎಂಜಿ ರಸ್ತೆಯ ಆಂಜನೇಯ ಬನಶಂಕರಿ ದೇವಾಲಯದಲ್ಲಿ ಬನಶಂಕರಿ ಮಹಿಳಾ ಸಂಘದಿಂದ ಮಹಿಳೆಯರು ಬೆಳಗ್ಗೆ ಗೌರಿಮೂರ್ತಿ ಪ್ರತಿಷ್ಠಾಪಿಸಿ ಗೆಜ್ಜೆವಸ್ತ್ರ, ಹೂವಿನಿಂದ ಅಲಂಕರಿಸಿ ಆರತಿ ಬೆಳಗಿ ಪರಸ್ಪರ ಗೌರಿದಾರ ಕಟ್ಟಿ, ಬಾಗಿನ ನೀಡಿದರು. ಕರೊನಾ ತಡೆಗೆ ಮಾಸ್ಕ್ ಧರಿಸಿದ್ದರು. 18 ವರ್ಷಗಳಿಂದ ಗೌರಿ ಪೂಜೆಯಲ್ಲಿ ಪಾಲ್ಗೊಂಡು ವಿಶೇಷ ಅಲಂಕಾರ ಪೂಜೆಯೊಂದಿಗೆ ಗಣೇಶ ಚತುರ್ಥಿ ಆಚರಿಸಲಾಗಿದೆ. ಕರೊನಾ ಸೋಂಕಿನಿಂದ ಜಗತ್ತಿನ ಜನರಲ್ಲಿ ಮೂಡಿರುವ ಆತಂಕವನ್ನು ವಿಘ್ನೕಶ್ವರ ನಿವಾರಣೆ ಮಾಡಿ ಮುಂದಿನ ದಿನಗಳಲ್ಲಿ ಹಬ್ಬ-ಹರಿದಿನಗಳು ಸಾಂಗವಾಗಿ ನೆರವೇರಿಸಿ ಭಕ್ತರು ಸಂಭ್ರಮಿಸುವಂತಾಗಲಿ ಎಂಬ ಪ್ರಾರ್ಥನೆ ಮಾಡಲಾಗಿದೆ ಎಂದು ಅಧ್ಯಕ್ಷೆ ಸುವರ್ಣ ಕೇಶವಮೂರ್ತಿ ಹೇಳಿದರು. ಧನಲಕ್ಷ್ಮೀ, ರಾಧಾ, ಮಂಜುಳಾ, ತೇಜಸ್ವಿನಿ ಇದ್ದರು. ಬಸವನಹಳ್ಳಿ ಬನಶಂಕರಿ, ಜಯಶ್ರೀ ಜೋಷಿ ಅವರ ನಿವಾಸದಲ್ಲಿ ಗೌರಿಮೂರ್ತಿಗೆ ವಸ್ತ್ರಾಲಂಕಾರ ಮಾಡಿ ಪೂಜೆ ನಂತರ ಕೊಡಗು ಮುತೆôದೆಯರು ಹಾಗೂ ಮಹಿಳೆಯರಿಗೆ ಬಾಗಿನ ನೀಡಿದ್ದು ವಿಶೇಷವಾಗಿತ್ತು.

    ಹಲವೆಡೆ ಸಾರ್ವಜನಿಕ ಗೌರಿ ಪೂಜೆ: ನಗರ, ಗ್ರಾಮೀಣ ಪ್ರದೇಶದ ಮನೆಗಳಲ್ಲೂ ಗೌರಿಹಬ್ಬದ ಸಡಗರ ಮನೆ ಮಾಡಿದ್ದರೂ ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪಿಸಿದ್ದ ಗೌರಿ ಮೂರ್ತಿ ಪೂಜೆಗೆ ಜನ ಆಗಿಂದಾಗ್ಗೆ ಬಂದು ಪೂಜೆ, ಪ್ರಾರ್ಥನೆ ಸಲ್ಲಿಸಿ ತೆರಳುತ್ತಿದ್ದರು. ಮುಗುಳವಳ್ಳಿಯಲ್ಲಿ ಗೌರಿವ್ರತ ವಿಶೇಷವಾಗಿ ಒಂದು ತಿಂಗಳು ಆಚರಿಸುತ್ತಿದ್ದು, ಶುಕ್ರವಾರ ಗ್ರಾಮದ ಗೌರಮ್ಮನ ಮಡುವಿನಿಂದ ದೇವಾಲಯಕ್ಕೆ ತಂದು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಯಿತು. ಸರ್ಕಾರಿ ನಿಯಮ ಪಾಲನೆ ಮಾಡಿ ಗ್ರಾಮಸ್ಥರ ಸಮ್ಮುಖದಲ್ಲಿ ಪ್ರತಿಷ್ಠಾಪಿಸಲಾಗಿದೆ ಎಂದು ಗ್ರಾಮಸ್ಥ ದಿನೇಶ್ ಹೇಳಿದರು. ನಲ್ಲೂರಿನಲ್ಲೂ ಗೌರಿ ಹಬ್ಬವನ್ನು 30 ದಿನಗಳ ಕಾಲ ಆಚರಿಸುತ್ತಿದ್ದು ಗ್ರಾಮಸ್ಥರು ಗೌರಿಮೂರ್ತಿ ಪ್ರತಿಷ್ಠಾಪಿಸಿದರು.

    ಗಣೇಶ ಮೂರ್ತಿಗೆ ಬೇಡಿಕೆ: ಗಣೇಶ ಮೂರ್ತಿಗಳನ್ನು ಕೊಂಡೊಯ್ಯಲು ವಿವಿಧ ಬಡಾವಣೆಗಳಿಂದ ಭಕ್ತರು ಕುಂಬಾರ ಬೀದಿಗೆ ಆಗಮಿಸಿದ್ದರು. ಸರ್ಕಾರ ಗಣೇಶೋತ್ಸವಕ್ಕೆ ನಿರ್ಬಂಧ ಸಡಿಲಿಸಿದ ಬಳಿಕ ಸಂಘ ಸಂಸ್ಥೆಗಳ ಯುವಕರು ಗಣಪತಿ ಮೂರ್ತಿಗೆ ಆರ್ಡರ್ ನೀಡಲು ಬಂದಾಗ ಕಾಲಾವಕಾಶದ ಕೊರತೆಯಿಂದ ತಯಾರಕರು ಒಪ್ಪಿಕೊಳ್ಳದ ಪರಿಸ್ಥಿತಿಯಲ್ಲಿದ್ದರು. ಎಂಜಿ ರಸ್ತೆಯಲ್ಲಿ ಗಣೇಶ ಮಾರಾಟ ಮಾಡುತ್ತಿದ್ದು ಮನೆಗಳಲ್ಲಿ ಪ್ರತಿಷ್ಠಾಪಿಸುವ ಮೂರ್ತಿಗೆ ಕಳೆದ ಬಾರಿಗಿಂತ ಬೇಡಿಕೆ ಕಡಿಮೆಯಾಗಿದ್ದು ಕೆಲವರು ಮೂರ್ತಿಗಳನ್ನು ಕೊಂಡೊಯ್ದರು.

    ಕಲಾವಿದರು ಗಣೇಶ ಮೂರ್ತಿಗಳಿಗೆ ಅಂತಿಮ ಸ್ಪರ್ಶ ನೀಡುತ್ತಿದ್ದು ಶೇ.90 ರಷ್ಟು ಪ್ರಸನ್ನ ಗಣಪತಿ ಮೂರ್ತಿ ತಯಾರಾಗಿದೆ. ಉಳಿದಂತೆ ಸಿಂಹ ಗಣಪ, ಆನೆ, ಹಂಸ, ಇಡಗುಂಜಿ, ಪೇಟ, ಮುಡಿ, ದರ್ಬಾರ್, ಮೂಶಿಕವಾಹನ ಸೇರಿ ಕೆಲವರಷ್ಟೇ ವಿಶೇಷ ಮೂರ್ತಿಯನ್ನು ಮಾಡಿರುವುದು ಕಂಡು ಬಂತು.

    843 ಕಡೆ ಸಾರ್ವಜನಿಕ ಗಣೇಶೋತ್ಸವ: ಕರೊನಾ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕಳೆದ ಬಾರಿಗೆ ಹೋಲಿಸಿದರೆ ಶೇ.60ರಷ್ಟು ಸಾರ್ವಜನಿಕ ಗಣಪತಿ ಪ್ರತಿಷ್ಠಾಪನೆ ಕೈಬಿಟ್ಟಿದ್ದಾರೆ.

    ಈ ಬಾರಿ ಜಿಲ್ಲೆಯಲ್ಲಿ 843 ಕಡೆ ಸಾರ್ವಜನಿಕ ಗಣೇಶ ಪ್ರತಿಷ್ಠಾಪಿಸಲಾಗುತ್ತಿದ್ದು, 190 ಮೂರ್ತಿಗಳನ್ನು ಸಂಪ್ರದಾಯದಂತೆ ಬೆಳಗ್ಗೆ ಪ್ರತಿಷ್ಠಾಪಿಸಿ ಸಂಜೆ ವಿಸರ್ಜಸಲಾಗುತ್ತಿದೆ. 2ನೇ ದಿನ 5, 3ನೇ ದಿನ 359, 4ನೇ ದಿನ 4, 5ನೇ ದಿನ ಬಹುತೇಕ ಗಣಪತಿ ವಿಸರ್ಜನೆ ಮಾಡಲಿದ್ದಾರೆ. ಚಿಕ್ಕಮಗಳೂರು ತಾಲೂಕಿನ ಗ್ರಾಮಾಂತರ ಪ್ರದೇಶವಾದ ಮುಗುಳವಳ್ಳಿ, ನಲ್ಲೂರು ಹಾಗೂ ಲಕ್ಯಾದಲ್ಲಿ 30 ದಿನಗಳು ಗೌರಿ-ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗುವುದು.

    ಕಳೆದ ವರ್ಷ ಜಿಲ್ಲೆಯಲ್ಲಿ 1700, ತಾಲೂಕಿನಲ್ಲಿ 400 ಹಾಗೂ ನಗರದಲ್ಲಿ 300ಕ್ಕೂ ಹೆಚ್ಚು ಸಾರ್ವಜನಿಕ ಗಣೇಶೋತ್ಸವ ನಡೆದಿದ್ದು 3 ದಿನ, ಒಂದುವಾರ, 21ದಿನ ಹಾಗೂ ತಿಂಗಳವರೆಗೂ ಪ್ರತಿಷ್ಠಾಪಿಸಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts