More

    ಕಾಡಾನೆ ದಾಳಿಗೆ ಅರಣ್ಯ ಇಲಾಖೆ ಸಿಬ್ಬಂದಿ ಬಲಿ

    ಸರಗೂರು: ತಾಲೂಕಿನ ಕೆಬ್ಬೇಪುರ ಹಾಡಿಯ ಸಮೀಪ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಕಾಡಾನೆ ದಾಳಿ ನಡೆಸಿ ಬಲಿ ಪಡೆದಿದೆ.

    ಬಂಡೀಪುರ ಅರಣ್ಯ ವ್ಯಾಪ್ತಿಯ ಮೊಳೆಯೂರು ವಿಭಾಗದ ಕೆಬ್ಬೇಪುರ ಹಾಡಿಯ ನಿವಾಸಿ ಹಾಗೂ ಅರಣ್ಯ ಇಲಾಖೆಯಲ್ಲಿ ವಾಚರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಬಿ.ರಾಜು (38) ಮೃತ. ಇವರು ನಾಗರಹೊಳೆ ಅರಣ್ಯ ಪ್ರದೇಶದ ಉದ್ಬೂರು ಗೇಟ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಎಂದಿನಂತೆ ಗುರುವಾರ ಬೆಳಗ್ಗೆಯೇ ಕೆಲಸಕ್ಕೆ ಸಿದ್ಧರಾಗಿ ಬಸ್ ಹತ್ತಲು ಕೆಬ್ಬೇಪುರ ಹಾಡಿಯಿಂದ ಮೊಳೆಯೂರಿಗೆ ನಡೆದುಕೊಂಡು ಹೋಗುವ ವೇಳೆ ಕಾಡಾನೆಯೊಂದು ಏಕಾಏಕಿ ದಾಳಿ ನಡೆಸಿದೆ. ದಾಳಿಗೆ ಸಿಲುಕಿದ ರಾಜು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತದೇಹ ರಸ್ತೆ ಪಕ್ಕದ ಹಳ್ಳವೊಂದರಲ್ಲಿ ಬಿದಿದ್ದ ಪರಿಣಾಮ ಮಧ್ಯಹ್ನದವರೆಗೂ ಯಾರಿಗೂ ಗೊತ್ತಾಗಿರಲಿಲ್ಲ. ಆದರೆ ಮಧ್ಯಾಹ್ನ ರಾಜುವಿನ ಮಗಳು ಬಟ್ಟೆ ತೊಳೆಯಲು ಹೋಗುವ ವೇಳೆ ತಂದೆಯ ಮೃತದೇಹವನ್ನು ಕಂಡು ಗಾಬರಿಗೊಂಡು ಗ್ರಾಮಸ್ಥರಿಗೆ ವಿಚಾರ ಮುಟ್ಟಿಸಿದ್ದಾಳೆ. ಬಳಿಕ ಸ್ಥಳಕ್ಕೆ ಬಂದ ಗ್ರಾಮಸ್ಥರು ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದಾರೆ.

    ಅರಣ್ಯ ಇಲಾಖೆ ವಿರುದ್ಧ ಆಕ್ರೋಶ: ಈ ಭಾಗದಲ್ಲಿ ನಿರಂತರವಾಗಿ ಕಾಡುಪ್ರಾಣಿಗಳ ಹಾವಳಿಯಾಗುತ್ತಿದ್ದು, ಜನರನ್ನು ಬಲಿ ಪಡೆಯುತ್ತಿವೆ. ಕಾಡಾನೆ ದಾಳಿ ನಿಯಂತ್ರಿಸಲು ರೈಲ್ವೆ ಕಂಬಿ ಬ್ಯಾರಿಕೇಡ್ ಅಳವಡಿಸುವಂತೆ ಸಾಕಷ್ಟು ಬಾರಿ ಮನವಿ ಮಾಡಿದ್ದರೂ ಅರಣ್ಯ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಪರಿಣಾಮ ಕಾಡಾನೆಗಳ ದಾಳಿಗೆ ಜೀವಗಳು ಬಲಿಯಾಗುತ್ತಿವೆ. ಕೂಡಲೇ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳು ಸ್ಥಳಕ್ಕೆ ಬರಬೇಕು, ಮೃತನ ಕುಟುಂಬಕ್ಕೆ ಪರಿಹಾರ ನೀಡುವ ಜತೆಗೆ ಕುಟುಂಬದ ಸದಸ್ಯರಿಗೆ ಉದ್ಯೋಗ ನೀಡಬೇಕು. ಕಾಡಾನೆಗಳ ಹಾವಳಿಗೆ ಶಾಶ್ವತ ಪರಿಹಾರ ನೀಡಬೇಕು ಎಂದು ಪಟ್ಟುಹಿಡಿದರು. ಅಲ್ಲದೆ ಘಟನೆ ನಡೆದು ಸಾಕಷ್ಟು ಸಮಯ ಕಳೆದರೂ ಸ್ಥಳಕ್ಕೆ ಆಗಮಿಸದ ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

    ಬಳಿಕ ಪ್ರತಿಭಟನಾಕಾರರ ಮನವೊಲಿಸಿದ ಅರಣ್ಯಾಧಿಕಾರಿಗಳು ಮೃತರ ಕುಟುಂಬಕ್ಕೆ 15 ಲಕ್ಷ ರೂ. ಚೆಕ್ ವಿತರಿಸಿದರು. ಹಾಗೂ ಪತ್ನಿಗೆ ತಿಂಗಳಿಗೆ 5 ಸಾವಿರ ರೂ.ನಂತೆ ಮಾಸಾಶನ ಹಾಗೂ ಮೃತರ ಮಗನಿಗೆ ಇಲಾಖೆಯಲ್ಲಿ ಉದ್ಯೋಗ ನೀಡುವ ಭರವಸೆ ನೀಡಲಾಯಿತು.

    ಹುಲಿ ಯೋಜನೆಯ ಎಪಿಸಿಸಿಎಫ್ ನಿಂಗರಾಜು, ಆನೆ ಯೋಜನೆ ಎಪಿಸಿಸಿಎಫ್ ಮನೋಜ್, ಸಿಎಫ್ ರಮೇಶ್‌ಕುಮಾರ್, ಎಸಿಎಫ್ ಪರಮೇಶ್, ತಹಸೀಲ್ದಾರ್ ರುಕೀಯಾ ಬೇಗಂ, ಆರ್‌ಎಫ್‌ಒಗಳಾದ ಅಮೃತಾ, ನಾರಾಯಣ, ವಿವೇಕ್, ಪುನೀತ್, ಪಿಎಸ್‌ಐ ಹನುಮಂತ ಹುಪ್ಪಾರ್, ದಸಂಸ (ಅಂಬೇಡ್ಕರ್ ವಾದ) ಮುಖಂಡರಾದ ಕೂಡಗಿ ಗೋವಿಂದರಾಜು, ಶ್ರೀಧರ, ಗಣೇಶ, ಮಣಿಕಂಠ, ನಾಗೇಂದ್ರ ಮುಂತಾದವರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts