More

    ಬಿಟ್’ಕಾಯಿನ್ ದಂಧೆಗೆ ಫಾರಿನ್ ಸಾಕ್ಷ್ಯ

    ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು

    ರಾಜ್ಯದಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದ ಅಂತಾರಾಷ್ಟ್ರೀಯ ಹ್ಯಾಕರ್ ಶ್ರೀಕಿ ‘ಬಿಟ್ ಕಾಯಿನ್ ಹಗರಣ’ದ ರಹಸ್ಯ ಭೇದಿಸಲು ಇನ್ನಿಲ್ಲದ ಕಸರತ್ತು ನಡೆಸಿರುವ ಸಿಐಡಿ ವಿಶೇಷ ತನಿಖಾ ತಂಡ (ಎಸ್‌ಐಟಿ) ಇದೀಗ ವಿದೇಶಿ ಸಾಕ್ಷ್ಯ ಸಂಗ್ರಹಿಸುವಲ್ಲಿ ನಿರತವಾಗಿದೆ. 12 ದೇಶಗಳನ್ನು ಸಂಪರ್ಕ ಮಾಡಿರುವ ಎಸ್‌ಐಟಿ ಅಧಿಕಾರಿಗಳು, 30ಕ್ಕೂ ಅಧಿಕ ವಿದೇಶಿ ವಿನಿಮಯ ಸಂಸ್ಥೆಗಳ ಮೂಲಕ ಮಾಹಿತಿ ಕಲೆಹಾಕುತ್ತಿದೆ. ಇನ್ನೊಂದೆಡೆ, ತಾಂತ್ರಿಕ ಪರಿಣತರ ನೆರವು ಪಡೆದು ಬಿಟ್ ಕಾಯಿನ್ ಅಕ್ರಮ ಬಯಲಿಗೆಳೆಯಲು ಹೆಜ್ಜೆಯಿಟ್ಟಿದೆ.
    ಕ್ರಿಪ್ಟೋ ಕರೆನ್ಸಿ ಸಂಬಂಧಿತ ಮಾಹಿತಿ ಮತ್ತು ದಾಖಲೆಗಳನ್ನು ವಿದೇಶಿ ಸಂಸ್ಥೆಗಳು ಮತ್ತು ಕ್ರಿಪ್ಟೋ ಕರೆನ್ಸಿ ಎಕ್ಸ್‌ಚೇಂಜ್ ಸಂಸ್ಥೆಗಳಿಂದ ಪಡೆಯುತ್ತಿದೆ. ಹೊರದೇಶಗಳೊಂದಿಗೆ ವ್ಯವಹಾರ ನಡೆಸುವ ಉದ್ದೇಶಕ್ಕಾಗಿ ಕಾನೂನು ಮತ್ತು ನಿಯಮಗಳ ಅನ್ವಯ ‘ಮ್ಯೂಚುವಲ್ ಲೀಗಲ್ ಅಸಿಸ್ಟೆನ್ಸ್ ಟ್ರಸ್ಟಿ (ಎಂಎಲ್‌ಎಟಿ) ಸೇವೆಯ ಮೂಲಕ ಯುಎಸ್‌ಎ, ಹಾಂಕಾಂಗ್, ಕೊರಿಯಾ, ಸಿಂಗಾಪುರ, ಇರಾನ್, ಫಿನ್ಲೆಂಡ್, ಟರ್ಕಿ, ನೈಜೀರಿಯಾ, ಲಕ್ಸಂಬರ್ಗ್ ದೇಶಗಳೊಂದಿಗೆ ಎಸ್‌ಐಟಿ ಅಧಿಕಾರಿಗಳು ಪತ್ರ ವ್ಯವಹಾರ ನಡೆಸುತ್ತಿದ್ದಾರೆ. ಇದಲ್ಲದೆ, ಐರ್ಲೆಂಡ್, ಸೀಷೆಲ್ಸ್, ಸ್ವಿಜರ್ಲೆಂಡ್ ಮುಂತಾದ ದೇಶಗಳಿಂದ ಅಗತ್ಯ ಮಾಹಿತಿ ಕೊಡಿಸುವಂತೆ ಇಂಟರ್‌ಪೋಲ್ ಮುಖಾಂತರ ಎಸ್‌ಐಟಿ ಮನವಿ ಮಾಡಿದೆ.
    ಶ್ರೀಕಿ ಬಿಟ್ ಕಾಯಿನ್ ಹಗರಣ ಹೊರತುಪಡಿಸಿ ತುಮಕೂರು, ಬೆಂಗಳೂರು ಸೇರಿ ರಾಜ್ಯದಲ್ಲಿ 8 ಬಿಟ್ ಕಾಯಿನ್ ವಂಚನೆ ಪ್ರಕರಣಗಳು ವರದಿಯಾಗಿವೆ. ಈ ಎಂಟೂ ಪ್ರಕರಣಗಳಿಗೆ ಶ್ರೀಕಿ ಬಿಟ್ ಕಾಯಿನ್ ಹಗರಣದ ನಂಟಿರುವುದು ಎಸ್‌ಐಟಿ ತನಿಖೆಯಲ್ಲಿ ಗೊತ್ತಾಗಿದೆ. ಇದೇ ಕಾರಣಕ್ಕೆ ಎಲ್ಲ ಪ್ರಕರಣಗಳನ್ನೂ ತನಿಖೆ ನಡೆಸಲು ಎಸ್‌ಐಟಿ ಅಧಿಕಾರಿಗಳು ಕೋರ್ಟ್‌ನಿಂದ ಅಗತ್ಯ ಅನುಮತಿ ಪಡೆದುಕೊಂಡಿದ್ದಾರೆ. ಎಲ್ಲವೂ ಕ್ರಿಪ್ಟೋ ಕರೆನ್ಸಿಗೆ ಸಂಬಂಧಿಸಿದ ಪ್ರಕರಣಗಳಾಗಿರುವುದರಿಂದ ಲಭ್ಯವಾಗುವ ಸಾಕ್ಷಾೃಧಾರ ತನಿಖೆಗೆ ಸಹಕಾರಿಯಾಗಲಿದೆ ಎಂಬುದು ಎಸ್‌ಐಟಿ ಆಶಯವಾಗಿದೆ.

    ಬಿಟ್ ಕಾಯಿನ್ ಟ್ರೇಡಿಂಗ್, ಬ್ಲಾಕ್ ಚೈನ್, ಡಾರ್ಕ್ ವೆಬ್, ಗೇಮಿಂಗ್ ವೆಬ್‌ಸೈಟ್ ಮೊದಲಾದವುಗಳು ಒಂದಕ್ಕೊಂದು ಸಂಬಂಧಪಟ್ಟ ಪ್ರಕರಣಗಳಾಗಿರುವುದರಿಂದ ಸರ್ಕಾರದ ಅನುಮೋದನೆ ಪಡೆದು ತಾಂತ್ರಿಕ ಪರಿಣತರ ನೆರವು ಬಳಸಿಕೊಂಡು ಅವ್ಯವಹಾರ ಬಯಲಿಗೆಳೆಯಲು ಎಸ್‌ಐಟಿ ಶ್ರಮಿಸುತ್ತಿದೆ. ಈ ಎಂಟೂ ಪ್ರಕರಣಗಳಲ್ಲಿ ಬಂಧನಕ್ಕೆ ಒಳಗಾಗಿದ್ದ ಆರೋಪಿಗಳನ್ನು ಮರು ವಿಚಾರಣೆ ನಡೆಸುತ್ತಿದ್ದು, ಸಾಕ್ಷಿದಾರರು ಮತ್ತು ತನಿಖೆ ನಡೆಸಿದ್ದ ಪೊಲೀಸ್ ಅಧಿಕಾರಿಗಳ ಹೇಳಿಕೆಯನ್ನು ಎಸ್‌ಐಟಿ ದಾಖಲಿಸಿಕೊಳ್ಳುತ್ತಿದೆ.

    ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳ ಮನೆ, ಕಚೇರಿಗಳು ಮತ್ತು ತನಿಖೆಯಲ್ಲಿ ಭಾಗಿಯಾಗಿದ್ದ ಪೊಲೀಸ್ ಅಧಿಕಾರಿಗಳು ಸೇರಿ ಬೆಂಗಳೂರು, ಗೋವಾ ಮತ್ತು ಪಶ್ಚಿಮ ಬಂಗಾಳದಲ್ಲಿ 11 ಮನೆ, ಕಚೇರಿಗಳನ್ನು ಶೋಧ ನಡೆಸಿ ಅಗತ್ಯ ದಾಖಲೆ ಮತ್ತು ಎಲೆಕ್ಟ್ರಾನಿಕ್ ಉಪಕರಣಗಳನ್ನು ಜಪ್ತಿ ಮಾಡಲಾಗಿದೆ. ಜತೆಗೆ, ಪತ್ರ ವ್ಯವಹಾರದ ಮೂಲಕ ಅಗತ್ಯ ದಾಖಲಾತಿ ಮತ್ತು ಸಾಕ್ಷಾೃಧಾರಗಳನ್ನು ಸಂಗ್ರಹಿಸಲಾಗುತ್ತಿದೆ. ಕೃತ್ಯ ನಡೆದ ಸ್ಥಳ ಹಾಗೂ ಇತರೆ ಸ್ಥಳಗಳಲ್ಲಿ ಪಂಚನಾಮೆ ನಡೆದಿದೆ. ಜಪ್ತಿಯಾದ ಎಲೆಕ್ಟ್ರಾನಿಕ್ ಉಪಕರಣಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನೆ ಮಾಡಿದ್ದು, ವರದಿಗಾಗಿ ಕಾಯಲಾಗುತ್ತಿದೆ. ಕೆಲ ಉಪಕರಣಗಳನ್ನು ತಾಂತ್ರಿಕ ತಜ್ಞರಿಗೆ ಕೊಟ್ಟು ಹೆಚ್ಚುವರಿ ಸಾಕ್ಷಾೃಧಾರ ಕಲೆ ಹಾಕಲಾಗುತ್ತಿದ್ದು, ವಿಶ್ಲೇಷಣಾ ವರದಿ ಸಹ ಕೋರಲಾಗಿದೆ ಎಂದು ಗೃಹ ಇಲಾಖೆ ಮೂಲಗಳು ತಿಳಿಸಿವೆ.

    ಬ್ಯಾಂಕ್ ಮೂಲಕ ನಗದು ಡ್ರಾ

    ಶ್ರೀಕಿ ಬಿಟ್ ಕಾಯಿನ್ ಹಗರಣ 2020-21ರಲ್ಲಿ ನಡೆದಿದೆ. ಈ ಅವಧಿಯಲ್ಲಿ ನಡೆದಿರುವ ವಹಿವಾಟು ಕುರಿತು ಮಾಹಿತಿ ಸಂಗ್ರಹಿಸಲು ಕ್ರಿಪ್ಟೋ ಕರೆನ್ಸಿಯ ಪ್ರತಿಷ್ಠಿತ ಸಂಸ್ಥೆಯಾದ ಬಿಟ್‌ಫಿನಿಕ್ಸ್ ಸೇರಿ 30ಕ್ಕೂ ಅಧಿಕ ವಿದೇಶಿ ವಿನಿಮಯ ಸಂಸ್ಥೆಗಳ ಜತೆ ಎಸ್‌ಐಟಿ ಸಂಪರ್ಕ ಸಾಧಿಸಿದೆ. ವರ್ಗಾವಣೆಯಾಗಿರುವ ಬಿಟ್ ಕಾಯಿನ್‌ಗಳನ್ನು ನಗದು ರೂಪದಲ್ಲಿ ಸ್ಥಳೀಯ ಬ್ಯಾಂಕ್‌ಗಳಲ್ಲೇ ಡ್ರಾ ಮಾಡಿಕೊಂಡಿರುವ ಅನುಮಾನ ವ್ಯಕ್ತವಾಗಿದೆ. ಜತೆಗೆ, ಕೆಲ ಆಭರಣ ಮಾಲೀಕರ ಮುಖಾಂತರವೂ ನಗದು ಮಾಡಿಕೊಂಡಿರುವ ಬಗ್ಗೆಯೂ ಎಸ್‌ಐಟಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

    ವಿಶ್ಲೇಷಣಾ ವರದಿ; ದಾಖಲೆ ಬರಬೇಕು

    ಬಿಟ್ ಕಾಯಿನ್ ಹಗರಣದಲ್ಲಿ ಸಿಲುಕಿರುವ ಎಲ್ಲ ಆರೋಪಿಗಳ ಕ್ರಿಪ್ಟೋ ವ್ಯಾಲೆಟ್‌ಗಳು ಮತ್ತು ಬ್ಯಾಂಕ್ ಖಾತೆಗಳ ವ್ಯವಹಾರಗಳ ಪರಿಶೀಲನೆ ಕಾರ್ಯ ನಡೆಯುತ್ತಿದೆ. ಕ್ರಿಪ್ಟೋ ತಜ್ಞರು ಮತ್ತು ಆರ್ಥಿಕ ತಜ್ಞರ ಸಹಾಯವನ್ನು ಎಸ್‌ಐಟಿ ಪಡೆಯುತ್ತಿದೆ. ವಿಧಿವಿಜ್ಞಾನ ಪ್ರಯೋಗಾಲಯದಿಂದ ಮತ್ತು ಕ್ರಿಪ್ಟೊ ಕರೆನ್ಸಿ ತಾಂತ್ರಿಕ ಪರಿಣತರಿಂದ ವಿಶ್ಲೇಷಣಾ ವರದಿಗಾಗಿ ಎಸ್‌ಐಟಿ ಅಧಿಕಾರಿಗಳು ಕಾಯುತ್ತಿದ್ದಾರೆ. ಅಲ್ಲದೆ, ವಿದೇಶಿ ಮೂಲದ ಸಂಸ್ಥೆಗಳು ಮತ್ತು ಕ್ರಿಪ್ಟೊ ಕರೆನ್ಸಿ ಎಕ್ಸ್‌ಚೇಂಜ್‌ಗಳಿಂದ ಮಾಹಿತಿ ಮತ್ತು ದಾಖಲಾತಿಗಳು ಬರುವುದು ಬಾಕಿ ಇದೆ. ಕೇಳಿರುವ ದಾಖಲಾತಿಗಳು ಹಾಗೂ ವರದಿಗಳು ಬರುವವರೆಗೆ ಬಿಟ್ ಕಾಯಿನ್ ಹಗರಣ ಸಂಬಂಧ ನಿರ್ದಿಷ್ಟ ಮತ್ತು ಅಂತಿಮ ಅಭಿಪ್ರಾಯ ನೀಡುವುದು ಸಾಧ್ಯವಿಲ್ಲ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

    ಮೊದಲ ಕ್ರಿಪ್ಟೋ ಕರೆನ್ಸಿ ಕಂಪನಿಗೂ ಸಂಕಷ್ಟ

    ತುಮಕೂರಿನ ಜಯನಗರ ನಿವಾಸಿ ಬಿ.ವಿ. ಹರೀಶ್, 2017ರಲ್ಲಿ ರಾಜಾಜಿನಗರ ಡಾ.ರಾಜ್ ಕುಮಾರ್ ರಸ್ತೆಯಲ್ಲಿ ಯೂನೊಕಾಯಿನ್ ಟೆಕ್ನಾಲಜಿಸ್ ಪ್ರೈ.ಲಿ. ಕಂಪನಿ ತೆರೆದು ಡಿಜಿಟಲ್ ಕರೆನ್ಸಿ (ಕ್ರಿಪ್ಟೊ ಕರೆನ್ಸಿ) ವ್ಯವಹಾರ ನಡೆಸುತ್ತಿದ್ದರು. ಇದರ ನಡುವೆ ಕಚೇರಿ ಕಂಪ್ಯೂಟರ್‌ನಲ್ಲಿ ಡಾಟಾ ಬೇಸ್ ಹ್ಯಾಕ್ ಮಾಡಿ 60.6 ಬಿಟ್ ಕಾಯಿನ್ ದೋಚಿದ್ದಾರೆ. ಇದರ ಮೂಲ ಬೆಲೆ 1 ಬಿಟ್ ಕಾಯಿನ್‌ಗೆ 1.67 ಲಕ್ಷ ರೂ.ನಂತೆ 1.14 ಕೋಟಿ ರೂ. ಆಗಿತ್ತು ಎಂದು 2017ರ ಜೂನ್‌ನಲ್ಲಿ ತುಮಕೂರಿನ ನ್ಯೂ ಎಕ್ಸ್‌ಟೆನ್ಷನ್ ಠಾಣೆಗೆ ಹರೀಶ್ ದೂರು ಸಲ್ಲಿಸಿದ್ದರು. ಇದಾದ ಮೇಲೆ ಆರ್‌ಬಿಐಯಿಂದ ಕ್ರಿಪ್ಟೋ ಕರೆನ್ಸಿಗೆ ಅನುಮತಿ ಸಿಗಲಿದೆ ಎಂಬ ಭರವಸೆಯಲ್ಲಿ ಹಳೇ ವಿಮಾನ ನಿಲ್ದಾಣ ರಸ್ತೆಯ ಕೆಂಪ್‌ೆರ್ಟ್ ಮಾಲ್‌ನಲ್ಲಿ ಕ್ರಿಪ್ಟೋ ಕರೆಸ್ಸಿ ಎಟಿಎಂ ತೆರೆದಿದ್ದರು. ಇದು ದೇಶದಲ್ಲಿ ಮೊದಲ ಬಿಟ್‌ಕಾಯಿನ್ ಎಟಿಎಂ ಎನ್ನಲಾಗಿತ್ತು. ಕಾನೂನುಬಾಹಿರ ಎಂದು ಸಿಸಿಬಿ ಅಧಿಕಾರಿಗಳು ಎಟಿಎಂ ಜಪ್ತಿ ಮಾಡಿ ಹರೀಶ್ ವಿರುದ್ಧ ಕೇಸ್ ದಾಖಲಿಸಿದ್ದರು. ಇದೀಗ ಯೂನೋಕಾಯಿನ್ ಟೆಕ್ನಾಲಜಿಸ್ ಪ್ರೈ.ಲಿ. ಕಂಪನಿ ವ್ಯವಹಾರ ಮತ್ತು ಎ್ಐಆರ್ ಕುರಿತು ಸಹ ಎಸ್‌ಐಟಿ ತನಿಖೆ ನಡೆಸುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts