More

    ಹಸಿರು ರಕ್ಷಣೆಗೆ 75 ಸಾವಿರ ಗಿಡ: ನದಿ ಬದಿ ಬಿದಿರು ಬೆಳೆಸಲು ಯೋಜನೆ

    ರಾಜೇಶ್ ಶೆಟ್ಟಿ ದೋಟ ಮಂಗಳೂರು
    ಪರಿಸರ ಸಂರಕ್ಷಣೆ ನಿಟ್ಟಿನಲ್ಲಿ ಅರಣ್ಯ ಇಲಾಖೆ ಪ್ರತಿ ವರ್ಷದಂತೆ ಈ ವರ್ಷವೂ ಹಸಿರು ರಕ್ಷಣೆಗೆ ಯೋಜನೆ ರೂಪಿಸಿದೆ. ಮಂಗಳೂರು ನಗರ ಮತ್ತು ತಾಲೂಕು ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಹಾಗೂ ರೈತರಿಗೆ 75 ಸಾವಿರ ಗಿಡಗಳನ್ನು ವಿತರಿಸಲು ಸಿದ್ಧಪಡಿಸಲಾಗಿದೆ.

    ಸಾರ್ವಜನಿಕ ವಿತರಣೆ ಹಾಗೂ ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿ 69 ಅಳತೆಯ 50 ಸಾವಿರ ಹಾಗೂ 8X12 ಅಳತೆಯ 25 ಸಾವಿರ ಗಿಡಗಳನ್ನು ಬೆಳೆಸಲಾಗಿದೆ. 69 ಗಿಡಗಳಿಗೆ 1 ರೂ. ಹಾಗೂ 8X12 ಗಿಡಗಳಿಗೆ 3 ರೂ. ದರ ನಿಗದಿಪಡಿಸಲಾಗಿದೆ. ಇದರ ಜತೆಗೆ ರಸ್ತೆ ಬದಿ ಗಿಡ ನಾಟಿ, ನೆಡುತೋಪು ನಿರ್ಮಾಣ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸಿದ್ಧತೆ ನಡೆದಿದೆ. ನಗರದ ಹೊರವಲಯದ ಪಡೀಲ್‌ನಲ್ಲಿರುವ ಅರಣ್ಯ ಇಲಾಖೆ ನರ್ಸರಿಯಲ್ಲಿ ಗಿಡಗಳನ್ನು ಬೆಳೆಸಲಾಗಿದ್ದು, ಜೂನ್ ಮೊದಲ ವಾರದಿಂದ ವಿತರಣೆಗೆ ಕ್ರಮ ಕೈಗೊಳ್ಳಲಾಗುತ್ತದೆ.

    ಪ್ರೋತ್ಸಾಹಧನ: ಮಹಾನಗರ ಪಾಲಿಕೆ ಮತ್ತು ಮಂಗಳೂರು ತಾಲೂಕು ವ್ಯಾಪ್ತಿಯಲ್ಲಿ ರೈತರಿಗೆ ಅವರ ಜಾಗದ ಆರ್‌ಟಿಸಿ ದಾಖಲೆ ಆಧಾರದಲ್ಲಿ ಗಿಡಗಳನ್ನು ವಿತರಿಸಲಾಗುತ್ತದೆ. ಸಾರ್ವಜನಿಕರು ಅರಣ್ಯ ಕಚೇರಿಯಿಂದ ಅರ್ಜಿ ಪಡೆದು ಭರ್ತಿ ಮಾಡಿ ಆಧಾರ್ ಹಾಗೂ ಆರ್‌ಟಿಸಿ ದಾಖಲೆ ನೀಡಿ ಗಿಡಗಳನ್ನು ಪಡೆದುಕೊಳ್ಳಬಹುದು. ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿ ಆಧಾರ್, ಬ್ಯಾಂಕ್ ಪಾಸ್‌ಬುಕ್, ಭಾವಚಿತ್ರ ಹಾಗೂ ಆರ್‌ಟಿಸಿ ದಾಖಲೆ ನೀಡಿ ಗಿಡಗಳನ್ನು ಪಡೆಯಬಹುದು. ಒಬ್ಬರಿಗೆ 150ರಿಂದ 200 ಗಿಡಗಳನ್ನು ನೀಡಲು ಅವಕಾಶವಿದೆ. ಈ ಯೋಜನೆಯಡಿ ರೈತರಿಗೆ ಮೊದಲ ವರ್ಷ ತಲಾ ಗಿಡಕ್ಕೆ 35 ರೂ., 2ನೇ ವರ್ಷ 40 ರೂ., ಹಾಗೂ 3ನೇ ವರ್ಷ 50 ರೂ.ಗಳನ್ನು ಪ್ರೋತ್ಸಾಹಧನವಾಗಿ ನೀಡಲಾಗುತ್ತದೆ. ಕಳೆದ ಸಾಲಿನಲ್ಲಿ ರೈತರಿಗೆ ಗಿಡ ವಿತರಿಸಲು ರಾಜ್ಯ ಸರ್ಕಾರ ಟಾರ್ಗೆಟ್ ನೀಡಿತ್ತು. ಅದರಂತೆ ಗಿಡಗಳನ್ನು ನಾಟಿ ಮಾಡಲಾಗಿತ್ತು. ಈ ವರ್ಷದ ಟಾರ್ಗೆಟ್ ಜೂನ್‌ನಲ್ಲಿ ಇಲಾಖೆ ಕೈ ಸೇರಲಿದೆ ಎಂದು ಉಪ ವಲಯ ಅರಣ್ಯಾಧಿಕಾರಿ ಕೃಷ್ಣ ತಿಳಿಸಿದ್ದಾರೆ.

    ನಿಗದಿತ ಗುರಿ: ಸಾರ್ವಜನಿಕ ಸ್ಥಳಗಳಲ್ಲಿ ಗಿಡ ನೆಡಲು ರಾಜ್ಯ ಸರ್ಕಾರವು ಅರಣ್ಯ ಇಲಾಖೆಗೆ ಪ್ರತಿ ವರ್ಷ ನಿಗದಿತ ಗುರಿ ನೀಡುತ್ತದೆ. ಅದಕ್ಕೆ ತಕ್ಕಂತೆ ಜಿಲ್ಲಾ ಮಟ್ಟದಲ್ಲಿ ಗಿಡ ಬೆಳೆಸಲಾಗುತ್ತದೆ. ಈ ಬಾರಿಯ ಟಾರ್ಗೆಟ್ ಲೆಟರ್ ಇನ್ನೂ ಅಧಿಕಾರಿಗಳ ಕೈಸೇರಿಲ್ಲ. ಕಳೆದ ಎರಡು ವರ್ಷಗಳಲ್ಲಿ ಕರೊನಾ ಪರಿಣಾಮ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯ ಗಿಡಗಳನ್ನು ನಾಟಿ ಮಾಡಲು ಸಾಧ್ಯವಾಗಿಲ್ಲ. ದ.ಕ. ಜಿಲ್ಲೆಯ ತೆರೆದ ಪ್ರದೇಶಗಳು, ಸರ್ಕಾರಿ ಜಾಗ, ರಸ್ತೆ ಬದಿ, ಡಿವೈಡರ್ ಮಧ್ಯ ಗಿಡಗಳನ್ನು ನೆಡಲು ಅರಣ್ಯ ಇಲಾಖೆ ಸಜ್ಜಾಗಿದೆ. ಸಾಮಾನ್ಯವಾಗಿ ಮೇ ಅಂತ್ಯದಿಂದ ಜುಲೈವರೆಗೆ ಈ ಪ್ರಕ್ರಿಯೆ ನಡೆಯುತ್ತದೆ.

    30 ಜಾತಿಯ ಗಿಡಗಳು: ಸ್ಥಳೀಯ ಹಣ್ಣಿನ ಗಿಡಗಳು, ಔಷಧೀಯ ಸಸ್ಯಗಳು ಸೇರಿದಂತೆ ಸುಮಾರು 30 ಜಾತಿಯ ಗಿಡಗಳನ್ನು ಬೆಳೆಸಲಾಗಿದೆ. ಹಲಸು, ಹೆಬ್ಬಲಸು, ಹೊನ್ನೆ, ಸುರಗಿ, ಪುನರ್ಪುಳಿ, ಮಾವು, ವಾಟೆ ಹುಳಿ, ನೇರಳೆ, ಸೀತಾ, ಅಶೋಕ, ಸಾಗುವಾನಿ, ಶ್ರೀಗಂಧ, ಬೀಟೆ, ಹೊಂಗೆ ಸಹಿತ ವಿವಿಧ ಗಿಡಗಳನ್ನು ಬೆಳೆಸಲಾಗಿದೆ.

    ಈ ಬಾರಿ ಹೊಳೆಬದಿ ಹಾಗೂ ನೀರಿನಾಶ್ರಯದ ಸ್ಥಳಗಳಲ್ಲಿ ಬಿದಿರು ಬೆಳೆಸಲು ಇಲಾಖೆ ಯೋಜನೆ ರೂಪಿಸಿದೆ. ಅದಕ್ಕಾಗಿ 29,260 ಬಿದಿರು ಸಸಿಗಳನ್ನು ಬೆಳೆಸಲಾಗಿದೆ. ಇದು ಇಲಾಖೆಯ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ.
    ಪ್ರಶಾಂತ್ ಪೈ, ವಲಯ ಅರಣ್ಯಾಧಿಕಾರಿ, ಮಂಗಳೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts