More

    ಫೆ.14ರಿಂದ ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ಅಮರಣಾಂತ ಉಪವಾಸ ಸತ್ಯಾಗ್ರಹ

    ಶಿವಮೊಗ್ಗ: ಸರ್ಕಾರ ಈಡಿಗರನ್ನು ಸಂಪೂರ್ಣವಾಗಿ ನಿರ್ಲಕ್ಷಿಸುತ್ತಿದ್ದು, ಸೂಕ್ತ ರಾಜಕೀಯ ಸ್ಥಾನಮಾನ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಫೆ.14ರಿಂದ ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ನಾರಾಯಣಗುರು ಶಕ್ತಿಪೀಠದ ಶ್ರೀ ಪ್ರಣಾವಾನಂದ ಸ್ವಾಮೀಜಿ ಹೇಳಿದರು.
    ಈಡಿಗ, ಬಿಲ್ಲವ, ನಾಮದಾರಿ ಸೇರಿದಂತೆ ಸಮಾಜದ ವಿವಿಧ ಬೇಡಿಕೆಗಳಿಗೆ ಮಂಗಳೂರಿನಿಂದ ಬೆಂಗಳೂರಿನವರೆಗೆ ಹಮ್ಮಿಕೊಂಡಿರುವ ಪಾದಯಾತ್ರೆ ಬುಧವಾರ ನಗರದ ಶೇಷಾದ್ರಿಪುರಂ ಪ್ರವೇಶಿಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀ ನಾರಾಯಣಗುರು ನಿಗಮ ರಚನೆ ಮಾಡಿ 500 ಕೋಟಿ ರೂ. ಅನುದಾನ ಮೀಸಲಿಡಬೇಕು. ಸಮಾಜಕ್ಕೆ ಸೂಕ್ತ ರಾಜಕೀಯ ಸ್ಥಾನಮಾನ ನೀಡಬೇಕು. ಸಿಗಂದೂರು ಚೌಡೇಶ್ವರಿ ದೇವಸ್ಥಾನದ ವಿಚಾರದಲ್ಲಿ ಸರ್ಕಾರ ಹಸ್ತಕ್ಷೇಪ ಮಾಡದೇ ಧರ್ಮದರ್ಶಿ ಎಸ್.ರಾಮಪ್ಪ ಅವರ ಮೇಲೆ ಹಾಕಿರುವ ಕೇಸ್‌ಗಳನ್ನು ಹಿಂಪಡೆಯಬೇಕೆಂದು ಒತ್ತಾಯಿಸಿದರು.
    ಈಡಿಗ ಸೇರಿ 26 ಉಪಪಂಗಡಗಳ ಸಮಾಜದ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು. ಶರಾವತಿ ಮುಳುಗಡೆ ಸಂತ್ರಸ್ತರ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸುವುದು ಹಾಗೂ ಸೋಗಾನೆ ವಿಮಾನ ನಿಲ್ದಾಣಕ್ಕೆ ಮಾಜಿ ಸಿಎಂ ಎಸ್.ಬಂಗಾರಪ್ಪ ಅವರ ಹೆಸರಿಡಬೇಕು ಎಂಬುದು ನಮ್ಮ ಪ್ರಮುಖ ಬೇಡಿಕೆಗಳಾಗಿವೆ ಎಂದರು.
    ಸಮುದಾಯದ ಏಳು ಶಾಸಕರು, ಇಬ್ಬರು ಮಂತ್ರಿಗಳಿದ್ದು ತಮ್ಮ ಸ್ವಾರ್ಥಕ್ಕಾಗಿ ಸಮಾಜವನ್ನು ಬಲಿ ಕೊಡುತ್ತಿದ್ದಾರೆ. ಅವರಿಗೆ ಸಮಾಜದ ಕೋಟಾ ಬೇಕು. ವೋಟು ಬೇಕು. ಆದರೆ ಸಮಾಜದ ಬೇಡಿಕೆ ಈಡೇರಿಸುವುದು ಮಾತ್ರ ಬೇಡವಾಗಿದೆ. ಇದು ಹೀಗೆ ಮುಂದುವರಿದರೆ ರಾಜಕೀಯವಾಗಿ ತಕ್ಕ ಉತ್ತರ ನೀಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಜಿಲ್ಲಾ ಈಡಿಗ ಸಮಾಜದ ಅಧ್ಯಕ್ಷ ಶ್ರೀಧರ್ ಹುಲ್ತಿಕೊಪ್ಪ, ಜಿಪಂ ಮಾಜಿ ಸದಸ್ಯ ಕಲಗೋಡು ರತ್ನಾಕರ್, ಜಿ.ಡಿ.ಮಂಜುನಾಥ, ಹೊನ್ನಪ್ಪ, ಮಾನಸ ಸತೀಶ್, ರಾಮಚಂದ್ರಪ್ಪ, ಆರ್.ರವೀಂದ್ರ, ಕೆ.ಎಲ್.ಉಮೇಶ್, ಪುನೀತ್ ಬೆಳ್ಳೂರು ಉಪಸ್ಥಿತರಿದ್ದರು.
    ಶ್ರೀಗಳ ಆರೋಗ್ಯದಲ್ಲಿ ಏರುಪೇರು, ಚಿಕಿತ್ಸೆ: ಪ್ರಣಾವಾನಂದ ಶ್ರೀಗಳು ಪಾದಯಾತ್ರೆ ವೇಳೆ ಅಸ್ವಸ್ಥಗೊಂಡಿದ್ದು ಶಿವಮೊಗ್ಗ ತಾಲೂಕಿನ ಶ್ರೀ ಕ್ಷೇತ್ರ ಐರಾವತ ಐರಣಿ ಹೊಳೆಮಠದಲ್ಲಿ ಮಂಗಳವಾರ ರಾತ್ರಿ ವಾಸ್ತವ್ಯ ಹೂಡಿದಾಗ ಅನಾರೋಗ್ಯ ಕಾಣಿಸಿಕೊಂಡಿತ್ತು. ತಡರಾತ್ರಿ ತೀವ್ರ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಶಿವಮೊಗ್ಗದ ವೈದ್ಯ ಡಾ. ಓಂಕಾರ್ ಅವರು ತಪಾಸಣೆ ನಡೆಸಿ ಚಿಕಿತ್ಸೆ ನೀಡಿದರು. ಎರಡು ದಿನ ವಿಶ್ರಾಂತಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಕಳೆದ ಜ.6ರಿಂದ ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದಿಂದ ಬೆಂಗಳೂರಿಗೆ ಶ್ರೀಗಳು ಪಾದಯಾತ್ರೆ ಆರಂಭಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts