More

    ಸರಳ ದೀಪಾವಳಿ ಆಚರಣೆಗೆ ಮುಂದಾದ ಜನತೆ

    ಮೂಡಿಗೆರೆ: ದೀಪಾವಳಿ ಹಬ್ಬಕ್ಕೆ ಒಂದು ವಾರ ಇರುವಾಗಲೇ ಎಲ್ಲೆಡೆ ಪಟಾಕಿ ಸದ್ದು ಕೇಳಿ ಬರುತ್ತಿತ್ತು. ಈ ವರ್ಷ ಕರೊನಾ ಸೋಂಕು ಪಟಾಕಿಯ ಸದ್ದೂ ಅಡಗುವಂತೆ ಮಾಡಿದೆ. ಆದರೆ ಸಂಪ್ರದಾಯಗಳು ಸರಳವಾಗಿ ಪ್ರತಿ ವರ್ಷದಂತೆ ನಡೆಯುತ್ತವೆ.

    ನರಕ ಚತುರ್ದಶಿ ಹಿಂದಿನ ದಿನ ಗ್ರಾಮೀಣ ಭಾಗದಲ್ಲಿ ಕೇದಗೆ ಗಿಡವನ್ನು ಕತ್ತರಿಸಿ ತಂದು ಮನೆ, ತೋಟ, ಗದ್ದೆ, ಬಾವಿ, ಕೊಟ್ಟಿಗೆ, ತೆಂಗಿನಮರ ಸೇರಿ ಫಲ ಬಿಡುವ ಎಲ್ಲ ಮರಗಳ ಬುಡದಲ್ಲಿ ಇಡುತ್ತಾರೆ. ಜತೆಗೆ ಲಕ್ಕಿ ಸೊಪ್ಪು, ಗರಿಕೆ ಹಾಗೂ ಕಾಡು ಗಿಡದ ಮುಳ್ಳು ಇವೆಲ್ಲವನ್ನೂ ಮುಂಜಾನೆ 7 ಗಂಟೆಯೊಳಗೆ ಇಟ್ಟು ‘ಲಕ್ಕಿ ಲಕ್ಕಿ ಕೂವು ಕುವೂ’ ಎಂದು ಬೊಬ್ಬೆಹಾಕುವ ಸಂಪ್ರದಾಯವಿದೆ. ಈ ಸಂಪ್ರದಾಯ ತಾಲೂಕಿನಲ್ಲಿ ಶುಕ್ರವಾರ ಮತ್ತು ಶನಿವಾರ ನಡೆಯಲಿದೆ.

    ವಿಷ್ಣು ಬಲಿ ಚಕ್ರವರ್ತಿಯನ್ನು ತುಳಿದು ಸಮಾಧಿ ಮಾಡುವಾಗ ವರ್ಷದಲ್ಲಿ ಒಂದು ದಿನ ನೀನು ಭೂಮಿಗೆ ಬರಲು ಅವಕಾಶವಿದೆ ಎಂದು ಬಲಿ ಚಕ್ರವರ್ತಿಗೆ ಹೇಳಿರುತ್ತಾನೆ. ಅದರಂತೆ ಬಲಿಪಾಢ್ಯಮಿ ದಿನ ಬಲಿ ಚಕ್ರವರ್ತಿ ಬರುವ ಮೊದಲು ವಿಷ್ಣು ಲಕ್ಷ್ಮೀಯೊಂದಿಗೆ ಭೂಮಿಗೆ ಬಂದು ಜನರ ಆಚಾರ-ವಿಚಾರ ನೋಡಿದಾಗ ಮುಳ್ಳಿನೊಂದಿಗೆ ಕೇದಗೆ ಗಿಡ ಇಟ್ಟಿದ್ದನ್ನು ನೋಡುತ್ತಾರಂತೆ. ಆಗ ಬಲಿ ಚಕ್ರವರ್ತಿ ಭೂಮಿಗೆ ಬಾರದಂತೆ ತಡೆಯಲು ಜನ ಕೇದಗೆ ಗಿಡವನ್ನು ಮುಳ್ಳಿನೊಂದಿಗೆ ಇಟ್ಟಿದ್ದಾರೆಂದು ತಿಳಿದು ಬಲಿ ಚಕ್ರವರ್ತಿ ಭೂಮಿಗೆ ಬರಲು ಅವಕಾಶ ನೀಡುತ್ತಾನೆ. ಅದರಂತೆ ಸೋಮವಾರ ಬಲಿ ಚಕ್ರವರ್ತಿ ಬರುವ ದಿನ ಬಲಿಪಾಢ್ಯಮಿ ಪೂಜೆಗೆ ಹಾಗೂ ಹಿಂದಿನ ದಿನ ವಿಷ್ಣುವಿನೊಂದಿಗೆ ಬರುವ ಲಕ್ಷ್ಮೀಗೂ ಪೂಜೆ ಸಲ್ಲಿಕೆ ನಡೆಯುತ್ತದೆ ಎಂದು ಹಿರಿಯರು ಹೇಳುತ್ತಾರೆ.

    ಹಿಂದಿನಿಂದ ನಡೆದು ಬಂದ ಪದ್ಧತಿಯಂತೆ ದೀವಾವಳಿ ಸಮಯದಲ್ಲಿ ತೆನೆತೊಡೆದ ಭತ್ತವನ್ನು ತಂದು ಮನೆ ಮಹಡಿಯಲ್ಲಿ ಕಟ್ಟಿ ಪೂಜೆ ನೆರವೇರಿಸುತ್ತಾರೆ. ಪಟಾಕಿ ಸದ್ದಿನೊಂದಿಗೆ ಹಬ್ಬ ಆಚರಿಸುವುದು ಇಲ್ಲಿನ ಸಂಪ್ರದಾಯ. ಆದರೆ ಸರ್ಕಾರ ಹಸಿರು ಪಟಾಕಿಗೆ ಮಾತ್ರ ಅನುಮತಿ ನೀಡಿದೆ. ಪೂಜಾ ಸಾಮಗ್ರಿ, ಹೂವು, ಹಣ್ಣು ಅಗತ್ಯ ವಸ್ತುಗಳ ದರ ಹೆಚ್ಚಾಗಿದ್ದರೂ ಸಂಪ್ರದಾಯಗಳು ನಡೆಯುತ್ತವೆ. ಆದರೆ ಸರಳವಾಗಿ ಆಚರಿಸಲು ಜನತೆ ಮುಂದಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts