More

    ಪರಮ್ ಬೀರ್ ಸಿಂಗ್ 100 ಕೋಟಿ ಹೇಳಿಕೆ: ‘ಮಹಾ’ ರಾಜಕಾರಣದಲ್ಲಿ ಎದ್ದಿದೆ ಮಹಾ ಬಿರುಗಾಳಿ! ಫುಲ್ ಡಿಟೈಲ್ಸ್ ಇಲ್ಲಿದೆ ನೋಡಿ

    ಮುಂಬೈ: ‘ಮುಂಬೈನಲ್ಲಿನ ಬಾರ್​, ರೆಸ್ಟೋರಂಟ್​ಗಳಿಂದ ಹಾಗೂ ಅಕ್ರಮ ವ್ಯವಹಾರಗಳಿಂದ ತಿಂಗಳಿಗೆ 100 ಕೋಟಿ ರೂಪಾಯಿಯನ್ನು ಸಂಗ್ರಹಿಸಿ ಕೊಡಬೇಕು ಎಂದು ಗೃಹ ಸಚಿವ ಅನಿಲ್ ದೇಶಮುಖ್ ಅವರ ಸೂಚನೆ ಇತ್ತು’ ಎಂಬ ಹಿರಿಯ ಪೊಲೀಸ್ ಅಧಿಕಾರಿ ಪರಮ್ ಬೀರ್ ಸಿಂಗ್ ಹೇಳಿಕೆ ಇದೀಗ ಮಹಾರಾಷ್ಟ್ರ ರಾಜಕಾರಣದಲ್ಲಿ ಬಹುದೊಡ್ಡ ಬಿರುಗಾಳಿಯನ್ನೇ ಸೃಷ್ಟಿಸಿದೆ.

    ಹೌದು, ಮುಕೇಶ್ ಅಂಬಾನಿ ಮನೆ ಬಳಿ ಸ್ಪೋಟಕ ಪತ್ತೆಯಾಗಿದ್ದರ ಪ್ರಕರಣವನ್ನು ಸರಿಯಾಗಿ ನಿಭಾಯಿಸಿಲ್ಲ ಎಂದು ಆರೋಪಿಸಿ ಮುಂಬೈ ಪೊಲೀಸ್ ಆಯುಕ್ತರಾಗಿದ್ದ ಪರಮ್ ಬೀರ್ ಸಿಂಗ್ ಅವರನ್ನು ವರ್ಗಾವಣೆ ಮಾಡಲಾಗಿತ್ತು. ಅವರನ್ನು ಮಹಾರಾಷ್ಟ್ರ ಗೃಹ ರಕ್ಷಕ ದಳದ ಮುಖ್ಯಸ್ಥರಾಗಿ ವರ್ಗಾಯಿಸಲಾಗಿತ್ತು.

    ಇದರ ಬೆನ್ನಲ್ಲೇ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಪತ್ರ ಬರೆದು ಆರೋಪ ಮಾಡಿರುವ ಪರಮ್ ಬೀರ್ ಸಿಂಗ್, ‘ಒಂದು ತಿಂಗಳಿಗೆ ನೂರು ಕೋಟಿ ರೂ ಲಂಚ ಸಂಗ್ರಹಿಸುವಂತೆ ಗೃಹ ಸಚಿವ ಅನಿಲ್ ದೇಶಮುಖ್ ಅವರು ಪೊಲೀಸ್ ಅಧಿಕಾರಿ ಸಚಿನ್ ವಾಜೆ ಅವರಿಗೆ ಸೂಚನೆ ನೀಡಿದ್ದರು. ಈ ಗುರಿ ತಲುಪಲು ಮುಂಬೈನಲ್ಲಿ 1750 ಬಾರ್ ರೆಸ್ಟೋರಂಟ್​ಗಳಿವೆ. ಸರಿಯಾಗಿ ಕೆಲಸ ಮಾಡಿದರೆ 100 ಕೋಟಿ ಬರುತ್ತೆ. ಪ್ರತಿಯೊಂದರಿಂದಲೂ 2 ರಿಂದ 3 ಲಕ್ಷ ಸಂಗ್ರಹಿಸಿದರೆ 45 ರಿಂದ 50 ಕೋಟಿ ರೂಪಾಯಿ ಆಗುತ್ತದೆ. ಉಳಿದಿದ್ದನ್ನು ಇನ್ನಿತರ ಮೂಲಗಳಿಂದ ಸಂಗ್ರಹಿಸಬಹುದು ಎಂದು ವಾಜೆಗೆ ಸೂಚನೆ ನೀಡಿದ್ದರು’ ಎಂದು ಪತ್ರದಲ್ಲಿ ಸಿಂಗ್ ಉಲ್ಲೇಖಿಸಿದ್ದಾರೆ. ಅಲ್ಲದೇ ಸಿಂಗ್ ಅವರು ಪತ್ರವನ್ನು ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಹಾಗೂ ರಾಜ್ಯಪಾಲ ಭಗತ್​ಸಿಂಗ್ ಕೋಶಾಯಾರಿ ಅವರಿಗೂ ತಲುಪಿಸಿದ್ದರು.

    ಇದನ್ನೂ ಓದಿ: ಬಾಂಬ್​ ಸ್ಫೋಟದಲ್ಲೂ ಆರೋಪಿ; ಆತ್ಮಹತ್ಯೆ ಕೇಸ್, ಭ್ರಷ್ಟಾಚಾರದಲ್ಲೂ ಹೆಸರು ! ಗೃಹ ಸಚಿವ ಸ್ಥಾನಕ್ಕೆ ಬಂತಾ ಕುತ್ತು?

    ಪರಮ್ ಬೀರ್ ಸಿಂಗ್ ಅವರ ಆರೋಪ ಮಹಾರಾಷ್ಟ್ರ ರಾಜಕಾರಣದಲ್ಲಿ ದೊಡ್ಡ ಬಿರುಗಾಳಿಯನ್ನೇ ಹುಟ್ಟಿ ಹಾಕಿದೆ. ಇದರಿಂದ ತೀವ್ರ ಕಸಿವಿಸಿಗೆ ಒಳಗಾದ ಗೃಹ ಸಚಿವ ಅನಿಲ್ ದೇಶಮುಖ್, ‘ಮುಕೇಶ್ ಅಂಬಾನಿ ಮನೆ ಬಳಿ ಸ್ಪೋಟಕ ದೊರೆತಿರುವ ಪ್ರಕರಣ ಪರಮ್​ ಬೀರ್ ಸಿಂಗ್ ಅವರಿಗೂ ಸುತ್ತಿಕೊಳ್ಳುವ ಸಾಧ್ಯತೆ ಇದ್ದು, ಅವರು ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲು ನನ್ನ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ’ ಎಂದು ಹೇಳಿದ್ದಾರೆ.

    ಇದರಿಂದ ಮಹಾ ವಿಕಾಸ್ ಅಗಾಡಿ ಸರ್ಕಾರದ ಮೇಲೆ ಕತ್ತಿ ಮಸೆಯುತ್ತಿರುವ ಬಿಜೆಪಿಗೆ ಬಹುದೊಡ್ಡ ಅಸ್ತ್ರವೊಂದು ಸಿಕ್ಕಂತಾಗಿದೆ. ‘ಕೂಡಲೇ ಅನಿಲ್ ದೇಶಮುಖ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು’ ಎಂದು ಬಿಜೆಪಿ ಹೋರಾಟ ನಡೆಸಿದೆ. ಈ ಕುರಿತು ಇಂದು ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ಮುಖಂಡ ದೇವೇಂದ್ರ ಫಡ್ನವೀಸ್ ಅವರು, ‘ಕೂಡಲೇ ಅನಿಲ್ ದೇಶಮುಖ್ ಅವರನ್ನು ಸಂಪುದಿಂದ ವಜಾ ಮಾಡಬೇಕು’ ಎಂದು ಆಗ್ರಹಿಸಿದ್ದಾರೆ. ‘ನಾವು ಮೊದಲಿನಿಂದಲೂ ಹೇಳುತ್ತಿದ್ದೇವೆ. ಗೃಹ ಇಲಾಖೆಯಲ್ಲಿ ದೊಡ್ಡ ಭ್ರಷ್ಟಾಚಾರ ನಡೆಯುತ್ತಿದೆ ಎಂದು. ಆದರೆ, ಮುಖ್ಯಮಂತ್ರಿ ಠಾಕ್ರೆ ಅವರು ಏನೂ ಆಗಿಲ್ಲ ಎಂಬಂತೆ ಕಣ್ಮುಚ್ಚಿ ಕುಳಿತಿದ್ದಾರೆ. ದೇಶಮುಖ್ ಅವರನ್ನು ವಜಾ ಮಾಡದಿದ್ದರೇ ಬಿಜೆಪಿ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಲಿದೆ’ ಎಂದು ಎಚ್ಚರಿಸಿದ್ದಾರೆ.

    ಇನ್ನು ಪರಮ್ ಬೀರ್ ಸಿಂಗ್ ಅವರ ಪತ್ರದಿಂದ ತೀವ್ರ ಮುಜುಗರಕ್ಕೆ ಈಡಾಗಿರುವ ಎನ್​ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು, ‘ಮುಖ್ಯಮಂತ್ರಿ ಅವರು ಈ ಕುರಿತು ಯಾವುದೇ ನಿರ್ಧಾರ ತೆಗೆದುಕೊಳ್ಳಲು ಸಮರ್ಥವಾಗಿದ್ದಾರೆ. ಇದರಿಂದ ನಮ್ಮ ಮೈತ್ರಿ ಸರ್ಕಾರದ ಮೇಲೆ ಯಾವುದೇ ಪರಿಣಾಮ ಇಲ್ಲ. ಅಷ್ಟಕ್ಕೂ ಪರಮ್ ಬೀರ್ ಸಿಂಗ್ ಅವರು ಇಷ್ಟು ದಿನ ಸುಮ್ಮನಿದ್ದು, ತಮ್ಮ ಮೇಲೆ ಆರೋಪ ಬಂದಾಗ ಮತ್ತೊಬ್ಬರ ಮೇಲೆ ಏಕೆ ಆರೋಪ ಮಾಡುತ್ತಿದ್ದಾರೆ ಎಂಬುದನ್ನು ನೋಡಬೇಕಾಗುತ್ತದೆ’ ಎಂದು ಪವಾರ್ ಹೇಳಿದ್ದಾರೆ.

    ಪರಮ್ ಬೀರ್ ಸಿಂಗ್ ಪತ್ರದ ಬಗ್ಗೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಇದುವರೆಗೆ ಯಾವುದೇ ಹೇಳಿಕೆ ನೀಡಿಲ್ಲವಾದರೂ, ಈ ಬಗ್ಗೆ ಮುಖ್ಯಮಂತ್ರಿ ಕಚೇರಿ ಪ್ರಕಟಣೆ ಬಿಡುಗಡೆ ಮಾಡಿದ್ದು, ‘ಪತ್ರದಲ್ಲಿ ಪರಮ್ ಬೀರ್ ಸಿಂಗ್ ಸಹಿ ಮಾಡಿಲ್ಲ. ಹೀಗಾಗಿ ಪತ್ರದ ಕುರಿತು ತನಿಖೆ ನಡೆಯುತ್ತಿದೆ’ ಎಂದು ಹೇಳಿದೆ.

    ಸಿಂಗ್ ಪತ್ರದ ಬಗ್ಗೆ ಮಾತನಾಡಿರುವ ಎಂಎನ್​​ಎಸ್ ಮುಖ್ಯಸ್ಥ ರಾಜ್​ ಠಾಕ್ರೆ ಅವರು, ‘ಅನಿಲ್ ದೇಶಮುಖ್ ಕೂಡಲೇ ರಾಜೀನಾಮೆ ನೀಡಬೇಕು. ಇಲ್ಲದಿದ್ದರೇ ಮುಖ್ಯಮಂತ್ರಿ, ಅವರನ್ನು ಸಂಪುಟದಿಂದ ವಜಾ ಮಾಡಬೇಕು. ಮಹಾ ವಿಕಾಸ್ ಅಗಾಡಿ ಸರ್ಕಾರ ಈ ದೊಡ್ಡ ಭ್ರಷ್ಟಾಚಾರ ಹಗರಣವನ್ನು ತನಿಖೆ ಮಾಡುವುದಿಲ್ಲ. ಕೇಂದ್ರ ಸರ್ಕಾರವೇ ತನಿಖೆ ಮಾಡಬೇಕು’ ಎಂದು ಆಗ್ರಹಿಸಿದ್ದಾರೆ.

    ಮುಕೇಶ್ ಅಂಬಾನಿ ಮನೆ ಬಳಿ ಸ್ಪೋಟಕ ಪತ್ತೆಯಾಗಿದ್ದರ ಕುರಿತು ತನಿಖೆ ನಡೆಸುತ್ತಿರುವ ಎನ್​ಐಎ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಹಾಗೂ ಇನ್ನಿಬ್ಬರನ್ನು ಬಂಧಿಸಿ ತೀವ್ರ ವಿಚಾರಣೆ ನಡೆಸುತ್ತಿದೆ. ಒಟ್ಟಿನಲ್ಲಿ ಮುಕೇಶ್ ಅಂಬಾನಿ ಮನೆ ಬಳಿ ಸ್ಪೋಟಕದ ಪ್ರಕರಣ ಮಹಾರಾಷ್ಟ್ರ ರಾಜಕಾರಣದಲ್ಲಿ ಬಹುದೊಡ್ಡ ಬಿರುಗಾಳಿಯನ್ನೇ ಸೃಷ್ಟಿಸಿದೆ. ಇದರಿಂದ ಮಹಾ ವಿಕಾಸ್ ಅಗಾಡಿ ಸರ್ಕಾರ ಸಂಕಷ್ಟಕ್ಕೆ ಸಿಲುಕಿರುವುದಂತೂ ನಿಜ.

    ‘ಮೇ 1ರಂದು ನಾಲ್ಕು ಕೊಲೆ- ಸಿ.ಟಿ ರವಿ ಕೊಲೆಯಾದ್ರೆ ನಾನ್​ ಉಳೀತೇನೆ, ನನ್ನ ಕೊಲೆಯಾದ್ರೆ ಅವ್ರು ಉಳೀತಾರೆ’

    ಎಲ್ಲೆಲ್ಲೋ ಹೋಗಿ ಬಟ್ಟೆ ಬಿಚ್​ತಿರೋರಿಗೆ ದಾನ ಮಾಡ್ತೇನೆ- ಇನ್ನೂ 19 ಸಿಡಿ ಇವೆಯಂತೆ…ಜೋಕೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts