More

    ತೋಟಗಾರಿಕೆ ಪ್ರದೇಶ ವಿಸ್ತರಣೆಗೆ ಪಣ

    ಬೆಳಗಾವಿ: ರೈತರು ಹಾಗೂ ವಲಸೆ ಕಾರ್ಮಿಕರಿಗೆ ಅನುಕೂಲ ಕಲ್ಪಿಸಿಕೊಡುವ ನಿಟ್ಟಿನಲ್ಲಿ ತೋಟಗಾರಿಕೆ ಇಲಾಖೆ ಮಹತ್ವದ ಹೆಜ್ಜೆ ಇಟ್ಟಿದೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ(ನರೇಗಾ) ಯೋಜನೆಯಡಿ ಕೆಲಸ ನೀಡುವುದು ಹಾಗೂ ತೋಟಗಾರಿಕೆ ಕ್ಷೇತ್ರ ವಿಸ್ತರಿಸುವ ಉದ್ದೇಶ ಹೊಂದಿದೆ.

    ಸಣ್ಣ, ಅತೀ ಸಣ್ಣ ರೈತರಿಗೆ ಲಾಭ: ಈ ಬಾರಿ ತೋಟಗಾರಿಕೆ ಇಲಾಖೆ ನರೇಗಾದಡಿ ಮೂರು ಲಕ್ಷಕ್ಕೂ ಅಧಿಕ ಮಾನವ ದಿನ ಸೃಜನೆ ಮಾಡಿ ಎರಡು ಸಾವಿರ ಎಕರೆಗೂ ಹೆಚ್ಚು ತೋಟಗಾರಿಕೆ ಪ್ರದೇಶ ವಿಸ್ತರಿಸುವ ಗುರಿ ಹಾಕಿಕೊಂಡಿದೆ. 2 ಸಾವಿರಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ತೋಟಗಾರಿಕೆ ಬೆಳೆ ಬೆಳೆಯಲು ನಿರ್ಧರಿಸಲಾಗಿದೆ. ಬೇರೆ ರಾಜ್ಯಗಳಿಗೆ ವಲಸೆ ಹೋಗಿ ಮರಳಿದ ಕಾರ್ಮಿಕರು ಹಾಗೂ ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ಹೆಚ್ಚಿನ ಪ್ರಮಾಣದ ಲಾಭವಾಗಲಿದೆ.

    ಎಲ್ಲ ಕುಟುಂಬಗಳಿಗೂ ಒತ್ತು: 5 ಎಕರೆಗಿಂತ ಕಡಿಮೆ ಭೂಮಿ ಹೊಂದಿದ ರೈತರು ತಮ್ಮ ಹೊಲದಲ್ಲಿ ನರೇಗಾದಡಿ ತೋಟಗಾರಿಕೆ ಬೆಳೆ ಬೆಳೆಯುವುದಕ್ಕೆ ಮುಂದಾದರೆ ಅಂತಹವರಿಗೆ ಸರ್ಕಾರ ಕೂಲಿ ಹಣ ಪಾವತಿಸುತ್ತದೆ. ಕುಟುಂಬ ಸದಸ್ಯರು ಕೂಲಿ ಮಾಡಬಹುದು. ಹೊರಗಿನವರು ಜಾಬ್ ಕಾರ್ಡ್ ಪಡೆದು ಕೆಲಸ ಮಾಡಬಹುದು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಬಿಪಿಎಲ್ ಕಾರ್ಡ್‌ದಾರರು, ಸ್ತ್ರೀ ಪ್ರಧಾನ ಹಾಗೂ ಅಂಗವಿಕಲ ಪ್ರಧಾನ ಕುಟುಂಬ ಹಾಗೂ ರೈತರಿಗೆ ಕೆಲಸ ನೀಡುವುದಕ್ಕೆ ಆದ್ಯತೆ ನೀಡಲಾಗಿದೆ.

    ಯಾವ್ಯಾವ ಬೆಳೆ: ಉದ್ದೇಶಿತ ತೋಟಗಾರಿಕೆ ವಿಸ್ತರಣೆ ಪ್ರದೇಶದಲ್ಲಿ ಮಾವು, ಸಪೋಟ, ದಾಳಿಂಬೆ ಪೇರಲ, ಲಿಂಬೆ, ನೇರಳೆ, ಸೀತಾಫಲ, ಬಾರೆ, ಗೇರು, ತೆಂಗು, ನುಗ್ಗೆ, ಬಾಳೆ, ಅಂಜೂರ, ಪಪ್ಪಾಯ, ದ್ರಾಕ್ಷಿ, ವೀಳ್ಯದೆಲೆ, ಕರಿಬೇವು, ಜಮೀನಿನ ಬದುವಿನಲ್ಲಿ ತೆಂಗು ಅಥವಾ ಹಣ್ಣಿನ ಸಸಿ ಬೆಳೆಯಬಹುದು. ಜತೆಗೆ ಈ ಎಲ್ಲ ಬೆಳೆಗಳಿಗೆ ಹನಿ ನೀರಾವರಿ ಯೋಜನೆಯಡಿ ಶೇ.90 ಸಹಾಯಧನ ಸೌಲಭ್ಯವಿದೆ. ಜತೆಗೆ ಹಳೇ ತೋಟಗಳ ಪುನಃಶ್ಚೇತನಕ್ಕೆ ನರೇಗಾದಡಿ ಅವಕಾಶ ಕಲ್ಪಿಸಲಾಗಿದೆ. ಯಾವುದೇ ಬೆಳೆ ಬೆಳೆಯುವ ರೈತರಿಗೆ ಅಗತ್ಯ ಮಾಹಿತಿಯನ್ನು ತೋಟಗಾರಿಕೆ ಇಲಾಖೆ ಅಥವಾ ರೈತ ಸಂಪರ್ಕ ಕೇಂದ್ರಗಳಲ್ಲಿ ನೀಡಲಾಗುತ್ತಿದೆ.

    ಗ್ರಾಪಂಗೆ ಅರ್ಜಿ ಸಲ್ಲಿಸಬೇಕು: ನರೇಗಾದಡಿ ತೋಟಗಾರಿಕೆ ಬೆಳೆ ಬೆಳೆಯುವುದಕ್ಕೆ ಕೆಲಸ ಮಾಡಿಸಿಕೊಳ್ಳುವುದಕ್ಕೆ ಸಣ್ಣ, ಅತೀ ಸಣ್ಣ ರೈತರು ತೋಟಗಾರಿಕೆ ಇಲಾಖೆ, ಗ್ರಾಪಂಗೆ ಅರ್ಜಿ ಸಲ್ಲಿಸಬೇಕು. ನಂತರ ಗ್ರಾಮಸಭೆಯಲ್ಲಿ ಠರಾವು ಪಾಸ್ ಆಗಿ ಕ್ರಿಯಾ ಯೋಜನೆ ಸಿದ್ಧವಾದ ಬಳಿಕ ರೈತರ ಹೊಲದಲ್ಲಿ ನರೇಗಾದಡಿ ಕೆಲಸ ಆರಂಭವಾಗುತ್ತದೆ. ಸಾಮಾನ್ಯ ಕೂಲಿಕಾರರು ನರೇಗಾದಡಿ ಕೆಲಸ ಬೇಕೆಂದರೆ ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಬೇಕು. ಬಳಿಕ ಆಯಾ ಪಂಚಾಯಿತಿಗಳು ಜಾಬ್ ಕಾರ್ಡ್ ನೀಡುತ್ತವೆ.

    ನರೇಗಾದಡಿ ತೋಟಗಾರಿಕೆ ಕ್ಷೇತ್ರ ವಿಸ್ತರಣೆ ಮಾಡುತ್ತಿದ್ದೇವೆ. ಇದರಿಂದ ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ಬಹಳಷ್ಟು ಲಾಭವಾಗಲಿದೆ. ರೈತರು ಸಮೀಪದ ತಾಲೂಕು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹಾಗೂ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿದರೆ ತೋಟಗಾರಿಕೆ ಬೆಳೆಗಳ ಬಗ್ಗೆ ಮಾಹಿತಿ, ತಾಂತ್ರಿಕ ಸಲಹೆ ಸಿಗುತ್ತದೆ. ಜಿಲ್ಲೆಯ ರೈತರು ಈ ಯೋಜನೆಯ ಲಾಭ ಪಡೆದು ಆರ್ಥಿಕ ಅಭಿವೃದ್ಧಿ ಸಾಧಿಸಬಹುದು.
    | ರವೀಂದ್ರ ಹಕಾಟೆ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ, ಬೆಳಗಾವಿ

    | ಜಗದೀಶ ಹೊಂಬಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts