More

    ಗಣೇಶ ಮೂರ್ತಿಗಳಿಗೆ ಕುಗ್ಗದ ಬೇಡಿಕೆ

    ಭರತ್ ಶೆಟ್ಟಿಗಾರ್ ಮಂಗಳೂರು
    ಗಣೇಶ ಚತುರ್ಥಿಗೆ ಗಣಪತಿ ಮೂರ್ತಿ ತಯಾರಿ ಕೆಲಸ ಆರಂಭವಾಗಿದೆ. ಕರೊನಾದಿಂದ ಸಾಮೂಹಿಕ ಆಚರಣೆಗಳಿಗೆ ಕಡಿವಾಣವಿದ್ದರೂ ಗಣೇಶ ಮೂರ್ತಿಗಳಿಗೆ ಹಿಂದಿನಂತೆಯೇ ಬೇಡಿಕೆಯಿದೆ.
    ಕೋವಿಡ್ -19ನಿಂದ ಉಂಟಾಗಿರುವ ಅನಿಶ್ಚಿತತೆಯ ಮಧ್ಯೆ ಸಾಂಪ್ರದಾಯಿಕವಾಗಿ ಹಲವಾರು ವರ್ಷಗಳಿಂದ ಗಣಪತಿ ಮೂರ್ತಿ ತಯಾರಿಸುವ ಕಾಯಕದಲ್ಲಿ ತೊಡಗಿಸಿಕೊಂಡಿರುವ ಕುಟುಂಬಗಳು ಕೆಲಸ ಆರಂಭಿಸಿವೆ. ಮಂಗಳೂರು ನಗರದಲ್ಲಿ ಸುಮಾರು 700ರಷ್ಟು ಗಣೇಶ ಮೂರ್ತಿಗಳು ತಯಾರಾಗುತ್ತಿವೆ. ಒಂದು ಬಾರಿ ಮೂರ್ತಿ ಪ್ರತಿಷ್ಠಾಪನೆ ಮಾಡಿದ ಬಳಿಕ ಅದನ್ನು ಮುಂದುವರಿಸಬೇಕು ಎಂಬ ನಂಬಿಕೆ ಇರುವುದರಿಂದ ಸಮಿತಿಗಳು ಹಬ್ಬ ಆಚರಣೆಯಿಂದ ವಿಮುಖರಾಗುವುದಿಲ್ಲ. ಸರಳವಾಗಿಯಾದರೂ ಮೂರ್ತಿ ಪ್ರತಿಷ್ಠಾಪಿಸಿ, ವಿಸರ್ಜಿಸುತ್ತಾರೆ. ಹಾಗಾಗಿ ತಯಾರಿ ಆರಂಭಿಸಿದ್ದೇವೆ ಎನ್ನುತ್ತಾರೆ ಮಂಗಳೂರಿನ ಮಣ್ಣಗುಡ್ಡೆಯಲ್ಲಿ ಮೂರ್ತಿ ತಯಾರಿಸುವ ಕಾಯಕದಲ್ಲಿ ತೊಡಗಿಸಿಕೊಂಡಿರುವ ರಾಮಚಂದ್ರ ರಾವ್.

    ಕಚ್ಚಾವಸ್ತುಗಳಿಗೆ ಕೊರತೆಯಿಲ್ಲ
    ಗಣಪತಿ ಮೂರ್ತಿ ತಯಾರಿಸಲು ಕಚ್ಚಾ ವಸ್ತುಗಳಿಗೆ ಕೊರತೆಯಾಗಿಲ್ಲ. ಆವೆ ಮಣ್ಣು, ನೈಸರ್ಗಿಕ ಬಣ್ಣ, ಬೈಹುಲ್ಲು ಇಂಥ ವಸ್ತುಗಳನ್ನು ಸಾಕಷ್ಟು ಪ್ರಮಾಣದಲ್ಲಿ ತರಿಸಿಕೊಳ್ಳಲಾಗಿದೆ. ಕೆಲಸ ಮಾಡುವ ಜನ ಕಡಿಮೆ ಇದ್ದಾರೆ. ಕರೊನಾ ಕಾರಣದಿಂದ ದೂರದಲ್ಲಿರುವ ಕುಟುಂಬದ ಸದಸ್ಯರು ಬರಲಾಗುತ್ತಿಲ್ಲ. ಇದರಿಂದ ಕೆಲಸದ ಒತ್ತಡ ಹೆಚ್ಚಾಗಿದೆ.

    ಅಧಿಕ ಮಾಸ- ಎರಡು ಆಚರಣೆ
    ಈ ಬಾರಿ ಗಣೇಶ ಚತುರ್ಥಿ ಆಗಸ್ಟ್ 22ಕ್ಕೆ ಇದ್ದರೂ, ಅಧಿಕ ಮಾಸ ಹಿನ್ನೆಲೆಯಲ್ಲಿ ಮನೆಯಲ್ಲಿ ಆಚರಣೆ ಮಾಡುವ ಕೆಲವರು ಅಕ್ಟೋಬರ್ 17ರಂದು ಆಚರಣೆಗೆ ನಿರ್ಧರಿಸಿದ್ದಾರೆ. ಶೇ.25ರಷ್ಟು ಜನ ಅಕ್ಟೋಬರ್ ತಿಂಗಳ ಆಚರಣೆಗೆ ಮೂರ್ತಿ ತಯಾರಿಸಲು ಕೇಳಿಕೊಂಡಿದ್ದಾರೆ. ಪ್ರಸ್ತುತ ಮೂರ್ತಿ ತಯಾರಿಸುವವರೇ ಒಂದು ಮಿತಿ ನಿಗದಿಗೊಳಿಸಿ ಸಿದ್ಧಪಡಿಸುತ್ತಿದ್ದಾರೆ. ಸದ್ಯ ಮನೆಗಳಲ್ಲಿ ಪ್ರತಿಷ್ಠಾಪಿಸುವವರಿಗಾಗಿ ಗರಿಷ್ಠ 4-5 ಅಡಿಗಳವರೆಗಿನ ಮೂರ್ತಿಗಳನ್ನು ನಿರ್ಮಿಸಲಾಗುತ್ತಿದೆ. ಸರ್ಕಾರದ ಮಾರ್ಗಸೂಚಿ ಬಂದ ಬಳಿಕವಷ್ಟೇ ಸಾರ್ವಜನಿಕ ಉತ್ಸವಗಳಿಗೆ ಸಂಬಂಧಿಸಿದ ಗರಿಷ್ಠ ಎತ್ತರದ ಮೂರ್ತಿಗಳು ಸಿದ್ಧವಾಗಲಿವೆ.

    ಈ ಹಿಂದಿನಂತೆ ಸಾಕಷ್ಟು ಮಂದಿ, ಸಂಘ ಸಂಸ್ಥೆಯವರು ಗಣಪತಿ ಮೂರ್ತಿಗಳನ್ನು ತಯಾರಿಸಲು ತಿಳಿಸಿದ್ದಾರೆ. ಸಾರ್ವಜನಿಕರ ಆಚರಣೆಯ ಮೂರ್ತಿಗಳ ಎತ್ತರ ಕಡಿಮೆ ಮಾಡಲಾಗಿದೆ. ಕಚ್ಚಾವಸ್ತು ಮೊದಲೇ ತರಿಸಿಕೊಂಡಿರುವುದರಿಂದ ಸಮಸ್ಯೆಯಾಗಿಲ್ಲ.
    ರಾಮಚಂದ್ರ ರಾವ್
    ಗಣೇಶ ಮೂರ್ತಿ ತಯಾರಕರು, ಮಣ್ಣಗುಡ್ಡೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts