More

    ಚಪಲಚಿತ್ತದಿಂದ ಆಪತ್ತು!; ಹೆಚ್ಚುತ್ತಿದೆ ಡೇಟಿಂಗ್ ಆ್ಯಪ್​ ಧೋಖಾ; ಜೀವದ ಜತೆ ಹಣಕ್ಕೂ ಕನ್ನ..

    ಕೀರ್ತಿನಾರಾಯಣ ಸಿ. ಬೆಂಗಳೂರು

    ರೆಫ್ರಿಜರೇಟರ್​ನಲ್ಲಿ 35 ತುಂಡುಗಳಾಗಿ ದಾರುಣ ಅಂತ್ಯ ಕಂಡ ದೆಹಲಿ ಶ್ರದ್ಧಾ ಹತ್ಯೆ ಪ್ರಕರಣದ ನಂತರ ‘ಡೇಟಿಂಗ್ ಹಾಗೂ ಲೀವ್ ಇನ್ ಸಂಬಂಧ’ಗಳಲ್ಲಿ ಇರುವವರಲ್ಲಿ ಆತಂಕ ಶುರುವಾಗಿದೆ. ಅದರಲ್ಲೂ ಡೇಟಿಂಗ್ ಆಪ್​ಗಳ ವಿಶ್ವಾಸಾರ್ಹತೆ ಬಗ್ಗೆ ಪ್ರಶ್ನೆ ಎದ್ದಿದ್ದು, ಹಣ ಕಟ್ಟಿ ಆಪ್​ನಲ್ಲಿ ನೋಂದಣಿ ಮಾಡಿಕೊಂಡವರ ಜೀವ, ಜೀವನದ ಜತೆಗೆ ಕಷ್ಟಪಟ್ಟು ದುಡಿದ ಹಣವೂ ವಂಚಕರ ಪಾಲಾಗುತ್ತಿದೆ. ಹೆಣ್ಣು ಹಾಗೂ ಗಂಡೆಂಬ ಬೇಧವಿಲ್ಲದೆ ಚಪಲಚಿತ್ತದ ತೃಪ್ತಿಗೆ ಡೇಟಿಂಗ್ ಆಪ್ ವ್ಯಸನಕ್ಕೆ ಸಿಲುಕುತ್ತಿರುವವರು ಬಲಿಪಶುಗಳಾಗುತ್ತಿದ್ದಾರೆ.

    ಕರೊನಾ ಕಾಲಿಟ್ಟ ನಂತರ ಆನ್​ಲೈನ್ ಡೇಟಿಂಗ್ ಆಪ್​ಗಳ ಜಾಲ ಜಾಸ್ತಿಯಾಗಿದೆ. ಸಮೀಕ್ಷೆ ಪ್ರಕಾರ ವಿಶ್ವದಾದ್ಯಂತ 30 ಕೋಟಿಗೂ ಅಧಿಕ ಜನರು ಇಂಥ ಆಪ್​ಗಳನ್ನು ಬಳಸುತ್ತಿದ್ದಾರೆ. ಅದರಲ್ಲೂ 2 ಕೋಟಿ ಜನ ಆಪ್​ನ ವಿಶೇಷ ಸೇವೆಗಾಗಿ ಪ್ರೀಮಿಯಂ ಹಣ ಪಾವತಿ ಮಾಡುತ್ತಿದ್ದಾರೆ. 2021ರಲ್ಲಿ ಡೇಟಿಂಗ್ ಆಪ್​ಗಳಿಂದ ಬರೋಬ್ಬರಿ 561 ಕೋಟಿ ರೂ. ಆದಾಯ ಬಂದಿದೆ. 2015ರ ನಂತರ ಪ್ರತಿವರ್ಷವೂ ಆದಾಯ ವೃದ್ಧಿಯಾಗಿದೆ. 2024ರ ವೇಳೆ ಇನ್ನೂ 28 ಕೋಟಿ ಬಳಕೆದಾರರು ನೋಂದಣಿಯಾಗುವ ಬಗ್ಗೆ ಅಂದಾಜಿಸಲಾಗಿದೆ. ಸ್ಟ್ಯಾಟಿಸ್ ಡಾಟ್ ಕಾಂ ಎಂಬ ಸಂಸ್ಥೆಯ ಅಧ್ಯಯನ ಪ್ರಕಾರ ಡೇಟಿಂಗ್ ಆಪ್​ಗಳ ಬಳಕೆಯಲ್ಲಿ ಅಮೆರಿಕ ನಂತರ ಭಾರತ ಅತಿದೊಡ್ಡ ದೇಶವಾಗಿದೆ. ಭಾರತದಲ್ಲಿ ಸದ್ಯ 3.1 ಕೋಟಿ ಜನರು ಡೇಟಿಂಗ್ ಅಪ್ಲಿಕೇಷನ್ ಬಳಕೆದಾರರಾಗಿದ್ದಾರೆ.

    ಇದರಲ್ಲಿ ಶೇ.67ರಷ್ಟು ಪುರುಷರಾಗಿದ್ದು, ಶೇ.33ರಷ್ಟು ಮಹಿಳೆಯರು. ಇತ್ತೀಚೆಗೆ ಎರಡನೇ ಹಂತದ ನಗರಗಳಲ್ಲೂ ಡೇಟಿಂಗ್ ಆಪ್​ಗಳತ್ತ ಒಲವು ಹೆಚ್ಚಾಗಿದೆ. ವಂಚನೆ ಪ್ರಕರಣಗಳು ಮಿತಿಮೀರುತ್ತಿರುವ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಮಹಿಳಾ ಆಯೋಗಗಳಿಂದ ಸೋಷಿಯಲ್ ಮೀಡಿಯಾ ಬಳಕೆ, ಡೇಟಿಂಗ್ ಆಪ್ ಹಾಗೂ ಲಿವ್ ಇನ್ ರಿಲೇಷನ್​ಷಿಪ್​ಗಳಿಂದ ಆಗುತ್ತಿರುವ ಅನಾಹುತಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಎಲ್ಲ ಜಿಲ್ಲೆಗಳಲ್ಲೂ ಸಮಿತಿಗಳನ್ನು ರಚನೆ ಮಾಡಲಾಗಿದ್ದು, ಸ್ವಾವಲಂಬಿ ಬದುಕು, ಆರ್ಥಿಕ ಸದೃಢೀಕರಣದಿಂದ ಜೀವನ ಕಟ್ಟಿಕೊಳ್ಳುವ ಕುರಿತು ಎಲ್ಲ ಶಾಲಾ-ಕಾಲೇಜುಗಳಲ್ಲಿ ತಜ್ಞರಿಂದ ತರಗತಿಗಳನ್ನು ಮಾಡಲಾಗುತ್ತಿದೆ.

    ಕನಿಷ್ಠ 6 ತಿಂಗಳ ಸಂಬಂಧ!

    • – ಮಾಹಿತಿ ಪ್ರಕಾರ ಪ್ರಪಂಚದಾದ್ಯಂತ 8000ಕ್ಕೂ ಅಧಿಕ ಡೇಟಿಂಗ್ ಆಪ್/ಸೈಟ್​ಗಳಿವೆ
    • – ಸರ್ವೆ ಪ್ರಕಾರ ಡೇಟಿಂಗ್​ನ ಶೇ.35 ಮಂದಿ ಕನಿಷ್ಠ 6 ತಿಂಗಳು ಸಂಬಂಧ ಹೊಂದಿರುತ್ತಾರೆ
    • – ಶೇ.14ರಷ್ಟು ಜನ ಡೇಟಿಂಗ್ ಆಪ್​ನಲ್ಲಿ ಸಿಕ್ಕವರನ್ನು ಮದುವೆಯಾಗುತ್ತಾರೆಂದು ಮಾಹಿತಿ
    • – ಅಮೆರಿಕದಲ್ಲಿ 2016ರಲ್ಲೇ 11 ಸಾವಿರ ವಂಚನೆ ಕೇಸ್ ವರದಿಯಾಗಿತ್ತು. ಈಗ ಈ ಪ್ರಮಾಣ ದುಪ್ಪಟ್ಟಾಗಿದೆ.

    ಈ ಆ್ಯಪ್​​ಗಳತ್ತ ಒಲವೇಕೆ?

    • – ಕೋವಿಡ್ ಸಂದರ್ಭದಲ್ಲಿ ಒಂಟಿತನ ನೀಗಲು ಆನ್​ಲೈನ್ ಗೆಳೆತನಕ್ಕಾಗಿ ಮೊರೆ
    • – ಸಾಮಾಜಿಕವಾಗಿ ಬೆರೆಯಲು ಆಸಕ್ತಿ ಹೊಂದಿಲ್ಲದವರು ಆನ್​ಲೈನ್ ಸಾಂಗತ್ಯಕ್ಕೆ ಬಯಕೆ
    • – ಮದುವೆಗೂ ಮುನ್ನವೇ ಪರಸ್ಪರ ಅರಿಯಲು ಸಾಧ್ಯ. ಇಷ್ಟವಿಲ್ಲದಿದ್ದರೆ ಅಲ್ಲಿಗೇ ಮುಕ್ತಾಯ
    • – ಯುವಪೀಳಿಗೆಗೆ ಆನ್​ಲೈನ್​ನಲ್ಲಿ ಚಾಟ್ ಮಾಡುವ ಗೀಳು ಬೆಳೆಯುತ್ತಿರುವುದು
    • – ಸಾಂಪ್ರದಾಯಿಕವಾಗಿ ನಿಶ್ಚಯವಾಗುವ ಮದುವೆಗಳ ಬಗ್ಗೆ ಹೆಚ್ಚು ಆಸಕ್ತಿ ಇಲ್ಲದ ಯುವಪೀಳಿಗೆ
    • – ಪಾಶ್ಚಾತ್ಯ ಸಂಸ್ಕೃತಿಗೆ ಮಾರುಹೋಗಿ ಅವರಂತೆ ಮದುವೆಗೂ ಮುನ್ನವೇ ಜತೆಗಿರುವ ಪದ್ಧತಿ

    ಹೇಗೆಲ್ಲ ವಂಚನೆ?

    – ಆಪ್​ನಲ್ಲಿ ಹಣ ಕಟ್ಟಿ ನೋಂದಣಿಯಾದರೆ ಯುವಕ-ಯುವತಿಯ ಜತೆ ಚಾಟಿಂಗ್ ಆರಂಭ

    – ಆಪ್​ಗೆ ಅಪ್​ಲೋಡ್ ಆಗಿರುವ ಶೇ.90 ಗಂಡು ಮಕ್ಕಳ ಪೊ›ಫೈಲ್​ಗಳು ನಕಲಿಯಾಗಿರುತ್ತವೆ

    – ಯಾರದ್ದೋ ಫೋಟೋ ಹಾಕಿ, ಸಭ್ಯಸ್ಥರಂತೆ ನಟಿಸಿ, ಹಣ ಹಾಕಿಸಿಕೊಂಡು ನಂತರ ಮಾಯ

    – ವಿಧವೆಯರು, ವಿಚ್ಛೇದಿತ ಮಹಿಳೆಯರು, ಆರ್ಥಿಕವಾಗಿ ಚೆನ್ನಾಗಿರುವ ಮಹಿಳೆಯರೇ ಟಾರ್ಗೆಟ್

    – ಕೆಲದಿನಗಳ ಮಾತುಕತೆ ನಂತರ ಹಣದ ಅವಶ್ಯಕತೆ ಇರುವರಂತೆ ವರ್ತಿಸಿ ಹಣ ಪಡೆದು ಮೋಸ

    – ಲಿವಿಂಗ್ ಟುಗೆದರ್ ಹೆಸರಲ್ಲಿ ವಾಸವಿದ್ದು ಲೈಂಗಿಕವಾಗಿ ಬಳಸಿಕೊಂಡ ನಂತರ ಕೈಕೊಟ್ಟು ಪರಾರಿ

    – ಮದುವೆಯಾಗಲು ಒತ್ತಾಯಿಸಿದರೆ ಹಲ್ಲೆ ಮಾಡುವ ಅಥವಾ ಕೊಲೆಗೈದ ಪ್ರಕರಣಗಳಿವೆ

    ಮೋಸ ಹೋಗದಿರಲು ಹೀಗೆ ಮಾಡಿ?

    – ಡೇಟಿಂಗ್ ಆಪ್ ಖಾತೆಗೆ ಫೇಸ್​ಬುಕ್, ಇನ್​ಸ್ಟಾಗ್ರಾಂ, ಸೋಷಿಯಲ್ ಮಿಡಿಯಾ ಖಾತೆ ಲಿಂಕ್ ಬೇಡ

    – ಡೇಟಿಂಗ್ ಆಪ್​ನಲ್ಲೇ ಚಾಟ್ ಮಾಡಿ. ವಾಟ್ಸ್ ಆಪ್ ಅಥವಾ ಮೆಸೆಂಜರ್ ಚಾಟ್ ಮಾಡಬೇಡಿ

    – ಒಂದು ವೇಳೆ ಅಸಭ್ಯ ಭಾಷೆ, ಅಶ್ಲೀಲ ಚಿತ್ರಗಳು ಕಂಡುಬಂದರೆ ಆಪ್​ಗಳೇ ನಿಗಾ ವಹಿಸಿರುತ್ತವೆ

    – ಹಣದ ಅವಶ್ಯಕತೆ ಅಥವಾ ಅಶ್ಲೀಲ/ಬೆತ್ತಲೆ ಫೋಟೋ ಕೇಳುವ ಸಂದೇಶಗಳಿಗೆ ಪ್ರತಿಕ್ರಿಯಿಸಬೇಡಿ

    – ಲೀವ್ ಇನ್ ರಿಲೇಷನ್​ಶಿಪ್​ಗೂ ಮುನ್ನ ನೇರ ಭೇಟಿಯಾಗಿ ಆತ/ಆಕೆ ಬಗ್ಗೆ ಖಚಿತತೆ ಪಡೆಯಿರಿ

    ಕೊಲೆಗಳಿಗೆ ಪ್ರೇಮ ಪ್ರಕರಣ ಕಾರಣ: 2021ರ ನ್ಯಾಷನಲ್ ಕ್ರೖೆಂ ರೆಕಾರ್ಡ್ಸ್ ಬ್ಯೂರೋ (ಎನ್​ಸಿಆರ್​ಬಿ) ವರದಿ ಪ್ರಕಾರ 2020ಕ್ಕೆ ಹೋಲಿಸಿದರೆ 2021ರಲ್ಲಿ ಮಹಿಳೆಯರ ವಿರುದ್ಧ ಅಪರಾಧ ಪ್ರಕರಣಗಳಲ್ಲಿ ಶೇ.15.3ರಷ್ಟು ಏರಿಕೆಯಾಗಿದೆ. ಮಹಿಳೆಯರ ಕೊಲೆ ಪ್ರಕರಣಗಳಲ್ಲಿ ಮೂರನೇ ಒಂದು ಭಾಗ ಲವ್ ಅಫೇರ್ ಸಾಮಾನ್ಯ ಕಾರಣವಾಗಿದೆ ಎಂದು ಉಲ್ಲೇಖಿಸಲಾಗಿದೆ.

    ಸೋಷಿಯಲ್ ಮೀಡಿಯಾ, ಡೇಟಿಂಗ್ ಆಪ್, ಲಿವ್ ಇನ್ ರಿಲೇಷನ್​ಶಿಪ್​ನಿಂದಾಗಿ ಹೆಣ್ಣು ಮಕ್ಕಳು ತೊಂದರೆಗೆ ಸಿಲುಕುತ್ತಿದ್ದಾರೆ. ಮೊದಲು ಓದಿ ಕೆಲಸಕ್ಕೆ ಸೇರಿ ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸುವುದೇ ಹೆಣ್ಣಿನ ಮೊದಲ ಜೀವನ ಸಂಗಾತಿ. ಈ ಬಗ್ಗೆ ಶಾಲಾ-ಕಾಲೇಜುಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಇದಕ್ಕಾಗಿ ಜಿಲ್ಲಾ ಸಮಿತಿಗಳನ್ನು ರಚಿಸಲಾಗಿದೆ. ಪೊಲೀಸ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯೂ ಸಾಥ್ ನೀಡುತ್ತಿದೆ.

    | ಮಂಜುಳಾ ನಾಯ್ಡು ಮಹಿಳಾ ಆಯೋಗದ ಅಧ್ಯಕ್ಷೆ

    ಆ್ಯಪ್​ ವಂಚನೆ ಕೇಸ್​ಗಳು

    ಡೇಟಿಂಗ್ ಯುವತಿಗೆ 6 ಕೋಟಿ ಕೊಟ್ಟು ಕೆಟ್ಟ!: ಡೇಟಿಂಗ್ ಆಪ್​ನಲ್ಲಿ ಪರಿಚಯವಾದ ಯುವತಿಗೆ ಬೆಂಗಳೂರಿನ ಪ್ರತಿಷ್ಠಿತ ಬ್ಯಾಂಕ್​ನ ವ್ಯವಸ್ಥಾಪಕ ಎಸ್. ಹರಿಶಂಕರ್ ಎಂಬಾತ ಕೇವಲ 6 ದಿನದಲ್ಲಿ 5.70 ಕೋಟಿ ರೂ. ವರ್ಗಾವಣೆ ಮಾಡಿದ್ದಾನೆ. ಠೇವಣಿದಾರರ ಹೆಸರಿನಲ್ಲಿ ಸಾಲ ಪಡೆದು ಯುವತಿಗೆ ಕೊಟ್ಟಿದ್ದ. ಯುವತಿಯ ಮೋಸದ ಮಾತುಗಳಿಗೆ ಮರುಳಾಗಿ, ಆಕೆ ಹೇಳಿದ ಬ್ಯಾಂಕ್ ಖಾತೆಗಳಿಗೆ ಗ್ರಾಹಕರ ಹೆಸರಿನಲ್ಲಿ ಸಾಲದ ದಾಖಲೆ ಸೃಷ್ಟಿಸಿ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿಕೊಂಡು ನಂತರ ಡೇಟಿಂಗ್ ಯುವತಿಗೆ ವರ್ಗಾವಣೆ ಮಾಡಿದ್ದ. ಈಗ ಹನುಮಂತನಗರ ಪೊಲೀಸರ ಅತಿಥಿಯಾಗಿದ್ದಾನೆ.

    ಬಿಟ್ಟುಹೋದ ಪ್ರಿಯಕರನ ಕಿಡ್ನ್ಯಾಪ್: ಡೇಟಿಂಗ್ ಆಪ್​ನಲ್ಲಿ ಪರಿಚಯವಾದ ಸ್ನೇಹಿತನನ್ನೇ ಅಪಹರಿಸಿದ್ದ ಆರೋಪದಲ್ಲಿ ಮಹಿಳೆ ಸೇರಿ 8 ಮಂದಿಯನ್ನು ಹನುಮಂತನಗರ ಪೊಲೀಸರು ಇತ್ತೀಚೆಗೆ ಬಂಧಿಸಿದ್ದಾರೆ. ಪತಿಯಿಂದ ದೂರವಿದ್ದ ಕ್ಲಾರಾ ಎಂಬಾಕೆಗೆ ಡೇಟಿಂಗ್ ಆಪ್​ನಲ್ಲಿ ವ್ಯಕ್ತಿಯೊಬ್ಬ ಪರಿಚಯವಾಗಿದ್ದ. ಕೆಲ ದಿನ ಒಂದೇ ಮನೆಯಲ್ಲಿ ಸಹಜೀವನ ನಡೆಸಿದ್ದರು. ಕೊನೆಗೆ ಮನಸ್ತಾಪವಾಗಿ ಬೇರೆ ಆಗಿದ್ದರು. ಆದರೆ, ತನಗೆ ಮೋಸ ಮಾಡಿದ್ದಾನೆಂದು ಸ್ನೇಹಿತರ ಜತೆ ಸೇರಿ ಆತನನ್ನು ಕ್ಲಾರಾ ಅಪಹರಣ ಮಾಡಿದ್ದಳು.

    ಮದುವೆ ಹೆಸರಲ್ಲಿ 34 ಲಕ್ಷ ಕಿತ್ತ!: ಡೇಟಿಂಗ್ ಆಪ್​ನಲ್ಲಿ ಪರಿಚಯವಾಗಿ ಶಿಕ್ಷಕಿಯನ್ನು ಮದುವೆಯಾಗುವುದಾಗಿ ನಂಬಿಸಿದ ಜೋ ಅಬ್ರಹಾಂ ಮ್ಯಾಥ್ಯೂ ಎಂಬಾತ ಹಂತಹಂತವಾಗಿ 34 ಲಕ್ಷ ರೂ. ಕಿತ್ತಿದ್ದ. ಶಿಕ್ಷಕಿ ಕೊಟ್ಟ ದೂರಿನ ಮೇಲೆ ವಿವೇಕನಗರ ಪೊಲೀಸರು ಆತನನ್ನು ಬಂಧಿಸಿದ್ದರು. ಕೇರಳ ಮೂಲದ ಅಬ್ರಹಾಂ ಅಲ್ಲಿಯೂ ಅನೇಕರಿಗೆ ಮದುವೆಯಾಗುವುದಾಗಿ ನಂಬಿಸಿ ಲಕ್ಷಾಂತರ ರೂ. ವಂಚಿಸಿರುವುದು ಬೆಳಕಿಗೆ ಬಂದಿದೆ.

    ನಿನ್ನೆ ಸಂಭ್ರಮದಲ್ಲಿದ್ದ ಯುವತಿ ಇಂದಿಲ್ಲ; ಸಂಬಂಧಿಕರ ಸಮಾರಂಭದಲ್ಲಿ ಕುಸಿದು ಬಿದ್ದು ಸಾವು..

    ಗಂಡನ ಕಿರುಕುಳ: ದೇಶದಲ್ಲಿ ಕರ್ನಾಟಕವೇ ಪ್ರಥಮ; ಮದ್ಯವ್ಯಸನಿಗಳಿಂದಲೇ ಜಾಸ್ತಿ ಉಪಟಳ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts