

ಮುಂಬೈ: ಎರಡು ಲಾರಿಗಳ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಮೃತಪಟ್ಟು, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿರುವ ಬೆಂಗಳೂರು-ಮುಂಬೈ ಹೆದ್ದಾರಿಯ ನಾವಲೆ ಸೇತುವೆ ಬಳಿ ನಡೆದಿದೆ.
ಡಿಕ್ಇ ಹೊಡೆದ ರಭಸಕ್ಕೆ ಎರಡು ಲಾರಿಗಳಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಮೂರು ಜನರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಓರ್ವ ಗಾಯಾಳು ಮೃತಪಟ್ಟಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಸಿನ್ಹಗಢ್ ರಸ್ತೆಯ ಪೊಲೀಸ್ ಠಾಣಾಧಿಕಾರಿ ಅಭಯ್ ಮಹಾಜನ್, ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ತಡರಾತ್ರಿ ಲಾರಿ ಹಾಗೂ ಕಂಟೈನರ್ ನಡುವೆ ಅಪಘಾತ ಸಂಭವಿಸಿದೆ. ಕಂಟೈನರ್ ಟ್ರಕ್ನ ಬ್ರೇಕ್ ವೈಫಲ್ಯಗೊಂಡ ಪರಿಣಾಮ ದುರ್ಘಟನೆ ಸಂಭವಿಸಿದೆ. ಅಪಘಾತದಲ್ಲಿ ಎರಡು ಲಾರಿಗಳಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ಸಂಪೂರ್ಣವಾಗಿ ಹೊತ್ತಿ ಉರಿದಿದೆ.
ವಿಚಾರ ತಿಳಿದು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ದೌಡಾಯಿಸಿದ್ದು, ಮೃತದೇಹಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಎರಡು ಟ್ರಕ್ನಲ್ಲಿದ್ದ ಆರು ಮಂದಿ ಪೈಕಿ ನಾಲ್ವರು ಮತಪಟ್ಟಿದ್ದು, ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಪಘಾತಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ ಮುಂದಿನ ದಿನಗಳಲ್ಲಿ ಮತ್ತಷ್ಟು ಮಾಹಿತಿ ನೀಡಲಾಗುವುದು ಎಂದು ಸಿನ್ಹಗಢ್ ರಸ್ತೆಯ ಪೊಲೀಸ್ ಠಾಣಾಧಿಕಾರಿ ಅಭಯ್ ಮಹಾಜನ್ ತಿಳಿಸಿದ್ದಾರೆ.