ಕೊಕಟನೂರ: ಶ್ರೀಮದಥಣಿ ಮುರುಘೇಂದ್ರ ಶಿವಯೋಗಿಗಳ ಜನ್ಮಸ್ಥಳವಾದ ನದಿ ಇಂಗಳಗಾಂವ ಗ್ರಾಮದ ಸುಕ್ಷೇತ್ರ ಗುರುಲಿಂಗ ದೇವರಮಠದಲ್ಲಿ 59ನೇ ಮಹಾಶಿವರಾತ್ರಿಯ ಅಂಗವಾಗಿ ಶರಣ ಸಂಸ್ಕೃತಿ ಉತ್ಸವ ಫೆ.21 ರಿಂದ ಫೆ. 26 ರವರೆಗೆ ಆರು ದಿನಗಳ ಕಾಲ ನಡೆಯಲಿದೆ ಎಂದು ಗುರುಲಿಂಗ ದೇವರಮಠದ ಮಠಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ಹೇಳಿದ್ದಾರೆ.
ನದಿ ಇಂಗಳಗಾಂವದ ಗುರುಲಿಂಗ ದೇವರಮಠದಲ್ಲಿ ಸಿದ್ಧಲಿಂಗ ಸ್ವಾಮೀಜಿ ಸುದ್ದಿಗೊಷ್ಠಿ ಉದ್ದೇಶಿಸಿ ಮಾತನಾಡಿ, ಫೆ.21 ರಂದು ಬೆಳಗ್ಗೆ 5 ಗಂಟೆಗೆ ಮುರುಘೇಂದ್ರ ಸ್ವಾಮೀಜಿ ಗದ್ದುಗೆಗೆ ಮಹಾಪೂಜೆ ಹಾಗೂ ವಿಶೇಷ ಅಭಿಷೇಕ, ಪುಷ್ಪಾರ್ಚನೆ ಹಾಗೂ ಮಹಾ ಮಂಗಳಾರತಿ ನಡೆಯಲಿದೆ. ಬಳಿಕ 8.30ಕ್ಕೆ ಷಟಸ್ಥಲ್ ಧ್ವಜಾರೋಹಣ ಜರುಗಲಿದೆ.
ಶರಣ ಶ್ರೀ ಐ.ಆರ್.ಮಠಪತಿ ಉದ್ಘಾಟಿಸುವರು. ಹಲ್ಯಾಳ ವಿರಕ್ತಮಠದ ಗುರುಸಿದ್ಧ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಕೋಳಿಗುಡ್ಡದ ಸ್ವರೂಪಾನಂದ ಸ್ವಾಮೀಜಿ, ಅಡಹಳಟ್ಟಿ ಶಿವಪಂಚಾಕ್ಷರಿ ಸ್ವಾಮೀಜಿ ಪಾಲ್ಗೊಳ್ಳಲಿದ್ದಾರೆ.
ಸಂಜೆ 7 ಗಂಟೆಗೆ ಜೀವನ ದರ್ಶನ ಪ್ರವಚನ, ಫೆ.25ರವರೆಗೆ ಪ್ರತಿದಿನ ಸಂಜೆ 7 ಗಂಟೆಗೆ ವಿವಿಧ ಶ್ರೀಗಳಿಂದ ಜರುಗಲಿದೆ. ಫೆ. 26 ರಂದು ಬೆಳಗ್ಗೆ 8.30 ಕ್ಕೆ ಶ್ರೀ ಮಹಾಂತಪ್ಪಗಳ ಮಾಸಿಕ ತೃತೀಯ ಹಾಗೂ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಲಿದೆ. ಧಾರವಾಡದ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಹಲ್ಯಾಳ ವಿರಕ್ತಮಠ ಗುರುಸಿದ್ಧ ಸ್ವಾಮೀಜಿ ಸಮ್ಮುಖ, ಅತಿಥಿಗಳಾಗಿ ಸಾವಯವ ಕೃಷಿಕರಾದ ವಿಜುಗೌಡ ಪಾಟೀಲ, ಗೌಡಪ್ಪ ಚನ್ನಣ್ಣವರ ಉಪಸ್ಥಿತರಿರುವರು. ಸಂಜೆ 7 ಗಂಟೆಗೆ ಶರಣ ಸಂಸ್ಕೃತಿ ಉತ್ಸವದ ಸಮಾರೋಪ ಸಮಾರಂಭ ಜರುಗಲಿದೆ.
ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಅಥಣಿ ಗಚ್ಚಿನಮಠದ ಶಿವಬಸವ ಸ್ವಾಮೀಜಿ ಉಪಸ್ಥಿತರಿರುವರು ಎಂದು ತಿಳಿಸಿದರು.