More

    ಕರ್ನಾಟಕದಲ್ಲಿ ಸರ್ವ ಜನಾಂಗದ ಶಾಂತಿಯ ತೋಟ ಎಲ್ಲಿದೆ: ಮಾಜಿ ಸಚಿವ ಸಿ.ಟಿ.ರವಿ ಪ್ರಶ್ನೆ

    ಮಂಡ್ಯ: ಕಾಂಗ್ರೆಸ್‌ಗೆ ಜನರ ಹಿತಕ್ಕಿಂತ ವೋಟ್ ಬ್ಯಾಂಕ್ ರಾಜಕಾರಣವೇ ಮುಖ್ಯ. ತಾಲಿಬಾನ್ ಆಡಳಿತದ ಟ್ರೈಲರ್ ಅನ್ನು ರಾಜ್ಯದಲ್ಲಿ ಬಿಡುಗಡೆ ಮಾಡುತ್ತಿರುವ ಕಾಂಗ್ರೆಸ್, ಸಂವೇದನಾ ರಹಿತವಾಗಿ ವರ್ತಿಸುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಕರ್ನಾಟಕದಲ್ಲಿ ಸರ್ವ ಜನಾಂಗದ ಶಾಂತಿಯ ತೋಟ ಎಲ್ಲಿದೆ ಎಂದು ಮಾಜಿ ಸಚಿವ ಸಿ.ಟಿ.ರವಿ ಪ್ರಶ್ನಿಸಿದರು.
    ಒಂದೆಡೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅಭಿವೃದ್ಧಿಯ ಟ್ರೈಲರ್ ಮಾದರಿಯನ್ನು ಮುಂದಿಟ್ಟಿದ್ದಾರೆ. ಆದರೆ, ಚುನಾವಣೆ ಗೆಲ್ಲುವ ಕಾರ್ಯತಂತ್ರಕಷ್ಟೇ ಸೀಮಿತವಾಗಿರುವ ಕಾಂಗ್ರೆಸ್ ಓಲೈಕೆ ರಾಜನೀತಿ ಪರಿಣಾಮ ರಾಜ್ಯದಲ್ಲಿನ ಆಡಳಿತವು ತಾಲಿಬಾನ್ ಮಾದರಿಯ ಆಡಳಿತವನ್ನು ನೆನಪಿಸುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ಆತಂಕವ್ಯಕ್ತಪಡಿಸಿದರು.
    ಬೆಂಗಳೂರಿನಲ್ಲಿ ಹನುಮಾನ್ ಚಾಲೀಸಾ ಹಾಕಿದ್ದಕ್ಕೆ ಯುವಕನನ್ನು ಅಂಗಡಿಯಿಂದ ಹೊರಗೆ ಎಳೆದೊಯ್ದು ಹಲ್ಲೆ ನಡೆಸಲಾಗಿದೆ. ಜೈ ಶ್ರೀರಾಮ್ ಘೋಷಣೆ ಕೂಗಿದ್ದಕ್ಕೆ ಕಾರು ಪ್ರಯಾಣಿಕರನ್ನು ಅಡ್ಡಗಟ್ಟಿ ಹಲ್ಲೆ ಮಾಡಲಾಗಿದೆ. ಪ್ರಧಾನಿ ಮೋದಿ ಪರ ಹಾಡು ಮಾಡಿದ್ದಕ್ಕೆ ಮೈಸೂರಿನಲ್ಲಿ ಯುವಕನ ಮೇಲೆ ಮೂತ್ರ ವಿಸರ್ಜಿಸಿ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿ ನೇಹಾ ಹಿರೇಮಠ ಅವರನ್ನು ಕಾಲೇಜು ಆವರಣದಲ್ಲೇ ಬರ್ಬರವಾಗಿ ಕೊಲೆ ಮಾಡಲಾಗಿದೆ. ಕೇಸರಿ ಶಾಲು ಹಾಕಿದ್ದಕ್ಕೆ ಯುವಕನ ಮೇಲೆ ಕಾರು ಹರಿಸಿ ಕೊಲೆ ಮಾಡಲಾಗಿದೆ. ಯಾದಗಿರಿಯಲ್ಲಿ ದಲಿತ ಯುವಕನ ಹತ್ಯೆ ನಡೆದಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರ ಹೇಗೆ ನಡೆದುಕೊಳ್ಳುತ್ತಿದೆ ಎಂದು ಮರು ಪ್ರಶ್ನೆ ಮಾಡಿದರು.
    ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿದ್ದನ್ನು ಕಾಂಗ್ರೆಸ್‌ನವರು ಇಲ್ಲವೆಂದು ವಾದ ಮಾಡಿದರು. ಇವರ ವೋಟ್‌ಬ್ಯಾಂಕ್ ರಾಜನೀತಿಯಿಂದಾಗಿ ದೇಶ ಹಾಳಾದರೂ ಪರವಾಗಿಲ್ಲ, ತಾಲಿಬಾನಿಗಳನ್ನು ಬೆಳೆಸುವ ಕೆಲಸವನ್ನು ಮಾಡುತ್ತಿದೆ. ಇದು ಅತ್ಯಂತ ಅಪಾಯಕಾರಿ. ಇದರ ಪರಿಣಾಮವು ಭವಿಷ್ಯದಲ್ಲಿ ಸರ್ವಜನಾಂಗದ ಶಾಂತಿಯ ತೋಟದ ಮೇಲೆ ಬೀರಲಿದೆ. ಕರ್ನಾಟಕ ಅಶಾಂತಿಯ ಬೀಡಾಗಲಿದೆ. ದೇಶ ಮೊದಲು, ಸಬ್ ಕಾ ಸಾಥ್-ಸಬ್ ಕಾ ವಿಕಾಸ್, ಭಾರತವನ್ನು ಜಗತ್ತಿನ ನಂಬರ್ ಒನ್ ರಾಷ್ಟ್ರವಾಗಿ ಮಾಡುವುದು, ಬಡವರಿಗೆ ಶಕ್ತಿ ತುಂಬಿ ಅವರನ್ನು ಸ್ವಾವಲಂಬಿ ಮತ್ತು ಸ್ವಾಭಿಮಾನಿಗಳಾಗಿ ಮಾಡುವುದು. ಸಂವಿಧಾನಕ್ಕೆ ಶಕ್ತಿ ತುಂಬಿ ಅದರ ಆಶಯಗಳನ್ನು ಜನರಿಗೆ ತಲುಪಿಸುವುದು ಬಿಜೆಪಿಯ ನೀತಿಗಳಾಗಿವೆ ಎಂದು ತಿಳಿಸಿದರು.
    ಮೈಸೂರಿನಲ್ಲಿ ಪ್ರಧಾನಿ ಮೋದಿ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಭಾಷಣದ ಬಳಿಕ ಕರ್ನಾಟಕದಲ್ಲಿ ಅದರಲ್ಲೂ ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪರವಾಗಿ ಮತಗಳು ಧೃವೀಕರಣಗೊಂಡಿರುವುದು ಸ್ಪಷ್ಟವಾಗಿದೆ. ಇದರಿಂದ ಭಯ ಬೀತಗೊಂಡಿರುವ ಕಾಂಗ್ರೆಸ್ ಅಪಪ್ರಚಾರವನ್ನು ಚುನಾವಣಾ ಅಸ್ತ್ರವಾಗಿ ಮಾಡಿಕೊಂಡಿದೆ. ಸುಳ್ಳು ಮತ್ತು ಅಪಪ್ರಚಾರವೇ ಕಾಂಗ್ರೆಸ್ ಚುನಾವಣಾ ವಿಷಯವಾಗಿದೆ ಎಂದು ಅವರು ಆರೋಪಿಸಿದರು.
    ಮಂಡ್ಯ ಲೋಕಸಭಾ ಕ್ಷೇತ್ರದ ಸಂಚಾಲಕ ಸಿ.ಪಿ.ಉಮೇಶ್, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಅಶೋಕ್ ಜಯರಾಂ, ನಗರಸಭೆ ಸದಸ್ಯ ಅರುಣ್‌ಕುಮಾರ್, ಮನ್‌ಮುಲ್ ನಿರ್ದೇಶಕ ಎಸ್.ಪಿ.ಸ್ವಾಮಿ, ನಗರ ಘಟಕದ ಅಧ್ಯಕ್ಷ ವಸಂತ್‌ಕುಮಾರ್, ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts