More

    ಗದಗ: ‘ಸಾಕ್ಷಿ ಪದ್ಯಗಳು’ ಕೃತಿ ಲೋಕಾರ್ಪಣೆ

    ಗದಗ: ಮಕ್ಕಳು ಬಾಲ್ಯದಲ್ಲಿ ಸಾಕಷ್ಟು ಅನುಭವಗಳ ಮೂಟೆಯನ್ನು ಹೊತ್ತುಕೊಂಡು ಸಾಗುತ್ತಾರೆ. ಸೂಕ್ತ ಅವಕಾಶ ಮತ್ತು ಪ್ರೋತ್ಸಾಹ ದೊರೆತಾಗ ಮೌಖಿಕ ಮತ್ತು ಲಿಖಿತ ಅಭಿವ್ಯಕ್ತಿಯಾಗಿ ಹೊರಹೊಮ್ಮುತ್ತದೆ. ಈ ದಿಸೆಯಲ್ಲಿ ಸಾಕ್ಷಿ ದೇವರಡ್ಡಿ ತನ್ನ ಅನುಭವಗಳನ್ನು ಪುಟ್ಟ ಪುಟ್ಟ ಪದ್ಯದಲ್ಲಿ ಹೂರಣವಾಗಿ ತುಂಬಿ ಪದಗಳ ತೋರಣ ಕಟ್ಟಿದ್ದಾಳೆ. ಮೊಗ್ಗಿನ ಮನಸಿನ ಮುಗ್ದತೆಯು ಹೂಗನಸಿನ ಪದ್ಯಗಳಿಗೆ ಸಾಕ್ಷಿಯಾಗಿದೆ ಎಂದು ಧಾರವಾಡ ಆಕಾಶವಾಣಿಯ ಮುಖ್ಯಸ್ಥರಾದ ಬಸು ಬೇವಿನಗಿಡದ ನುಡಿದರು.
    ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಗದಗ ಹಾಗೂ ಚಿಲಿಪಿಲಿ ಪ್ರಕಾಶನ ಧಾರವಾಡದಿಂದ ತೋಂಟದ ಗದುಗಿನ ಸಿದ್ಧಲಿಂಗಶ್ರೀಗಳ ಕನ್ನಡ ಭವನದಲ್ಲಿ ಜರುಗಿದ ಕುಮಾರಿ ಸಾಕ್ಷಿ ರವಿ ದೇವರಡ್ಡಿ ಅವರ ‘ಸಾಕ್ಷಿ ಪದ್ಯಗಳು’ ಕೃತಿಯ ಲೋಕಾರ್ಪಣೆ ಸಮಾರಂಭದಲ್ಲಿ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು. ಸಾಕ್ಷಿಯ ಕವಿತೆಗಳು ಮಕ್ಕಳ ಆಲೋಚನೆಯ ಪ್ರತಿನಿಧಿಯಾಗಿವೆ. ಇಂದಿನ ಕಾನ್ವೆಂಟ್ ಸಂಸ್ಸೃತಿಯ ಶಿಕ್ಷಣ ಮಕ್ಕಳ ಬಾಲ್ಯವನ್ನು ಕಿತ್ತು ತಿನ್ನುತ್ತಿದೆ ಎಂಬ ಬೇಸರವನ್ನು ವ್ಯಕ್ತಪಡಿಸಿದರು.
    ಡೋಣಿಯ ನಂದಿವೇರಿ ಸಂಸ್ಥಾನಮಠದ ಪೂಜ್ಯ ಶಿವಕುಮಾರ ಸ್ವಾಮಿಜಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡುತ್ತ ಕಾವ್ಯ ಕಟ್ಟುವುದು ವ್ಯಕ್ತಿಯ ಮನಸ್ಸಿನಲ್ಲಿ ಅಗಾಧತೆಯಾಗಿದ್ದು, ಸಂಸ್ಕಾರ ಹೊಂದಿ ಅಕ್ಷರ ರೂಪವನ್ನು ತಾಳಿ ಲಾಲಿತ್ಯವನ್ನು ಪಡೆಯುತ್ತದೆ. ಮನಸ್ಸು ಸೃಜನಶೀಲವಾಗಿದ್ದರೆ ಕಾವ್ಯ ಹುಟ್ಟುತ್ತದೆ. ನಮ್ಮ ಮನೆಗಳಲ್ಲಿ ಪುಸ್ತಕದ ವಾತಾವರಣ ತುಂಬ ಕಡಿಮೆಯಾಗಿದೆ ದೃಶ್ಯ ಮಾಧ್ಯಮದ ಭರಾಟೆಯಲ್ಲಿ ಪುಸ್ತಕಗಳು ಕಳೆದುಹೋಗುತ್ತಿವೆ. ಮಕ್ಕಳು ಓದುವ ಹವ್ಯಾಸದಿಂದ ದೂರವಾಗುತ್ತಿದ್ದಾರೆ. ಓದು ಎಂದರೆ ಕೇವಲ ಪಠ್ಯ ಪುಸ್ತಕಗಳು ಮಾತ್ರ ಎನ್ನುವ ಸ್ಥಿತಿ ನಿರ್ಮಾಣವಾಗಿದೆಯೆಂದು ವಿಷಾದ ವ್ಯಕ್ತಪಡಿಸಿದರು. ಅದಕ್ಕಾಗಿ ಪಾಲಕರು ಪ್ರತಿ ಮನೆಯಲ್ಲಿ ಒಂದು ಪುಟ್ಟ ಗ್ರಂಥಾಲಯವನ್ನು ಮಾಡಬೇಕೆಂದರು.
    ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾಡದ ಕಾರ್ಯದರ್ಶಿ ಶಂಕರ ಹಲಗತ್ತಿ ಮುಖ್ಯ ಅತಿಥಿಯಾಗಿ ಮಾತನಾಡಿ ಮಗು ಒಂದಿಷ್ಟು ತಿಳುವಳಿಕೆ ಬಂದ ನಂತರ ಕಾಣುವ, ನೋಡುವ, ಸ್ಪರ್ಶಿಸುವ, ಅನುಭವಿಸುವ ತನ್ನದೆ ಆದ ಭಾವನೆಗಳನ್ನು ವ್ಯಕ್ತಪಡಿಸುವುದು ಸಹಜ. ಅವುಗಳನ್ನು ಅಕ್ಷರ ರೂಪಕ್ಕೆ ಇಳಿಸಿದಾಗ ಸಿಗುವ ನೋಟವೇ ಸಾಕ್ಷಿ ಪದ್ಯಗಳು. ಥೇಟ್ ಆಗತಾನೆ ಹೊಲದಿಂದ ಕಿತ್ತು ತಂದ ಸಾವಯವ ತಾಜಾ ತರಕಾರಿ ತಿಂದ ಅನುಭವ ಓದುಗನಿಗೆ ಆಗುವುದು. ಅಪರೂಪದ ಪ್ರತಿಭೆ ಸಾಕ್ಷಿ ಇಂಥ ಪ್ರತಿಭೆಯ ಪುಟ್ಟ ಕೃತಿಯನ್ನು ಚಿಲಿಪಿಲಿ ಪ್ರಕಾಶನ ಹೆಮ್ಮೆಯಿ ಂದ ಪ್ರಕಟಿಸಿ ನಿಮ್ಮ ಕೈಗಳಿಗೆ ಇಟ್ಟಿದೆಯೆಂದರು.
    ಮಕ್ಕಳ ಸಾಹಿತಿ ನಾಗರಾಜ ಹುಡೇದ ಸಾಕ್ಷಿ ಪದ್ಯಗಳ ಪುಸ್ತಕಾವಲೋಕನ ಮಾಡಿ ಮಾತನಾಡುತ್ತ ಮಗು ತನ್ನ ಭಾವನೆಗಳನ್ನು ಹೊರಹಾಕಲು ಬಳಸುವ ಮಾದ್ಯಮ ಚಿತ್ರಗಳಾಗಿವೆ ಸಾಕ್ಷಿ ಹೀಗೆ ಗೀಚಿದ ಚಿತ್ರಗಳಿಂದ ಸಾಹಿತ್ಯ ಹೊರಹೊಮ್ಮಿದೆ. ಅಭಿವ್ಯಕ್ತಿಗೆ ಮಾಧ್ಯಮವಾಗಿ ಚಿತ್ರಗಳನ್ನು ಬಳಸಿಕೊಂಡು ನಂತರ ಮಾತು ಬಂದಾಗ ಅಕ್ಷರ ರೂಪಕ್ಕೆ ಇಳಿಸಿ ರಚಿಸಿದ ಪದ್ಯಗಳು ಇವಾಗಿವೆಯೆಂದರು. ಈ ಸಂಗ್ರಹದಲ್ಲಿ ಆರು ವರ್ಷದ ಪುಟ್ಟ ಮಗು ಸಾಕ್ಷಿ ಪದ್ಯಗಳನ್ನು ಬರೆದಿದ್ದಾಳೆ ಈ ಸಂಕನದಲ್ಲಿ ಒಟ್ಟು ಮೂವತ್ತೊಂದು ಕವಿತೆಗಳಿವೆ ಎಂದು ವಿಮರ್ಶಿಸಿದರು.
    ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಜರುಗಿದ ಸಾಕ್ಷಿ ಪದ್ಯಗಳು ಬಿಡುಗಡೆ ಸಮಾರಂಭದಲ್ಲಿ ಬಸು ಬೇವಿನಗಿಡದ ಮಾತನಾಡಿದರು. ಶಿವಕುಮಾರ ಮಹಾಸ್ವಾಮಿಗಳು, ಸಾಕ್ಷಿ ದೇವರಡ್ಡಿ, ಶಂಕರ ಹಲಗತ್ತಿ, ವಿವೇಕಾನಂದಗೌಡ ಪಾಟೀಲ, ನಾಗರಾಜ ಹುಡೇದ, ರವಿ ದೇವರಡ್ಡಿ ಮೊದಲಾದವರಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts