More

    ಕೆಎಲ್‌ಇಯಿಂದ ಶೀಘ್ರ ಮೂರು ಆಸ್ಪತ್ರೆ

    ಬೆಳಗಾವಿ: ಮುಂದಿನ 5 ವರ್ಷಗಳಲ್ಲಿ ಕೆಎಲ್‌ಇ ಸಂಸ್ಥೆಯಿಂದ 3 ಆಸ್ಪತ್ರೆ ನಿರ್ಮಿಸಿ, ಅವುಗಳ ಸಾಮರ್ಥ್ಯವನ್ನು 7000 ಹಾಸಿಗೆಗೆ ಹೆಚ್ಚಿಸಲಾಗುವುದು. ಇದು ದೇಶದಲ್ಲಿಯೇ ಖಾಸಗಿ ಸಂಸ್ಥೆಯೊಂದು ನಡೆಸುವ ಅತಿಹೆಚ್ಚು ಹಾಸಿಗೆಯ ಆಸ್ಪತ್ರೆ ಹೊಂದಿರುವ ಖ್ಯಾತಿಗೆ ಸಂಸ್ಥೆ ಭಾಜನವಾಗಲಿದೆ ಎಂದು ಕೆಎಲ್‌ಇ ಸಂಸ್ಥೆ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಹೇಳಿದರು.

    ಯಳ್ಳೂರ ಹೊರವಲಯದಲ್ಲಿರುವ ಕೆಎಲ್‌ಇ ಚಾರಿಟೇಬಲ್ ಆಸ್ಪತ್ರೆಯ ಆವರಣದಲ್ಲಿ ಕೆಎಲ್‌ಇ ಸಂಸ್ಥೆ ಹಾಗೂ ರೋಟರಿ ಕ್ಲಬ್ ಸಹಯೋಗದೊಂದಿಗೆ 27 ಲಕ್ಷ ರೂ. ವೆಚ್ಚದಲ್ಲಿ ಹೊಸದಾಗಿ ಆರಂಭಿಸಲಾಗಿರುವ ಡಯಾಲಿಸಿಸ್ ಘಟಕಕ್ಕೆ ಬುಧವಾರ ಸಂಜೆ ಚಾಲನೆ ನೀಡಿ ಅವರು ಮಾತನಾಡಿದರು.

    ಬೆಂಗಳೂರು, ಹುಬ್ಬಳ್ಳಿ ಹಾಗೂ ಪುಣೆ ನಗರದಲ್ಲಿ ಮೂರು ಆಸ್ಪತ್ರೆ ನಿರ್ಮಾಣ ಮಾಡಲಾಗುತ್ತಿದೆ. ಶಿಕ್ಷಣ ಪ್ರೇಮಿಗಳಾಗಿದ್ದ ಏಳು ಸಪ್ತರ್ಷಿಗಳಿಂದ ಕೆಎಲ್‌ಇ ಸಂಸ್ಥೆಯು ಇಷ್ಟೊಂದು ದೊಡ್ಡದಾಗಿ ಬೆಳೆದಿದೆ. ಇದರ ಹಿಂದೆ ಉದಾರವಾದ ದಾನಿಗಳು ಮಾಡಿದ ತನು-ಮನ-ಧನ ಸಹಾಯದಿಂದಾಗಿ ನಮ್ಮ ಸಂಸ್ಥೆಯು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆದು ನಿಂತಿದೆ ಎಂದರು.

    ಐತಿಹಾಸಿಕ ಛಾಪು: 104 ವರ್ಷಗಳ ಇತಿಹಾಸವಿರುವ ಕೆಎಲ್‌ಇ ಸಂಸ್ಥೆಯು ಶೈಕ್ಷಣಿಕ ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ನೀಡುತ್ತಿರುವ ಗುಣಾತ್ಮಕ ಸೇವೆ ಮೂಲಕ ಸಮಾಜದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. 115 ವರ್ಷದ ಇತಿಹಾಸವಿರುವ ರೋಟರಿ ಸಂಸ್ಥೆಯು ಕೂಡ ತನ್ನದೇ ಆದ ಸಮಾಜ ಸೇವೆಯ ಮೂಲಕ ದೇಶ-ವಿದೇಶಗಳಲ್ಲಿ ಹೆಸರುವಾಸಿಯಾಗಿದೆ. ಶೀಘ್ರದಲ್ಲಿಯೇ ಸಾಂಬ್ರಾ ಏರ್‌ಪೋರ್ಟ್ ರಸ್ತೆ ಮಾರ್ಗದಲ್ಲಿ ಹೊಮಿಯೋಪಥಿಕ್ ಕಾಲೇಜು ಮತ್ತು ಆಸ್ಪತ್ರೆ ಕಟ್ಟಡ ಪೂರ್ಣಗೊಳಿಸಲಾಗುವುದು ಎಂದರು.

    ರೋಟರಿಯಿಂದ ಧನ ಸಹಾಯ: ಸಮಾಜ ಸೇವಕ ಅವಿನಾಶ ಪೋತದಾರ ಮಾತನಾಡಿ, ಕೆಎಲ್‌ಇ ಮತ್ತು ರೋಟರಿ ಸಂಸ್ಥೆಗಳೆರಡೂ ಒಂದಕ್ಕೊಂದು ಬೆರೆತು ಸಮಾಜ ಸೇವೆಗೆ ಮುಂದಾಗಿರುವುದು ಸಂತಸದ ಸಂಗತಿ. ಡಯಾಲಿಸಿಸ್ ಘಟಕವನ್ನು ರೋಟರಿ ಧನಸಹಾಯದಿಂದ ನೀಡಲಾಗುತ್ತಿದ್ದು, ಅದನ್ನು ಮುಂದಿನ 8 ವರ್ಷಗಳ ಕಾಲ ಕೆಎಲ್‌ಇ ಸಂಸ್ಥೆಯು ಚೆನ್ನಾಗಿ ನಡೆಸಲಿದೆ ಎಂಬ ಭರವಸೆ ತಮಗಿದೆ ಎಂದರು.

    ಡಾ. ಎಚ್.ಬಿ. ರಾಜಶೇಖರ ಮಾತನಾಡಿ, ಯಾವುದೇ ಫಲಾಪೇಕ್ಷೆ ಇಲ್ಲದೆ ರೋಗಿಗಳಿಗೆ ಕೈಗೆಟುಕುವ ದರದಲ್ಲಿ ಡಯಾಲಿಸಿಸ್ ಸೇವೆ ನೀಡುವುದಕ್ಕಾಗಿ ತಮ್ಮ ಆಸ್ಪತ್ರೆಯ ಆಡಳಿತ ಮಂಡಳಿ ಬದ್ಧವಾಗಿದೆ. ಇದು ಚಾರಿಟೇಬಲ್ ಆಸ್ಪತ್ರೆಯಾಗಿರುವುದರಿಂದ ಸ್ಪರ್ಧಾತ್ಮಕ ದರದಲ್ಲಿ ಸೇವೆ ನೀಡಲು ಸಾಧ್ಯವಾಗಲಿದೆ ಎಂದರು. ಡಾ. ಮುಕುಂದ ಉಡಚನಕರ ಪ್ರಾಸ್ತಾವಿಕವಾಗಿ ಮಾತನಾಡಿದರು. ರೋಟರಿ ಅಧ್ಯಕ್ಷ ಜೀವನ ಖಟಾವ್, ಡಾ.ಅಲ್‌ಡ್ರಿನ್ ಬಿನ್, ಪ್ರಮೋದ ಅಗರವಾಲ್, ಮನೋಜ ಹುಯಿಲಗೋಳ, ಡಾ. ವಿ.ಎಸ್. ಸಾಧುನವರ ಇತರರಿದ್ದರು.

    ಒಡಂಬಡಿಕೆ ವಿನಿಮಯ

    ಯುಎಸ್‌ಎಂ ಕುಲಪತಿ ಡಾ. ಫೈಸಲ್ ರಫಿಕ್ ಮಾತನಾಡಿ, ಕೆಎಲ್‌ಇ ಸಂಸ್ಥೆಯ ಜತೆ ನಾವು ಕೆಲಸ ಮಾಡುತ್ತಿರುವುದು ಅಭಿಮಾನದ ಸಂಗತಿಯಾಗಿದೆ. ಕಳೆದ 11 ವರ್ಷದಿಂದ ಯುಎಸ್‌ಎಂ-ಕೆಎಲ್‌ಇ ಪಯಣ ಸಾಗುತ್ತಿದೆ. ಅದನ್ನು ಮುಂದುವರಿಸುವುದಕ್ಕಾಗಿ ತಾವು ಇಲ್ಲಿಗೆ ಆಗಮಿಸಿದ್ದೇನೆ ಎಂದರು. ಬಳಿಕ ಕೆಎಲ್‌ಇ-ಯುಎಸ್‌ಎಂ ಪರಸ್ಪರ ಒಡಂಬಡಿಕೆಗೆ ಸಹಿ ಮಾಡಿದ ಪತ್ರಗಳನ್ನು ವಿನಿಮಯ ಮಾಡಿಕೊಂಡರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts