More

    ಯೋಧರು-ಪೊಲೀಸರ ಫೋಟೋ ಕದ್ದು ವಂಚಿಸುತ್ತಿದ್ದ ಸೈಬರ್ ಕಳ್ಳರನ್ನು ಬೆಂಗಳೂರಿಗೆ ಕರೆತಂದ ಸಿಸಿಬಿ..

    ಬೆಂಗಳೂರು: ಇವರು ಅಂತಿಂಥ ಖದೀಮರಲ್ಲ.. ಏಕೆಂದರೆ ಇವರು ವಂಚನೆಗೆ ಪೊಲೀಸ್ ಹಾಗೂ ಮಿಲಿಟರಿ ಅಧಿಕಾರಿಗಳ ಫೋಟೋಗಳನ್ನೇ ಬಳಸಿಕೊಳ್ಳುತ್ತಿದ್ದರು..!

    ಪೊಲೀಸರು, ಸೇನಾಧಿಕಾರಿಗಳು ಸಮವಸ್ತ್ರ ಧರಿಸಿ ತೆಗೆಸಿರುವ ಫೋಟೋಗಳನ್ನು ಫೇಸ್‌ಬುಕ್-ಟ್ವಿಟರ್ ಇನ್ನಿತರ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ್ದರೆ ಅಂಥ ಭಾವಚಿತ್ರಗಳನ್ನು ಆರೋಪಿಗಳು ಡೌನ್‌ಲೋಡ್ ಮಾಡಿಕೊಳ್ಳುತ್ತಿದ್ದರು. ನಕಲಿ ದಾಖಲೆ ಕೊಟ್ಟು ಖರೀದಿಸಿರುವ ಸಿಮ್ ಕಾರ್ಡ್‌ನಲ್ಲಿ ವಾಟ್ಸ್‌ಆ್ಯಪ್ ತೆರೆದು ಡಿಪಿಗೆ ಅಧಿಕಾರಿಗಳ ಆ ಫೋಟೋಗಳನ್ನು ಅಪ್‌ಲೋಡ್ ಮಾಡುತ್ತಿದ್ದರು.
    ಓಎಲ್‌ಎಕ್ಸ್ ಮತ್ತು ಕ್ವಿಕರ್‌ನಲ್ಲಿ ಮೊಬೈಲ್​ಫೋನ್​, ಬೈಕ್, ಇನ್ನಿತರ ಹಳೇ ವಸ್ತುಗಳ ಮಾರಾಟ ಅಥವಾ ಖರೀದಿ ನೆಪದಲ್ಲಿ ಗ್ರಾಹಕರಿಗೆ ಬಲೆಬೀಸುತ್ತಿದ್ದರು. ವಾಟ್ಸ್‌ಆ್ಯಪ್ ಅಥವಾ ಫೇಸ್‌ಬುಕ್‌ನಲ್ಲಿ ಪೊಲೀಸ್ ಅಥವಾ ಮಿಲಿಟರಿ ಸಮವಸ್ತ್ರದಲ್ಲಿರುವ ಫೋಟೋ ನೋಡಿ ಸರ್ಕಾರಿ ಅಧಿಕಾರಿ ಎಂದು ಜನ ನಂಬುತ್ತಿದ್ದರು. ವಂಚಕರ ಗಾಳಕ್ಕೆ ಸಿಲುಕಿರುವ ಅಮಾಯಕರಿಗೆ ಮೊದಲು ನಿಮ್ಮ ಕಡೆಯಿಂದ 1 ರೂ. ವರ್ಗಾವಣೆ ಮಾಡಿ ನಂತರ ನಿಮ್ಮ ಖಾತೆಗೆ ಹಣ ಕಳುಹಿಸುವುದಾಗಿ ವ್ಯಾಲೆಟ್‌ಗೆ ಮೊಬೈಲ್ ಫೋನ್​ ಲಿಂಕ್ ಆಗಿರುವ ಮಾಹಿತಿ ತಿಳಿದುಕೊಳ್ಳುತ್ತಿದ್ದರು. ಬಳಿಕ ವ್ಯಾಟ್ಸ್‌ಆ್ಯಪ್‌ಗೆ ಕ್ಯೂಆರ್ ಕೋಡ್ ಕಳುಹಿಸಿ ಸ್ಕ್ಯಾನ್​ ಮಾಡಿಸಿ ಜನರ ಬ್ಯಾಂಕ್ ಖಾತೆ ಅಥವಾ ವ್ಯಾಲೆಟ್ ಖಾತೆಗೆ ಕನ್ನ ಹಾಕುತ್ತಿದ್ದರು.

    ಇದೇ ರೀತಿ ದೇಶವ್ಯಾಪಿ ವಂಚನೆ ಮಾಡುತ್ತಿದ್ದ ಖದೀಮರ ತಂಡವನ್ನು ಇತ್ತೀಚೆಗೆ ಹೈದರಾಬಾದ್ ಪೊಲೀಸರು ಬಂಧಿಸಿ ಚಂಚಲಗೂಡ ಕೇಂದ್ರ ಕಾರಾಗೃಹದಲ್ಲಿ ಇರಿಸಿದ್ದರು. ರಾಜಸ್ಥಾನದ ಭರತ್‌ಪುರ ಜಿಲ್ಲೆಯ ವಾಜೀಬ್ ಖಾನ್(30), ಸಾಹಿಲ್ (20), ಶಾಹೀದ್(28), ಉಮೇರ್ ಖಾನ್ (31) ಬಂಧಿತರು. ಇವರನ್ನು ಹೈದರಾಬಾದ್ ಪೊಲೀಸರು ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ವಿಚಾರಣೆ ಸಲುವಾಗಿ ಸ್ಥಳೀಯ ಕೋರ್ಟ್ ಅನುಮತಿ ಪಡೆದು ಕಸ್ಟಡಿಗೆ ಪಡೆದು ಕರೆತಂದಿರುವುದಾಗಿ ಜಂಟಿ ಪೊಲೀಸ್ ಆಯುಕ್ತ(ಸಿಸಿಬಿ)ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

    ಇದೇ ಮಾದರಿಯಲ್ಲಿ ಬೆಂಗಳೂರಿನಲ್ಲಿ ಸೈಬರ್ ವಂಚನೆ ಪ್ರಕರಣಗಳು ದಾಖಲಾಗಿದ್ದರಿಂದ ಸಿಸಿಬಿ ಪೊಲೀಸರು, ಹೈದರಾಬಾದ್‌ಗೆ ತೆರಳಿ ಕೋರ್ಟ್ ಅನುಮತಿ ಪಡೆದು ಆರೋಪಿಗಳನ್ನು ಬೆಂಗಳೂರಿಗೆ ಕರೆತಂದು ವಿಚಾರಣೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.

    40 ಪ್ರಕರಣಗಳು ಬೆಳಕಿಗೆ: ಸಿಲಿಕಾನ್ ಸಿಟಿಯಲ್ಲಿ ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದ 40 ಪ್ರಕರಣಗಳು ಬೆಳಕಿಗೆ ಬಂದಿವೆ. ಓಎಲ್‌ಎಕ್ಸ್, ಕ್ವಿಕ್ಕರ್ ಮತ್ತು ಇನ್ನಿತರ ವೆಬ್ ಸೈಟ್‌ಗಳಲ್ಲಿ ಬೈಕ್, ಕಾರು, ಮೊಬೈಲ್​ ಫೋನ್​, ಪೀಠೋಪಕರಣಗಳು, ಎಲೆಕ್ಟ್ರಾನಿಕ್ ಪರಿಕರಗಳು ಮಾರಾಟ ಮಾಡುವುದಾಗಿ/ಕೊಂಡುಕೊಳ್ಳುವುದಾಗಿ ನಂಬಿಸಿ ಮೋಸ ಮಾಡಿರುವುದು ಆರೋಪಿಗಳ ವಿಚಾರಣೆ ವೇಳೆ ಗೊತ್ತಾಗಿದೆ ಎಂದು ಸಿಸಿಬಿ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts