More

    ಬಂದರು ಬೃಹತ್, ಅಭಿವೃದ್ಧಿ ಕಿಂಚಿತ್

    ಬಿ.ರಾಘವೇಂದ್ರ ಪೈ ಗಂಗೊಳ್ಳಿ
    ಗಂಗೊಳ್ಳಿಯಲ್ಲಿರುವ ಉಡುಪಿ ಜಿಲ್ಲೆಯ ಎರಡನೇ ಬೃಹತ್ ಮೀನುಗಾರಿಕಾ ಬಂದರು ಅಭಿವೃದ್ಧಿಯಾಗದೆ ಮೀನುಗಾರರು ನಿತ್ಯ ಸಂಕಟ ಅನುಭವಿಸುತ್ತಿದ್ದಾರೆ. ಮೊದಲ ಹಂತದ ಕಾಮಗಾರಿ ಮುಗಿದು ಎಂಟು ವರ್ಷ ಕಳೆದಿದ್ದು ಆ ಬಳಿಕ ಯಾವುದೇ ದೊಡ್ಡ ಕಾಮಗಾರಿ ನಡೆದಿಲ್ಲ.
    ಗಂಗೊಳ್ಳಿ ಮೀನುಗಾರಿಕಾ ಬಂದರು ಅನೇಕ ಸಮಸ್ಯೆಗಳನ್ನು ಹೊಂದಿದ್ದು, ಪ್ರಗತಿಯಲ್ಲಿ ಹಿನ್ನಡೆ ಕಾಣುತ್ತಿದೆ. ಮೀನುಗಾರಿಕಾ ಋತು ಅಂತ್ಯಗೊಳ್ಳುವ ಸಮಯದಲ್ಲಿ ಇರುವ ಸಮಸ್ಯೆಗಳು ಋತು ಆರಂಭದ ಸಮಯದಲ್ಲೂ ಇರುತ್ತವೆ. ಹೀಗಾಗಿ ಮೀನುಗಾರರು ಪ್ರತಿವರ್ಷ ಸಮಸ್ಯೆಗಳ ನಡುವೆಯೇ ಕಡಲಿಗಿಳಿಯುತ್ತಾರೆ. ಬೋಟುಗಳು ಬಂದು ನಿಲ್ಲುವ ಸ್ಥಳದಲ್ಲಿ ಮೀನು ತೆಗೆಯಲು ನಿಲ್ಲುವ ಜಾಗ ಅನೇಕ ಕಡೆ ಕುಸಿದು ಬೀಳುವ ಅಪಾಯವಿದೆ. ಎರಡನೇ ಹರಾಜು ಪ್ರಾಂಗಣ ಈಗಾಗಲೇ ಕುಸಿದು ನೆಲಸಮವಾಗಿದೆ.

    ಕುಡಿಯಲು ನೀರಿಲ್ಲ: ಐದು ನದಿಗಳ ಸಂಗಮ ತಾಣವಾಗಿದ್ದರೂ ಮೀನುಗಾರಿಕಾ ಬಂದರಿನಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಬಂದರಿನಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಮಾಡಿದ ಮನವಿಗೆ ಸಕಾರಾತ್ಮಕ ಸ್ಪಂದನೆ ದೊರೆತಿಲ್ಲ. ಅನೇಕ ವರ್ಷಗಳಿಂದ ಅಭಿವೃದ್ಧಿಯಲ್ಲಿ ಹಿನ್ನಡೆ ಕಾಣುತ್ತಿರುವ ಗಂಗೊಳ್ಳಿ ಮೀನುಗಾರಿಕಾ ಬಂದರಿನಲ್ಲಿ ಅನೇಕ ಅಭಿವೃದ್ಧಿ ಕಾಮಗಾರಿಗಳು ನಡೆಯಬೇಕಿದೆ. ಬಂದರಿನ ವಾರ್ಫ್‌ನಲ್ಲಿ ಕುಸಿದಿರುವ ಜೆಟ್ಟಿ ಪುನಃ ನಿರ್ಮಿಸುವುದು, ಮಹಿಳೆಯರಿಗೆ ವಿಶ್ರಾಂತಿ ಗೃಹ, ಹರಾಜು ಪ್ರಾಂಗಣ ನವೀಕರಣ, ಶೌಚಗೃಹ ನಿರ್ಮಾಣ, ಆವರಣ ಗೋಡೆ ನಿರ್ಮಾಣ, ವಾಹನ ನಿಲುಗಡೆಗೆ ಜಾಗ, ಒಳಚರಂಡಿ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ, ಜೆಟ್ಟಿ ಪ್ರದೇಶದಲ್ಲಿ ಹೂಳೆತ್ತುವುದು, ಮೀನುಗಾರಿಕಾ ಧಕ್ಕೆಯ ಪಾರ್ಕಿಂಗ್ ಪ್ರದೇಶದ ಕಾಂಕ್ರೀಟ್ ಕಾಮಗಾರಿ ಮೊದಲಾದವುಗಳ ಬಗ್ಗೆ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.

    ಜೆಟ್ಟಿ ಕುಸಿತ, ಧೂಳು: ಬಂದರಿನ ದಕ್ಷಿಣ ದಿಕ್ಕಿನ ಜೆಟ್ಟಿಯ ಸುಮಾರು 150 ಮೀಟರ್ ಭಾಗ ಕುಸಿದು ಬಿದ್ದು ಎರಡು ವರ್ಷವಾದರೂ ದುರಸ್ತಿ ನಡೆದಿಲ್ಲ. ಸುಮಾರು 400 ಮೀಟರ್ ಉದ್ದದ ಮೀನುಗಾರಿಕಾ ಜೆಟ್ಟಿ ಪ್ರದೇಶದಲ್ಲಿ ವ್ಯಾಪಕ ಪ್ರಮಾಣದ ಹೂಳು ತುಂಬಿದ್ದು, ಬೋಟು ಮತ್ತು ದೋಣಿಗಳ ನಿಲುಗಡೆ ಕಷ್ಟವಾಗುತ್ತಿದೆ. ಡ್ರೆಜ್ಜಿಂಗ್ ಮಾಡುವಂತೆ ಅನೇಕ ವರ್ಷಗಳಿಂದ ಆಗ್ರಹಿಸುತ್ತಿದ್ದರೂ ಸ್ಪಂದನೆ ದೊರೆತಿಲ್ಲ. ಬ್ರೇಕ್‌ವಾಟರ್ ಕಾಮಗಾರಿ ಸಂದರ್ಭ ಬಂದರಿನ ಒಳ ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ದುರಸ್ತಿ ಕಳಪೆಯಾಗಿದೆ. ಹೀಗಾಗಿ ಮೀನುಗಾರಿಕಾ ಬಂದರು ಪ್ರದೇಶದ ಒಳರಸ್ತೆಗಳನ್ನು ಪುನಃ ನಿರ್ಮಿಸುವಂತೆ ಮೀನುಗಾರರು ಆಗ್ರಹಿಸಿದ್ದಾರೆ.

    ವಿಶ್ರಾಂತಿ ಗೃಹ, ಶೌಚಗೃಹಗಳಿಲ್ಲ: ಕೋಟ್ಯಂತರ ರೂ. ವ್ಯವಹಾರ ನಡೆಸುತ್ತಿರುವ ಗಂಗೊಳ್ಳಿ ಮೀನುಗಾರಿಕಾ ಬಂದರಿನಲ್ಲಿ ಶೌಚಗೃಹ ವ್ಯವಸ್ಥೆಯಿಲ್ಲ. ವ್ಯವಹಾರ ನಿಮಿತ್ತ ಬಂದರಿಗೆ ಬರುವವರು ತೊಂದರೆ ಅನುಭವಿಸುತ್ತಿದ್ದಾರೆ. ಸುಸಜ್ಜಿತ ಶೌಚಗೃಹ ನಿರ್ಮಿಸುವಂತೆ ಅನೇಕ ವರ್ಷಗಳಿಂದ ಆಗ್ರಹಿಸುತ್ತಿದ್ದರೂ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಂಡಿಲ್ಲ ಎಂದು ಮೀನುಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಶ್ರಾಂತಿ ಗೃಹವೂ ಇಲ್ಲದೆ ಮಹಿಳೆಯರು ಹರಾಜು ಪ್ರಾಂಗಣ ಅಥವಾ ಸಣ್ಣಪುಟ್ಟ ಶೆಡ್‌ಗಳಲ್ಲಿ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದಾರೆ.

    ಬಂದರಿನ ಮೊದಲ ಹಂತದ ಕಾಮಗಾರಿ ಮುಗಿದು ಎಂಟು ವರ್ಷ ಕಳೆದರೂ ಮೀನುಗಾರಿಕಾ ಇಲಾಖೆಯಿಂದ ಎರಡನೇ ಹಂತದ ಕಾಮಗಾರಿಗೆ ಪ್ರಸ್ತಾವನೆಯೇ ಹೋಗಿಲ್ಲ. ಬಂದರು ವಿಸ್ತರಣೆಗೆ ಎರಡನೇ ಹಂತದ ಕಾಮಗಾರಿ ಕೈಗೆತ್ತಿಕೊಂಡರೆ ಸಾಕಷ್ಟು ಪ್ರಯೋಜನವಾಗಲಿದೆ.
    – ರಾಮಪ್ಪ ಖಾರ್ವಿ, ಮೀನುಗಾರ ಮುಖಂಡ, ಗಂಗೊಳ್ಳಿ

    ಗಂಗೊಳ್ಳಿ ಬಂದರು ಅಭಿವೃದ್ಧಿಗೆ ಪಟ್ಟಿ ಸಿದ್ಧಪಡಿಸಿ ಇಲಾಖೆಯ ಮೇಲಧಿಕಾರಿಗಳಿಗೆ ಕಳುಹಿಸಲಾಗಿದೆ. ಮಹಿಳೆಯರಿಗೆ ವಿಶ್ರಾಂತಿ ಗೃಹ, ದ್ವಿಚಕ್ರ ವಾಹನ ಪಾರ್ಕಿಂಗ್ ಸ್ಥಳ, ಬಂದರಿನ ಸುತ್ತ ಆವರಣ ಗೋಡೆ ನಿರ್ಮಾಣ ಸಹಿತ ಅನೇಕ ಯೋಜನೆ ಕೈಗೊಳ್ಳಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಇಲಾಖೆ ಈ ನಿಟ್ಟಿನಲ್ಲಿ ಸ್ಪಂದಿಸುವ ನಿರೀಕ್ಷೆ ಇದೆ.
    – ಅಂಜನಾದೇವಿ, ಮೀನುಗಾರಿಕಾ ಸಹಾಯಕ ನಿರ್ದೇಶಕಿ, ಗಂಗೊಳ್ಳಿ ಬಂದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts