More

    ಗ್ರಾಮಾಡಳಿತಕ್ಕೊಂದು ಗರಿಮೆ ‘ಗಳಗನಾಥ’

    ಗುತ್ತಲ: ಐತಿಹಾಸಿಕ ಗಳಗೇಶ್ವರ ದೇವಾಲಯವಿರುವ, ಕಾದಂಬರಿ ಪಿತಾಮಹನನ್ನು (ಗಳಗನಾಥ ಎಂಬ ಕಾವ್ಯನಾಮ ಹೊಂದಿದ ವೆಂಕಟೇಶ ಕುಲಕರ್ಣಿ) ನಾಡಿಗೆ ನೀಡಿರುವ ಗಳಗನಾಥ ಗ್ರಾಮದಲ್ಲಿ ಗ್ರಾಮ ಛಾವಡಿ, ಗ್ರಾಪಂ ಗ್ರುಪ್, ಮಂಡಲ ಪಂಚಾಯಿತಿ, ಗ್ರಾಮ ಪಂಚಾಯಿತಿಗೆ ಈ ಗ್ರಾಮದಿಂದ ಸದಸ್ಯರನ್ನು ಅವಿರೋಧವಾಗಿ ಆಯ್ಕೆ ಮಾಡುವ ವಿಶಿಷ್ಟ ಪರಂಪರೆ ಸಾಗಿಬಂದಿದ್ದು, ಪ್ರಸ್ತುತ ಗ್ರಾಪಂ ಚುನಾವಣೆಯಲ್ಲೂ ಇದು ಮುಂದುವರಿದಿದೆ.

    1993ರಲ್ಲಿ ಮಂಡಳ ವರದಿ ಜಾರಿಗೆಯಾಗುವುದಕ್ಕೂ ಮುನ್ನ ಅಂದರೆ ಗ್ರಾಮ ಛಾವಡಿ ಇತ್ತು. ಗ್ರುಪ್ ಗ್ರಾ.ಪಂ. ಎಂಬ ಹೆಸರಿನಿಂದಲೂ ಗ್ರಾಮದ ಆಡಳಿತ ನಡೆಯುತ್ತಿತ್ತು. ಇವುಗಳ ಆಡಳಿತ ಮಂಡಳಿಗಳಿಗೆ ಸದಸ್ಯರನ್ನು ಗ್ರಾಮದಲ್ಲಿ ಒಂದೆಡೆ ಕುಳಿತು ಅವಿರೋಧವಾಗಿ ಆಯ್ಕೆ ಮಾಡಲಾಗುತ್ತಿತ್ತು. ಇದೇ ಪರಂಪರೆ ಈಗಲೂ ಮುಂದುವರಿಸಿಕೊಂಡು ಬಂದ ಹೆಗ್ಗಳ್ಳಿಕೆ ಗಳಗನಾಥ ಗ್ರಾಮದ್ದಾಗಿದೆ.

    ಪ್ರಸ್ತುತ ಗಳಗನಾಥ ಗ್ರಾಮ ಮೇವುಂಡಿ ಗ್ರಾ.ಪಂ. ವ್ಯಾಪ್ತಿಗೊಳಪಟ್ಟಿದೆ. ಪ್ರಸ್ತುತ ಚುನಾವಣೆಯಲ್ಲಿ ಗ್ರಾಮದಿಂದ ಮೂವರನ್ನು ಈಗಾಗಲೇ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.

    ಹೀಗಿದೆ ಆಯ್ಕೆ ಪ್ರಕ್ರಿಯೆ: ಚುನಾವಣೆಗೆ ನಾಮಪತ್ರ ಸಲ್ಲಿಸುವ ದಿನಾಂಕ ಆರಂಭವಾಗುವ 2-3 ದಿನಗಳ ಮೊದಲು ಗ್ರಾಮದ ಎಲ್ಲ ಪ್ರಮುಖರು, ಹಿರಿಯರು ಒಂದೆಡೆ ಸೇರುತ್ತಾರೆ. ಚುನಾವಣೆಯಲ್ಲಿನ ಮೀಸಲಾತಿ ಬಗ್ಗೆ ಒಬ್ಬರು ವಿವರಿಸುತ್ತಾರೆ. ನಂತರ ಆಕಾಂಕ್ಷಿಗಳ ಬಗ್ಗೆ ಮಾಹಿತಿ ಪಡೆಯಲಾಗುತ್ತದೆ. ತದನಂತರ ಸೂಕ್ತ ಹಾಗೂ ಸಾಮಾಜಿಕ ನ್ಯಾಯದ ಪರಿಕಲ್ಪನೆಯಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಪ್ರತಿ ಅಭ್ಯರ್ಥಿಯೊಂದಿಗೆ ಹೆಚ್ಚುವರಿ ಒಬ್ಬರು ಅಥವಾ ಇಬ್ಬರು ಡಮ್ಮಿ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಸಲಾಗುತ್ತದೆ. ಪರಿಶೀಲನೆಯ ನಂತರ ಡಮ್ಮಿ ಅಭ್ಯರ್ಥಿಗಳಿಂದ ನಾಮಪತ್ರ ಹಿಂದೆಗೆಸಲಾಗುತ್ತದೆ.

    ಈ ಬಾರಿ ಸಾಮಾನ್ಯ ಕ್ಷೇತ್ರದಿಂದ ಚನ್ನಪ್ಪ ಚಂದ್ರಶೇಖರಪ್ಪ ತೋಟಗೇರ, ಸಾಮಾನ್ಯ ಮಹಿಳೆ ಕ್ಷೇತ್ರದಿಂದ ಮಂಜವ್ವ ಮಲ್ಲಪ್ಪ ಇಟಗಿ, ಎಸ್​ಟಿ ಮಹಿಳೆ ಕ್ಷೇತ್ರದಿಂದ ದೇವಕ್ಕ ಅಶೋಕಪ್ಪ ತಳವಾರ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.

    ಕಾರಣವೇನು?: ಗ್ರಾಮದಲ್ಲಿ ನಡೆಯುವ ಚುನಾವಣೆಯಿಂದಾಗಿ ಒಬ್ಬೊರಿಗೊಬ್ಬರ ಮಧ್ಯೆ ವೈಮನಸ್ಸು ಬಂದು ಗ್ರಾಮದ ಒಗ್ಗಟ್ಟಿಗೆ ಧಕ್ಕೆ ಬಾರದಿರಲಿ ಎಂಬ ಕಾರಣಕ್ಕಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗುತ್ತದೆ ಎನ್ನುತ್ತಾರೆ ಗ್ರಾಮದ ಹಿರಿಯರು.

    ಅವಿರೋಧವಾಗಿ ಆಯ್ಕೆಯಾದ ನಂತರ ಸದಸ್ಯರು ಗ್ರಾಮದ ಹಿತ ಇಟ್ಟುಕೊಂಡು ಕಾರ್ಯನಿರ್ವಹಿಸುತ್ತಾರೆ. ಗ್ರಾ.ಪಂ. ಸದಸ್ಯರೇ ಫಲಾನುಭವಿಗಳನ್ನು ಆಯ್ಕೆ ಮಾಡುವುದಿಲ್ಲ. ಆಯ್ಕೆ ವಿಷಯ ಬಂದಾಗ ಎಲ್ಲರೂ ಸೇರಿ ಸೂಕ್ತ ಹಾಗೂ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡುತ್ತಿರುವುದು ಗ್ರಾಮದ ವಿಶೇಷ.

    ಇದಲ್ಲದೆ, ಜನರು ಯಾವುದೇ ವ್ಯಾಜ್ಯಗಳಿಗಾಗಿ ಪೊಲೀಸ್ ಠಾಣೆಗೆ ಹೋಗುವುದು ವಿರಳ. ಯಾವುದೇ ವ್ಯಾಜ್ಯಗಳನ್ನು ಅಲ್ಲಿನ ಪ್ರಮುಖರೇ ಬಗೆಹರಿಸುತ್ತಾ ಬಂದಿರುವುದು ಈ ಗ್ರಾಮದ ಹೆಗ್ಗಳಿಕೆ.

    ಗ್ರಾಮದ ಹಿತದೃಷ್ಟಿಯಿಂದ ಗ್ರಾಮಸ್ಥರೆಲ್ಲರೂ ಒಗ್ಗಟ್ಟಿನಿಂದ ಪಂಚಾಯಿತಿ ಸದಸ್ಯರನ್ನು ಅವಿರೋಧವಾಗಿ ಆಯ್ಕೆ ಮಾಡುತ್ತಿದ್ದೇವೆ. ಅದರಂತೆ ಈ ಬಾರಿಯೂ ಅವಿರೋಧವಾಗಿ ನಮ್ಮನ್ನು ಆಯ್ಕೆ ಮಾಡಿದ್ದಾರೆ. ಗ್ರಾಮದ ಅಭಿವೃದ್ದಿಯೇ ನಮ್ಮ ಮೂಲ ಮಂತ್ರವಾಗಿದೆ.
    | ಚನ್ನಪ್ಪ ತೋಟಗೇರ, ಅವಿರೋಧ ಆಯ್ಕೆಯಾದ ಗ್ರಾ.ಪಂ. ಸದಸ್ಯ, ಗಳಗನಾಥ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts