More

    ನಡಾಲ್‌ಗೆ 14ನೇ ಫ್ರೆಂಚ್ ಓಪನ್ ಪ್ರಶಸ್ತಿ ; 22ನೇ ಗ್ರಾಂಡ್ ಸ್ಲಾಂಗೆ ಮುತ್ತಿಕ್ಕಿದ ಸ್ಪೇನ್ ತಾರೆ

    ಪ್ಯಾರಿಸ್: ಸ್ಪೇನ್ ದಿಗ್ಗಜ ರಾಫೆಲ್ ನಡಾಲ್ ಫ್ರೆಂಚ್ ಓಪನ್ ಗ್ರಾಂಡ್ ಸ್ಲಾಂ ಟೆನಿಸ್ ಟೂರ್ನಿಯಲ್ಲಿ ದಾಖಲೆಯ 14ನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದರು. ಈ ಮೂಲಕ ಮಣ್ಣಿನಂಕಣದಲ್ಲಿ ತಮ್ಮ ಪ್ರಾಬಲ್ಯವನ್ನು ಮತ್ತೊಮ್ಮೆ ಸಾಬೀತು ಪಡಿಸಿದ ನಡಾಲ್, ದಾಖಲೆಯ 22ನೇ ಗ್ರಾಂಡ್ ಸ್ಲಾಂ ಪ್ರಶಸ್ತಿ ಗೆಲುವಿನೊಂದಿಗೆ ಬೀಗಿದರು. ರೋಲ್ಯಾಂಡ್ ಗ್ಯಾರಸ್‌ನಲ್ಲಿ ಭಾನುವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ 5ನೇ ಶ್ರೇಯಾಂಕಿತ ಆಟಗಾರ ನಡಾಲ್ 6-3, 6-3, 6-0 ನೇರಸೆಟ್‌ಗಳಿಂದ ನಾರ್ವೆಯ ಕ್ಯಾಸ್ಪೆರ್ ರುಡ್ ಅವರನ್ನು 2 ಗಂಟೆ 18 ನಿಮಿಷಗಳಲ್ಲಿ ಮಣಿಸಿ 2 ವರ್ಷಗಳ ಬಳಿಕ ಮಣ್ಣಿನಂಕಣದಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡರು. ಕಳೆದ ವರ್ಷ ವಿಶ್ವ ನಂ. 1 ನೊವಾಕ್ ಜೋಕೊವಿಕ್‌ಗೆ ಪ್ರಶಸ್ತಿ ಬಿಟ್ಟುಕೊಟ್ಟಿದ್ದ ನಡಾಲ್, ಈ ಬಾರಿ ಕ್ವಾರ್ಟರ್ ಫೈನಲ್‌ನಲ್ಲೇ ಸೆರ್ಬಿಯಾ ಆಟಗಾರನಿಗೆ ಸೋಲುಣಿಸಿದ್ದರು. ವರ್ಷಾರಂಭದ ಆಸ್ಟ್ರೇಲಿಯನ್ ಓಪನ್‌ನಲ್ಲೂ ಚಾಂಪಿಯನ್ ಆಗಿದ್ದ ನಡಾಲ್, ಪ್ರಸಕ್ತ ವರ್ಷ ಸತತ 2ನೇ ಗ್ರಾಂಡ್ ಸ್ಲಾಂ ಒಲಿಸಿಕೊಂಡರು.

    ಚೊಚ್ಚಲ ಬಾರಿಗೆ ಗ್ರಾಂಡ್ ಸ್ಲಾಂ ಟೂರ್ನಿಗಳಲ್ಲಿ ಫೈನಲ್ ಪ್ರವೇಶಿಸಿದ್ದ 23 ವರ್ಷದ ತರುಣ ಕ್ಯಾಸ್ಪೆರ್ ರುಡ್ ಯಾವುದೇ ಹಂತದಲ್ಲೂ ನಡಾಲ್‌ಗೆ ಸಾಟಿಯಾಗಲಿಲ್ಲ. ಅಲ್ಲದೆ, ಸಿಂಗಲ್ಸ್ ವಿಭಾಗದಲ್ಲಿ ಫೈನಲ್ ಪ್ರವೇಶಿಸಿದ್ದ ನಾರ್ವೆಯ ಮೊದಲ ಆಟಗಾರ ಎನಿಸಿಕೊಂಡಿದ್ದರು. ಆಕರ್ಷಕ ಸರ್ವ್‌ಗಳ ಜತೆಗೆ ಆಕ್ರಮಣಕಾರಿ ನಿರ್ವಹಣೆ ತೋರಿದ 36 ವರ್ಷದ ನಡಾಲ್ ಕೇವಲ 49 ನಿಮಿಷಗಳಲ್ಲಿ ಮೊದಲ ಸೆಟ್ ಒಲಿಸಿಕೊಂಡರು. ಎರಡನೇ ಸೆಟ್‌ನಲ್ಲಿ ಕ್ಯಾಸ್ಪೆರ್ ಆರಂಭಿಕ ಹಂತದಲ್ಲಿ ಮುನ್ನಡೆ ಸಾಧಿಸಿದ್ದರೂ ಸತತ ಪಾಯಿಂಟ್ಸ್ ಕಲೆಹಾಕಿ ತಿರುಗೇಟು ನೀಡಿದರು. ಸಂಪೂರ್ಣ ಏಕಪಕ್ಷೀಯವಾಗಿ ನಡೆದ 3ನೇ ಸೆಟ್‌ನಲ್ಲಿ ಕ್ಯಾಸ್ಪೆರ್ ಎದುರು ಸವಾರಿ ನಡೆಸಿದರು.

    ಫ್ರೆಂಚ್ ಓಪನ್ ಗೆದ್ದ ಹಿರಿಯ ಆಟಗಾರ
    ಕಳೆದ ಶುಕ್ರವಾರವಷ್ಟೇ 36ನೇ ವರ್ಷಕ್ಕೆ ಕಾಲಿಟ್ಟ ನಡಾಲ್, ರೋಲ್ಯಾಂಡ್ ಗ್ಯಾರಸ್‌ನಲ್ಲಿ ಚಾಂಪಿಯನ್ ಆದ ಹಿರಿಯ ಆಟಗಾರ ಎನಿಸಿಕೊಂಡರು. 1972ರಲ್ಲಿ ಸ್ಪೇನ್‌ನವರೇ ಆದ ಆಂಡ್ರೆಸ್ ಗಿಮೆನೊ, 34ನೇ ವಯಸ್ಸಿನಲ್ಲಿ ಈ ಸಾಧನೆ ಮಾಡಿದ್ದರು. ಫ್ರೆಂಚ್ ಓಪನ್‌ನಲ್ಲಿ ಆಡಿದ 112ನೇ ಗೆಲುವು ದಾಖಲಿಸಿದ ನಡಾಲ್, ಇದುವರೆಗೆ 3 ಪಂದ್ಯಗಳನ್ನಷ್ಟೇ ಸೋತಿದ್ದಾರೆ. ಪ್ರಸಕ್ತ ವರ್ಷ ಫ್ರೆಂಚ್ ಓಪನ್ ಆಡುವುದಕ್ಕೂ ಮುನ್ನ ಯಾವುದೇ ಕ್ಲೇಕೋರ್ಟ್ ಟೂರ್ನಿಗಳಲ್ಲಿ ಪ್ರಶಸ್ತಿ ಗೆದ್ದಿರಲಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts