More

    ಆಂಧ್ರ ಸಿಎಂ ಪರಿಹಾರ ನಿಧಿಯಿಂದ 117 ಕೋಟಿ ರೂ.ವಂಚನೆ ಯತ್ನ, ಆರೋಪಿಗಳು ದ.ಕ.ಜಿಲ್ಲೆಯವರು

    ಮಂಗಳೂರು: ಆಂಧ್ರಪ್ರದೇಶ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 117 ಕೋಟಿ ರೂ. ವಂಚಿಸಲು ಯೋಜನೆ ರೂಪಿಸಿದ ಆರೋಪದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಂಧಿತರಾದ 6 ಮಂದಿಯನ್ನು ಆಂಧ್ರಪ್ರದೇಶ ಎಸಿಬಿ ತಂಡ ಮಂಗಳೂರಿನ ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ಪಡೆದು ಕರೆದೊಯ್ದಿದೆ.

    ಮೂಡುಬಿದಿರೆ ನಿವಾಸಿ ಯೋಗೀಶ್ ಆಚಾರ್ಯ(40), ಉದಯ ಶೆಟ್ಟಿ ಕಾಂತಾವರ(35), ಮಂಗಳೂರಿನ ಬ್ರಿಜೇಶ್ ರೈ(35), ಬೆಳ್ತಂಗಡಿಯ ಗಂಗಾಧರ ಸುವರ್ಣ(45), ಬೆಂಗಳೂರಿನ ಕಬೀರ್ ಸೇರಿದಂತೆ ಒಟ್ಟು 6 ಮಂದಿಯನ್ನು ಈಗಾಗಲೇ ಬಂಧಿಸಿದ್ದಾರೆ. ಇನ್ನೊಬ್ಬ ಆರೋಪಿ ಅಕ್ಷಯ್ ಆಳ್ವ ತಲೆ ಮರೆಸಿಕೊಂಡಿದ್ದಾನೆ.

    ಪ್ರಕರಣದ ವಿವರ: ಆಂಧ್ರ ಮುಖ್ಯಮಂತ್ರಿ ಪರಿಹಾರ ನಿಧಿ ವಂಚನೆ ಬಗ್ಗೆ ಆಂಧ್ರಪ್ರದೇಶ ಕಂದಾಯ ಇಲಾಖೆ ಸಹಾಯಕ ಕಾರ್ಯದರ್ಶಿ ಪಿ.ಮುರಳಿಕೃಷ್ಣ ರಾವ್ ನೀಡಿದ ದೂರಿನ ಆಧಾರದ ಮೇಲೆ ಸೆ.21ರಂದು ತುಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತುಲ್ಲೂರ್ ಹಿರಿಯ ಪೊಲೀಸ್ ಅಧಿಕಾರಿ ಶ್ರೀನಿವಾಸ್ ರೆಡ್ಡಿ ತನಿಖೆ ನಡೆಸಿದ್ದರು. ಆ ಬಳಿಕ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಆಂಧ್ರ ಸಿಎಂ ವೈ.ಎಸ್.ಜಗನ್‌ಮೋಹನ್ ರೆಡ್ಡಿ ಸಮಗ್ರ ತನಿಖೆ ನಡೆಸುವಂತೆ ನಗರ ಭ್ರಷ್ಟಾಚಾರ ಪತ್ತೆದಳ(ಎಸಿಬಿ)ಗೆ ವಹಿಸಿದ್ದರು. ತನಿಖೆ ಆರಂಭಿಸಿದ ಪೊಲೀಸರಿಗೆ ಬೇನಾಮಿ ದಾಖಲೆ ಹಾಗೂ ಚೆಕ್‌ಗಳನ್ನು ಬಳಸಿಕೊಂಡು ನವದೆಹಲಿ, ಕರ್ನಾಟಕ, ಕೋಲ್ಕತಾದಲ್ಲಿ ಜಾಲ ಕಾರ್ಯಾಚರಿಸುವ ಮಾಹಿತಿ ಲಭಿಸಿತು. ಈ ನಿಟ್ಟಿನಲ್ಲಿ ತನಿಖೆ ಮುಂದುವರಿಸಿತ್ತು.

    ಮೂಡುಬಿದಿರೆಯ ಎಸ್‌ಬಿಐ ಬ್ಯಾಂಕ್‌ನಲ್ಲಿರುವ ಖಾತೆಗೆ ಯೋಗೀಶ್ ಆಚಾರ್ಯ 52 ಕೋಟಿ ರೂ.ಚೆಕ್ ಹಾಕಿದ್ದು, ನಗದು ವರ್ಗಾವಣೆ ಮಾಡುವ ವೇಳೆಗೆ ಈ ಚೆಕ್ಕನ್ನು ತಡೆಹಿಡಿಯುವಂತೆ ಆಂಧ್ರ ಎಸಿಬಿಯಿಂದ ಬ್ಯಾಂಕ್‌ಗೆ ಮಾಹಿತಿ ಬಂದಿತ್ತು. ಕೂಡಲೇ ಆಂಧ್ರ ಎಸಿಬಿ ಮತ್ತು ವಿಶೇಷ ತನಿಖಾ ತಂಡ ಮೂಡುಬಿದಿರೆಗೆ ಆಗಮಿಸಿ ಯೋಗೀಶ್ ಆಚಾರ್ಯನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದೆ. ಯೋಗೀಶ್ ಆಚಾರ್ಯ ನೀಡಿದ ಮಾಹಿತಿ ಮೇರೆಗೆ ಇತರ ಆರೋಪಿಗಳನ್ನು ಬಂಧಿಸಲಾಗಿದೆ.

    ಆರೋಪಿಗಳು ಮಿಜೋರಾಂ, ಉತ್ತರ ಪ್ರದೇಶ ಬಿಹಾರ ಸರ್ಕಾರದ ಸಿಎಂ ಪರಿಹಾರ ನಿಧಿ, ಲೋಕೋಪಯೋಗಿ ಇಲಾಖೆಯ ಖಜಾನೆಗೂ ಕನ್ನ ಹಾಕಲು ಸ್ಕೆಚ್ ರೂಪಿಸಿರುವುದು ತನಿಖೆ ವೇಳೆ ತಿಳಿದು ಬಂದಿದೆ. ಬಂಧನವಾದ ಆರೋಪಿಗಳು ಈ ಹಿಂದೆಯೂ ಕೃತ್ಯದಲ್ಲಿ ಭಾಗಿಯಾಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದೆ.

    ಸ್ಥಳೀಯ ಪೊಲೀಸರಿಗೆ ಮಾಹಿತಿ ಇಲ್ಲ: ಆಂಧ್ರಪ್ರದೇಶ ಸಿಎಂ ಪರಿಹಾರ ನಿಧಿಗೆ ವಂಚನೆ ಮಾಡಿದ ಆರೋಪದಲ್ಲಿ ಆಂಧ್ರ ಎಸಿಬಿ ತಂಡ ವಾರದ ಹಿಂದೆ ಮೂಡುಬಿದಿರೆಗೆ ಬಂದು ಕೆಲವರನ್ನು ಬಂಧಿಸಿ ಕರೆದೊಯ್ದಿದೆ ಎಂಬ ಮಾಹಿತಿಯಷ್ಟೇ ನಮ್ಮಲ್ಲಿದೆ ಎಂದು ಪಣಂಬೂರು ಎಸಿಪಿ ಕೆ.ಯು.ಬೆಳ್ಳಿಯಪ್ಪ ವಿಜಯವಾಣಿಗೆ ತಿಳಿಸಿದ್ದಾರೆ. ಈ ಸಂಬಂಧ ಜಿಲ್ಲೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ. ಹಾಗಾಗಿ ಆರೋಪಿಗಳ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ ಎಂದು ಅವರು ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts