More

    ಮನೆಗಳನ್ನು ಆವರಿಸುತ್ತಿರುವ ಕಾಡು

    ಪುರುಷೋತ್ತಮ ಪೆರ್ಲ ಕಾಸರಗೋಡು

    ಶ್ರೀ ಸತ್ಯಸಾಯಿ ಆರ್ಫನೇಜ್ ಟ್ರಸ್ಟ್ ಎಣ್ಮಕಜೆ ಪಂಚಾಯಿತಿಯ ಬಜಕೂಡ್ಲು ಕಾನ ಪ್ರದೇಶದಲ್ಲಿ ಎಂಡೋಸಲ್ಫಾನ್ ದುಷ್ಪರಿಣಾಮ ಪೀಡಿತ ಕುಟುಂಬಗಳಿಗಾಗಿ ನಿರ್ಮಿಸಿರುವ 36 ಮನೆಗಳ ನಿರ್ಮಾಣ ಕಾರ್ಯ ಪೂರ್ಣಗೊಂಡು ಎರಡು ವರ್ಷ ಸಮೀಪಿಸುತ್ತಿದ್ದರೂ, ಫಲಾನುಭವಿಗಳಿಗೆ ಹಸ್ತಾಂತರಿಸಲಾಗದೆ ಮನೆಗಳ ಸುತ್ತ ಕಾಡು ಬೆಳೆಯಲಾರಂಭಿಸಿದೆ.

    ನಿವೇಶನ ಹೊಂದಿರುವ ಜಾಗಕ್ಕೆ ಸೂಕ್ತ ರಸ್ತೆ, ವಿದ್ಯುತ್ ಸಂಪರ್ಕ ಒದಗಿಸುವಲ್ಲಿ ಸರ್ಕಾರ ಇನ್ನೂ ಕ್ರಮ ಕೈಗೊಳ್ಳದಿರುವುದರಿಂದ ಮನೆಗಳ ಕೀಲಿಕೈ ಹಸ್ತಾಂತರ ಕಾರ್ಯಕ್ರಮ ಮುಂದೂಡುತ್ತಲೇ ಬರಲಾಗುತ್ತಿದೆ. ಶ್ರೀ ಸತ್ಯಸಾಯಿ ಆರ್ಫನೇಜ್ ಟ್ರಸ್ಟ್ ದಾನಿಗಳ ಸಹಕಾರದೊಂದಿಗೆ ಇಲ್ಲಿ ಮನೆಗಳನ್ನು ನಿರ್ಮಿಸಿದ್ದು, ಒಪ್ಪಂದದನ್ವಯ ಮೂಲಸೌಕರ್ಯ ಒದಗಿಸಿಕೊಡುವಲ್ಲಿ ಸರ್ಕಾರ ವಿಫಲವಾಗಿದೆ.

    ಬಜಕೂಡ್ಲು ಕಾನ ಪ್ರದೇಶದಲ್ಲಿ ನಿರ್ಮಿಸಿರುವ 36 ಮನೆಗಳು ಕಾಡಿನ ಮಧ್ಯೆ ಹುದುಗಿ ಹೋದ ಸ್ಥಿತಿಯಲ್ಲಿದೆ. ಕೆಲವು ಮನೆಗಳು ಕಾಡು ಆವರಿಸಿ ಹುಡುಕಾಡಬೇಕಾದ ಸ್ಥಿತಿಯಲ್ಲಿದೆ. ಕಾಂಕ್ರೀಟ್ ಪೈಪುಗಳು ಚದುರಿಬಿದ್ದ ಸ್ಥಿತಿಯಲ್ಲಿದೆ. ಬಹುತೇಕ ಸಾಮಗ್ರಿ ಶಿಥಿಲಗೊಂಡಿದೆ. ನಿವೇಶನ ಸ್ಥಳಕ್ಕೆ ಹೋಗಲು ಸೂಕ್ತ ರಸ್ತೆಯಿಲ್ಲದೆ, ಕುರುಚಲು ಕಾಡಿನ ನಡುವಿನಿಂದ ಹಾದುಹೋಗಬೇಕಾಗಿದೆ. ಕಾಮಗಾರಿ ಪೂರ್ತಿಗೊಂಡು ಎರಡು ವರ್ಷ ಸಮೀಪಿಸುತ್ತಿದ್ದು, ಈ ಮನೆಗಳನ್ನು ಫಲಾನುಭವಿಗಳಿಗೆ ಹಂಚಿಕೆ ಮಾಡಲು ಜಿಲ್ಲಾಡಳಿತಕ್ಕೆ ಸಾಧ್ಯವಾಗದಿರುವುದು ಎಂಡೋಸಲ್ಫಾನ್ ಸಂತ್ರಸ್ತರಲ್ಲಿ ಸರ್ಕಾರ ತೋರುವ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ. ಮೂಲಸೌಕರ್ಯಗಳಾದ ಕುಡಿಯುವ ನೀರು, ವಿದ್ಯುತ್, ರಸ್ತೆ, ಚರಂಡಿ ನಿರ್ಮಾಣ ಕಾಮಗಾರಿ ಇನ್ನಷ್ಟೆ ನಡೆಯಬೇಕಾಗಿದೆ.

    ಎಂಡೋಸಲ್ಫಾನ್ ದುಷ್ಪರಿಣಾಮ ಪೀಡಿತರಿಗಾಗಿ ಎಣ್ಮಕಜೆ ಪಂಚಾಯಿತಿಯ ಬಜಕೂಡ್ಲುವಿನಲ್ಲಿ ನಿರ್ಮಿಸಿರುವ ಮನೆಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸಲು ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಳ್ಳಲಿದೆ. ಈ ಬಗ್ಗೆ ಜಿಲ್ಲೆಯ ಶಾಸಕರನ್ನೊಳಗೊಂಡ ಅವಲೋಕನ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ರಸ್ತೆ ಸೇರಿದಂತೆ ಮೂಲಸೌಕರ್ಯ ಅಭಿವೃದ್ಧಿಗೆ 42.86ಲಕ್ಷ ರೂ. ಹಾಗೂ ವಿದ್ಯುತ್ ಸಂಪರ್ಕಕ್ಕಾಗಿ 12ಲಕ್ಷ ರೂ. ಮೊತ್ತದ ಯೋಜನೆ ತಯಾರಿಸಲಾಗಿದೆ.
    -ಭಂಡಾರಿ ಸ್ವಾಗತ್ ರಣ್‌ವೀರ್ ಚಂದ್ ಕಾಸರಗೋಡು ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts