More

    ತೆರಿಗೆ ಪಾಲು ವಿಚಾರದಲ್ಲಿ ಕೇಂದ್ರದಿಂದ ತಾರತಮ್ಯ;ಪಂಥಾಹ್ವಾನಕ್ಕೆ ಗೈರಾದ ಕೇಂದ್ರ ಹಣಕಾಸು ಸಚಿವೆ

    ಬೆಂಗಳೂರು: ಜಿಎಸ್‌ಟಿ, ಸೆಸ್, ತೆರಿಗೆ ಪಾಲು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಕೇಂದ್ರ ಸರ್ಕಾರದಿಂದ ಅನ್ಯಾಯವಾಗುತ್ತಿರುವ ಕುರಿತು ಏರ್ಪಡಿಸಿದ್ದ ಬಹಿರಂಗ ಚರ್ಚೆಗೆ ಕೇಂದ್ರ ಸಚಿವೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಗೈರಾಗಿದ್ದರು.

    ಜಾಗೃತ ಕರ್ನಾಟಕ, ರೈತ ಸಂಘ ಮತ್ತು ಕನ್ನಡ ಪರ ಸಂಘಟನೆಗಳು ಗಾಂಧಿ ಭವನದಲ್ಲಿ ಏರ್ಪಡಿಸಿದ್ದ ಬಹಿರಂಗ ಚರ್ಚೆಯಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಕೇಂದ್ರ ಸರ್ಕಾರದಿಂದ ಅನುದಾನ ಹಂಚಿಕೆಯಲ್ಲಿ ಆಗುತ್ತಿರುವ ತಾರತಮ್ಯವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟು ವಾಗ್ದಾಳಿ ನಡೆಸಿದರು.
    ಜಿಎಸ್‌ಟಿಯಲ್ಲಿ ಆಗುತ್ತಿರುವ ಅನ್ಯಾಯ, 15ನೇ ಹಣಕಾಸು ಆಯೋಗದ ಶಿಾರಸು ಕಡೆಗಣನೆ, ಕೇಂದ್ರ ಪುರಸ್ಕೃತ ಯೋಜನೆಗಳಲ್ಲಿನ ತಾರತಮ್ಯವನ್ನು ಪಿಪಿಟಿ ಪ್ರದರ್ಶಿಸಿ ಅಂಕಿ-ಅಂಶ ಸಮೇತ ಕೇಂದ್ರ ಸರ್ಕಾರವನ್ನು ತರಾಟೆ ತೆಗೆದುಕೊಂಡರು.

    ರಾಜ್ಯದ ಹಿತ ಮುಖ್ಯ, ರಾಜಕೀಯವಲ್ಲ

    ನಮಗೆ ತೆರಿಗೆ ಪಾಲು ಹಂಚಿಕೆಯಲ್ಲಿ ರಾಜ್ಯದ ಹಿತ ಮುಖ್ಯವೇ ಹೊರತು ರಾಜಕೀಯವಲ್ಲ ಎಂದು ಸ್ಪಷ್ಟಪಡಿಸುವ ಮೂಲಕ ಮಾತು ಆರಂಭಿಸಿದ ಅವರು, ಈ ವಿಚಾರ ನನ್ನ ಮತ್ತು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರ ನಡುವಿನ ವಾದ-ವಿವಾದವಲ್ಲ. ವೈಯಕ್ತಿಕ ವ್ಯಾಜ್ಯವೂ ಅಲ್ಲ. ನಾವು ಕರ್ನಾಟಕದ ಪರ ಧ್ವನಿ ಎತ್ತುತ್ತಿದ್ದೇವೆ, ಪರಿಹಾರ ಸಿಗುತ್ತಿಲ್ಲ. ಈ ವಿಚಾರ ಚರ್ಚೆಯನ್ನು ಲೋಕಸಭೆ ಚುನಾವಣೆ ದೃಷ್ಟಿಯಿಂದ ಮಾಡುತ್ತಿಲ್ಲ. ಹಣಕಾಸು ಆಯೋಗ ರಚನೆ ಆಗಿದ್ದು, ಅದರ ಮುಂದೆ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯವನ್ನು ಗಮನಕ್ಕೆ ತರುವುದು ನಮ್ಮ ಪ್ರಮುಖ ಧ್ಯೇಯ ಎಂದು ಸ್ಪಷ್ಟಪಡಿಸಿದರು.

    ಈ ವಿಚಾರಗಳು ಸಾರ್ವಜನಿಕ ವಲಯದಲ್ಲಿ ಚರ್ಚೆ ಆದರೆ ಆಯೋಗ ಎಚ್ಚೆತ್ತುಕೊಳ್ಳುತ್ತದೆ ಎಂಬ ನಂಬಿಕೆ ನಮ್ಮದು. ಹಿಟ್ ಅಂಡ್ ರನ್ ಮಾಡಿದರೆ ಸಾರ್ವಜನಿಕರಲ್ಲಿ ಗೊಂದಲ ಜಾಸ್ತಿ ಆಗುತ್ತದೆ. ಜನಕ್ಕೆ ವಾಸ್ತವ ಗೊತ್ತಾಗಬೇಕು. ಎದುರು- ಬದುರು ಚರ್ಚೆ ಆದರೆ ಸತ್ಯ ಗೊತ್ತಾಗುತ್ತದೆ ಎಂದು ತಮ್ಮ ವಾದ ಸರಣಿಯನ್ನು ಸಮರ್ಥಿಸಿಕೊಂಡರು.

    ಜಿಎಸ್‌ಟಿ ಬಂದ ಮೇಲೆ ರಾಜ್ಯದ ಸ್ವಾಯತ್ತತೆ ಹೋಗಿದೆ. ಜಿಎಸ್‌ಟಿ ಬರುವ ಮೊದಲು ವರ್ಷದಿಂದ ವರ್ಷಕ್ಕೆ ಶೇ.15 ತೆರಿಗೆ ಹೆಚ್ಚಳ ಇತ್ತು. ಈ ತೆರಿಗೆ ಖೋತಾ ಆದರೆ ರಕ್ಷಣೆ ಕೊಡುವುದಾಗಿ ಕೇಂದ್ರ ಹೇಳಿತ್ತು. ಆದರೆ ಸರಾಸರಿ ಒಂದು ವರ್ಷಕ್ಕೆ ರಾಜ್ಯಕ್ಕೆ 34 ರಿಂದ 35 ಸಾವಿರ ಕೋಟಿ ನಷ್ಟವಾಗುತ್ತದೆ. 2017-18 ರಿಂದ 2023-24 ಕ್ಕೆ 59, 274 ಕೋಟಿ ಕಡಿಮೆ ಆಗಿದೆ. ಜಿಎಸ್‌ಟಿ ಪರಿಹಾರವನ್ನೂ ಕೊಟ್ಟಿಲ್ಲ. ಇದರಿಂದ ಅಭಿವೃದ್ಧಿಗೆ ಹೊಡೆತ ಬೀಳುತ್ತಿದೆ ಎಂದು ಹೇಳಿದರು.

    ಹಿಟ್ ಅಂಡ್ ರನ್ ಗಿರಾಕಿ ಅಲ್ಲ

    15 ನೇ ಹಣಕಾಸು ಆಯೋಗ ನಮಗೆ ಪಾಲು ಕೊಡುವಾಗ 3.61ಕ್ಕೆ ಇಳಿಕೆ ಮಾಡಿದೆ ಇದರಿಂದ ನಮಗೆ ಶೇ. 23 ರಷ್ಟು ಅನುದಾನ ಕಡಿಮೆ ಆಯಿತು. ಮಹಾರಾಷ್ಟ್ರ, ರಾಜಸ್ಥಾನ, ಗುಜರಾತ್, ಬಿಹಾರ ಛತ್ತೀಸ್‌ಗಡ, ಉತ್ತರಾಖಾಂಡ್ ಸೇರಿದಂತೆ ಎಲ್ಲ ರಾಜ್ಯಗಳಿಗೂ ಹೆಚ್ಚು ತೆರಿಗೆ ಪಾಲು ದೊರೆಯುತ್ತದೆ. ಕರ್ನಾಟಕಕ್ಕೆ ಕಡಿಮೆ ಮಾಡಲಾಗಿದೆ ಎಂದು ಹರಿಹಾಯ್ದರು.

    15 ನೇ ಹಣಕಾಸು ಆಯೋಗದಿಂದ 62, 098 ಕೋಟಿ ಖೋತಾ ಆಗುತ್ತದೆ. 4.71 ನ್ನು 3.6 ಇಳಿಕೆ ಮಾಡಿದ್ದು, ಕರ್ನಾಟಕಕ್ಕೆ ಅನ್ಯಾಯ ಮಾಡಲಾಗಿದೆ ಎಂದು ದೂರಿದರು.

    13 ಹಣಕಾಸು ಆಯೋಗ ಶೇ.32 ಪಾಲು ಕೊಡಬೇಕು ಎಂದು ಹೇಳಿತ್ತು. ಕೊಟ್ಟಿದ್ದು ಶೇ.28. 14 ನೇ ಹಣಕಾಸು ಆಯೋಗ ಶೇ. 42 ಹಾಗೂ 15 ನೇ ಆಯೋಗ ಶೇ.41 ಕೊಡಲು ಶಿಾರಸು ಮಾಡಿತ್ತು ಆದರೆ, ಕ್ರಮವಾಗಿ ಶೇ. 28, ಶೇ.35, ಶೇ.30 ರಷ್ಟು ಬಂದಿದೆ. ನಾನು ಹಿಟ್ ಅಂಡ್ ರನ್ ಗಿರಾಕಿ ಅಲ್ಲ. ಬೇಕಿದ್ದರೆ ದಾಖಲೆ ಕೊಡುತ್ತೇನೆ ಎಂದು ಮಾಹಿತಿ ನೀಡಿದರು.

    ಸೆಸ್/ಸರ್‌ಚಾರ್ಜ್‌ನಲ್ಲಿ ಪಾಲಿಲ್ಲ

    ಸೆಸ್ /ಸರ್‌ಚಾರ್ಜ್‌ನಲ್ಲೂ ರಾಜ್ಯಗಳಿಗೆ ಪಾಲು ಕೊಡಬೇಕಿತ್ತು. ಬಿಜೆಪಿ ಸರ್ಕಾರ 2000ನೇ ಸಾಲಿನಲ್ಲಿ ಸಂವಿಧಾನಕ್ಕೆ ತಿದ್ದುಪಡಿ ತಂದು ಇದನ್ನು ಕಿತ್ತು ಹಾಕಿತು. ಈ ಬಾಬ್ತಿನಲ್ಲಿ ರಾಜ್ಯಕ್ಕೆ ಯಾವುದೇ ಪಾಲು ಬರುತತ್ತಿಲ್ಲ. ಆದರೆ, ಈ ಬಾಬ್ತಿನಲ್ಲೇ ಈಗ ಕೇಂದ್ರ ಸರ್ಕಾರಕ್ಕೆ 5,52, 789 ಕೋಟಿ ರೂ. ಹಣ ಬರುತ್ತದೆ.ಈ ಹಣದಲ್ಲಿ ರಾಜ್ಯಗಳಿಗೆ ಒಂದು ಪೈಸೆಯೂ ಬರುವುದಿಲ್ಲ. ವಾಮ ಮಾರ್ಗ ಹುಡುಕಿ ರಾಜ್ಯಗಳ ಕತ್ತು ಹಿಸುಕಲಾಗಿದೆ ಎಂದರು.
    ಪೆಟ್ರೋಲ್, ಡಿಸೇಲ್ ಸೇರಿಸಂತೆ ಅನೇಕ ವಸ್ತುಗಳ ಮೇಲಿನ ತೆರಿಗೆಯನ್ನು ಸೆಸ್ ಆಗಿ ಮಾರ್ಪಾಡು ಮಾಡಿದ್ದಾರೆ. ಇದರಿಂದ ರಾಜ್ಯಗಳಿಗೆ ಅನ್ಯಾಯವಾಗಿದೆ ಎಂದು ವಾಗ್ದಾಳಿ ನಡೆಸಿದರು.
    ಜಿಎಸ್‌ಟಿ ಯಲ್ಲಿ 57, 796 ಕೋಟಿ, 15ನೇ ಹಣಕಾಸು 62, 795 ಕೋಟಿ ಸೇರಿಂತೆ ರಾಜ್ಯಕ್ಕೆ ಒಟ್ಟು 1,85,468 ಕೋಟಿ ರೂ. ನಷ್ಟ ಆಗಿದೆ ಎಂದು ಕೃಷ್ಣ ಬೈರೇಗೌಡ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts