More

    ಜೀವನದಲ್ಲಿ ಯಶಸ್ವಿಯಾಗಲು ನಾಲ್ಕು ಸರಳ ಸೂತ್ರಗಳು

    ಜೀವನದಲ್ಲಿ ಯಶಸ್ವಿಯಾಗಲು ನಾಲ್ಕು ಸರಳ ಸೂತ್ರಗಳುಸ್ಪರ್ಧಾತ್ಮಕ ಜಗತ್ತಿನಲ್ಲಿ ಪ್ರತಿಯೊಬ್ಬ ಯುವಕರು ಸಹ ಮುಂದಕ್ಕೆ ಹೋಗಬೇಕು ಎಂಬ ಮನೋಭಾವ ಹೊಂದಿರುತ್ತಾರೆ. ಇದರಿಂದ ಸಹಜವಾಗಿಯೇ ಒತ್ತಡಕ್ಕೆ ಒಳಗಾಗುತ್ತಾರೆ. ಜೀವನದಲ್ಲಿ ಕನಸು ಇರಬೇಕು. ಹಾಗೆಯೇ ಅದನ್ನು ನನಸಾಗಿಸಲು ಹಲವಾರು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಅದಕ್ಕೆ ಆತ್ಮವಿಶ್ವಾಸ ಬಹಳ ಮುಖ್ಯ. ಆತ್ಮವಿಶ್ವಾಸದ ಕೊರತೆ ಇದ್ದರೆ ಯಶಸ್ಸು ಕಷ್ಟ. ಎಲ್ಲರಿಗೂ ಇರುವುದು ಒಂದೇ ಮಿದುಳು. ಆದರೆ ಅದನ್ನು ಉಪಯೋಗಿಸಿಕೊಳ್ಳುವುದು ಅವರವರ ಮೇಲೆ ಅವಲಂಬಿತವಾಗಿರುತ್ತದೆ. ಬದ್ಧತೆ ಅಥವಾ ಸಮರ್ಪಣೆ (Commitment), ಸಹಾನುಭೂತಿ (Compassion), ನಿರಂತರತೆ (Consistency) ಮತ್ತು ಸಂವಹನ (Communication)- ಈ ನಾಲ್ಕು ಕೌಶಲವನ್ನು ಸರಿಯಾಗಿ ಬಳಕೆ ಮಾಡಿಕೊಂಡರೆ, ಅಂದುಕೊಂಡ ಗುರಿ ತಲುಪಬಹುದು.

    ಸೋಲಿಗೆ ಹೆದರಬೇಡಿ: ಜೀವನದಲ್ಲಿ ಏರಿಳಿತ ಸಹಜ. ಉದಾಹರಣೆಗೆ, ಇಸಿಜಿ ತೆಗೆದಾಗ ಅಪ್ಸ್ ಅಂಡ್ ಡೌನ್ಸ್ ಇದ್ದರೆ, ವ್ಯಕ್ತಿ ಜೀವಂತವಾಗಿದ್ದಾನೆ ಎಂದರ್ಥ. ಅದು ನೇರವಾಗಿದ್ದರೆ, ಜೀವ ಇಲ್ಲ ಎಂದರ್ಥ. ಹಾಗಾಗಿ ಬದುಕಿನಲ್ಲೂ ಅಪ್ಸ್ ಆಂಡ್ ಡೌನ್ಸ್ ಇದ್ದರೆ ಗುರಿಸಾಧನೆ ಸಾಧ್ಯ. ಜೀವನದಲ್ಲಿ ಸೋಲಿಗೆ ಯಾವತ್ತೂ ಹೆದರಬಾದರು. Failure is the best attempt in learning ಅಂತ ಅಂದುಕೊಂಡು, ಒಂದೊಂದೇ ಮೆಟ್ಟಿಲುಗಳನ್ನು ಹತ್ತಿ ಸಾಧನೆ ಮಾಡಬೇಕು. ಯಶಸ್ಸು ಎನ್ನುವುದು ಒಂದೇ ಬಾರಿ ಸಿಗಬಾರದು. ಹಂತಹಂತವಾಗಿ ಸಿಗಬೇಕು. ಐದು ವರ್ಷಗಳಲ್ಲಿ ಮಾಡಬೇಕಾಗಿದ್ದನ್ನು, ಐದೇ ತಿಂಗಳುಗಳಲ್ಲಿ ಸಾಧಿಸಬೇಕು ಎಂಬ ಆತುರ ಇಂದಿನ ಯುವಜನಾಂಗಕ್ಕಿದೆ. ಅದು ಸಾಧ್ಯವಾಗದಿದ್ದಾಗ ಸೋಲಿನ ನಿರಾಶೆ ಅನುಭವಿಸುತ್ತಾರೆ. ಹಾಗಾಗಿ ಹಂತಹಂತವಾಗಿ ಮುಂದೆ ಸಾಗಬೇಕು. ಅಂತಹ ಸಾಧನೆ ಶಾಶ್ವತವಾಗಿ ಉಳಿಯುತ್ತದೆ.

    ಕಷ್ಟಗಳು ಬರುವುದು ಪ್ರತಿಭೆ ಪರೀಕ್ಷಿಸಲು: ನಮ್ಮ ಸಾಧನೆಯ ತಳಪಾಯ ಭದ್ರವಾಗಿರಬೇಕು. ಕಠಿಣ ಶ್ರಮ, ಆತ್ಮವಿಶ್ವಾಸ ಮತ್ತು ಅಚಲ ನಂಬಿಕೆ ಇದ್ದರೆ ಎಂಥ ಕಷ್ಟಗಳಲ್ಲೂ ಸಾಧನೆ ಮಾಡಬಹುದು. ಜೀವನದಲ್ಲಿ ಬರುವ ಕಷ್ಟಕ್ಕೆ ಎಂದೂ ಹೆದರಬಾರದು. ಅವೆಲ್ಲ ನಮ್ಮ ಪ್ರತಿಭೆಯನ್ನು ಪರೀಕ್ಷಿಸಲು ಬರುತ್ತದೆ ಎಂದುಕೊಳ್ಳಬೇಕು. Success is always not final ಮತ್ತು failure is also not final. ಸಾಮಾನ್ಯವಾಗಿ ಯಾವುದೇ ಸಾಧಕರು ಬೇರೆಬೇರೆ ಕ್ಷೇತ್ರಗಳ ಸಾಧಕರನ್ನು ತಮ್ಮ ಆದರ್ಶವನ್ನಾಗಿ ಸ್ವೀಕರಿಸುತ್ತಾರೆ. ಅದು ಅಷ್ಟಕ್ಕೇ ಸೀಮಿತವಾಗಬಾರದು. ಅವರಿಂದ ಸ್ಪೂರ್ತಿಗೊಂಡು ಕಲಿಯುವುದಷ್ಟೇ ಅಲ್ಲ, ನಾವು ಇನ್ನೊಬ್ಬರಿಗೆ ಸ್ಪೂರ್ತಿಯಾಗಬೇಕು. ಇದಕ್ಕಾಗಿ ಸಕಾರಾತ್ಮಕ ಯೋಚನೆ ಹೊಂದುವುದು ಬಹಳ ಮುಖ್ಯ. ಆಗಷ್ಟೇ, ಸಮಸ್ಯೆಗಳನ್ನು ಎದುರಿಸಲು ಸಾಧ್ಯ. ಹಾಗಂತ, ಯಾವುದೇ ಗುರಿಸಾಧನೆಗೆ ಅಡ್ಡದಾರಿ ಹಿಡಿಯುವುದು ಸರಿಯಲ್ಲ. ಗುರಿ ಎಷ್ಟೇ ದೀರ್ಘವಾಗಿರಲಿ, ಆ ದಾರಿಯಲ್ಲಿ ಅದೆಷ್ಟೇ ಕಷ್ಟನಷ್ಟಗಳು ಎದುರಾಗಲಿ, ಸನ್ಮಾರ್ಗದಲ್ಲಿ ನಡೆದು ನಿಗದಿತ ಗುರಿ ತಲುಪಬೇಕು. ಆಗ ಸಾಧನೆಗೊಂದು ಬೆಲೆ ಸಿಕ್ಕಂತಾಗುತ್ತದೆ. ಈ ಹಾದಿಯಲ್ಲಿ ಎಂದೂ ಇನ್ನೊಬ್ಬರ ಜತೆಗೆ ಹೋಲಿಕೆ ಮಾಡಿಕೊಳ್ಳಬಾರದು. ತಮ್ಮದೇ ಹಾದಿಯನ್ನು ಮುಂದಿಟ್ಟುಕೊಂಡು ಗುರಿ ಸಾಧಿಸಬೇಕು.

    ವ್ಯಕ್ತಿತ್ವ ರೂಪಿಸುವ ಸಾಧನ: ನಾವು ಶಾಲಾ-ಕಾಲೇಜುಗಳಲ್ಲಿ ಏನು ಕಲಿಯುತ್ತೇವೆಯೋ, ಅದೇ ಎಲ್ಲ ಎಂದು ನಂಬಿರುತ್ತೇವೆ. ನಿಜ ಹೇಳಬೇಕೆಂದರೆ, ಪಠ್ಯಕ್ರಮದಲ್ಲಿ ಏನು ಕಲಿಯುತ್ತೇವೆಯೋ, ಅದು ಅರ್ಧ ಭಾಗ ಮಾತ್ರ. ಉಳಿದರ್ಧ ಭಾಗವನ್ನು ನಮ್ಮ ಜೀವನದ ಪಯಣ ನಮಗೆ ಕಲಿಸಿಕೊಡುತ್ತದೆ. ವಿಶ್ವವಿದ್ಯಾಲಯಗಳಲ್ಲಿ ಕಲಿಸದಿರುವ ಬಹಳಷ್ಟು ಪಾಠಗಳನ್ನು ಜೀವನ ನಮಗೆ ಕಲಿಸುತ್ತಾ ಹೋಗುತ್ತದೆ. ಹಾಗಾಗಿ, ವ್ಯಕ್ತಿಯ ಸಾಧನೆಗೆ ಅಂಕಗಳಷ್ಟೇ ಮಾನದಂಡವಲ್ಲ. ಪದವಿಗಾಗಿ ಪಡೆದ ಅಂಕಗಳಷ್ಟೇ ನಮ್ಮ ಜೀವನದಲ್ಲಿನ ಯಶಸ್ಸಿಗೆ ಮಾನದಂಡವಾಗಿ ಉಳಿಯುವುದಿಲ್ಲ. ಕೆಲವರು ಶಾಲಾ-ಕಾಲೇಜುಗಳಲ್ಲಿ ಕಡಿಮೆ ಅಂಕಗಳಿಸಿದರೂ ಜೀವನದಲ್ಲಿ ಉತ್ತಮ ಸಾಧನೆ ಮಾಡುತ್ತಾರೆ. ಅದಕ್ಕೆ ಅವರ ಶ್ರದ್ಧೆ ಕಾರಣವಾಗಿರುತ್ತದೆ. ಪದವಿ, ಪಾರಿತೋಷಕ ಪಡೆದವರೆಲ್ಲ ಜ್ಞಾನವಂತರೆನ್ನುವುದು ಸತ್ಯವಲ್ಲ. ವಿದ್ಯೆ ಜತೆಗೆ ಸಂಸ್ಕಾರ ಹೊಂದಿದ್ದು ಉತ್ತಮ ಹಾದಿಯಲ್ಲಿ ಗುರಿ ಸಾಧಿಸುವವನು ನಿಜವಾದ ಸಾಧಕನಾಗುತ್ತಾನೆ. ಪ್ರತಿ ಯುವಕನೂ ಇಂತಹ ಮೌಲ್ಯಗಳನ್ನು ಅಳವಡಿಸಿಕೊಂಡು ಮುಂದೆ ಸಾಗಬೇಕು. ಯಾವಾಗಲೂ ದುಡಿದು ಮೇಲೆ ಬರಬೇಕು, ಮತ್ತೊಬ್ಬರನ್ನು ತುಳಿದಲ್ಲ ಎಂಬುದು ನಮಗೆ ಸ್ಪಷ್ಟವಾಗಿ ಗೊತ್ತಿರಬೇಕು. ಸಾಧನೆ ಇಲ್ಲದೆ ಸತ್ತರೆ ಸಾವಿಗೆ ಅವಮಾನ, ಆದರ್ಶ ಇಲ್ಲದೆ ಬದುಕಿದರೆ ಬದುಕಿಗೆ ಅವಮಾನ.

    ಪೆನ್-ಪೇಪರ್​ನಿಂದ ದೂರವಾಗಬೇಡಿ: ಯುವಜನರು ಓದುವ ಹವ್ಯಾಸವನ್ನು ಸಹ ಬೆಳೆಸಿಕೊಳ್ಳಬೇಕು. ಆದರೆ, ಹಲವರು ಅಂತರ್ಜಾಲಕ್ಕೆ ಮಾರುಹೋಗಿ ತಮ್ಮ ಯೋಚನಾಲಹರಿಯನ್ನೇ ಕ್ಷೀಣಿಸಿಕೊಳ್ಳುತ್ತಿದ್ದಾರೆ. ಅಂತರ್ಜಾಲದಲ್ಲೂ ಹಲವು ಒಳ್ಳೆಯ ಅಂಶಗಳಿದ್ದು, ಅದನ್ನು ಮಾತ್ರ ತೆಗೆದುಕೊಂಡು ಉತ್ತಮ ಜೀವನ ರೂಪಿಸಿಕೊಳ್ಳಬೇಕು. ಇದರಲ್ಲಿ ಕೊರತೆ ಕಾಣುತ್ತಿರುವುದಕ್ಕೆ ಒಂದು ಪ್ರಮುಖ ಅಂಶ ಎಂದರೆ, ಪೆನ್ ಮತ್ತು ಪೇಪರ್​ನ ಬಳಕೆ ಬಹಳ ಕಡಿಮೆಯಾಗುತ್ತಿರುವುದು. ವಿದ್ಯಾರ್ಥಿಗಳು ಪೆನ್-ಪೇಪರ್ ಹಿಡಿಯುವುದನ್ನು ರೂಢಿಸಿಕೊಳ್ಳಬೇಕು. ಬರೆದುಕೊಂಡಾಗ ಕಲಿತ ಜ್ಞಾನ ಆಳವಾಗಿ ಉಳಿಯುತ್ತದೆ. ಈ ವಿಷಯವಾಗಿ, ಜಪಾನ್ ಮತ್ತು ಅಮೆರಿಕಾದಲ್ಲೂ ಹಲವು ಸಂಶೋಧನೆಗಳಾಗುತ್ತಿವೆ. ಏಕೆಂದರೆ, ಪೆನ್-ಪೇಪರ್​ನಲ್ಲಿ ಏನು ಕಲಿಯುತ್ತೇವೋ ಅದು ನಮ್ಮ ಮಿದುಳಿನಲ್ಲಿ ಆಳವಾಗಿ ಉಳಿಯುತ್ತದೆ ಮತ್ತು ಇದರಿಂದ ಮಿದುಳಿನ ಚಟುವಟಿಕೆಗಳು ಸಹ ಹೆಚ್ಚಾಗುತ್ತವೆ. ಹಾಗಾಗಿ ವಿದ್ಯಾರ್ಥಿಗಳು ಬರೀ ಸ್ಟಡಿಮೆಟಿರಿಯಲ್​ಗೆ ಅವಲಂಬಿತರಾಗದೇ, ಪೆನ್-ಪೇಪರ್ ರೂಢಿಸಿಕೊಳ್ಳಬೇಕು.

    ಆರೋಗ್ಯವೇ ಭಾಗ್ಯ: ಇವತ್ತಿನ ದಿನಗಳಲ್ಲಿ ನಮ್ಮ ಸಮಾಜದಲ್ಲಿ ಕಂಡುಬರುತ್ತಿರುವ ಒಂದು ಪ್ರಮುಖ ಸಮಸ್ಯೆಯೆಂದರೆ, ಯುವಜನರಲ್ಲಿ ಆತ್ಮವಿಶ್ವಾಸ ಕುಂದುತ್ತಿದ್ದು, ಮನೋದೌರ್ಬಲ್ಯಗಳು ಹೆಚ್ಚುತ್ತಿವೆ. ಧ್ಯಾನ, ಉತ್ತಮ ಆಹಾರ ಸೇವನೆ, ಸಂಬಂಧಗಳಿಂದ ದೂರವಾಗಿ ಆತ್ಮವಿಶ್ವಾಸವನ್ನು ಕುಂದಿಸಿಕೊಳ್ಳುತ್ತಿದ್ದಾರೆ. ಇದರಿಂದ ಅವರ ಗುರಿ ಈಡೇರದಿದ್ದಾಗ, ದುಶ್ಚಟಗಳಿಗೆ ದಾಸರಾಗುತ್ತಿದ್ದಾರೆ. ಇಲ್ಲವಾದರೆ, ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಜೀವನದಲ್ಲಿ ಪ್ರತಿ ಮನುಷ್ಯನಿಗೂ ಉತ್ತಮ ಸ್ನೇಹಿತರು ಬಹಳ ಮುಖ್ಯ. ಒಬ್ಬ ಒಳ್ಳೆಯ ಸ್ನೇಹಿತ ನೂರು ಪುಸ್ತಕಗಳಿಗೆ ಸಮ. ಉತ್ತಮ ಸ್ನೇಹಿತರಿದ್ದರೆ ಸಮಸ್ಯೆಗಳಿಂದ ಬಿಡುಗಡೆ ಹೊಂದಬಹುದು. ಹಾಗಾಗಿ ಉತ್ತಮ ಸ್ನೇಹಿತರನ್ನು ಆಯ್ಕೆ ಮಾಡಿಕೊಳ್ಳಿ.

    ಜಂಕ್​ಫುಡ್​ನಿಂದ ದೂರವಾಗಿ: ಹಿಂದೆಲ್ಲ ಸಾಂಪ್ರದಾಯಿಕ ಮತ್ತು ಆರೋಗ್ಯಕರ ಆಹಾರ ಪದ್ಧತಿಯಿಂದ, ಜನ ದೀರ್ಘಕಾಲ ಉತ್ತಮ ಆರೋಗ್ಯ ಹೊಂದುತ್ತಿದ್ದರು. ಆದರೆ, ಇಂದು ಬದಲಾದ ಜೀವನಶೈಲಿಯಿಂದ ಚಿಕ್ಕ ವಯಸ್ಸಿನಲ್ಲೇ ಆರೋಗ್ಯ ಕಳೆದುಕೊಳ್ಳುತ್ತಿದ್ದಾರೆ. ಹಿಂದೆಲ್ಲ, ಮಕ್ಕಳು ಫೋಷಕರನ್ನು ಆಸ್ಪತ್ರೆಗೆ ಕರೆದುಕೊಂಡು ಬರುತ್ತಿದ್ದರು. ಈಗ ಪೋಷಕರೇ ಮಕ್ಕಳನ್ನು ಆಸ್ಪತ್ರೆಗೆ ಕರೆದುಕೊಂಡು ಬರವ ಸ್ಥಿತಿ ನಿರ್ವಣವಾಗಿದೆ. ಹಾಗಾಗಿ, ಜಂಕ್ ಫುಡ್​ನಿಂದ ದೂರವಾಗಿ, ಉತ್ತಮ ಆರೋಗ್ಯಶೈಲಿ ರೂಢಿಸಿಕೊಳ್ಳಬೇಕು. ವ್ಯಾಯಾಮ ಮತ್ತು ದೈಹಿಕ ಚಟುವಟಿಕೆಗಳ ಮೂಲಕ ಉತ್ತಮ ಆರೋಗ್ಯ ಹೊಂದಬಹುದು.

    ಹೃದಯದ ಮೇಲೆ ಪರಿಣಾಮ: ಇದೆಲ್ಲದರ ಪರಿಣಾಮ ಹೃದಯದ ಮೇಲೆ ಆಗುತ್ತಿದೆ ಎಂಬುದು ನಮ್ಮಲ್ಲಿ ಬಹಳಷ್ಟು ಜನರಿಗೆ ಗೊತ್ತಿರುವುದಿಲ್ಲ. ಇಷ್ಟೆಲ್ಲ ಸಮಸ್ಯೆಗಳಿಂದ ಅದು ಅವರ ಹೃದಯದ ಮೇಲೆ ನೇರ ಪರಿಣಾಮ ಬೀರುತ್ತಿದೆ. ಚಿಕ್ಕವಯಸ್ಸಿಗೆ ಹೃದಯಾಘಾತದಂತಹ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಅಧಿಕ ರಕ್ತದೊತ್ತಡ, ಮಧುಮೇಹ, ಕೊಲೆಸ್ಟ್ರಾಲ್, ದೇಹದ ತೂಕ ಮತ್ತು ಸೊಂಟದ ಸುತ್ತಳತೆ ಹಾಗೂ ಅತಿಯಾಸೆ- ಈ ಐದು ಅಂಶಗಳನ್ನು ನಿಯಂತ್ರಣದಲ್ಲಿಟ್ಟುಕೊಂಡರೆ, ಹೃದಯ ಮತ್ತು ಮನಸ್ಸಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ. ಇನ್ನು, ಸಣ್ಣಸಣ್ಣ ವಿಷಯಗಳಿಗೂ ಬಹಳ ಕೋಪ ಮಾಡಿಕೊಳ್ಳುವವರನ್ನು ನೋಡುತ್ತೇವೆ. ಕೋಪಗೊಳ್ಳುವ ವ್ಯಕ್ತಿ ತನ್ನ ಆರೋಗ್ಯವನ್ನು ಹಾಳು ಮಾಡಿಕೊಳ್ಳುವುದರ ಜತೆಗೆ, ಇತರರ ಮನಸ್ಸಿಗೂ ನೋವು ನೀಡುತ್ತಾನೆ. ಹಾಗಾಗಿ ಸಾಧನೆಗೈಯಲು, ಗುರಿ ತಲುಪಲು ಮತ್ತು ನಾಯಕತ್ವದ ಗುಣ ಹೊಂದಲು ಕೋಪವನ್ನು ದೂರ ಇಡಬೇಕು. ಉತ್ತಮ ಜೀವನ ನಡೆಸಲು ಮತ್ತು ಸಾಧನೆಯ ಹಾದಿಯಲ್ಲಿ ಸಾಗಲು ತಾಳ್ಮೆ, ಸಾಂರ್ದಭಿಕ ಮೌನ, ನಗು-ಈ ಮೂರು ಮೆಟ್ಟಿಲುಗಳಾಗಬೇಕು.

    (ಲೇಖಕರು ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆ ನಿರ್ದೇಶಕರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts