More

    ಸರ್ಕಾರ-ಜನರೊಂದಿಗೆ ಉತ್ತಮ ಬಾಂಧವ್ಯ ಅಗತ್ಯ, ಗ್ರಾಪಂ ಸದಸ್ಯರಿಗೆ ಶಾಸಕ ಬಸವರಾಜ ದಢೇಸುಗೂರು ಸಲಹೆ

    ಗಂಗಾವತಿ: ಚುನಾಯಿತ ಪ್ರತಿನಿಧಿಗಳು ಸರ್ಕಾರ ಮತ್ತು ಜನರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾಗ ಮಾತ್ರ ಗ್ರಾಮಗಳ ಅಭಿವೃದ್ಧಿ ಸಾಧ್ಯ ಎಂದು ಶಾಸಕ ಬಸವರಾಜ ದಢೇಸುಗೂರು ಹೇಳಿದರು.

    ನಗರದ ತಾಪಂ ಮಂಥನ ಸಭಾಂಗಣದಲ್ಲಿ ಗಂಗಾವತಿ ಮತ್ತು ಕಾರಟಗಿ ತಾಲೂಕು ವ್ಯಾಪ್ತಿಯ ಗ್ರಾಪಂ ಸದಸ್ಯರು ಮತ್ತು ಸಿಬ್ಬಂದಿಗೆ ಏರ್ಪಡಿಸಿರುವ ದೂರದೃಷ್ಟಿ ಯೋಜನೆ ಕುರಿತ ಮೂರು ದಿನಗಳ ತರಬೇತಿ ಕಾರ್ಯಾಗಾರಕ್ಕೆ ಮಂಗಳವಾರ ಚಾಲನೆ ನೀಡಿ ಮಾತನಾಡಿದರು. ಗ್ರಾಮಾಭಿವೃದ್ಧಿಗೆ ಹಲವು ಯೋಜನೆಗಳಿದ್ದು, ಸಮರ್ಪಕ ಅನುಷ್ಠಾನದಲ್ಲಿ ಸದಸ್ಯರ ಪಾತ್ರ ಮುಖ್ಯವಾಗಿದೆ. ಅಧಿಕಾರಿಗಳು ಸದಸ್ಯರ ಮನವಿಗೆ ಸ್ಪಂದಿಸಬೇಕಿದ್ದು, ಪಾರದರ್ಶಕತೆ ಕಾಯ್ದುಕೊಂಡಾಗ ಮಾತ್ರ ನಿರೀಕ್ಷಿತ ಪ್ರಗತಿ ಸಾಧ್ಯ ಎಂದರು.

    ಕಾರಟಗಿ ತಾಪಂ ಇಒ ಡಾ.ಡಿ.ಮೋಹನ್ ಮಾತನಾಡಿ, ಗ್ರಾಮದ ಅಭಿವೃದ್ಧಿ ಜತೆಗೆ ಸದಸ್ಯರು ಶಾಲೆ ಬಿಟ್ಟ ಮಕ್ಕಳನ್ನು ಪತ್ತೆ ಹಚ್ಚಿ ಮತ್ತೆ ಶಾಲೆಗೆ ಸೇರಿಸಬೇಕು. ಮಕ್ಕಳ ಅಪೌಷ್ಟಿಕ ನಿವಾರಣೆ ಯೋಜನೆ ಸಮರ್ಪಕ ಅನುಷ್ಠಾನಕ್ಕೆ ಸಹಕರಿಬೇಕು ಎಂದು ಕೋರಿದರು.

    ಗಂಗಾವತಿ ತಾಪಂ ಇಒ ಮಹಾಂತಗೌಡ ಪಾಟೀಲ್, ಸಂಪನ್ಮೂಲ ವ್ಯಕ್ತಿಗಳಾದ ಮಲ್ಲಯ್ಯಸ್ವಾಮಿ ಹಿರೇಮಠ, ಶೇಖರಪ್ಪ ಸಿಂಧೋಗಿ, ಜಯಶ್ರೀ ಇತರರಿದ್ದರು. ಜಂಗಮರಕಲ್ಗುಡಿ: ಗ್ರಾಮದಲ್ಲಿ ಗ್ರಾಪಂನಿಂದ 28.60 ಲಕ್ಷ ರೂ.ವೆಚ್ಚದ ಭಾರತ ನಿರ್ಮಾಣ ಸೇವಾ ಕೇಂದ್ರದ ಕಟ್ಟಡವನ್ನು ಶಾಸಕ ದಢೇಸುಗೂರು ಉದ್ಘಾಟಿಸಿದರು. ಗ್ರಾಮಾಭಿವೃದ್ಧಿಗೆ ನರೇಗಾ ಯೋಜನೆ ಪರಿಣಾಮಕಾರಿಯಾಗಿದ್ದು, ಜನರಿಗೆ ಮೂಲ ಸೌಕರ್ಯದ ಜತೆಗೆ ಉದ್ಯೋಗ ಒದಗಿಸುತ್ತಿದೆ. ಸರ್ಕಾರದ ಯೋಜನೆಗಳ ಅನುಷ್ಠಾನಕ್ಕೆ ಸದಸ್ಯರು ಮತ್ತು ಸಿಬ್ಬಂದಿ ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿಸಬೇಕು ಎಂದು ಶಾಸಕ ತಿಳಿಸಿದರು. ತಾಲೂಕಿನಲ್ಲಿ ಮಾದರಿ ಕಟ್ಟಡ ನಿರ್ಮಿಸಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಗ್ರಾಪಂ ಅಧ್ಯಕ್ಷೆ ಲಕ್ಷ್ಮೀ ಯಮನೂರಪ್ಪ, ಉಪಾಧ್ಯಕ್ಷ ಜಿ.ವಿಷ್ಣುಮೂರ್ತಿ, ಪಿಡಿಒ ರಾಮುನಾಯ್ಕ, ಕಾರ್ಯದರ್ಶಿ ಪ್ರಭುರಾಜ್ ಮಾಲಿ ಪಾಟೀಲ್, ಬಿಜೆಪಿ ಮುಖಂಡರಾದ ವೈ.ಆನಂದರಾವ್, ಕಳಕನಗೌಡ ಇತರರಿದ್ದರು.

    ಮಹಿಳಾ ಪ್ರತಿನಿಧಿಗಳಷ್ಟೇ ಹಾಜರು: ಗಾಪಂ ಸದಸ್ಯರು ಮತ್ತು ಸಿಬ್ಬಂದಿಗೆ ಏರ್ಪಡಿಸಿರುವ ತರಬೇತಿ ಕಾರ್ಯಾಗಾರದಲ್ಲಿ ಮೊದಲ ದಿನ ಮಹಿಳಾ ಸದಸ್ಯರು ಮಾತ್ರ ಭಾಗವಹಿಸಿದ್ದು, ಪುರುಷರು ದೂರ ಉಳಿದಿದ್ದರು. ಸಿಬ್ಬಂದಿ ಸಭಾಂಗಣಕ್ಕೆ ಬಂದರೂ ಶಿಬಿರದಲ್ಲಿ ಪಾಲ್ಗೊಳ್ಳಲಿಲ್ಲ. ಪ್ರಯಾಣ ಸೇರಿ ಎಲ್ಲ ಭತ್ಯೆಗಳನ್ನು ನೀಡುತ್ತಿದ್ದರೂ, ಸದಸ್ಯರು ಬಾರದಿದ್ದಕ್ಕೆ ಕಾರ್ಯಾಗಾರ ಆಯೋಜಿಸಿಯೂ ಪ್ರಯೋಜನವಿಲ್ಲದಂತಾಗಿದೆ. ತರಬೇತಿಗೆ ಹಾಜರಾಗದವರ ವಿರುದ್ಧ ಕ್ರಮಕ್ಕೆ ಜಿಪಂ ಮುಂದಾಗಬೇಕು ಎಂದು ಸಂಘಟನೆಗಳು ಒತ್ತಾಯಿಸಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts