More

    ಸರ್ವರ್ ಇಲ್ದೆ ನೋಂದಣಿ ಸ್ಥಗಿತ, ಕೆಲಸ ನಿಂತು ವಾರವಾದರೂ ಕ್ರಮಕ್ಕೆ ಮುಂದಾಗದ ಅಧಿಕಾರಿಗಳು

    ವೀರಾಪುರ ಕೃಷ್ಣ ಗಂಗಾವತಿ

    ನಗರದ ಮಿನಿನಿಧಾನಸೌಧ ಉಪ ನೋಂದಣಿ ಕಚೇರಿಯಲ್ಲಿ ನೋಂದಣಿ ಪ್ರಕ್ರಿಯೆ ಸ್ಥಗಿತಗೊಂಡು ವಾರ ಕಳೆದರೂ ಅಧಿಕಾರಿಗಳು ಗಮನ ಹರಿಸಿಲ್ಲ ಎಂದು ನಾಗರಿಕರು ದೂರಿದ್ದಾರೆ.

    ಗಂಗಾವತಿ ಮತ್ತು ಕನಕಗಿರಿ ತಾಲೂಕಿನ 5 ಹೋಬಳಿಗೆ ಒಂದೇ ಕಚೇರಿಯಿದ್ದು, ದಿನಕ್ಕೆ 85ಕ್ಕೂ ಹೆಚ್ಚು ನೋಂದಣಿ ಪ್ರಕ್ರಿಯೆಗೆ ಅರ್ಜಿ ಸಲ್ಲಿಕೆಯಾಗುತ್ತಿವೆ. ಸರ್ಕಾರಿ ವ್ಯಾಪ್ತಿಯ ಭೂಮಿ, ನಿವೇಶನ ನೋಂದಣಿ, ಆಶ್ರಯ ಯೋಜನೆ, ಭೂಮಿ ಪರಭಾರೆ ಜತೆಗೆ ಖಾಸಗಿಗೆ ಸಂಬಂಧಿಸಿದ ಸಾಲ, ವತ್ತಿ, ಮಾರಾಟ ಸೇರಿ ಎಲ್ಲ ನೋಂದಣಿ ಪ್ರಕ್ರಿಯೆ ನಿರ್ವಹಿಸಲಾಗುತ್ತಿದೆ. ನಗರಕ್ಕಿಂತ ಗ್ರಾಮೀಣ ಭಾಗದ ವಹಿವಾಟು ಹೆಚ್ಚಿದ್ದು, 35 ಕಿ.ಮೀ.ದೂರದಿಂದ ಜನರು ಕಚೇರಿಗೆ ಆಗಮಿಸಬೇಕಿದೆ. ಇಲ್ಲಿನ ಸರ್ವರ್ ಸಮಸ್ಯೆಯಿಂದ ಇಡೀ ದಿನ ಕಾದರೂ ಕೆಲಸ ಆಗಲಾರದಾಗಿದೆ. ಈ ಬಗ್ಗೆ ಯಾವೊಬ್ಬ ಅಧಿಕಾರಿಗೂ ಮಾಹಿತಿ ಇಲ್ಲದಿರುವುದು ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ.

    ಸಿಬ್ಬಂದಿ ಕೊರತೆ: ಕಚೇರಿಗೆ 7 ಹುದ್ದೆ ಮಂಜೂರಾದರೂ ಕರ್ತವ್ಯದಲ್ಲಿರುವುದು ಇಬ್ಬರು ಮಾತ್ರ. ನೋಂದಣಿ ಅಧಿಕಾರಿ ಹುದ್ದೆಗೆ ಹಲವು ದಿನಗಳಿಂದ ಪ್ರಭಾರ ಅಧಿಕಾರಿ ಇದ್ದು, ನಿಯೋಜನೆಗೊಂಡವರು ಕರ್ತವ್ಯಕ್ಕೆ ಬರುತ್ತಿಲ್ಲ. ಪ್ರಭಾರ ಅಧಿಕಾರಿ ಮತ್ತು ಸಹಾಯಕ ಹೊರತು ಉಳಿದೆಲ್ಲ ಕೆಲವನ್ನು ಬ್ರೋಕರ್‌ಗಳೇ ನಿರ್ವಹಿಸುತ್ತಿದ್ದಾರೆ. ಹೊರಗುತ್ತಿಗೆ ಆಧಾರದಡಿ ನಾಲ್ವರು ಅಪರೇಟರ್‌ಗಳಿದ್ದರೂ ಇಬ್ಬರು ಮಾತ್ರ ನಿರ್ವಹಿಸುತ್ತಿದ್ದಾರೆ. ಎರಡೇ ಕಂಪ್ಯೂಟರ್‌ನಲ್ಲಿ ಕಾರ್ಯನಿರ್ವಹಿಸಬೇಕಿದ್ದು, ಅವು 10 ವರ್ಷಕ್ಕೂ ಹಳೆಯ ಸಿಷ್ಟಮ್‌ಗಳಾಗಿವೆ. ನಿತ್ಯವೂ ಬ್ಯಾಕಪ್ ಸಮಸ್ಯೆ ಎದುರಾಗುತ್ತಿದ್ದು, ದಾಖಲಾತಿ ಸಂರಕ್ಷಿಸಲು ಆಪರೇಟರ್ಸ್‌ ಹರಸಾಹಸ ಪಡುವಂತಾಗಿದೆ. ಕಳೆದೊಂದು ವಾರದಿಂದ ಸರ್ವರ್ ಸಮಸ್ಯೆಯಿದ್ದರೂ ಅಧಿಕಾರಿಗಳು ಪರ್ಯಾಯ ವ್ಯವಸ್ಥೆಗೆ ಮುಂದಾಗಿಲ್ಲ.

    ಮೂಲಸೌಕರ್ಯ ಮರೀಚಿಕೆ: ಕಚೇರಿ ಮೊದಲ ಮಹಡಿಯಲ್ಲಿದ್ದು, ಇದಕ್ಕೆ ಸಂಪರ್ಕ ಕಲ್ಪಿಸುವ ಮೆಟ್ಟಿಲುಗಳ ಎರಡು ಬದಿಯಲ್ಲಿ ಚುನಾವಣೆ ಸಲಕರಣೆ ತುಂಬಲಾಗಿದೆ. ಸಾರ್ವಜನಿಕರಿಗೆ ಕೂರಲು ಆಸನ, ಕುಡಿವ ನೀರು, ಶೌಚಗೃಹ ವ್ಯವಸ್ಥೆಯಿಲ್ಲ. ಸ್ವಚ್ಛತೆ ಮರೀಚಿಕೆಯಾಗಿದೆ. ಸದಾ ಜನರಿಂದ ತುಂಬಿರುವ ಕಚೇರಿಯಲ್ಲಿ ಕೋವಿಡ್ ನಿಯಮ ಪಾಲನೆಯಾಗುತ್ತಿಲ್ಲ. ಮಾಸ್ಕ್ ಹಾಕದೆ ಬಂದರೂ ಕೇಳುವವರ‌್ಯಾರೂ ಇಲ್ಲವಾಗಿದೆ. ನಿತ್ಯ 40 ರಿಂದ 45 ನೋಂದಣಿಗೆ ಅವಕಾಶವಿದ್ದು, ಟೋಕನ್ ಪದ್ಧತಿಯಿದ್ದರೂ ಲಾಭಿ ಮಾತ್ರ ನಿಂತಿಲ್ಲ. ದಾಖಲೆ ಮತ್ತು ಕಡತಗಳನ್ನು ಬ್ರೋಕರ್‌ಗಳೇ ನಿರ್ವಹಿಸುತ್ತಿದ್ದು, ಪಾರದರ್ಶಕತೆ ಮರೆಯಾಗಿ ಹೋಗಿದೆ.

    ಮಾಮೂಲು ಕೊಟ್ರೆ ಕೆಲಸ ಗ್ಯಾರಂಟಿ
    ನೋಂದಣಿಗೆ ಟೋಕನ್ ಪದ್ಧತಿಯಿದ್ದರೂ ಹೆಚ್ಚಿನ ಹಣ ನೀಡುವವರಿಗೆ ಮಾತ್ರ ಮೊದಲ ಆದ್ಯತೆ. ನೇರವಾಗಿ ನೋಂದಣಿಗೆ ಬಂದರೆ ಅಧಿಕಾರಿಗಳು ಸಹಕರಿಸುತ್ತಿಲ್ಲ. ಮಧ್ಯವರ್ತಿಗಳ ಮೂಲಕವೇ ಬರುವಂತೆ ಸೂಚಿಸುತ್ತಾರೆ. ಕೆಲಸ ಪೂರ್ಣಗೊಳ್ಳಲು ಇಂತಿಷ್ಟು ಮಾಮೂಲು (ಹಣ) ನಿಗದಿಪಡಿಸಿದ್ದಾರೆ. ಪತಿ ಮತ್ತು ಪತ್ನಿ ಬಾರದಿದ್ದರೂ ನೋಂದಣಿ ಗ್ಯಾರಂಟಿ ಎನ್ನುತ್ತಾರೆ ಸಾರ್ವಜನಿಕರು.

    ಉಪ ನೋಂದಣಿ ಕಚೇರಿಯಲ್ಲಿನ ಅವ್ಯವಸ್ಥೆಯ ಬಗ್ಗೆ ಮಾಹಿತಿಯಿದ್ದು, ಕೋವಿಡ್ ಮುಂಜಾಗ್ರತೆ ಪಾಲನೆ ಜತೆಗೆ ತಾಂತ್ರಿಕ ಸಮಸ್ಯೆ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು. ಜನರ ನೂಕುನುಗ್ಗಲು ನಿಯಂತ್ರಣಕ್ಕೆ ಟೋಕನ್ ಪದ್ಧತಿ ಜಾರಿಗೊಳಿಸುವಂತೆ ಸೂಚನೆ ನೀಡಲಾಗಿದೆ.
    | ಯು. ನಾಗರಾಜ್ ತಹಸೀಲ್ದಾರ್, ಗಂಗಾವತಿ

    ಹಳೇ ಸಿಸ್ಟಮ್‌ಗಳಿದ್ದು, ಬದಲಾವಣೆಗೆ ಹಲವು ಬಾರಿ ಮೇಲಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ತಾಂತ್ರಿಕ ಸಮಸ್ಯೆಯಿಂದ ವಾರದಿಂದ ನೋಂದಣಿ ಪ್ರಕ್ರಿಯೆ ಸ್ಥಗಿತಗೊಂಡಿದ್ದು, ಸೂಕ್ತ ಕ್ರಮ ಕೈಗೊಳ್ಳಲಾಗುವುದು.
    | ರೀದಾಬೇಗಂ ಪ್ರಭಾರ ನೋಂದಣಿ ಅಧಿಕಾರಿ, ಗಂಗಾವತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts