ಲೋಕಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್​ಗೆ ಮತ್ತೊಂದು ಶಾಕ್; ಬಿಜೆಪಿ ಸೇರ್ಪಡೆಯಾದ ಮಾಜಿ ಅಥ್ಲೀಟ್

Padmini Thomas
Published on

ನವದೆಹಲಿ: ಲೋಕಸಭೆ ಚುನಾವಣೆಯ ಹೊಸ್ತಿಲಲ್ಲಿ ಕಾಂಗ್ರೆಸ್​ ಪಕ್ಷಕ್ಕೆ ಒಂದರ ಹಿಂದೆ ಒಂದರಂತೆ ಆಘಾತ ಎದುರಾಗುತ್ತಿದ್ದು, ಈಗ ಮಹತ್ವದ ಬೆಳವಣಿಗೆ ಒಂದರಲ್ಲಿ ಮಾಜಿ ಅಥ್ಲೀಟ್‌ ಪದ್ಮಿನಿ ಥಾಮಸ್‌ ಕಾಂಗ್ರೆಸ್​ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದಾರೆ.

ತಿರುವನಂತಪುರಂನಲ್ಲಿರುವ ಪಕ್ಷದ ರಾಜ್ಯ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ಸೇರ್ಪಡೆಯಾದ ಪದ್ಮಿನಿ ಥಾಮಸ್​ ಅವರನ್ನು ರಾಜ್ಯ ಘಟಕದ ಅಧ್ಯಕ್ಷ ಕೆ. ಸುರೇಂದ್ರನ್‌  ಸೇರಿದಂತೆ ಹಿರಿಯರು ಬರಮಾಡಿಕೊಂಡರು. ಪದ್ಮಿನಿ ಥಾಮಸ್ 1982ರ ಏಷ್ಯನ್‌ ಕ್ರೀಡಾಕೂಟದ ಬೆಳ್ಳಿ ಮತ್ತು ಕಂಚು ಪದಕ ವಿಜೇ‌ತೆ ಹಾಗೂ ಅರ್ಜುನ ಪ್ರಶಸ್ತಿ ಪುರಸ್ಕೃತರು.

ಪಕ್ಷ ಸೇರ್ಪಡೆ ಬಳಿಕ ಮಾತನಾಡಿದ ಪದ್ಮಿನಿ, ಕಾಂಗ್ರೆಸ್​ ಪಕ್ಷದಲ್ಲಿ ನಾನು ಭಾವನಾತ್ಮಕವಾಗಿ ಹಾಗೂ ಮಾನಸಿಕವಾಗಿ ಸಾಕಷ್ಟು ನೋವು ಅನುಭವಿಸಿದ ಕಾರಣ ಬಿಜೆಪಿ ಸೇರಲು ಪ್ರೇರಣೆ ನೀಡಿತ್ತು. ನಾನು ಯಾವುದೇ ಆಕಾಂಕ್ಷೆ ಇಲ್ಲದೆ ಮೋದಿ ಅವರ ಸರ್ಕಾರವು ಮಹಿಳೆಯರಿಗೆ ನೀಡಿದ ಆದ್ಯತೆ ಮತ್ತು ಮೀಸಲಾತಿಯಿಂದ ನಾನು ಪ್ರಭಾವಿತಳಾಗಿ ಬಿಜೆಪಿ ಸೇರಿದ್ದೇನೆ ಎಂದು ಪದ್ಮಿನಿ ಹೇಳಿದ್ದಾರೆ.

ಮಾಜಿ ಮುಖ್ಯಮಂತ್ರಿ, ಹಿರಿಯ ಕಾಂಗ್ರೆಸ್‌ ನಾಯಕ ಕೆ. ಕರುಣಾಕರನ್‌ ಅವರ ಪುತ್ರಿ ಪದ್ಮಜಾ ವೇಣುಗೋಪಾಲ್‌ ಇತ್ತೀಚಿಗೆ ಬಿಜೆಪಿ ಸೇರ್ಪಡೆಗೊಂಡಿದ್ದರು. ಈ ವೇಳೆ ಮಾತನಾಡಿದ ಸುರೇಂದ್ರನ್​ ಮುಂದಿನ ದಿನಗಳಲ್ಲಿ ಕಾಂಗ್ರೆಸ್​ ಪಕ್ಷದ ಅನೇಕ ಹಿರಿಯ ನಾಯಕರು ಬಿಜೆಪಿ ಸೇರಲಿದ್ದಾರೆ ಎಂದು ಹೇಳಿಕೆ ನೀಡಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿರುವುದು ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net