More

    ಹಣ್ಣುಗಳ ರಾಜ ಮಾವಿಗಿಲ್ಲ ಬೇಡಿಕೆ

    ಲಕ್ಷ್ಮೇಶ್ವರ: ಹಣ್ಣುಗಳ ರಾಜ ಮಾವಿಗೆ ಬೇಡಿಕೆ ಕಡಿಮೆಯಾಗಿದೆ. ಇದರಿಂದ ಬೆಳೆಗಾರ ಮತ್ತು ಮಾರಾಟಗಾರರು ಸಂಕಷ್ಟಕ್ಕೀಡಾಗಿದ್ದಾರೆ. ಮಾವಿನ ಹಣ್ಣೆಂದರೆ ಎಲ್ಲರಿಗೂ ಇಷ್ಟ. ಆದರೆ, ಇದೀಗ ಹೆಚ್ಚುತ್ತಿರುವ ಬಿಸಿಲ ಝಳಕ್ಕೆ ಬೆಚ್ಚಿರುವ ಜನತೆ ಮಾವಿನ ಹಣ್ಣು ಸವಿಯಲು ಹಿಂದೇಟು ಹಾಕುತ್ತಿದ್ದಾರೆ. ಅಲ್ಲದೆ, ಬರಗಾಲ ಮತ್ತು ರೋಗಬಾಧೆಯಿಂದ ಇಳುವರಿಯೂ ಕುಸಿದಿದ್ದರಿಂದ ಬೆಲೆ ಹೆಚ್ಚಳವೂ ಮಾವಿನ ಬೇಡಿಕೆ ಕುಸಿಯಲು ಕಾರಣವಾಗಿದೆ. ಬಿಸಿಲ ಪ್ರತಾಪ ಕಡಿಮೆಯಾದರೆ ಮಾರುಕಟ್ಟೆಯಲ್ಲಿ ಬೆಲೆಯಿದ್ದರೂ ಹಣ್ಣಿನ ರಾಜನಿಗೆ ಬೇಡಿಕೆ ಬರಲಿದೆ ಎಂಬುದು ವ್ಯಾಪಾರಸ್ಥರ ಅಭಿಪ್ರಾಯ.
    ಖರೀದಿಗೆ ಮುಂದಾಗದ ಜನರು:
    ಮುಖ್ಯವಾಗಿ ಅಕ್ಷಯ ತೃತೀಯ, ಬಸವ ಜಯಂತಿ ಹಬ್ಬಕ್ಕೆ ಬಹುತೇಕರು ಮೊದಲ ಮಾವಿನ ಸಿಹಿ ಸವಿಯುತ್ತಾರೆ. ಗೃಹ ಪ್ರವೇಶ, ಸೀಮಂತ ಸೇರಿ ಇತರೆ ವಿಶೇಷ ಕಾರ್ಯಕ್ರಮ, ಬೀಗರೂಟಕ್ಕೆ ಮಾವಿನ ಶಿಕರಣೆ ಮಾಡಲಾಗುತ್ತದೆ. ಆದರೆ, ನಿತ್ಯ ಸರಾಸರಿ 40 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರುವುದರಿಂದ ಬಸವ ಜಯಂತಿ ಹಬ್ಬಕ್ಕೂ ಮಾವಿನ ಸಿಹಿ ಸವಿಯಲು ಜನರು ಹಿಂದೇಟು ಹಾಕುವಂತಾಗಿದೆ. ಪ್ರಾರಂಭದಲ್ಲಿ ಪ್ರತಿ ಕೆಜಿ ಮಾವಿನ ಹಣ್ಣಿಗೆ 200 ರೂ. ಬೆಲೆಯಿತ್ತು. ಬೇಡಿಕೆ ಇಲ್ಲದ್ದರಿಂದ ಅನಿವಾರ್ಯವಾಗಿ ಪ್ರತಿ ಕೆಜಿ ಮಾವಿನ ಹಣ್ಣನ್ನು 100 ರೂ.ದಿಂದ 150 ರೂ.ವರೆಗೆ ಮಾರಾಟ ಮಾಡುತ್ತಿದ್ದಾರೆ. ಕಳೆದ 2 ವರ್ಷಗಳಿಗೆ ಹೋಲಿಸಿದರೆ ಈ ಬೆಲೆ ಕಡಿಮೆ. ಒಂದು ವೇಳೆ ಉತ್ತಮ ವಾತಾವರಣವಿದ್ದರೆ 400 ರೂ. ಕೆಜಿ ಮಾರಾಟವಾಗುತ್ತಿತ್ತು ಎನ್ನುತ್ತಾರೆ ಹಣ್ಣಿನ ವ್ಯಾಪಾರಸ್ಥರು.
    ಬೆಳೆ (ಫಸಲು) ಇದ್ದಾಗ ಬೆಲೆ ಇರುವುದಿಲ್ಲ. ಬೆಲೆ ಇದ್ದಾಗ ಬೆಳೆ ಬಂದಿರುವುದಿಲ್ಲ. ಈ ವರ್ಷ ಬರಗಾಲದ ನಡುವೆಯೂ ಮಾರುಕಟ್ಟೆಗೆ ಸಕಾಲಿಕವಾಗಿ ಮಾವು ಬಂದಿದ್ದು, ಬೆಲೆಯೂ ಸಾಮಾನ್ಯವಾಗಿದೆ. ಆದರೆ, ಹೆಚ್ಚಿರುವ ಬಿಸಿಲ ತಾಪದಿಂದ ಜನರು ಹಣ್ಣು ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ.

    ಮಾವಿನ ಹಣ್ಣೆಂದರೆ ಎಲ್ಲರಿಗೂ ಇಷ್ಟ. ಪ್ರತಿವರ್ಷ ಮಾವಿನ ಸುಗ್ಗಿ ಮುಗಿಯುವುದರೊಳಗೆ ನಾಲ್ಕೈದು ಬಾರಿಯಾದರೂ ಹಣ್ಣು ತಿನ್ನುತ್ತೇವೆ. ಈ ವರ್ಷ ದಾಖಲೆಯ ಬಿಸಿಲತಾಪ ಇರುವುದರಿಂದ ಮತ್ತು ಮಾವಿನ ಹಣ್ಣಿನ ಸೇವನೆ ದೇಹದಲ್ಲಿ ಉಷ್ಣತೆ ಹೆಚ್ಚಿಸುತ್ತದೆ ಎಂಬ ಕಾರಣದಿಂದ ಈ ವರ್ಷ ಬೆಲೆ ಕಡಿಮೆ ಇದ್ದರೂ ಈವರೆಗೂ ಹಣ್ಣು ಖರೀದಿಸಿಲ್ಲ. ಬಿಸಿಲು ಕಡಿಮೆಯಾಗುತ್ತಿದ್ದಂತೆ ಹಣ್ಣು ಖರೀದಿಸುತ್ತೇವೆ.
    ಮಂಜುನಾಥ ರಾಠೋಡ
    ಸ್ಥಳೀಯ ನಿವಾಸಿ

    ನಾಲ್ಕು ಲಕ್ಷ ರೂ. ಕೊಟ್ಟು ಅಂದಾಜು 400 ಮಾವಿನ ಹಣ್ಣಿನ ಗಿಡಗಳ ವ್ಯಾಪಾರ ಮುಗಿಸಿಕೊಂಡಿದ್ದೇನೆ. ಬರಗಾಲ, ರೋಗಬಾಧೆಯ ನಡುವೆಯೂ ಕಳೆದ ಒಂದು ತಿಂಗಳಿಂದ ಕಡಿಮೆ ಪ್ರಮಾಣದಲ್ಲಾದರೂ ಹಣ್ಣು ಮಾರಾಟಕ್ಕೆ ಸಿದ್ಧವಾಗಿದೆ. ಆದರೆ, ಬಿಸಿಲ ಪ್ರಮಾಣ ಹೆಚ್ಚಿರುವುದರಿಂದ ಕಡಿಮೆ ದರಕ್ಕೆ ಮಾರಾಟ ಮಾಡಿದರೂ ಜನರು ಹಣ್ಣುಗಳ ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ಬೇಡಿಕೆ ಇಲ್ಲದ್ದರಿಂದ ನೈಸರ್ಗಿಕವವಾಗಿಯೇ ಹಣ್ಣುಗಳನ್ನು ಮಾಗಿಸಲಾಗುತ್ತಿದೆ. ಬಿಸಿಲು ಕಡಿಮೆಯಾದರೆ ಹಣ್ಣುಗಳಿಗೆ ಬೇಡಿಕೆ ಬರುತ್ತದೆ. ಮಾವಿನ ಸುಗ್ಗಿ ಮುಗಿಯುವುದರೊಳಗೆ ಹಾಕಿದ ಬಂಡವಾಳವಾದರೂ ಸಿಕ್ಕರೆ ಸಾಕು.
    ಇಮ್ತಿಯಾಜ ಗವಾರಿ
    ಸ್ಥಳೀಯ ಮಾವಿನ ವ್ಯಾಪಾರಸ್ಥ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts