More

    ಗ್ರಾಪಂ ಮೀಸಲಿನಲ್ಲಿ ಸ್ಥಳೀಯರಿಗೆ ಅವಕಾಶ ಮಾಡಿಕೊಡಿ

    ಗಂಗಾವತಿ: ಸಣಾಪುರ ಗ್ರಾಪಂ ಅಧಿಕಾರವನ್ನು ಸ್ಥಳೀಯ ಸದಸ್ಯರಿಗೆ ನೀಡಬೇಕಿದ್ದು, ಯಾವುದೇ ವರ್ಗಕ್ಕಾದರೂ ಅವಕಾಶ ಕಲ್ಪಿಸುವಂತೆ ಗ್ರಾಪಂ ಸದಸ್ಯರು ಗ್ರಾಪಂ ಕಚೇರಿ ಮುಂದೆ ಜಿಲ್ಲಾಡಳಿತವನ್ನು ಬುಧವಾರ ಒತ್ತಾಯಿಸಿದರು.

    8 ಸದಸ್ಯರನ್ನೊಳಗೊಂಡ ಸಣಾಪು ಗ್ರಾಪಂ ಅಧ್ಯಕ್ಷ ಸ್ಥಾನ ಎಸ್ಟಿ ಮೀಸಲಾಗಿದ್ದು, ಹನುಮನಹಳ್ಳಿಯಲ್ಲಿ ಮಾತ್ರ ಮಹಿಳಾ ಸದಸ್ಯರಿದ್ದಾರೆ. ಸಣಾಪುರದ ಕೇಂದ್ರ ಸ್ಥಾನದಲ್ಲಿರುವ ಸದಸ್ಯರಿಗೆ ಅವಕಾಶ ಕಲ್ಪಿಸುವಂತೆ ಗ್ರಾಪಂ ಸದಸ್ಯರು ಮನವಿ ಮಾಡಿದರು.

    ಸದಸ್ಯ ಅಶೋಕ ಮಾತನಾಡಿ, ಐತಿಹಾಸಿಕ ಹಿನ್ನೆಲೆಯನ್ನೊಳಗೊಂಡ ಸಣಾಪುರ ಗ್ರಾಪಂ ಕಚೇರಿ ವ್ಯಾಪ್ತಿಯಲ್ಲಿ ಹಂಪಿ ಪ್ರಾಧಿಕಾರದ ಗ್ರಾಮಗಳು ಬರುತ್ತಿದ್ದು, ಪ್ರವಾಸೋದ್ಯಮ ಕೇಂದ್ರವಾಗಿದೆ. ಆಡಳಿತಕ್ಕೆ ಸ್ಥಳೀಯರಿಗೆ ಅವಕಾಶ ನೀಡುವಂತೆ ಒತ್ತಾಯಿಸಲಾಗಿದ್ದು, ಯಾವುದೇ ಸಮುದಾಯದ ವಿರುದ್ಧ ಮನವಿ ಸಲ್ಲಿಸಿಲ್ಲ. ವಿದೇಶಿ ಸೇರಿ ಹೊರ ರಾಜ್ಯದ ಪ್ರವಾಸಿಗರು ಆಗಮಿಸುತ್ತಿರುವುದರಿಂದ ಕನಿಷ್ಠ ವಿದ್ಯಾರ್ಹತೆ ಹೊಂದಿದವರಿಗೆ ನೀಡುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಲಾಗಿದೆ.

    ಯಾವುದೇ ಸಮುದಾಯಕ್ಕೂ ಮೀಸಲು ನೀಡಿದರೂ ಸ್ವಾಗತಿಸಲಾಗುತ್ತಿದ್ದು, ಕೇಂದ್ರ ಸ್ಥಾನದಲ್ಲಿದ್ದವರಿಗೆ ನೀಡಿದರೆ ಸೂಕ್ತ. ಈ ಬಗ್ಗೆ ಜಿಲ್ಲಾಡಳಿತ ಗಂಭೀರ ಪರಿಗಣಿಸುವಂತೆ ಒತ್ತಾಯಿಸಿದರು. ಸದಸ್ಯ ಶೇರ್‌ಖಾನ್, ಮುಖಂಡರಾದ ವೆಂಕಟೇಶ, ನಾಗೇಂದ್ರ, ಶ್ರೀರಾಮುಲು ಇತರರಿದ್ದರು.

    ಸಂವಿಧಾನಾತ್ಮಕವಾಗಿ ಎಸ್ಟಿಗೆ ಮೀಸಲು: ತಾಲೂಕಿನ ಸಣಾಪುರ ಗ್ರಾಪಂ ಅಧಿಕಾರ ಸಂವಿಧಾನಾತ್ಮಕವಾಗಿ ಎಸ್ಟಿ ವರ್ಗಕ್ಕೆ ಬಂದಿದ್ದು, ಕೆಲವರು ವಿರೋಧಿಸುತ್ತಿರುವುದು ಸರಿಯಲ್ಲ ಎಂದು ವಾಲ್ಮೀಕಿ ನಾಯಕ ಸಮುದಾಯದ ತಾಲೂಕಾಧ್ಯಕ್ಷ ಹಾಗೂ ನಗರಸಭೆ ಮಾಜಿ ಸದಸ್ಯ ವೀರಭದ್ರಪ್ಪ ನಾಯಕ ಹೇಳಿದರು.

    ನಗರದ ದುರ್ಗಮ್ಮಸಮುದಾಯ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದರು. ಎಸ್ಟಿ ವರ್ಗದ ಜನ ಇಲ್ಲವೆಂದು ಕೆಲ ಸದಸ್ಯರು ಮೀಸಲು ಬದಲಾಯಿಸಲು ಮನವಿ ಸಲ್ಲಿಸಿರುವುದು ಖಂಡನೀಯ. ಹನುಮನಹಳ್ಳಿ, ಸಣಾಪುರ, ಜಂಗ್ಲಿ, ಕರಿಯಮ್ಮನಗಡ್ಡಿ ಸೇರಿ ಸಣಾಪುರ ಗ್ರಾಪಂ ವ್ಯಾಪ್ತಿಯಲ್ಲಿ ವಾಲ್ಮೀಕಿ ಸಮುದಾಯದ ಹೆಚ್ಚಿನ ಜನರಿದ್ದಾರೆ. ಸಂವಿಧಾನಾತ್ಮಕವಾಗಿ ಬಂದಿರುವ ಅಧಿಕಾರವನ್ನು ಯಾರಿಂದಲೂ ಬದಲಾಯಿಸಲು ಸಾಧ್ಯವಿಲ್ಲ. ಅನಕ್ಷರಸ್ಥೆ ಎಂಬ ಕಾರಣಕ್ಕಾಗಿ ಮೀಸಲು ಬದಲಿಸುವಂತೆ ಒತ್ತಾಯಿಸುತ್ತಿರುವುದು ಸರಿಯಲ್ಲ ಎಂದರು. ಸಮುದಾಯದ ಮುಖಂಡರಾದ ಜೋಗದ ನಾರಾಯಣಪ್ಪ ನಾಯಕ, ಬಸಪ್ಪ ನಾಯಕ, ಚಂದ್ರಪ್ಪನಾಯಕ, ಜೋಗದ ಹನುಮಂತಪ್ಪ ನಾಯಕ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts