More

    ಬಸವಣ್ಣನಿಂದ ಮಹಿಳೆಯರಿಗೆ ಸ್ವಾತಂತ್ರೃ

    ಮುದ್ದೇಬಿಹಾಳ: ಹನ್ನೆರಡನೇ ಶತಮಾನದಲ್ಲಿ ಬಸವಣ್ಣ ಅನುಭವ ಮಂಟಪ ಕಟ್ಟುವ ಮೂಲಕ ಮಹಿಳೆಯರ ಸ್ವಾತಂತ್ರೃಕ್ಕೆ ಪ್ರಥಮ ಪ್ರಾತಿನಿಧ್ಯ ನೀಡಿದ್ದರು. ಅನುಭವ ಮಂಟಪ ಕಟ್ಟದಿದ್ದರೆ ಅಂದು ಮಹಿಳೆಯರಿಗೆ ಸ್ವಾತಂತ್ರೃವೇ ಸಿಗುತ್ತಿರಲಿಲ್ಲ. ಅಕ್ಕಮಹಾದೇವಿ ಆದಿಯಾಗಿ ಶರಣೆಯರು ಇದಕ್ಕೆ ಉದಾಹರಣೆಯಾಗಿದ್ದಾರೆ ಎಂದು ಕುಂಟೋಜಿ ಸಂಸ್ಥಾನ ಹಿರೇಮಠದ ಚನ್ನವೀರ ದೇವರು ಹೇಳಿದರು.

    ಇಲ್ಲಿನ ಎಪಿಎಂಸಿಯಲ್ಲಿರುವ ಬ್ಯಾಂಕ್ ಸಭಾಭವನದಲ್ಲಿ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ತಾಲೂಕು ಘಟಕ ವತಿಯಿಂದ ಶನಿವಾರ ಏರ್ಪಡಿಸಿದ್ದ ಸಾವಿತ್ರಿಬಾಯಿ ಫುಲೆ ಜಯಂತ್ಯೋತ್ಸವ, ಶೈಕ್ಷಣಿಕ ಕಾರ್ಯಾಗಾರ, ತಾಲೂಕು ಮಟ್ಟದ ಉತ್ತಮ ಶಿಕ್ಷಕ, ಶಿಕ್ಷಕಿ ಪ್ರಶಸ್ತಿ ಪ್ರದಾನ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

    ಹೆಣ್ಣಿನ ಬದುಕು ಕಷ್ಟದಿಂದ ಕೂಡಿದ್ದಾಗಿದೆ. ಆಧುನಿಕ ಜಗತ್ತಿನಲ್ಲಿ ಮಹಿಳೆ ಸಮಾಜದ ಮುಖ್ಯವಾಹಿನಿಗೆ ಬರುವಂತಾದರೆ ಮಾತ್ರ ಬಸವಾದಿ ಶರಣು, ಜ್ಯೋತಿಬಾ ಫುಲೆ, ಸಾವಿತ್ರಿಬಾಯಿ ಫುಲೆ, ಬಿ.ಆರ್.ಅಂಬೇಡ್ಕರ್ ಅವರಂಥವರು ತಂದಿದ್ದ ಬದಲಾವಣೆ ಸಾರ್ಥಕಗೊಳ್ಳುತ್ತದೆ. ಎಲ್ಲರ ಸಹಕಾರದೊಂದಿಗೆ ಮಹಿಳೆಯರು ಸಾಧನೆಯತ್ತ ಮುನ್ನುಗ್ಗಬೇಕು ಎಂದರು.

    ದಿ ನೇಚರ್ ಗ್ರೋಮೋರ್ ಫೌಂಡೇಷನ್ ಅಧ್ಯಕ್ಷೆ ಸಂಗೀತಾ ನಾಡಗೌಡರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಮಹಿಳೆಯರಿಗೆ ಕಟ್ಟುಪಾಡುಗಳಿದ್ದ ದಿನಗಳಲ್ಲಿ ಫುಲೆ, ಅಂಬೇಡ್ಕರ್ ಅವರಂಥವರು ಮಹಿಳೆಯರ ಸ್ವಾತಂತ್ರೃಕ್ಕೆ ಹೆಚ್ಚು ಆದ್ಯತೆ ಕೊಟ್ಟಿದ್ದರು. ಇವರನ್ನು ಪ್ರತಿಯೊಬ್ಬ ಮಹಿಳೆ ಸದಾ ಸ್ಮರಿಸಿಕೊಳ್ಳಬೇಕು ಎಂದರು.

    ಎಂಜಿವಿಸಿ ಕಾಲೇಜು ಉಪನ್ಯಾಸಕಿ ಡಾ. ಸುನೀತಾ ಜಾಧವ, ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಅಧ್ಯಕ್ಷೆ ಎಂ.ಜಿ. ವಾಲಿ, ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಜಯಶ್ರೀ ಬೆಣ್ಣಿ, ಸಂಘದ ಜಿಲ್ಲಾಧ್ಯಕ್ಷೆ ಎ.ಬಿ. ನಾಯಕ ಮಾತನಾಡಿದರು.

    ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಎಚ್. ಮುದ್ನೂರ, ಪ್ರಧಾನ ಕಾರ್ಯದರ್ಶಿ ಎನ್.ಎಸ್. ತುರಡಗಿ, ಪದಾಧಿಕಾರಿಗಳಾದ ಬಿ.ಎಸ್. ಹೊಳಿ, ಬಿ.ಎಸ್. ಶೇಖಣ್ಣವರ, ಎ.ಎಂ. ಮಿರ್ಜಿ, ಎಂ.ಜಿ. ಹೊಕ್ರಾಣಿ, ಬಿಆರ್‌ಸಿ ಲತಾ ಮುದ್ದಾಪುರ, ಇಸಿಒಗಳಾದ ವಿಜಯಲಕ್ಷ್ಮೀ ಚಿಲ್ಲಾಳಶೆಟ್ಟರ, ವಿ.ವೈ. ಗುರಿಕಾರ, ಶೋಭಾ ಶಳ್ಳಗಿ, ಸರ್ವಮಂಗಳ ಹೂಗಾರ ಮತ್ತಿತರರು ಇದ್ದರು.

    20 ಶಿಕ್ಷಕಿಯರಿಗೆ ಸಾವಿತ್ರಿಬಾಯಿ ಫುಲೆ, 20 ಶಿಕ್ಷಕರಿಗೆ ಜ್ಯೋತಿಬಾ ಫುಲೆ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮುಖ್ಯಶಿಕ್ಷಕ ಟಿ.ಎನ್. ರೂಢಗಿ, ಶಿಕ್ಷಕಿ ಎಸ್.ಎಸ್. ಮಹಾಂತನವರ ಹಾಗೂ ದಾನಿಗಳನ್ನು ಸನ್ಮಾನಿಸಲಾಯಿತು.

    ಸಮಗಮೇಶ ಶಿವಣಗಿ ತಂಡದವರು ಪ್ರಾರ್ಥಿಸಿದರು. ಶಿಕ್ಷಕಿ ಬಸಮ್ಮ ಗದ್ದಿ ಸ್ವಾಗತಿಸಿದರು. ಶಿಕ್ಷಕಿಯರಾದ ರೇಣುಕಾ ಮ್ಯಾಗೇರಿ, ದೀಪಾ ಕೇಶ್ವಾಪುರ, ಪಿ.ಎಸ್. ಬಡಿಗೇರ ನಿರ್ವಹಿಸಿದರು. ಡಾ. ಸವಿತಾ ಒಡೆಯರ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts