More

    ಮತದಾರರ ಜಾಗೃತಿಗೆ ನಾಲ್ವರು ರಾಯಭಾರಿ ನಿಯೋಜನೆ

    ಬೆಂಗಳೂರು: ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಮತದಾರರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ನಟ ರಮೇಶ್ ಅರವಿಂದ್ ಸೇರಿ ನಾಲ್ವರು ಸೆಲಿಬ್ರಿಟಿಗಳನ್ನು ‘ನಮ್ಮ ಬೆಂಗಳೂರು ಐಕಾನ್ಸ್ ’ಗಳಾಗಿ (ರಾಯಭಾರಿ) ನಿಯೋಜನೆ ಮಾಡಿಕೊಳ್ಳಲಾಗಿದೆ.

    ನಗರದ ಪುಟ್ಟಣ್ಣ ಚೆಟ್ಟಿ ಪುರಭವನದಲ್ಲಿ ಚುನಾವಣಾ ಆಯೋಗ ಹಾಗೂ ಬಿಬಿಎಂಪಿ ಆಯೋಜಿಸಿದ್ದ ‘ನಮ್ಮ ಬೆಂಗಳೂರು ಐಕಾನ್ಸ್ ಕಾರ್ಯಕ್ರಮ’ಕ್ಕೆ ಮಂಗಳವಾರ ಚಾಲನೆ ನೀಡಿದ ಮಾತನಾಡಿದ ನಗರ ಜಿಲ್ಲಾ ಚುನಾವಣಾಧಿಕಾರಿ ತುಷಾರ್ ಗಿರಿನಾಥ್ ಅವರು ಈ ವಿಷಯವನ್ನು ಪ್ರಕಟಿಸಿದರು. ಮತದಾನ ಮಾಡುವ ಸಲುವಾಗಿ ನಗರದ ಜನತೆಗೆ ಹುರುಪು ತುಂಬಿಸುವ ಸಲುವಾಗಿ ಕಲಾವಿದರಾದ ರಮೇಶ್ ಅರವಿಂದ್, ನೀತು ವನಜಾಕ್ಷಿ, ಕ್ರೀಡಾಪಟುಗಳಾದ ಅನೂಪ್ ಶ್ರೀಧರ್, ಅರ್ಚನಾ ಜಿ ಕಾಮತ್ ಅವರು ನಿಯೋಜಿತರಾಗಿದ್ದಾರೆ. ಈ ನಾಲ್ವರೂ ರಾಯಭಾರಿಗಳಾಗಿ ನಮ್ಮ ಜೊತೆ ಕೈಜೋಡಿಸಿ ನಾಗರಿಕರಲ್ಲಿ ಜಾಗೃತಿ ಮೂಡಿಸುವವರಿದ್ದಾರೆ ಎಂದರು.

    ಮೊದಲ ಬಾರಿ ಚುನಾವಣಾವಣೆಯಲ್ಲಿ ಮತ ಚಲಾಯಿಸುತ್ತಿರುವವರಲ್ಲಿ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕಾದರೆ ತಪ್ಪದೆ ಮತಗಟ್ಟೆಗೆ ತೆರಳಿ ಮತದಾನ ಮಾಡಬೇಕು. ಆ ನಿಟ್ಟಿನಲ್ಲಿ ಎಲ್ಲರೂ ಮುಂದೆ ಬಂದು ಎಲ್ಲರಿಗೂ ಮತದಾನ ಮಾಡಲು ಪ್ರೇರೇಪಿಸಬೇಕು. ಮತ ಚಲಾಯಿಸುವುದು ಎಲ್ಲರ ಆದ್ಯ ಕರ್ತವ್ಯ ಹಾಗೂ ಜವಾಬ್ದಾರಿಯಾಗಿದೆ. ಮತದಾರರು ಯಾವ ಅಭ್ಯರ್ಥಿಗೂ ಮತ ಚಲಾಯಿಸಲು ಇಷ್ಟವಿಲ್ಲದಿದ್ದರೆ ನೋಟಾ ಮಾಡಲು ಅವಕಾಶವಿದ್ದು, ಎಲ್ಲರೂ ಮತ ಚಲಾಯಿಸಬೇಕು ಎಂದು ತುಷಾರ್ ಗಿರಿನಾಥ್ ಮನವಿ ಮಾಡಿದರು.

    ಮತಗಟ್ಟೆಗೆ ತೆರಳಿ ಮತ ಹಾಕೋಣ:

    ಚುನಾವಣಾ ರಾಯಭಾರಿಯಾಗಿ ನಿಯೋಜನೆಗೊಂಡಿರುವ ನಟ ರಮೇಶ್ ಅರವಿಂದ್ ಮಾತನಾಡಿ, ಈ ತಿಂಗಳ 26ರಂದು ಚುನಾವಣಾ ಹಬ್ಬವಿದ್ದು, ಎಲ್ಲರೂ ಸಡಗರದಿಂದ ಒಟ್ಟಾಗಿ ಮತಗಟ್ಟೆಗೆ ತೆರಳಿ ಮತದಾನ ಮಾಡೋಣ. ಒಂದು ಮತದಿಂದ ಎಲ್ಲವನ್ನೂ ಬದಲಿಸುವ ಶಕ್ತಿಯಿದೆ. ಚುನಾವಣಾ ವ್ಯವಸ್ಥೆಯಲ್ಲಿ ನಾವು ಮತದಾನ ಮಾಡಿದರೆ ಏನೂ ಬದಲಾಗೋದಿಲ್ಲ ಎಂಬ ಮನೋಭಾವಿದ್ದರೆ ಅದನ್ನು ಮೊದಲು ತಲೆಯಿಂದ ತೆಗೆಯಿರಿ. ಜವಾಬ್ದಾರಿಯಿಂದ ಎಲ್ಲರೂ ಒಂದಾಗಿ ಮತದಾನ ಮಾಡಿ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಉತ್ತಮ ಸಮಾಜವನ್ನು ರೂಪಿಸಲು ಸಾಧ್ಯವಿದೆ ಎಂದು ಪ್ರತಿಪಾದಿಸಿದರು.

    ಕಾರ್ಯಕ್ರಮದಲ್ಲಿ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಪಿ.ಎಸ್.ಕಾಂತರಾಜ್, ಬಿಬಿಎಂಪಿ ವಿಶೇಷ ಆಯುಕ್ತ ಸುರೋಳ್ಕರ್ ವಿಕಾಸ್ ಕಿಶೋರ್, ಸ್ವೀಪ್ ನೋಡಲ್ ಅಧಿಕಾರಿ ಪ್ರತಿಭಾ ಹಾಗೂ ಇತರ ಅಧಿಕಾರಿಗಳು ಇದ್ದರು.

    ಎಲ್ಲರೂ ತಪ್ಪದೆ ಮತದಾನ ಮಾಡುವುದು ನಮ್ಮೆಲರ‌್ಲ ಕರ್ತವ್ಯವಾಗಿದೆ. ನಾವು ಮತದಾನ ಮಾಡದಿದ್ದಲ್ಲಿ ನಾವು ಪ್ರಶ್ನೆ ಮಾಡಲು ಅರ್ಹರಿರುವುದಿಲ್ಲ. ಆದ್ದರಿಂದ ನಾವೆಲ್ಲರೂ ತಪ್ಪದೇ ಮತದಾನ ಮಾಡೋಣ.
    – ಅನುಪ್ ಶ್ರೀಧರ್, ಚುನಾವಣಾ ರಾಯಭಾರಿ

    ನಮ್ಮ ನಾಯಕನನ್ನು ನಾವು ಆಯ್ಕೆ ಮಾಡಬೇಕು. ಆದ ಕಾರಣ ಎಲ್ಲರೂ ತಮ್ಮ ಸ್ವ ಇಚ್ಛೆಯಿಂದ ಮುಂದೆ ಬಂದು ತಪ್ಪದೆ ಮತ ಚಲಾಯಿಸಬೇಕು. ಉತ್ತಮ ಸಮಾಜಕ್ಕಾಗಿ ಮತಗಟ್ಟೆಗೆ ಆಗಮಿಸಿ ವೋಟ್ ಹಾಕೋಣ.
    – ನಟಿ ನೀತು ವನಜಾಕ್ಷಿ, ಚುನಾವಣಾ ರಾಯಭಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts