More

    ಪದೇಪದೆ ಪೊಲೀಸರ ವರ್ಗಾವಣೆ ಅಸಾಧ್ಯ; ಗೃಹ ಸಚಿವ ಡಾ. ಜಿ. ಪರಮೇಶ್ವರ್

    ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ಕೆಳಹಂತದ ಸಿಬ್ಬಂದಿಯನ್ನು ಪದೇಪದೆ ವರ್ಗಾವಣೆ ಮಾಡಲು ಅಸಾಧ್ಯ. ಅಪರಾಧ ಪ್ರಕರಣಗಳ ತನಿಖೆಗೆ ಅಡ್ಡಿಯಾಗಲಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದರು.

    ಮೈಸೂರು ರಸ್ತೆ ಕುಂಬಳಗೂಡು ಪೊಲೀಸ್ ಠಾಣೆಯ ನೂತನ ಕಟ್ಟಡವನ್ನು ಬುಧವಾರ ಉದ್ಘಾಟಿಸಿ ಗೃಹ ಸಚಿವರು ಬಳಿಕ ಸುದ್ದಿಗಾರರ ಜತೆ ಮಾತನಾಡಿದರು. ಕೆಲ ಕಾನ್‌ಸ್ಟೆಬಲ್, ಹೆಡ್‌ಕಾನ್‌ಸ್ಟೆಬಲ್ ಮತ್ತು ಸಹಾಯಕ ಸಬ್‌ಇನ್‌ಸ್ಪೆಕ್ಟರ್‌ಗಳು ಬಹುಕಾಲ ಒಂದೇ ಠಾಣೆಯಲ್ಲಿ ಠಿಕಾಣಿ ಹೂಡುತ್ತಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಡಾ. ಜಿ. ಪರಮೇಶ್ವರ್, ಕ್ರಿಮಿನಲ್‌ಗಳ ಮೇಲೆ ನಿಗಾ ವಹಿಸುವುದು ಮತ್ತು ಅಪರಾಧ ಕೃತ್ಯಗಳ ತನಿಖೆಯಲ್ಲಿ ಕೆಳಹಂತದ ಪೊಲೀಸ್ ಸಿಬ್ಬಂದಿ ಹೆಚ್ಚು ತೊಡಗಿಸಿಕೊಂಡಿರುತ್ತಾರೆ. ಪದೇ ಪದೆ ವರ್ಗಾವಣೆ ಮಾಡಿದರೇ ತನಿಖೆಗೆ ಮತ್ತು ಅಪರಾಧ ಕೃತ್ಯಗಳ ಮೇಲೆ ನಿಗಾವಹಿಸಲು ಕಷ್ಟವಾಗಲಿದೆ. ಜತೆಗೆ ಜಿಲ್ಲಾವಾರು ವರ್ಗಾವಣೆಗೆ ನಿರ್ಬಂಧ ಇರುವುದು ಸಹ ಕಾರಣವಾಗಿದೆ ಎಂದು ಗೃಹ ಸಚಿವರು ಸ್ಪಷ್ಟಪಡಿಸಿದರು.
    ಪೊಲೀಸ್ ಠಾಣೆಗಳಿಗೆ ಬರುವ ನೊಂದ ಜನರಿಗೆ ನ್ಯಾಯ ಸಿಗಬೇಕು. ಈ ನಿಟ್ಟಿನಲ್ಲಿ ಪೊಲೀಸರು ಜನಸ್ನೇಹಿಯಾಗಿ ಕೆಲಸ ಮಾಡುವ ಮೂಲಕ ಇಲಾಖೆಗೆ ಒಳ್ಳೆಯ ಹೆಸರು ತರಬೇಕು. ಶಾಸಕ ಎಸ್.ಟಿ. ಸೋಮಶೇಖರ್ ಸಚಿವರಾಗಿದ್ದಾಗ ನೂತನ ಕಟ್ಟಡ ನಿರ್ಮಾಣಕ್ಕೆ 3.56 ಕೋಟಿ ರೂ. ಅನುದಾನ ತಂದಿದ್ದರು. ಇದರಿಂದ ಸುಸಜ್ಜಿತ ಠಾಣೆಗಳನ್ನು ನಿರ್ಮಿಸಲಾಗಿದೆ.

    ಮಹಿಳಾ ಪೊಲೀಸರಿಗೆ ಪ್ರತ್ಯೇಕ ಶೌಚಗೃಹ, ವಿಶ್ರಾಂತಿ ಗೃಹ, ರಾತ್ರಿ ಉಳಿಯಲು ಕೊಠಡಿ ಇರುವುದು ವಿಶೇಷವಾಗಿದೆ. ದೂರುದಾರರು ಮತ್ತು ಸಾರ್ವಜನಿಕರು ಠಾಣೆಗೆ ಬಂದಾಗ ಅವರಿಗೆ ಕೂರಲು ಸ್ಥಳ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಮೂಲಸೌಕರ್ಯ ಒದಗಿಸಲಾಗಿದೆ. ಹಳೆಯ ಕೇಸ್‌ಗಳಿಗೆ ಸಂಬಂಧಿಸಿದ ರೆಕಾರ್ಡ್, ಜಪ್ತಿ ಮಾಡಿದ ವಸ್ತುಗಳ, ಸಶಸಗಳ ಸಂಗ್ರಹ ಸೇರಿದಂತೆ ಪ್ರತಿಯೊಂದು ವಿಭಾಗಕ್ಕೂ ಪ್ರತ್ಯೇಕ ಕೊಠಡಿ ನಿರ್ಮಾಣ ಮಾಡಲಾಗಿದೆ.

    ಹಂಪಾಪುರ ಗ್ರಾಮದ ಜನರು, 35 ಕಿ.ಮೀ. ದೂರದ ಕಗ್ಗಲಿಪುರ ಠಾಣೆಗೆ ಹೋಗಬೇಕು. ಹತ್ತಿರದ ಕುಂಬಳಗೂಡು ಠಾಣೆಗೆ ಸೇರಿಸಬೇಕೆಂಬ ಮನವಿ ಸಲ್ಲಿಸಿದ್ದಾರೆ. ಈಬಗ್ಗೆ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೆನೆ ನೀಡಿರುವುದಾಗಿ ಗೃಹ ಸಚಿವರು ಮಾಹಿತಿ ನೀಡಿದರು.

    ಸ್ಥಳೀಯ ಶಾಸಕ ಸೋಮಶೇಖರ್ ಮಾತನಾಡಿ, ಪೊಲೀಸ್ ಠಾಣೆಗೆ ಅಗತ್ಯ ಸೌಕರ್ಯಗಳನ್ನು ಕಲ್ಪಿಸಿದಾಗ ಮಾತ್ರ ಪೊಲೀಸರು ನಿರ್ಭಯವಾಗಿ ಕೆಲಸ ಮಾಡುತ್ತಾರೆ. ನಾನು ಈ ಹಿಂದೆ ಸಚಿವನಾಗಿದ್ದಾಗ ಉತ್ತಮ ಠಾಣೆ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿತ್ತು ಎಂದರು. ವಿಧಾನ ಪರಿಷತ್ ಸದಸ್ಯ ಟಿ.ಎ. ಶರವಣ, ಡಿಜಿಪಿ ಡಾ.ಕೆ. ರಾಮಚಂದ್ರ ರಾವ್, ಐಜಿಪಿ ಡಾ.ಬಿ. ಆರ್. ರವಿಕಾಂತೇಗೌಡ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ, ಎಎಸ್‌ಪಿ ಟಿ.ವಿ. ಸುರೇಶ್, ಡಿವೈಎಸ್‌ಪಿ ಪ್ರವೀಣ್, ಕುಂಬಳಗೂಡು ಠಾಣೆ ಇನ್‌ಸ್ಪೆಕ್ಟರ್ ಶಿವಾರೆಡ್ಡಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts