More

    ಇಗಾ ಸ್ವಿಯಾಟೆಕ್‌ಗೆ ಫ್ರೆಂಚ್ ಓಪನ್ ಕಿರೀಟ ; 2ನೇ ಬಾರಿಗೆ ಪ್ರಶಸ್ತಿ ಗೆದ್ದ ಪೋಲೆಂಡ್ ಆಟಗಾರ್ತಿ

    ಪ್ಯಾರಿಸ್: ಭರ್ಜರಿ ಗೆಲುವಿನ ಲಯ ಮುಂದುವರಿಸಿದ ವಿಶ್ವ ನಂ.1 ತಾರೆ ಇಗಾ ಸ್ವಿಯಾಟೆಕ್ ಎರಡನೇ ಬಾರಿಗೆ ಪ್ರತಿಷ್ಠಿತ ಫ್ರೆಂಚ್ ಓಪನ್ ಗ್ರಾಂಡ್ ಸ್ಲಾಂ ಗೆದ್ದುಕೊಂಡರು. ರೋಲ್ಯಾಂಡ್ ಗ್ಯಾರಸ್‌ನಲ್ಲಿ ಶನಿವಾರ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಪ್ರಶಸ್ತಿ ಸುತ್ತಿನ ಹೋರಾಟದಲ್ಲಿ ಪೋಲೆಂಡ್ ಆಟಗಾರ್ತಿ ಸ್ವಿಯಾಟೆಕ್ 6-1, 6-3 ನೇರ ಸೆಟ್‌ಗಳಿಂದ ಅಮೆರಿಕದ ಯುವತಾರೆ ಕೋಕೋ ಗೌಫ್ ಎದುರು ಕೇವಲ 68 ನಿಮಿಷಗಳಲ್ಲಿ ಗೆಲುವು ದಾಖಲಿಸಿದರು. ಸತತ 35ನೇ ಗೆಲುವು ದಾಖಲಿಸುವ ಮೂಲಕ ಸ್ವಿಯಾಟೆಕ್, ಅಮೆರಿಕದ ವೀನಸ್ ವಿಲಿಯಮ್ಸ್ ದಾಖಲೆಯನ್ನು ಸರಿಗಟ್ಟಿದರು. 2020ರಲ್ಲಿ ಕಡೇ ಬಾರಿಗೆ ಪ್ರಶಸ್ತಿ ಜಯಿಸಿದ್ದ ಸ್ವಿಯಾಟೆಕ್, ಮುಕ್ತಯುಗದಲ್ಲಿ 2 ಬಾರಿ ಬಾರಿ ಫ್ರೆಂಚ್ ಓಪನ್ ಜಯಿಸಿದ 10ನೇ ಆಟಗಾರ್ತಿ ಎನಿಸಿದ್ದಾರೆ.

    ಕಳೆದ ಫೆಬ್ರವರಿ ತಿಂಗಳಿಂದಲೂ ಭರ್ಜರಿ ಲಯದಲ್ಲಿರುವ ಸ್ವಿಯಾಟೆಕ್, ನಿರೀಕ್ಷೆಯಂತೆಯೇ ಅಮೆರಿಕದ ಆಟಗಾರ್ತಿ ಮೇಲೆ ಪ್ರಭುತ್ವ ಸಾಧಿಸಿದರು. ಮೊದಲ 20 ನಿಮಿಷದಲ್ಲೇ 4-0 ಯಿಂದ ಮುನ್ನಡೆ ಸಾಧಿಸಿದ ಸ್ವಿಯಾಟೆಕ್, ಕೇವಲ 34 ನಿಮಿಷಗಳಲ್ಲೇ ಮೊದಲ ಸೆಟ್ ಗೆದ್ದುಕೊಂಡರು. ಎರಡನೇ ಸೆಟ್‌ನಲ್ಲಿ ಪೋಲೆಂಡ್ ಆಟಗಾರ್ತಿ 0-2 ರಿಂದ ಹಿನ್ನಡೆ ಅನುಭವಿಸಿದರೂ ತಿರುಗೇಟು ನೀಡಿದರು. ಆಕ್ರಮಣಕಾರಿ ನಿರ್ವಹಣೆಯಿಂದ ಸತತ 5 ಪಾಯಿಂಟ್ಸ್ ಕಲೆಹಾಕಿ 5-2 ರಿಂದ ಮುನ್ನಡೆ ಕಂಡರು. ಸ್ವಿಯಾಟೆಕ್ ಅಬ್ಬರದ ನಿರ್ವಹಣೆ ಎದುರು ಸಂಪೂರ್ಣ ಮಂಕಾದ ಕೋಕೋ ಗೌಫ್ ಮೊದಲ ಯತ್ನದಲ್ಲಿ ಪ್ರಶಸ್ತಿ ಜಯಿಸಲು ವಿಲರಾದರು.

    18 ವರ್ಷದ ಕೋಕೋ ಗೌಫ್, ಕಳೆದ 21 ವರ್ಷಗಳಲ್ಲಿ ಫ್ರೆಂಚ್ ಓಪನ್ ಫೈನಲ್‌ಗೇರಿದ ಅತ್ಯಂತ ಕಿರಿಯ ಆಟಗಾರ್ತಿ ಎನಿಸಿದ್ದರು. ಜತೆಗೆ ಇದೇ ಮೊದಲ ಬಾರಿಗೆ ಗ್ರಾಂಡ್ ಸ್ಲಾಂನಲ್ಲಿ  ಕ್ವಾರ್ಟರ್ ಫೈನಲ್‌ಗಿಂತ ಮೇಲೇರಿದ್ದರು. ವಿಶ್ವ ನಂ.1 ಆಟಗಾರ್ತಿ ಸ್ವಿಯಾಟೆಕ್ ಟೂರ್ನಿ ಇದುವರೆಗೆ 1 ಸೆಟ್ ಮಾತ್ರ ಸೋತಿದ್ದಾರೆ.

    ಬಹುಮಾನ ಮೊತ್ತ
    * ವಿಜೇತರಿಗೆ 18.28 ಕೋಟಿ ರೂ
    * ರನ್ನರ್‌ಅಪ್ 9.14 ಕೋಟಿ ರೂ.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts