More

    ದೇಗುಲಗಳ ಅಭಿವೃದ್ಧಿಗೆ ದೈವಸಂಕಲ್ಪ ಯೋಜನೆ

    ಗಂಗಾವತಿ: ರಾಜ್ಯದ ಪ್ರಮುಖ ದೇವಾಲಯಗಳ ಸಮಗ್ರ ಅಭಿವೃದ್ಧಿಗೆ ದೈವಸಂಕಲ್ಪ ಯೋಜನೆ ಜಾರಿಗೆ ತರಲಾಗುತ್ತಿದೆ ಎಂದು ಮುಜರಾಯಿ, ವಕ್ಫ್ ಮತ್ತು ಹಜ್ ಖಾತೆ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

    ಹನುಮಮಾಲೆ ಕಾರ್ಯಕ್ರಮ ಹಿನ್ನೆಲೆ ತಾಲೂಕಿನ ಅಂಜನಾದ್ರಿ ಬೆಟ್ಟದಲ್ಲಿ ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದರು. ಮೊದಲ ಹಂತದಲ್ಲಿ ರಾಜ್ಯದ 26 ದೇವಾಲಯಗಳನ್ನು ದೈವಸಂಕಲ್ಪ ಯೋಜನೆಯಡಿ ಆಯ್ಕೆ ಮಾಡಿಕೊಳ್ಳಲಾಗಿದ್ದು, ಕೊಪ್ಪಳದ ಹುಲಿಗಿ ದೇಗುಲ ಪಟ್ಟಿಯಲ್ಲಿದೆ. ಇವುಗಳ ಅಭಿವೃದ್ಧಿಗೆ ಪಾರಂಪರಿಕ ರೀತಿ ಮಾಸ್ಟರ್ ಪ್ಲ್ಯಾನ್ ಸಿದ್ಧಪಡಿಸಲಾಗುತ್ತಿದ್ದು, ಪ್ರತಿಷ್ಠಿತ ಅರ್ಕಿಟೆಕ್ ಕಂಪನಿಗಳಿಂದ ಯೋಜನೆ ರೂಪಿಸಲಾಗುವುದು. ಜನವರಿ 2023ರೊಳಗೆ ಯೋಜನೆಗೆ ಚಾಲನೆ ನೀಡಲಾಗುತ್ತಿದ್ದು, ಹಲವು ವರ್ಷಗಳಿಂದ ನನೆಗುದಿಗೆ ಬಿದಿದ್ದ ಮುಜರಾಯಿ ಇಲಾಖೆ ಸಿಬ್ಬಂದಿ ಕಾಯಂ ಪ್ರಕ್ರಿಯೆ ಬಿಜೆಪಿ ಸರ್ಕಾರ ಪೂರ್ಣಗೊಳಿಸಿದೆ. ಅಂಜನಾದ್ರಿ ಬೆಟ್ಟ ಪ್ರಗತಿಗೆ ಮಂಜೂರಾದ ಅನುದಾನ ಬಳಕೆಗೆ ಭೂಸ್ವಾಧೀನ ಪ್ರಕ್ರಿಯೆ ವಿಳಂಬ ಅಡ್ಡಿಯಾಗಿದೆ. ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿ ಕೈಗೊಳ್ಳಲಾಗುತ್ತಿದ್ದು, ರೋಪ್‌ವೇ ಕಾಮಗಾರಿಗೆ ಸಕಾಲಕ್ಕೆ ಸ್ಥಳ ದೊರೆಯದಿರುವುದು ಕಾರಣ. ಬಿಜೆಪಿ ಆಡಳಿತಾವಧಿಯಲ್ಲಿ ರಾಜ್ಯದ ಎಲ್ಲ ದೇವಾಲಯಗಳು ಅಭಿವೃದ್ಧಿ ಹೊಂದಿದ್ದು, ಅಂಜನಾದ್ರಿ ಬೆಟ್ಟದ ಅಭಿವೃದ್ಧಿಯ ನೀಲಿನಕ್ಷೆ ಈಗಾಗಲೇ ರೂಪಿಸಲಾಗಿದೆ ಎಂದರು.

    ಬೆಟ್ಟದಲ್ಲಿ ಠಿಕಾಣಿ: ಡಿ.3 ರಿಂದ 5ರವರೆಗೆ ಅಂಜನಾದ್ರಿ ಬೆಟ್ಟದಲ್ಲಿ ಹನುಮಮಾಲೆ ವಿಸರ್ಜನೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, 2ಲಕ್ಷ ಭಕ್ತರು ಭಾಗವಹಿಸುವ ನಿರೀಕ್ಷೆಯಿದೆ. ಅಗತ್ಯ ಸೌಲಭ್ಯ ಕಲ್ಪಿಸಲಾಗುತ್ತಿದ್ದು, ಪ್ರಸಾದ ವ್ಯವಸ್ಥೆ ಕೈಗೊಳ್ಳಲಾಗುವುದು. ಜನಜಂಗುಳಿ ನಿಯಂತ್ರಣಕ್ಕೆ ನಾಲ್ಕು ದಿಕ್ಕಿನಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡುತ್ತಿದ್ದು, ಭದ್ರತೆಗೆ ಪೊಲೀಸ್, ಗೃಹರಕ್ಷಕ ಮತ್ತು ಅರಣ್ಯ ಸಿಬ್ಬಂದಿ ಬಳಸಿಕೊಳ್ಳಲಾಗುವುದು. ಮೂರು ದಿನ ಅಂಜನಾದ್ರಿ ಬೆಟ್ಟದಲ್ಲಿರಲು ನಿರ್ಧರಿಸಿದ್ದು, ಯಾವುದೇ ತೊಂದರೆಯಾಗದಂತೆ ಕಾರ್ಯಕ್ರಮ ನಡೆಸಲಾಗುವುದು ಎಂದರು.

    ಶಾಸಕ ಪರಣ್ಣಮುನವಳ್ಳಿ ಮಾತನಾಡಿ, ಮಾಲೆ ವಿಸರ್ಜನೆ ಹಿನ್ನೆಲೆಯಲ್ಲಿ ನಗರದಲ್ಲಿ ಶೋಭಾಯಾತ್ರೆ ಹಮ್ಮಿಕೊಂಡಿದ್ದು, ಶ್ರದ್ಧಾಭಕ್ತಿಯಿಂದ ನೆರವೇರಿಸಲಾಗುವುದು. ಬೆಟ್ಟದಲ್ಲಿ ವ್ಯವಸ್ಥೆ ಲೋಪವಾಗದಂತೆ ಎಚ್ಚರ ವಹಿಸಲಾಗುವುದು ಎಂದರು.

    ಸಂಸದ ಕರಡಿ ಸಂಗಣ್ಣ, ಎಂಎಲ್ಸಿ ಹೇಮಲತಾ ನಾಯಕ, ನಯೋಪ್ರಾ ಅಧ್ಯಕ್ಷ ಎಸ್.ರಾಘವೇಂದ್ರ ಶ್ರೇಷ್ಠಿ, ಡಿಸಿ ಸುಂದರೇಶಬಾಬು, ಎಸಿ ಬಸವಣ್ಣೆಪ್ಪ ಕಲ್ಲಶೆಟ್ಟಿ, ಜಿಪಂ ಸಿಇಒ ೌಜಿಯಾ ತರುನ್ನಮ್, ತಹಸೀಲ್ದಾರ್ ಯು.ನಾಗರಾಜ್, ತಾಪಂ ಇಒ ಮಹಾಂತಗೌಡ ಪಾಟೀಲ್, ಕಂದಾಯ ನಿರೀಕ್ಷಕ ಮಂಜುನಾಥ ಹಿರೇಮಠ, ಅರಣ್ಯಾಧಿಕಾರಿ ಶಿವರಾಜ್ ಮೇಟಿ ಇತರರಿದ್ದರು.

    ಅಧಿಕಾರಿಗಳೊಂದಿಗೆ ಚರ್ಚೆ: ಅಂಜನಾದ್ರಿ ಬೆಟ್ಟದ ಕೆಳಭಾಗದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಸಚಿವೆ ಶಶಿಕಲಾ ಜೊಲ್ಲೆ, ಹನುಮಮಾಲೆ ವಿಸರ್ಜನೆ ಸಂದರ್ಭದಲ್ಲಿ ಕೈಗೊಳ್ಳಬೇಕಾದ ವ್ಯವಸ್ಥೆ ಕುರಿತು ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಚರ್ಚಿಸಿದರು. ನಂತರ ವಾಹನಗಳ ಪಾರ್ಕಿಂಗ್‌ಗೆ ಸ್ಥಳ ಪರಿಶೀಲಿಸಿದರು. 3 ದಿನ ಕೇಂದ್ರ ಸ್ಥಾನ ಬಿಟ್ಟು ತೆರಳದಂತೆ ಸೂಚನೆ ನೀಡಿದರು. ವಿಶ್ವಹಿಂದು ಪರಿಷದ್ ಸದಸ್ಯರು ಸಲ್ಲಿಸಿರುವ ಮನವಿಗೆ ಸ್ಪಂದಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಬೆಟ್ಟದಲ್ಲಿ ಹೋಮ, ಮೈಕ್, ವಿಸರ್ಜನೆ, ಪಾರ್ಕಿಂಗ್ ಸ್ಥಳದಲ್ಲಿ ಉಪಾಹಾರ ವ್ಯವಸ್ಥೆ, ಆನೆಗೊಂದಿ ಭಾಗದ ಎಲ್ಲ ದೇವಾಲಯಗಳಿಗೆ ವಿದ್ಯುತ್ ಅಲಂಕಾರ ಕುರಿತು ಚರ್ಚಿಸಲಾಯಿತು.

    ಹನುಮಮಾಲೆ ವಿಸರ್ಜನೆ ಸಂದರ್ಭದಲ್ಲಿ ಕೈಗೊಂಡಿರುವ ಶೋಭಾಯಾತ್ರೆ ಬಗ್ಗೆ ಪೊಲೀಸ್ ಇಲಾಖೆ ತೀರ್ಮಾನ ಕೈಗೊಳ್ಳುತ್ತಿದ್ದು, ಎಸ್ಪಿ ನೀಡಿದ ವರದಿ ಆಧಾರದಡಿ ನಿರ್ಧರಿಸಲಾಗುವುದು.
    | ಸುಂದರೇಶಬಾಬು, ಡಿಸಿ, ಕೊಪ್ಪಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts