More

    ರಸ್ತೆ ಬದಿಯಲ್ಲೇ ಕಸ ವಿಲೇವಾರಿ!

    ಸೋಮವಾರಪೇಟೆ: ಬೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಜೆಗುಂಡಿ ಜಂಕ್ಷನ್‌ನ ರಾಜ್ಯ ಹೆದ್ದಾರಿಯ ಬದಿಯಲ್ಲಿ ಕಸ ಎಸೆಯುತ್ತಿರುವುದರಿಂದ ಆಶುಚಿತ್ವ ತಾಂಡವವಾಡುತ್ತಿದೆ.

    ಹೆಚ್ಚಿನ ಜನಸಂಖ್ಯೆಯಿರುವ ಬಜೆಗುಂಡಿ ಕಾಲನಿಯ ಜನರು ಈ ಸ್ಥಳದಲ್ಲೇ ಬಸ್ ಅಥವಾ ಅಟೋಗಳಿಗೆ ಕಾದು ನಿಲ್ಲಬೇಕಿದೆ.
    ರಾಜ್ಯ ಹೆದ್ದಾರಿಗೆ ಹೊಂದಿಕೊಂಡಂತಿರುವ ಬೇಳೂರು ಗ್ರೇಡ್ 1 ಗ್ರಾಮ ಪಂಚಾಯಿತಿ ಇಂದಿಗೂ ತ್ಯಾಜ್ಯ ವಿಲೇವಾರಿಗೆ ಸರಿಯಾದ ವ್ಯವಸ್ಥೆ ಮಾಡಿಕೊಳ್ಳಲು ವಿಫಲವಾಗಿದೆ. ಕಾಲನಿಯಲ್ಲಿ ಹೆಚ್ಚಿನ ಮನೆಯಿದ್ದು ವಿಲೇವಾರಿಗೆ ಪ್ರತ್ಯೇಕ ಜಾಗವಿಲ್ಲದೆ ಹೆಚ್ಚಿನವರು ಹೆದ್ದಾರಿಯ ಬದಿಯಲ್ಲಿಯೇ ಬಂದು ಕಸ ಸುರಿದು ಹೋಗುವುದು ಮಾಮೂಲಿಯಾಗಿದೆ.

    ರಸ್ತೆ ಬದಿಯಲ್ಲಿ ಸಂಗ್ರಹವಾಗಿರುವ ಕಸವನ್ನು ಪಂಚಾಯಿತಿಯವರು ತೆಗೆಯುತ್ತಿಲ್ಲ. ಇದರಿಂದ ಜನರು ಮೂಗು ಮುಚ್ಚಿ ಸಂಚರಿಸಬೇಕಾಗಿದೆ.ಬಜೆಗುಂಡಿ 40 ಎಕರೆ ಪ್ರದೇಶದಲ್ಲಿ, 400 ಮನೆಗಳಿದ್ದು, 600 ಕುಟುಂಬಗಳಿವೆ. ಸುಮಾರು 2 ಸಾವಿರ ಜನಸಂಖ್ಯೆಯನ್ನು ಹೊಂದಿದ್ದು, 1180 ಮತದಾರರಿದ್ದಾರೆ. ಇಲ್ಲಿ 150 ಅಲ್ಪಸಂಖ್ಯಾತರ ಕುಟುಂಬಗಳು, 200 ಪರಿಶಿಷ್ಟ ಜಾತಿ ಮತ್ತು ಪಂಗಡದ ಹಾಗೂ 250 ಇತರ ವರ್ಗದ ಕುಟುಂಬಗಳಿವೆ.

    ಬೇಳೂರು ಪಂಚಾಯಿತಿ ವ್ಯಾಪ್ತಿಯಲ್ಲೂ ಕಸ ವಿಲೇವಾರಿಯ ಸಮಸ್ಯೆ ಇನ್ನಿಲ್ಲದಂತೆ ಕಾಡುತ್ತಿದೆ. ಇಲ್ಲಿನ ಹೆಚ್ಚಿನ ಜನರು ಬೆಳಗ್ಗೆ ಮತ್ತು ಸಂಜೆಯಾದರೆ, ತಮ್ಮ ಮನೆಯಲ್ಲಿನ ಕಸವನ್ನು ಹೆದ್ದಾರಿ ಬದಿಯಲ್ಲಿಯೇ ತಂದು ಹಾಕುತ್ತಾರೆ. ಹಲವು ವರ್ಷಗಳಿಂದ ಇಲ್ಲಿ ಸಮಸ್ಯೆಗಳು ಕಾಡುತ್ತಿವೆ. ಯಾರೇ ಅಧಿಕಾರ ಮಾಡಿದರೂ, ಈ ಸಮಸ್ಯೆಗೆ ಪರಿಹಾರ ಕಾಣಿಸಲು ಮುಂದಾಗಿಲ್ಲ. ಕೂಡಲೇ ಇಲ್ಲಿನ ಕಸ ವಿಲೇವಾರಿಗೆ ಸರಿಯಾದ ಸ್ಥಳ ಗುರುತಿಸಿ, ಸೂಕ್ತರೀತಿಯಲ್ಲಿ ವಿಲೇವಾರಿ ಮಾಡಲು ಮುಂದಾಗಬೇಕಿದೆ ಎಂದು ನಿವಾಸಿ ಶಶಿ ಹೇಳಿದರು.

    ಕಸದಲ್ಲಿ ಪ್ಲಾಸ್ಟಿಕ್ ವಸ್ತುಗಳು ಮತ್ತು ಪೇಪರ್ ಇರುವುದರಿಂದ ಗಾಳಿ ಬಂದೊಡನೆ ಎಲ್ಲೆಂದರಲ್ಲಿ ಹಾರಿ ಬಿದ್ದಿರುತ್ತದೆ. ಪಕ್ಕದಲ್ಲೇ ದೇವಾಲಯವಿದೆ. ಆಟೋ ನಿಲ್ದಾಣವಿದೆ. ಅಂಗಡಿ, ಹೋಟೆಲ್‌ಗಳಿವೆ. ಶಾಲಾ, ಕಾಲೇಜು ಮಕ್ಕಳು ಈ ಸ್ಥಳದಲ್ಲೇ ಬಂದು ನಿಲ್ಲಬೇಕು. ಮಳೆಗಾಲದಲ್ಲಂತೂ ಆ ಸ್ಥಳ ಗಬ್ಬೆದ್ದು ನಾರುತ್ತಿರುತ್ತದೆ. ಸಾಂಕ್ರಾಮಿಕ ರೋಗ ಹರಡುವ ಸ್ಥಳವಾಗಿದೆ ಸಂಬಂಧಪಟ್ಟವರು ಎಚ್ಚೆತ್ತು ಕ್ರಮಕೈಗೊಳ್ಳಬೇಕೆಂದು ನಿವಾಸಿಗಳು ಒತ್ತಾಯಿಸಿದರು.

    ಬಸ್ ಶೆಲ್ಟರ್ ನಿರ್ಮಿಸಬೇಕಾಗಿದೆ
    ಹೆಚ್ಚು ಜನಸಂಖ್ಯೆಯಿರುವ ಬಜೆಗುಂಡಿ ಕಾಲನಿಗೆ ಬಸ್ ಶೆಲ್ಟರ್ ಇಲ್ಲ. ಬಡ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ವಾಸವಿದ್ದಾರೆ. ಇವರು ಆಟೋ, ಬಸ್‌ಗಳಲ್ಲಿ ಪ್ರಯಾಣ ಮಾಡುತ್ತಾರೆ. ಮಹಿಳೆಯರು, ಶಾಲಾ ಕಾಲೇಜು ಮಕ್ಕಳು, ವೃದ್ಧರು ರಸ್ತೆ ಬದಿಯಲ್ಲೇ ನಿಂತು ವಾಹನಗಳನ್ನು ಕಾಯಬೇಕು. ಬಿಸಿಲ ಬೇಗೆಯಿಂದ ಎಷ್ಟೋ ಮಂದಿ ನಿಂತಲ್ಲೇ ಬೀಳುತ್ತಾರೆ. ಇರುವ ಜಾಗದಲ್ಲಿ ಚಿಕ್ಕದಾಗಿ ಬಸ್ ಶೆಲ್ಟರ್ ನಿರ್ಮಿಸಬೇಕಾಗಿದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts