More

    ಗ್ರಾಹಕರಿಂದ ಹೆಚ್ಚುವರಿ ಹಣ ವಸೂಲಿ ಮಾಡಬೇಡಿ – ಸುರೇಶ ಅಂಗಡಿ

    ಬೆಳಗಾವಿ: ಕರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ಸರ್ಕಾರವು ಲಾಕ್‌ಡೌನ್ ಘೋಷಣೆ ಮಾಡಿದೆ. ಇಂತಹ ಸಂದರ್ಭದಲ್ಲಿ ವ್ಯಾಪಾರಿಗಳು ಗ್ರಾಹಕರಿಂದ ಹೆಚ್ಚುವರಿ ಹಣ ವಸೂಲಿ ಮಾಡಬಾರದು ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಹೇಳಿದ್ದಾರೆ.

    ನಗರದ ರವಿವಾರ ಪೇಟೆಯ ಬಸವೇಶ್ವರ ಬ್ಯಾಂಕ್ ಸಭಾಂಗಣದಲ್ಲಿ ವ್ಯಾಪಾರಿಗಳೊಂದಿಗೆ ಸೋಮವಾರ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಾಕ್‌ಡೌನ್‌ನಿಂದ ಗ್ರಾಹಕರು, ವ್ಯಾಪಾರಿಗಳು, ರೈತರು, ಸಾಮಾನ್ಯ ಜನರು ಸೇರಿ ಎಲ್ಲ ಕ್ಷೇತ್ರಗಳಲ್ಲಿನ ಜನರಿಗೆ ಸಮಸ್ಯೆ ಎದುರಾದರೂ ಸರ್ಕಾರದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ವ್ಯಾಪಾರಿಗಳು ಮಾನವೀಯ ಆಧಾರದ ಮೇಲೆ ಕೆಲಸ ಮಾಡುವುದು ಸೂಕ್ತ ಎಂದು ವಿನಂತಿಸಿದರು.

    ಈಗಾಗಲೇ ಮಾರುಕಟ್ಟೆಗಳಲ್ಲಿ ದಿನಸಿ ವಸ್ತುಗಳು, ತರಕಾರಿ ಸೇರಿ ಇತರ ಆಹಾರ ವಸ್ತುಗಳಿಗೆ ಗ್ರಾಹಕರಿಂದ ಹೆಚ್ಚುವರಿ ಹಣ ವಸೂಲಿ ಮಾಡುತ್ತಿರುವ ಕುರಿತು ಆರೋಪಗಳು ಕೇಳಿ ಬರುತ್ತಿವೆ. ಇದರಿಂದ ಸಮಾಜಕ್ಕೆ ತಪ್ಪು ಸಂದೇಶ ಹೋಗುತ್ತದೆ. ಹಾಗಾಗಿ ವ್ಯಾಪಾರಿಗಳು ನ್ಯಾಯಸಮ್ಮತ ಬೆಲೆಗೆ ಮಾರಾಟ ಮಾಡಬೇಕು ಎಂದು ತಿಳಿಸಿದರು.

    ನಗರದ ಕ್ಯಾಂಪ್ ಪ್ರದೇಶ ಬಿಟ್ಟು ಎಲ್ಲ ಕಡೆ ವ್ಯಾಪಾರ ಮಾಡಲು ಅನುಕೂಲ ಮಾಡಿಕೊಡಲಾಗಿದೆ. ಬೆಳಗ್ಗೆ 9 ಗಂಟೆಯವರೆಗೆ ತರಕಾರಿ ವಾಹನಗಳನ್ನು ಖಾಲಿ ಮಾಡಬೇಕು. ಬಳಿಕ 10 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ವ್ಯಾಪಾರಿಗಳು ಗ್ರಾಹಕರಿಗೆ ವಾಹನಗಳ ಮೂಲಕ ಅವರ ಮನೆಗಳಿಗೆ ತಲುಪಿಸುವ ವ್ಯವಸ್ಥೆ ಮಾಡಬೇಕು. ಮಧ್ಯಾಹ್ನ 3 ರಿಂದ 4ರ ವರೆಗೆ ಹೊರಗಡೆಯಿಂದ ಬರುವ ವಾಹನಗಳಿಗೆ ಪೊಲೀಸರು ವ್ಯಾಪಾರಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳುತ್ತಾರೆ ಎಂದು ತಿಳಿಸಿದರು.

    ಶಾಸಕ ಅನಿಲ ಬೆನಕೆ ಮಾತನಾಡಿ, ಗ್ರಾಹಕರಿಗೆ ಯೋಗ್ಯ ದರದಲ್ಲಿ ವಸ್ತುಗಳನ್ನು ನೀಡಿ ಸಹಕರಿಸಬೇಕು. ವ್ಯಾಪಾರಿಗಳಿಗೆ ಸಮಸ್ಯೆ ಉಂಟಾಗದಂತೆ ಪೊಲೀಸರು ಮುನ್ನೆಚ್ಚರಿಕೆ ವಹಿಸಬೇಕು ಎಂದು ಸೂಚಿಸಿದರು. ವ್ಯಾಪಾರಿಗಳು, ಪೊಲೀಸ್ ಅಧಿಕಾರಿಗಳು ಸಭೆಯಲ್ಲಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts