More

    ಕಾಂಗ್ರೆಸ್ ಸಹವಾಸದಿಂದ ನನಗೆ 17 ವರ್ಷ ವನವಾಸ: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ

    ಮಂಡ್ಯ: ಕಾಂಗ್ರೆಸ್ಸಿಗರ ಸಹವಾಸ ಮಾಡಿ ನಾನು 17 ವರ್ಷ ವನವಾಸ ಅನುಭವಿಸಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
    ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನಗರದ ಖಾಸಗಿ ಹೋಟೆಲ್‌ನಲ್ಲಿ ಗುರುವಾರ ಆಯೋಜಿಸಿದ್ದ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಸಮನ್ವಯ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬರಲಿಕ್ಕೆ ಕಾರಣ ಅವರ ಶಕ್ತಿ ಅಲ್ಲ. ಜೆಡಿಎಸ್ ಹಾಗೂ ಬಿಜೆಪಿ ಹೊಂದಾಣಿಕೆಯಾಗದೆ, ನಮ್ಮಲ್ಲಿನ ಪೈಪೋಟಿ ಅವರಿಗೆ ಲಾಭವಾಗಿದೆ. ಕಾಂಗ್ರೆಸ್ ಸರ್ಕಾರ ರಚನೆ ಆಕಸ್ಮಿಕ. ಅವರು ಎಷ್ಟೇ ಪ್ರಯತ್ನಿಸಿದರೂ ಜೆಡಿಎಸ್ ಮುಗಿಸಲು ಸಾಧ್ಯವಿಲ್ಲ ಎಂದು ವಾಗ್ದಾಳಿ ನಡೆಸಿದರು.
    ಮಂಡ್ಯ ಮೇಲೆ ಕೆಟ್ಟ ದೃಷ್ಟಿ ಬೇಡ ಎಂದು ಹಳೇ ಸ್ನೇಹಿತ ಹೇಳಿದ್ದಾನೆ. ನಮ್ಮ ದೃಷ್ಟಿ ಇದ್ದಾಗ ಜಿಲ್ಲೆಯಲ್ಲಿ ಮಳೆ-ಬೆಳೆ ಚೆನ್ನಾಗಿ ಆಗುತ್ತಿತ್ತು. ಆದರೆ ನಿಮ್ಮ ದೃಷ್ಟಿ ಬಿದ್ದ ಮೇಲೆ ಬರಗಾಲ ಬಂದಿದೆ. ನಾವು ಅಧಿಕಾರದಲ್ಲಿದ್ದಾಗ ಮಂಡ್ಯ ಜಿಲ್ಲೆ ಹಸಿರಾಗಿತ್ತು. ಕಾಂಗ್ರೆಸ್ ಸರ್ಕಾರ ಬಂದಾಗ ಬರಗಾಲ ಬಂದಿದೆ. ಕಾಂಗ್ರೆಸ್‌ನವರು ರೈತರ ಮನೆ ಹಾಳು ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಬೆಳೆ ಬಿತ್ತನೆ ಮಾಡಬೇಡಿ ಎಂದ ಏಕೈಕ ನಾಯಕ ನನ್ನ ಹಳೇ ಸ್ನೇಹಿತ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ವಿರುದ್ದ ಹರಿಹಾಯ್ದರು.
    ಮುಖ್ಯಮಂತ್ರಿ ಸಿದ್ದರಾಮಯ್ಯ ನಮ್ಮ ಪಕ್ಷದಲ್ಲಿದ್ದಾಗಲೇ ಅವರ ನಡವಳಿಕೆ ನೋಡಿದ್ದೇನೆ. ಮೇಕೆದಾಟು ವಿಚಾರ ಹೇಳಿಕೊಂಡು ಮತ ಪಡೆಯುವ ದಾರಿದ್ರ್ಯ ಜೆಡಿಎಸ್ ಪಕ್ಷ ಹಾಗೂ ಎಚ್.ಡಿ.ದೇವೇಗೌಡರಿಗೆ ಅಗತ್ಯವಿಲ್ಲ. ಬಿರಿಯಾನಿ ಊಟ ಮಾಡಿಕೊಂಡು ಪಾದಯಾತ್ರೆ ಮಾಡಿದರೆ ಅಣೆಕಟ್ಟು ನಿರ್ಮಾಣವಾಗಲ್ಲ ಎಂದು ಛೇಡಿಸಿದ ಎಚ್‌ಡಿಕೆ, ಐಎನ್‌ಡಿಐಎ ಮೈತ್ರಿಕೂಟದ ಡಿಎಂಕೆ ಪಕ್ಷದ ಪ್ರಣಾಳಿಕೆಯಲ್ಲಿ ಮೇಕೆದಾಟು ಅಣೆಕಟ್ಟೆ ನಿರ್ಮಾಣಕ್ಕೆ ಅವಕಾಶ ಕೊಡಲ್ಲ ಎಂದಿದ್ದಾರೆ. ಪೇಪರ್, ಪೆನ್ನು ಕೊಟ್ಟರೆ ನಾಳೆ ಬೆಳಗ್ಗೆ ಮೇಕೆದಾಟು ಡ್ಯಾಂ ಮಾಡುತ್ತೇನೆ ಎಂದಿರಲ್ಲ. ಈಗ ಏನಾಗಿದೆ?. ಪಾದಯಾತ್ರೆಯಿಂದ ನೀರು ತರಲು ಆಗಲ್ಲ ಶಿವಕುಮಾರಣ್ಣ, ಪ್ರಾಧಿಕಾರದಲ್ಲಿ ಸರಿಯಾದ ವಾದ ಮಂಡನೆ ಆಗಬೇಕು. ನಾವು ಹೆಚ್ಚಿನ ಸೀಟು ಪಡೆಯಲು ಕೇಂದ್ರ ಗೃಹಸಚಿವ ಅಮಿತ್ ಷಾ ಭೇಟಿ ಮಾಡಲಿಲ್ಲ. ಮೇಕೆದಾಟು ವಿಚಾರದಲ್ಲಿ ಯಾವ ರೀತಿ ಮುಂದುವರಿಯಬೇಕೆಂದು ಚರ್ಚೆ ಮಾಡಲು ಹೋಗಿದ್ದೆವು ಎಂದು ತಿರುಗೇಟು ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts