More

    ಮೈಸೂರು ಮಾಧವ ಕೃಪದಲ್ಲಿ 31ರಿಂದ ಸೆ.4ರವರೆಗೆ ಗಣೇಶ ಉತ್ಸವ


    *ಅಂತಾರಾಷ್ಟ್ರೀಯ, ರಾಷ್ಟ್ರೀಯ ಮಟ್ಟದ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ

    ಮೈಸೂರು: ಮೈಸೂರು ಗಣೇಶ ಉತ್ಸವ ಸಮಿತಿ ವತಿಯಿಂದ ಆ.31ರಿಂದ ಸೆ.4 ರವರೆಗೆ ನಗರದ ಮಾಧವ ಕೃಪದಲ್ಲಿ ‘ವಿಶೇಷ ಗಣೇಶ ಉತ್ಸವ’ ಆಯೋಜಿಸಲಾಗಿದೆ ಎಂದು ಆಯೋಜಕ ಮಂಜುನಾಥ್ ತಿಳಿಸಿದರು. ವಿವಿಧ ಪೂಜಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಅಂತಾರಾಷ್ಟ್ರೀಯ, ರಾಷ್ಟ್ರೀಯ ಮಟ್ಟದ ಹಾಗೂ ಸ್ಥಳೀಯ ಕಲಾವಿದರು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಡಲಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.


    ಗಣೇಶನ ವಿಗ್ರಹವನ್ನು 21 ಪವಿತ್ರ ನಗರಗಳ ಮಣ್ಣು ಮತ್ತು ಭಾರತದ 7 ಪವಿತ್ರ ನದಿಗಳ ನೀರನ್ನು ಬಳಸಿ ತಯಾರಿಸಲಾಗುತ್ತದೆ. ಭಕ್ತಿ ಭಾವ, ಇಡೀ ಭಾರತದ ಪರಿಕಲ್ಪನೆ ಮೂಡುವಂತೆ ಸ್ವಯಂ ಸೇವಕರ ಸಹಾಯದಿಂದ ಈಗಾಗಲೇ ಮೈಸೂರಿಗೆ ಕೇದಾರ, ಮಥುರಾ, ಕಾಶಿ ಮೊದಲಾದ 21 ಪುಣ್ಯಕ್ಷೇತ್ರಗಳ ಮಣ್ಣು, ಗಂಗಾ, ಯಮುನಾ, ಗೋದಾವರಿ, ಕಾವೇರಿ ಮೊದಲಾದ ಪವಿತ್ರ ಸಪ್ತ ನದಿಗಳ ನೀರನ್ನು ತರಿಸಿದ್ದು, ಅದರಿಂದ ಪರಿಸರಸ್ನೇಹಿ ಗಣೇಶನ ಮೂರ್ತಿ ತಯಾರಿಸಲಿದ್ದೇವೆ ಎಂದರು.


    ಮೈಸೂರಿನ 108 ಮನೆಗಳಿಂದ ಸಂಗ್ರಹಿಸಿದ ವಸ್ತುಗಳಿಂದ ಗಣೇಶನ ವಿಗ್ರಹವನ್ನು ಅಲಂಕರಿಸಲಾಗುತ್ತದೆ. ಮೈಸೂರಿನ ಪರಿಣಿತ ಕಲಾವಿದರ ತಂಡ ಗಣೇಶನ ಭವ್ಯತೆ ಮತ್ತು ಪೌರಾಣಿಕ ಪ್ರಾಮುಖ್ಯತೆಯನ್ನು ಪ್ರತಿನಿಧಿಸಲು ನೈಸರ್ಗಿಕ ಬಣ್ಣಗಳನ್ನು ಬಳಸಿ ಅಲಂಕರಿಸಲಿದ್ದಾರೆ ಎಂದರು.
    ಆ.28ರಂದು ಸ್ಥಳೀಯ ಕಲಾವಿದರ ಮಾರ್ಗದರ್ಶನದಲ್ಲಿ ಸಾರ್ವಜನಿಕರಿಗೆ ಸಾಮೂಹಿಕ ಪರಿಸರ ಸ್ನೇಹಿ ಗಣೇಶ ಮೂರ್ತಿ ತಯಾರಿಕೆ ಕಾರ್ಯಾಗಾರ ನಡೆಯಲಿದೆ. ಮಕ್ಕಳು ಸೀಡ್ ಬಾಲ್ ಗಣೇಶನನ್ನು ಮಾಡಲಿದ್ದಾರೆ ಎಂದರು.


    ನಾಲ್ಕು ದಿನ ನಡೆಯುವ ಈ ಸಲದ ಗಣೇಶ ಉತ್ಸವವನ್ನು ಪರಿಸರಕ್ಕೆ ಪೂರಕವಾಗುವಂತೆ ಆಚರಿಸುತ್ತೇವೆ. 31 ರಂದು ಸಂಜೆ 6 ಗಂಟೆಗೆ ಮೈಸೂರಿನ ಕಲಾವಿದರಿಂದ ಸಂಗೀತ ಸಂಜೆ, ಸೆ.1 ರಂದು ಸಂಜೆ 6 ಗಂಟೆಗೆ ಪೊಲೀಸ್ ಬ್ಯಾಂಡ್ ಹಾಗೂ ಕರ್ನಾಟಕ ಕಲಾಶ್ರೀ ಸತ್ಯನಾರಾಯಣ ಮತ್ತು ಬಳಗದಿಂದ ನೃತ್ಯ, ಸೆ.2 ರಂದು ಸಂಜೆ 6 ಗಂಟೆಗೆ ವಿಲಾಸ್ ನಾಯಕ್ ಅವರಿಂದ ಲೈವ್ ಚಿತ್ರಕಲೆ ಹಾಗೂ ಗುರುಕೃಷ್ಣ ಪ್ರತಾಪ್ ಮತ್ತು ಬಳಗದಿಂದ ಕಳರಿಪಯಟ್ಟು ಯುದ್ಧಕಲೆಯ ಪ್ರದರ್ಶನ, ಸೆ.3ರಂದು ಸಂಜೆ 6 ಗಂಟೆಗೆ ಪ್ರಾಣೇಶ್ ಮತ್ತು ಸಂಗಡಿಗರಿಂದ ಹಾಸ್ಯ ಸಂಜೆ ಹಾಗೂ ವಾರಿಜಾಶ್ರೀ ವೇಣುಗೋಪಾಲ್ ಮತ್ತು ಲಯತರಂಗ ತಂಡದಿಂದ ಸಂಗೀತ ಸಂಜೆ ಕಾರ್ಯಕ್ರಮಗಳು ನಡೆಯಲಿವೆ. ಅಂತಿಮ ದಿನವಾದ ಸೆ. 4 ರಂದು ಸಾಮೂಹಿಕ ಗಣಹೋಮ ಮತ್ತು ಸಂಜೆ 4 ಗಂಟೆಗೆ ಮೈಸೂರಿನ ವಿವಿಧ ಬಡಾವಣೆಗಳಿಂದ ಬರುವ ಗಣೇಶ ಮೂರ್ತಿಗಳ ಬೃಹತ್ ಸಾಂಸ್ಕೃತಿಕ ಮೆರವಣಿಗೆಯೊಂದಿಗೆ ಸಾಮೂಹಿಕ ವಿಸರ್ಜನ ಮಹೋತ್ಸವವನ್ನು ಕೋಟೆ ಆಂಜನೇಯ ದೇವಸ್ಥಾನದ ಮುಂಭಾಗದಲ್ಲಿ ಆಯೋಜಿಸಲಾಗಿದೆ ಎಂದು ತಿಳಿಸಿದರು.


    ಇದೇ ವೇಳೆ ಅವಧೂತ ದತ್ತ ಪೀಠದ ಕಿರಿಯಶ್ರೀ ದತ್ತ ವಿಜಯಾನಂದತೀರ್ಥ ಸ್ವಾಮೀಜಿ ಗಣೇಶ ಮೂರ್ತಿಯ ನಿರ್ಮಾಣಕ್ಕೆ ಚಾಲನೆ ನೀಡಿ, ಪೋಸ್ಟರ್ ಬಿಡುಗಡೆ ಮಾಡಿದರು. ಗೋಷ್ಠಿಯಲ್ಲಿ ಉತ್ಸವ ಸಮಿತಿಯ ಡಾ.ಚಂದ್ರಶೇಖರ್, ಹಿಂದು ಜಾಗರಣ ವೇದಿಕೆಯ ಪ್ರಾಂತ್ಯ ಸಹ ಸಂಚಾಲಕ ಲೋಹಿತ್ ಅರಸ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts