More

    ಕೆ.ಆರ್.ನಗರದಲ್ಲಿ ಎಲ್ಲೆಂದರಲ್ಲಿ ಕಸ!

    ಕೆ.ಆರ್.ನಗರ : ಪಟ್ಟಣದಲ್ಲಿ ‘ಸ್ವಚ್ಛ ಸರ್ವೇಕ್ಷಣೆ’ಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಅತ್ತ ಪುರಸಭೆ ಶ್ರಮಿಸುತ್ತಿದ್ದರೆ, ಇತ್ತ ನಿವಾಸಿಗಳು ಎಲ್ಲೆಂದರಲ್ಲಿ ಕಸ ಹಾಕುವ ಮೂಲಕ ಮೂಲ ಉದ್ದೇಶವನ್ನೇ ಮರೆತು ಅನೈರ್ಮಲ್ಯಕ್ಕೆ ಕಾರಣರಾಗುತ್ತಿದ್ದಾರೆ!

    ಸರ್ಕಾರ ಸ್ವಚ್ಛ ಸರ್ವೇಕ್ಷಣೆ ಅಭಿಯಾನ ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದೆ. ಇದಕ್ಕೆ ಸಾರ್ವಜನಿಕರು ಸಹಕರಿಸುವ ಮೂಲಕ ತಮ್ಮ ಪ್ರದೇಶ ಸ್ವಚ್ಛಗ್ರಾಮ, ಸ್ವಚ್ಛನಗರ ಎಂಬ ಕೀರ್ತಿಗೆ ಭಾಜನವಾಗುವಂತೆ ಮಾಡಬೇಕೆಂಬ ಉದ್ದೇಶವನ್ನು ಸ್ಥಳೀಯ ಸಂಸ್ಥೆಗಳು ಹೊಂದಿವೆ. ಪಟ್ಟಣ, ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲೂ ಸಾರ್ವಜನಿಕ ಸ್ಥಳಗಳಾದ ಆಸ್ಪತ್ರೆ, ಉದ್ಯಾನ, ಹೋಟೆಲ್‌ಗಳು, ನದಿಗಳು, ರಸ್ತೆ ಬದಿ ಸೇರಿದಂತೆ ಆ ವ್ಯಾಪ್ತಿಯ ಬಡಾವಣೆಗಳಲ್ಲಿ ಪರಿಸರವನ್ನು ಸ್ವಚ್ಛಗೊಳಿಸಿ ಕಸಮುಕ್ತಗೊಳಿಸುವುದು ಹಾಗೂ ಸ್ವಚ್ಛತಾ ಕಾರ್ಯದಲ್ಲಿ ಸ್ಥಳೀಯರು ಪಾಲ್ಗೊಳ್ಳುವಂತೆ ಮಾಡುವುದು ಕಾರ್ಯಕ್ರಮದ ಉದ್ದೇಶವಾಗಿದೆ.

    ಈ ಕಾರ್ಯಕ್ರಮದ ಯಶಸ್ವಿಗಾಗಿ ಪುರಸಭೆ ಅಧಿಕಾರಿಗಳು ಪಟ್ಟಣದಲ್ಲಿ ಸಾಕಷ್ಟು ಪ್ರಚಾರ ಮಾಡಿ ಜಾಥಾ, ಆಂದೋಲನ ನಡೆಸುತ್ತಿದ್ದಾರೆ. ಆದರೆ ಪುರಸಭೆ ಮನವಿಗೆ ಸ್ಪಂದಿಸದ ಸ್ಥಳೀಯರು ಕಸವನ್ನು ನಿತ್ಯವೂ ಬೆಳಗ್ಗೆ ಬರುವ ಪುರಸಭಾ ಕಸ ಸಂಗ್ರಹ ವಾಹನಗಳಿಗೆ ನೀಡದೆ ಮನೆಯ ಮುಂಭಾಗದ ರಸ್ತೆ ಬದಿ, ಖಾಲಿ ಜಾಗಗಳು ಹಾಗೂ ಎಲ್ಲೆಂದರಲ್ಲಿ ಬೇಕಾಬಿಟ್ಟಿಯಾಗಿ ಬಿಸಾಡುವ ಮೂಲಕ ಪುರಸಭಾ ಆಡಳಿತಕ್ಕೆ ಮತ್ತಷ್ಟು ಕೆಲಸ ನೀಡಿ ತೊಂದರೆ ಕೊಡುತ್ತಿದ್ದಾರೆ.
    ನಾಗರಿಕರ ಅಸಹಕಾರದಿಂದ ಪ್ರತಿನಿತ್ಯ ಪೌರಕಾರ್ಮಿಕರು ಬೀದಿಗಳು, ರಸ್ತೆಗಳು, ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛ ಮಾಡಿದರೂ ಸ್ವಚ್ಛತೆ ಕಾಣುತ್ತಿಲ್ಲ. ಯಾವ ಬಡಾವಣೆ ಅಥವಾ ವಾರ್ಡ್‌ಗಳಿಗೆ ಹೋದರೂ ಕಸದ ರಾಶಿ ಕಾಣುತ್ತಿದೆ. ರಸ್ತೆ ಬದಿಗಳು ಹಾಗೂ ಖಾಲಿ ಜಾಗಗಳಲ್ಲಿ ಕಸ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಅನೈರ್ಮಲ್ಯ ವಾತಾವರಣ ನಿರ್ಮಾಣವಾಗಿದೆ.

    ಕಸದ ಬುಟ್ಟಿ ವಿತರಣೆ: ಪಟ್ಟಣದ ಸ್ವಚ್ಛತೆ ಕಾಯ್ದುಕೊಳ್ಳಲು ಪುರಸಭೆ 23 ವಾರ್ಡ್‌ಗಳಲ್ಲೂ ಮನೆಗಳಲ್ಲಿ ಸಂಗ್ರಹವಾಗುವ ಕಸವನ್ನು ಸ್ಥಳದಲ್ಲೇ ಹಸಿಕಸ, ಒಣಕಸ ಎಂದು ಬೇರ್ಪಡಿಸಲು ನಿವಾಸಿಗಳಿಗೆ ಕಸದ ಬುಟ್ಟಿಗಳನ್ನು ವಿತರಿಸಿದೆ. ಈ ಕಸವನ್ನು ಸಂಗ್ರಹಿಸಲು ಮುಂಜಾನೆಯೇ ಪುರಸಭೆ ಕಸ ಸಂಗ್ರಹ ವಾಹನಗಳು ತೆರಳಲಿದ್ದು, ಪೌರಕಾರ್ಮಿಕ ಸಹಾಯಕರನ್ನು ನೇಮಿಸಿ ಪ್ರತಿ ಬಡಾವಣೆಯ ಪ್ರತಿ ಮನೆಗಳ ಬಳಿ ಹೋಗಿ ಕಸ ಸಂಗ್ರಹಿಸಲಾಗುತ್ತಿದೆ. ಆ ಕಸವನ್ನು ಸಂಗ್ರಹಣ ಘಟಕಕ್ಕೆ ತೆಗೆದುಕೊಂಡು ಹೋಗಿ ಅಲ್ಲಿ ಬೇರ್ಪಡಿಸಿ ಹಸಿ ಕಸವನ್ನು ಗೊಬ್ಬರವಾಗಿ ಪರಿವರ್ತಿಸಿ ಮರು ಬಳಕೆಗೆ ಅನುಕೂಲ ಆಗುವಂತೆ ಕ್ರಮ ಕೈಗೊಂಡಿದ್ದಾರೆ. ಹೀಗಿದ್ದರೂ ನಾಗರಿಕರು ಕಸವನ್ನು ಕಸ ಸಂಗ್ರಹ ವಾಹನಗಳಿಗೂ ನೀಡದೆ ಎಲ್ಲೆಂದರಲ್ಲಿ ಎಸೆಯುವ ಮೂಲಕ ಅನೈರ್ಮಲ್ಯಕ್ಕೆ ಕಾರಣರಾಗಿದ್ದಾರೆ. ಪೌರಕಾರ್ಮಿಕರು ಹಗಲಿರುಳು ಪಟ್ಟಣದ ಸ್ವಚ್ಛತೆಗಾಗಿ ಶ್ರಮಿಸುತ್ತಿದ್ದರೂ ಪ್ರಯೋಜನ ಇಲ್ಲದಂತಾಗಿದೆ.

    ಪ್ರಶಸ್ತಿ ಕೈತಪ್ಪುವ ಭೀತಿ: ಕೆ.ಆರ್.ನಗರ ಪುರಸಭೆ ಕಳೆದ ಮೂರು ಬಾರಿಯೂ ‘ಸ್ವಚ್ಛ ನಗರ’ ಪ್ರಶಸ್ತಿಗೆ ಭಾಜನವಾಗಿದೆ. ಪುರಸಭೆ ಮತ್ತು ಪಟ್ಟಣ ಈ ಬಾರಿಯೂ ಸ್ವಚ್ಛ ಸರ್ವೇಕ್ಷಣೆಯಲ್ಲಿ ಪಾಲ್ಗೊಂಡಿದ್ದು, ಈಗಾಗಲೇ ಕಳೆದ 20 ದಿನಗಳಿಂದ ತನ್ನ ಕಾರ್ಯವನ್ನು ಹೆಚ್ಚಿಸಿಕೊಂಡಿದೆ. ಆದರೆ ಈ ಬಾರಿ ನಾಗರಿಕರ ನಿರ್ಲಕ್ಷ್ಯ ಮನೋಭಾವದಿಂದ ಪ್ರಶಸ್ತಿ ಕೈತಪ್ಪುವ ಸಾಧ್ಯತೆ ಹೆಚ್ಚಾಗಿದೆ. ಇನ್ನಾದರೂ ಪಟ್ಟಣದ ನಾಗರಿಕರು ಪುರಸಭೆ ಆಡಳಿತ ಮತ್ತು ಅಧಿಕಾರಿಗಳೊಂದಿಗೆ ಕೈಜೋಡಿಸಿ ಎಲ್ಲೆಂದರಲ್ಲಿ ಕಸ ಹಾಕದೆ ಮತ್ತೊಮ್ಮೆ ಕೆ.ಆರ್.ನಗರ ‘ಸ್ವಚ್ಛ ನಗರ’ ಎಂಬ ಹೆಗ್ಗಳಿಕೆಗೆ ಪಾತ್ರರಾಗಲು ಸಹಕರಿಸಬೇಕು ಎಂದು ಪುರಸಭೆ ಮನವಿ ಮಾಡಿದೆ.

    ಪಟ್ಟಣವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕೆಂಬ ಉದ್ದೇಶದಿಂದ ಎಲ್ಲ ವಾರ್ಡ್‌ಗಳಲ್ಲೂ ಕಸದ ಬುಟ್ಟಿಗಳನ್ನು ವಿತರಿಸಲಾಗಿದೆ. ಕಸವನ್ನು ಸ್ವೀಕರಿಸಲು ಕಸ ಸಂಗ್ರಹದ ವಾಹನ ಹಾಗೂ ಪೌರಕಾರ್ಮಿಕರನ್ನು ಪ್ರತಿಯೊಂದು ಮನೆ ಬಳಿ ಕಳುಹಿಸಲಾಗುತ್ತಿದೆ. ಆದರೂ ಕೆಲವು ನಾಗರಿಕರು ಕಸವನ್ನು ಎಲ್ಲೆಂದರಲ್ಲಿ ಎಸೆಯುವ ಪರಿಪಾಠ ಬೆಳೆಸಿಕೊಂಡಿದ್ದಾರೆ. ಪರಿಣಾಮ, ಸ್ವಚ್ಛ ಸರ್ವೇಕ್ಷಣೆ ಅಭಿಯಾನದಲ್ಲಿ ಹಿನ್ನಡೆ ಉಂಟಾಗಿದೆ. ಪ್ರಶಸ್ತಿ ಪಡೆಯಲು ನಾಗರಿಕರ ಸಹಕಾರ ಅಗತ್ಯವಾಗಿದೆ.
    ಜುಟ್ಟು ಮಹದೇವ್, ಕಾಂಗ್ರೆಸ್ ಮುಖಂಡ, ಮಧುವನಹಳ್ಳಿ ಬಡಾವಣೆ

    ನಮ್ಮ ಪುರಸಭೆ ಕಳೆದ ಮೂರು ಬಾರಿಯೂ ‘ಸ್ವಚ್ಛ ನಗರಿ’ ಪ್ರಶಸ್ತಿ ಪಡೆದಿದೆ. ಈ ಬಾರಿಯೂ ಸ್ವಚ್ಛ ಸರ್ವೇಕ್ಷಣೆಯಲ್ಲಿ ಭಾಗಿಯಾಗಿದ್ದು, ಮತ್ತೊಮ್ಮೆ ಪ್ರಶಸ್ತಿ ಪಡೆಯಲು ಪುರಸಭಾ ಆಡಳಿತ ಶ್ರಮಿಸುತ್ತಿದೆ. ಇದಕ್ಕೆ ನಾಗರಿಕರ ಸಹಕಾರ ಬಹುಮುಖ್ಯ. ಕಸವನ್ನು ಎಲ್ಲೆಂದರಲ್ಲಿ ಎಸೆಯದೆ ಪುರಸಭೆಯೊಂದಿಗೆ ಸಹಕರಿಸಬೇಕು. ಕಸದ ಬುಟ್ಟಿ ಇಲ್ಲದವರಿಗೆ ಪುರಸಭೆಯಿಂದ ಮತ್ತೊಮ್ಮೆ ವಿತರಿಸಬೇಕು.
    ಉಮೇಶ್, ಪುರಸಭಾ ಸದಸ್ಯ

    ಹಲವಾರು ವಿನೂತನ ಕಾರ್ಯಕ್ರಮಗಳ ಮೂಲಕ ಪಟ್ಟಣದ ನಾಗರಿಕರಿಗೆ ಸ್ವಚ್ಛತೆ ಬಗ್ಗೆ ಅರಿವು ಮೂಡಿಸುತ್ತಿದ್ದೇವೆ. ಆದರೂ ಕೆಲ ನಾಗರಿಕರು ಎಲ್ಲೆಂದರಲ್ಲಿ ಕಸ ಹಾಕುತ್ತಿದ್ದಾರೆ. ಪಟ್ಟಣದ ಸ್ವಚ್ಛತೆ ಕಾಪಾಡುವ ಹೊಣೆ ನಾಗರಿಕರ ಮೇಲಿದೆ. ಈ ಬಾರಿಯೂ ನಾವು ‘ಸ್ವಚ್ಛ ನಗರಿ’ ಪ್ರಶಸ್ತಿಗೆ ಭಾಜನಾರಾಗುತ್ತೇವೆ ಎಂಬ ವಿಶ್ವಾಸವಿದೆ.
    ಡಾ.ಜಯಣ್ಣ, ಪುರಸಭಾ ಮುಖ್ಯಾಧಿಕಾರಿ. ಕೆ.ಆರ್.ನಗರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts