More

    ಗ್ರಾಪಂ ಅಧ್ಯಕ್ಷರಿಂದ ಗಂಡಾಗುಂಡಿ; ಉಳ್ಳುವರಿಗೆ ನಿವೇಶನ ಹಂಚಿಕೆ

    ಮೂಡಿಗೆರೆ: ದಾರದಹಳ್ಳಿ ಗ್ರಾಪಂಗೆ 2013ರಲ್ಲಿ ಅರ್ಜಿ ಸಲ್ಲಿಸಿದ್ದ ನಿವೇಶನ ರಹಿತರ ಪಟ್ಟಿಯನ್ನು ಗ್ರಾಪಂ ಅಧ್ಯಕ್ಷರು ಮೂಲೆಗಿಟ್ಟು ಅವರಿಗೆ ಬೇಕಾದವರಿಗೆ ನಿವೇಶನ ಮಂಜೂರು ಮಾಡಿದ್ದಾರೆಂದು ಆರೋಪಿಸಿ ಕೃಷ್ಣಾಪುರದ ನಿವೇಶನ ರಹಿತರು ಗುರುವಾರ ತಾಪಂ ಎದುರು ಪ್ರತಿಭಟನೆ ನಡೆಸಿದರು.

    ಅಂಗವಿಕಲ ಮಹಮ್ಮದ್ ಶರೀಫ್ ಮಾತನಾಡಿ, ಸುಮಾರು 20 ವರ್ಷದಿಂದ ಕೂಲಿ ಕೆಲಸ ಮಾಡಿಕೊಂಡು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದೇನೆ. 2013ರಲ್ಲಿ ಕಿತ್ತಲೆಗಂಡಿ ಗ್ರಾಮದಲ್ಲಿ ನಿವೇಶನ ನೀಡುವುದಾಗಿ 48 ನಿವೇಶನ ರಹಿತರಿಂದ ಅರ್ಜಿ ಪಡೆಯಲಾಗಿತ್ತು. ಆ ಪಟ್ಟಿಯನ್ನು ಮೂಲೆಗಿಟ್ಟು, ನಮಗೆ ಮಾಹಿತಿ ಕೂಡ ನೀಡದೆ ಇತ್ತೀಚೆಗೆ ಗ್ರಾಪಂ ಅಧ್ಯಕ್ಷರು ಗುಪ್ತ ಸಭೆ ನಡೆಸಿ ಹೊಸಪಟ್ಟಿ ತಯಾರಿಸಿ ಮಣಸಮಕ್ಕಿ ಗ್ರಾಮದಲ್ಲಿ ಅವರಿಗೆ ಬೇಕಾದ ಓರ್ವ ಅಂಗವಿಕಲ ಸೇರಿದಂತೆ 8 ಮಂದಿಗೆ ನಿವೇಶನ ಮಂಜೂರು ಮಾಡಿದ್ದಾರೆ. ಅದರಲ್ಲಿ 4 ಮಂದಿ ಅವರ ಕುಟುಂಬದವರೇ ಇದ್ದಾರೆ. ಅಲ್ಲದೆ ಬಹುತೇಕ ಮಂದಿ ಜಾಗ ಉಳ್ಳವರಾಗಿದ್ದಾರೆ ಎಂದು ದೂರಿದರು.
    ಗ್ರಾಪಂ ಅಧ್ಯಕ್ಷರನ್ನು ಪ್ರಶ್ನಿಸಿದಾಗ ಸಮಂಜಸ ಉತ್ತರ ಕೊಟ್ಟಿಲ್ಲ. ಮಂಜೂರು ಮಾಡಿರುವ ನಿವೇಶನದಲ್ಲಿ 8 ಫಲಾನುಭವಿಗಳ ಪೈಕಿ ಓರ್ವ ಅಂಗವಿಕಲರಿಗೆ ನೀಡುವ ಅವಕಾಶವಿದ್ದು, ಅದನ್ನು ಉಳ್ಳವರಿಗೆ ನೀಡಿದ್ದಾರೆ. ಹಾಗಾಗಿ ಮರು ಪರಿಶೀಲನೆ ನಡೆಸಿ ಈ ಹಿಂದೆ ಅರ್ಜಿ ನೀಡಿದ್ದ ಫಲಾನುಭವಿಗಳಿಗೆ ಹಿರಿತನದ ಮೇರೆಗೆ ನಿವೇಶನ ಮಂಜೂರು ಮಾಡಬೇಕೆಂದು ಒತ್ತಾಯಿಸಿ, ತಾಪಂ ಇಒ ದಯಾವತಿ ಅವರಿಗೆ ಮನವಿ ಸಲ್ಲಿಸಿದರು.
    ಗ್ರಾಮಸ್ಥರಾದ ಹರೀಶ್, ಅಬೀಬ್ ಶರೀಫ್, ರಾಮರಾವ್, ಅಲ್ತಾಫ್, ಪ್ರಕಾಶ್, ಮನ್ಸೂರ್ ಅಲಿ, ಜೋಸೆಫ್, ಕೆ.ಎಂ.ಮುಸ್ತಾಕ್, ಸಾಯಿರಾ, ಕುಸುಮಾ, ಜ್ಯೋತಿ, ಕಮಲಾಕ್ಷಿ, ಜುಬೇದಾ, ಶರೀಫಾ, ತಸ್ಲೀಮಾ, ಮಂಜುಳಾ, ಸುಮಯ್ಯ, ಜಮೀಲಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts