More

    ಹಣ್ಣುಗಳ ರಾಜನಿಗೆ ಬಹುಬೇಡಿಕೆ

    ಬೆಳಗಾವಿ: ದೇಶದಲ್ಲಿ ಲಾಕ್‌ಡೌನ್‌ನಿಂದಾಗಿ ಎಲ್ಲ ಹಣ್ಣುಗಳ ಮಾರುಕಟ್ಟೆ ಕುಸಿತ ಕಂಡಿದೆ. ಆದರೆ, ಹಣ್ಣುಗಳ ರಾಜ ಮಾವು ಮಾತ್ರ ತನ್ನ ಬೇಡಿಕೆ ಹೆಚ್ಚಿಸಿಕೊಂಡಿದೆ. ಆರ್ಥಿಕ ಸಂಕಷ್ಟದಲ್ಲಿರುವ ಬೆಳೆಗಾರರಿಗೆ ಮಾವು ತುಸು ಆಸರೆಯಾಗಿದೆ.

    ಸಗಟು ಮತ್ತು ಚಿಲ್ಲರೆ ಮಾರುಕಟ್ಟೆಗಳಲ್ಲಿ ಮಾವಿನ ಹಣ್ಣಿನ ಸೀಜನ್‌ನ ಆರಂಭದಲ್ಲಿಯೇ ಲಾಕ್‌ಡೌನ್ ಘೋಷಣೆಯಿಂದ ಮಾವು ಮಾರುಕಟ್ಟೆ ಪ್ರವೇಶಿಸಿರಲಿಲ್ಲ. ಅಲ್ಲದೆ, ಅಕಾಲಿಕ ಮಳೆಯಿಂದಾಗಿ ಬೆಳೆಯುತ್ತಿದ್ದ ಮಾವು ಮರದಲ್ಲಿಯೇ ಹಾಳಾಗಿತ್ತು. ಪರಿಣಾಮ ಗ್ರಾಹಕರ ಬೇಡಿಕೆಗೆ ತಕ್ಕಂತೆ ನಿರೀಕ್ಷಿತ ಪ್ರಮಾಣದಲ್ಲಿ ಮಾವಿನ ಹಣ್ಣು ಪೂರೈಕೆಯಾಗಿರಲಿಲ್ಲ. ಇದೀಗ ಮಾರುಕಟ್ಟೆಗೆ ಲಗ್ಗೆಯಿಟ್ಟಿರುವ ಮಾವು ತನ್ನ ಬೇಡಿಕೆ ಹೆಚ್ಚಿಸಿಕೊಂಡಿದೆ.

    ರಾಜ್ಯದೆಲ್ಲೆಡೆ ಬಾಳೆಹಣ್ಣು, ಕಲ್ಲಂಗಡಿ ಸೇರಿದಂತೆ ವಿವಿಧ ಹಣ್ಣುಗಳ ಮಾರಾಟ ಸಂಪೂರ್ಣ ಕುಸಿತಗೊಂಡಿದೆ. ಇಂತಹ ಸಂದರ್ಭದಲ್ಲೂ ಮಾರುಕಟ್ಟೆ ಪ್ರವೇಶಿಸಿದ ಮಾವಿಗೆ ಹೆಚ್ಚಿನ ಬೇಡಿಕೆ ತಂದುಕೊಟ್ಟಿದೆ.

    ಹೀಗಿದೆ ದರ: ಸದ್ಯ ಮಾರುಕಟ್ಟೆಗಳಲ್ಲಿ ಎರಡು ಡಜನ್ ಹಣ್ಣು ಇರುವ ಬಾಕ್ಸ್‌ಗೆ 550 ರಿಂದ 750 ರೂ. ದರವಿದೆ. ಇನ್ನೂ ವಿಭಿನ್ನ ಜಾತಿಯ ಮಾವಿನ ಹಣ್ಣಿನ ದರ ಡಜನ್‌ಗೆ 280 ರಿಂದ 650 ರೂ.ವರೆಗೆ ಇದೆ. ರತ್ನಾಗಿರಿ ಮತ್ತು ದೇವಗಿರಿ ಆಪೂಸ್ ಎ-ಒನ್ ತಳಿ ಮಾವಿನ ಹಣ್ಣಿನ ಎರಡು ಡಜನ್ ಬಾಕ್ಸ್‌ಗೆ 650 ರಿಂದ 880 ರೂ.ವರೆಗೆ ಇದೆ. ಇದೇ ತಳಿಯ ಹಣ್ಣು ಗಳು ಕೆ.ಜಿ.ಗೆ 240 ರಿಂದ 400 ರೂ. ಆಸುಪಾಸಿನಲ್ಲಿ ದೊರೆಯುತ್ತಿದೆ. ಆದರೆ, ಬೇಡಿಕೆಗೆ ತಕ್ಕಂತೆ ಪೂರೈಕೆಯಾಗುತ್ತಿಲ್ಲ.

    3,529 ಹೆಕ್ಟೇರ್ ಪ್ರದೇಶ: ಬೆಳಗಾವಿ ಜಿಲ್ಲೆಯಲ್ಲಿ ಈ ಬಾರಿ 3,529 ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ತಳಿಯ ಮಾವು ಬೆಳೆಯಲಾಗಿದೆ. ಸವದತ್ತಿ- 98 ಹೆಕ್ಟೇರ್, ಅಥಣಿ- 45, ಚಿಕ್ಕೋಡಿ- 43, ರಾಯಬಾಗ- 08, ಬೈಲಹೊಂಗಲ- 1,233, ಬೆಳಗಾವಿ- 817, ಗೋಕಾಕ- 24, ಹುಕ್ಕೇರಿ- 34, ಖಾನಾಪುರ- 1,219, ರಾಮದುರ್ಗ- 08 ಹೆಕ್ಟೇರ್ ಸೇರಿ ಒಟ್ಟು 3,529 ಹೆ. ಪ್ರದೇಶದಲ್ಲಿ ಮಾವು ಬೆಳೆಯಲಾಗಿದೆ.

    ಕಾಡಿದ ಅಕಾಲಿಕ ಮಳೆ: ಬೈಲಹೊಂಗಲ, ಬೆಳಗಾವಿ, ಖಾನಾಪುರ ಸೇರಿದಂತೆ ವಿವಿಧ ತಾಲೂಕುಗಳಲ್ಲಿ ಆಪೂಸ್ (ಆಲ್ಫಾನ್ಸೋ), ರಸಪುರಿ, ಕಲಮಿ, ನೀಲಂ ಸೇರಿದಂತೆ ಇನ್ನಿತರ ತಳಿಯ ಮಾವು ಬೆಳೆಯಲಾಗುತ್ತಿದೆ. ಹೆಕ್ಟೇರ್‌ಗೆ 4 ರಿಂದ 5 ಟನ್ ಇಳುವರಿ ಬರುತ್ತದೆ. ಈ ವರ್ಷ ಅಕಾಲಿಕ ಮಳೆ ಮತ್ತು ಲಾಕ್‌ಡೌನ್‌ನಿಂದಾಗಿ ನಿರೀಕ್ಷಿತ ಪ್ರಮಾಣದಲ್ಲಿ ಮಾವು ಮಾರುಕಟ್ಟೆ ಪ್ರವೇಶಿಸಿಲ್ಲ. ತೀವ್ರ ಆರ್ಥಿಕ ಸಂಕಷ್ಟದಲ್ಲಿರುವ ಸಣ್ಣ ಮತ್ತು ಅತಿ ಸಣ್ಣ ಬೆಳೆಗಾರರಿಗೆ ಮಾವಿನ ದರ ಸ್ವಲ್ಪ ನೆಮ್ಮದಿ ತಂದಿದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

    ಎರಡು ತಿಂಗಳು ವಿಳಂಬವಾಗಿ ಮಾರುಕಟ್ಟೆ ಪ್ರವೇಶ: ಕಳೆದ ವರ್ಷ ಮಾರ್ಚ್ ಮೊದಲ ವಾರದಲ್ಲಿಯೇ ಮಾವಿನ ಹಣ್ಣು ಮಾರುಕಟ್ಟೆಗೆ ಆಗಮಿಸಿತ್ತು. ಆದರೆ, ಈ ವರ್ಷ ಅಕಾಲಿಕ ಮಳೆ ಮತ್ತು ಲಾಕ್‌ಡೌನ್‌ನಿಂದಾಗಿ ಮೇ ಎರಡನೇ ವಾರದಲ್ಲಿ ಮಾವು ಮಾರುಕಟ್ಟೆ ಪ್ರವೇಶಿಸಿದೆ. ಪ್ರತಿವರ್ಷ ಬೆಳಗಾವಿ ಜಿಲ್ಲೆಗೆ ನೆರೆಯ ಮಹಾರಾಷ್ಟ್ರ ಸೇರಿದಂತೆ ವಿವಿಧ ಕಡೆಯಿಂದ ವಾರಕ್ಕೆ 15 ರಿಂದ 20 ಲಾರಿಗಳಷ್ಟು ಮಾವಿನ ಹಣ್ಣು ಪೂರೈಕೆಯಾಗುತ್ತಿತ್ತು. ಆದರೆ, ಈ ಬಾರಿ ಲಾಕ್‌ಡೌನ್‌ನಿಂದ 2 ರಿಂದ 3 ಲಾರಿಗಳಷ್ಟು ಹಣ್ಣು ಮಾತ್ರ ಪೂರೈಕೈಯಾಗುತ್ತಿದೆ. ಹಾಗಾಗಿ ಸ್ಥಳೀಯ ತಳಿಯ ಹಣ್ಣುಗಳಿಗೂ ಬೇಡಿಕೆ ಹೆಚ್ಚಿದೆ ಎಂದು ಮಾವಿನ ಹಣ್ಣಿನ ವ್ಯಾಪಾರಿಗಳಾದ ಕಿರಣ್ ಎಸ್.ಅಂಗಡಿ, ಎಸ್.ಎಸ್. ಪಾಟೀಲ ಅಭಿಪ್ರಾಯಪಟ್ಟಿದ್ದಾರೆ.

    ಬೆಳಗಾವಿ ಜಿಲ್ಲೆಯ ಸಗಟು ಮತ್ತು ಚಿಲ್ಲರೆ ಮಾರುಕಟ್ಟೆಗಳಲ್ಲಿ ಮಾವಿನ ಹಣ್ಣಿನ ಬೇಡಿಕೆ ಹೆಚ್ಚಿದ್ದು, ದಿನದಿಂದ ದಿನಕ್ಕೆ ಮಾವಿನ ಹಣ್ಣಿನ ಮಾರಾಟದಲ್ಲಿ ಏರಿಕೆಯಾಗುತ್ತಿದೆ. ಮುಂದಿನ ವಾರದಲ್ಲಿ ಅಧಿಕ ಪ್ರಮಾಣದಲ್ಲಿ ಮಾವು ಮಾರುಕಟ್ಟೆಗೆ ಬರುವ ಸಾಧ್ಯತೆಯಿದೆ.
    |ರಮೇಶ ತುರಮರಿ ತೋಟಗಾರಿ ಇಲಾಖೆ ಜಿಲ್ಲಾ ಉಪ ನಿರ್ದೇಶಕ

    |ಮಂಜುನಾಥ ಕೋಳಿಗುಡ್ಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts