More

    ವರ್ಷದ ಮುನ್ನೋಟ: ಈ ಯುಗಾದಿಯಿಂದ ಮುಂದಿನ ಯುಗಾದಿವರೆಗೆ..

    ವರ್ಷದ ಮುನ್ನೋಟ: ಈ ಯುಗಾದಿಯಿಂದ ಮುಂದಿನ ಯುಗಾದಿವರೆಗೆ..ಹೊಸ ವರ್ಷ ಯುಗಾದಿ ಅಡಿಯಿಡುತ್ತಿರುವ ಈ ಹೊತ್ತಿನಲ್ಲಿ, ಶೋಭಾಕೃತ ನಾಮ ಸಂವತ್ಸರದ ಆಗುಹೋಗುಗಳನ್ನು ಮುನ್ನಂದಾಜಿಸುವ ಪ್ರಯತ್ನ ಇಲ್ಲಿದೆ.

    ಶುಭಕೃತ ಎಂದರೆ ಶುಭ ಕೊಡುವುದು ಎಂದರ್ಥ. ಆದರೆ ಕಳೆದ ವರ್ಷ ಸುಖಶಾಂತಿ ಸಿಗಲಿಲ್ಲ, ಸರ್ಕಾರಗಳು ಪ್ರಜೆಗಳಿಗೆ ಬೇಕಾದ್ದನ್ನು ಕೊಡಲಾಗದೇ ವಿಫಲವಾದವು. ಇಷ್ಟರ ನಡುವೆಯೂ ಸಂವತ್ಸರದ ಅಧಿಪತಿ ಸಮಾಧಾನ ಕೊಟ್ಟಿದ್ದಾನೆ ಎಂದು ಹೇಳಲು ಒಂದು ಉದಾಹರಣೆ ಎಂದರೆ ಸಮಾಜ ರೋಗಮುಕ್ತವಾಯಿತು. ಶೋಭಾಕೃತ ನಾಮ ಸಂವತ್ಸರದ ಅಧಿಪತಿ ಶ್ರೀರಾಮಚಂದ್ರ. ದಶಾವತಾರದಲ್ಲಿ ಪರಮ ಪವಿತ್ರ ಅವತಾರ ಶ್ರೀ ಸೀತಾರಾಮ ಲಕ್ಷ್ಮಣರು ಮನುಷ್ಯರಾಗಿ ದಶರಥನ ಮನೆಯಲ್ಲಿ ಜನಿಸಿ, ಸುಂದರ ಭರತಖಂಡ ನಿರ್ವಣಕ್ಕಾಗಿ ಅವತರಣಗೊಂಡರು. ಶೋಭಕೃತುವಿನಲ್ಲಿ ಕೃತು ಎಂದರೆ ಒಳ್ಳೆಯದನ್ನು ಮಾಡು, ಶೋಭಾಯಮಾನ, ಪ್ರಜೆಗಳಿಗೆ ಸುಖ ಶಾಂತಿ ಕೊಡುವ ಎಂದರ್ಥ. ಯುಗಾದಿಯಂದು ಮುಂಜಾನೆ ಅಭ್ಯಂಜನ ಮಾಡಿ, ಗಣಪತಿ, ಕುಲದೇವತೆ ಪೂಜೆ ಮಾಡಿ, ಬೇವು ಬೆಲ್ಲ ತಿನ್ನಬೇಕು. ಈ ವೇಳೆ,

    ಶತಾಯ ವಜ್ರ ದೇಹಾಯ ಸರ್ವಸಂಪತ್ಕರಾಯಚ / ಸರ್ವಾರಿಷ್ಟ ವಿನಾಶಾಯ ನಿಂಬಕಂದಳ ಭಕ್ಷಣಂ / ಶ್ಲೋಕ ಪಠಣ ಸೂಕ್ತವಾದೀತು.

    ಇದರ ತಾತ್ಪರ್ಯ: ‘ನೂರು ವರ್ಷಗಳ ಆಯುಷ್ಯ, ಸದೃಢ ಆರೋಗ್ಯ, ಸಕಲ ಸಂಪತ್ತು ಪ್ರಾಪ್ತಿಗಾಗಿಯೂ ಸಕಲ ಅರಿಷ್ಟ ನಿವಾರಣೆಗಾಗಿಯೂ ಬೇವು ಬೆಲ್ಲವನ್ನು ಸ್ವೀಕರಿಸುತ್ತೇನೆ.’ ಹಿಂದಿನ ಸಂವತ್ಸರದಲ್ಲಿ ಎರಡು ಗ್ರಹಣ ಬಂದಿದ್ದವು. ಈ ಬಾರಿ ಆಶ್ವಯುಜ ಮಾಸ, ಶುಕ್ಲ ಪೂರ್ಣಿಮ ರಾಹುಕೃತ ಚಂದ್ರ ಗ್ರಹಣ ಮಾತ್ರ ಇದೆ. ಬೇರೆ ಗ್ರಹಣಗಳಿದ್ದರೂ ಭಾರತಕ್ಕೆ ಅನ್ವಯವಾಗುವುದಿಲ್ಲ.

    ಗ್ರಹ ವಿಚಾರ

    ಗ್ರಹಗಳ ಸ್ಥಾನಪಲ್ಲಟದ ಬಗ್ಗೆ ವಿಶ್ಲೇಷಿಸುವುದಾದರೆ ಆಗಲೇ ಜನವರಿ 17ರಂದು ಶನಿ ಮಕರದಿಂದ ಕುಂಭಕ್ಕೆ ಬಂದಿದ್ದಾನೆ. ಏಪ್ರಿಲ್ 21ರಂದು ಗುರು ಮೇಷಕ್ಕೆ ಹೋಗುತ್ತಾನೆ. ಅಕ್ಟೋಬರ್ 30ರಂದು ಮೇಷದಿಂದ ಮೀನಕ್ಕೆ ರಾಹು ಬರುತ್ತಾನೆ. ಕೇತು ತುಲಾದಿಂದ ಕನ್ಯಾ ರಾಶಿಗೆ ಬರುತ್ತಾನೆ. ಒಂದು ಕಡೆ ಗುರು ಮೇಷಕ್ಕೆ ಬರುವುದು ಅಂಗಾರಕನ ಮನೆಗೆ, ಅಂಗಾರಕ ಪಾಪಗ್ರಹ. ಗುರು ಬಂದರೆ ಅವನೂ ಪಾಪಗ್ರಹದ ಪಾಲುದಾರ. ರಾಹು ಕೇತು ಪಾಪಗ್ರಹಗಳೇ, ಎರಡೂ ಸ್ಥಾನ ಬದಲಿಸುತ್ತವೆ, ಏಪ್ರಿಲ್ 21ರಿಂದ ಗುರು ರಾಹು ದೆಸೆ ಇರಲಿದೆ. ಗುರು-ರಾಹು ಸಂಯೋಗ ಒಳ್ಳೆಯದಲ್ಲ. ಗುರು ರಾಹು ಸಂಧಿ. ರಾಹು ನಿರ್ಗಮನ ಆಗುವವರೆಗೂ ಯಾವುದೇ ಒಳ್ಳೆಯ ಫಲ ನಿರೀಕ್ಷೆ ಮಾಡಲು ಆಗುವುದಿಲ್ಲ. ಗುರು- ರಾಹು ದೆಸೆ ವಿಶ್ವವನ್ನೇ ಅಲ್ಲಾಡಿಸಿಬಿಡುತ್ತದೆ. ಚೈನಾ, ಅಮೆರಿಕಾ, ಆಸ್ಟ್ರೇಲಿಯಾ, ಪಾಕಿಸ್ತಾನ, ಜಪಾನ್ ಎಲ್ಲವನ್ನೂ ವಿವಿಧ ರೂಪದಲ್ಲಿ ಕಾಡಬಹುದು. ಚಂಡಮಾರುತ, ಭೂಕಂಪ, ಕೊಚ್ಚಿ ಹೋಗುವ ಮಳೆ ಬರಲಿದೆ. ಹೆಚ್ಚು ಸಂಕಟ ಬರುವುದು ಬ್ರಿಟನ್​ಗೆ. ಪಾಕಿಸ್ತಾನ ಆರ್ಥಿಕವಾಗಿ ಇನ್ನಷ್ಟು ಸಂಕಷ್ಟಕ್ಕೆ ಸಿಲುಕಲಿದೆ. ಭಾರತಕ್ಕೆ ಶರಣಾಗಬೇಕಾದ ದಿನ ಬಹಳ ದೂರ ಇಲ್ಲ.

    ರಷ್ಯಾಗೆ ಭಾರತ ಬುದ್ಧಿ ಹೇಳುವ ಸಂದರ್ಭ ಬರಬಹುದು. ಅಮೆರಿಕಾ ಮತ್ತು ಬ್ರಿಟನ್​ನಲ್ಲಿ ಭಾರತೀಯರು ಹಿಂಸೆ ಅನುಭವಿಸಬೇಕಾಗುತ್ತದೆ. ಚೈನಾದ ಸೈನ್ಯ ಹಾಗೂ ಪ್ರಜಾ ಸಂಖ್ಯೆ ನಷ್ಟ ಆಗುತ್ತದೆ.

    ಭಾರತಕ್ಕೆ ಹೊಳಪು

    ಗುರು ಕಟಕ ರಾಶಿಗೆ ಬಂದಾಗ ಅಂದರೆ ಮೂರು ವರ್ಷದ ಬಳಿಕ ಭಾರತ ವಿಶ್ವದಲ್ಲಿ ಇನ್ನಷ್ಟು ಪ್ರಭಾವಿಯಾಗಿ, ಹೊಳಪಿನಿಂದ ಕಾಣಿಸಲಿದೆ. ವಿಜ್ಞಾನ, ತಂತ್ರಜ್ಞಾನ ಸಾಕಷ್ಟು ಅಭಿವೃದ್ಧಿಗೊಳ್ಳಲಿದೆ. ಸೆಪ್ಟೆಂಬರ್​ನಲ್ಲಿ ಅಸ್ವಾಭಾವಿಕ ಮಳೆ, ಗಾಳಿ, ಚಂಡಮಾರುತ, ಭೂಕಂಪದಂತಹ ಘಟನೆಗಳು ಉಂಟಾಗಬಹುದು. ಹೊಸ ರೋಗ ಉತ್ಪನ್ನವಾಗಿ ಜನರು ಮೂರು ತಿಂಗಳು ಎಚ್ಚರವಾಗಿರಬೇಕು. ಬಿಸಿಲು ಗರಿಷ್ಠ ಮಟ್ಟಕ್ಕೆ ತಲುಪಿ ಬೆಂಕಿಯ ಗಾಳಿ ಸೃಷ್ಟಿಯಾಗಿ ಉತ್ತರ ಭಾರತದ ಕೆಲವು ಪ್ರದೇಶದಲ್ಲಿ ಜೀವಹಾನಿಯಾಗುವ ಸಂದರ್ಭ ಎದುರಾಗಬಹುದು.

    ಗಾಣಗಾಪುರ ಅಭಿವೃದ್ಧಿಯಾಗಲಿ

    ದತ್ತ ಎಂದರೆ ಕೊಡುವವನು, ದಾತ ಎಂದರ್ಥ. ಅವನಿರುವ ಗಾಣಗಾಪುರ ಕ್ಷೇತ್ರದ ಸಮಸ್ಯೆ, ಅಲ್ಲಿ ಭಕ್ತರು ಅನುಭವಿಸುವ ಸಂಕಷ್ಟ ಗಮನಿಸಿ ಕೇಂದ್ರ ಅಥವಾ ರಾಜ್ಯ ಸರ್ಕಾರ ಕಾಶಿ, ಉಜ್ಜಯಿನಿಯಲ್ಲಿ ಮಾಡಿದ ಬದಲಾವಣೆಯನ್ನು ಇಲ್ಲೂ ತರಬೇಕು. ಇಲ್ಲಿನ ವ್ಯವಸ್ಥೆ ಹಾಳಾಗಿದೆ. ಧರ್ಮಸ್ಥಳ, ಶೃಂಗೇರಿ, ಕೊಲ್ಲೂರು ಎಲ್ಲ ಕಡೆ ಅನ್ನದಾನ ನಡೆಯುತ್ತದೆ. ಇಷ್ಟು ದೊಡ್ಡ ಕ್ಷೇತ್ರದಲ್ಲಿ ಊಟ ಸಿಗುವುದಿಲ್ಲ. ವಸತಿ ವ್ಯವಸ್ಥೆ ಇಲ್ಲ. ಕೂಡಲೇ ಪ್ರಧಾನಿಯವರು ಮಧ್ಯಪ್ರವೇಶ ಮಾಡಿ ಸಮಗ್ರ ಅಭಿವೃದ್ಧಿಗೆ ಕ್ರಮಕೈಗೊಳ್ಳಬೇಕು.

    ಕರ್ನಾಟಕದಲ್ಲಿ

    ಗುರು ಮೇಷ ರಾಶಿಗೆ ಬಂದು ಗುರು ರಾಹು ಸಂಧಿಕಾಲದಿಂದ ಪರಿಪೂರ್ಣವಾಗಿ ಚುನಾವಣೆಯಲ್ಲಿ ಏಕೈಕವಾಗಿ ಗೆಲ್ಲುವುದು ರಾಷ್ಟ್ರ ಆಳುವ ಪಕ್ಷಕ್ಕೆ ಕಷ್ಟವಾಗಲಿದೆ. ರಾಹು ಶತ್ರುಗಳಿಗೆ ಬಲ ಕೊಡುತ್ತಾನೆ. ಹೊಸ ಮುಖ, ಮಹಿಳೆಯರಿಗೆ ಮಣೆ ಹಾಕುವ ಪಕ್ಷಗಳು ಹೆಚ್ಚಿನ ಲಾಭ ಗಳಿಸುತ್ತವೆ. ರಾಜ್ಯದ ಕರಾವಳಿ ಪ್ರದೇಶದಲ್ಲಿ ಮಳೆಯಿಂದ ಸಮಸ್ಯೆಯಾಗಲಿದೆ. ಬೆಂಗಳೂರಿಗೆ ಮಳೆಯಿಂದ ಕಷ್ಟ ನಷ್ಟ ಆಗಲಿದೆ. ಅಕಾಲಿಕ ಮಳೆ ಆಗಲಿದೆ. ಶೀತಗಾಳಿ ಬೀಸಲಿದೆ. ಏಪ್ರಿಲ್ ಹಾಗೂ ಮೇ ಅರ್ಧ ಭಾಗ ಎಚ್ಚರಿಕೆಯಲ್ಲಿ ಇರಬೇಕಾಗುತ್ತದೆ. ಕಬ್ಬು ಅಡಕೆ, ಭತ್ತ, ರಾಗಿ, ಎಣ್ಣೆ ಕಾಳು ಉತ್ಪಾದನೆ ಕಡಿಮೆ, ಬೆಲೆ ಜಾಸ್ತಿ ಇರಲಿದೆ. ಏಲಕ್ಕಿ, ಕಾಳು ಮೆಣಸಿಗೆ ರೋಗದ ಬಗ್ಗೆ ಎಚ್ಚರ ಇರಬೇಕು. ಚಿನ್ನ, ಬೆಳ್ಳಿ ಇಳಿಕೆಯಾಗಲಿದೆ. ರೋಗ ರುಜಿನ ಭೀತಿ ಕಾಣಿಸುತ್ತಿಲ್ಲ. ಈ ಸಂವತ್ಸರದಲ್ಲಿ ನಾಯಕ ಬುಧ- ಅವನೇ ರಾಜ, ಅವನಿಗೆ ಮಂತ್ರಿ ಶುಕ್ರ. ಅವರಿಬ್ಬರೂ ಮಿತ್ರರು. ರಾಷ್ಟ್ರದಲ್ಲಿ ದುಷ್ಟರಿಗೆ ಬುದ್ಧಿ ಕಲಿಸಿ, ಶಿಷ್ಟರ ರಕ್ಷಣೆ ಆಗಲಿದೆ. ಸೇನಾಧಿಪತಿ ಗುರು, ಸಸ್ಯ ಕಾಪಾಡುವವನು ಚಂದ್ರ, ಧಾನ್ಯ ಕಾಯುವವ ಶನಿ, ಅರ್ಘ್ಯಾದಿಪ ಗುರು, ಪ್ರಾಣಿ ಕಾಪಾಡುವುದು ಬಲರಾಮ. ಇದೇ ಈ ಸಂವತ್ಸರದ ಮಂತ್ರಿಮಂಡಲ.

    ದೇಶದೊಳಗೆ ಏನು…

    ಶನಿಯಾಗಿರುವವನು ಕುಂಭದಲ್ಲಿ ಇದ್ದಾನೆ. ಮನೆಗೆ ಯಜಮಾನ ಎಂದುಕೊಂಡು ನನ್ನ ಕಾನೂನು ನಾನು ಜಾರಿ ಮಾಡುತ್ತಾ ಹೋಗುತ್ತೇನೆ ಎಂದರೆ ನೆಮ್ಮದಿಯಿಂದ ಬಾಳಲು ಸಾಧ್ಯವೇ? ಹಾಗೆಯೇ, ಪ್ರಧಾನಿ ಅಥವಾ ಕೇಂದ್ರ ಸರ್ಕಾರ ಸಂಯಮದಿಂದ ಇರಬೇಕಾಗುತ್ತದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೋದಿ ಇನ್ನಷ್ಟು ಖ್ಯಾತರಾಗುತ್ತಾರೆ. ಪ್ರಧಾನಮಂತ್ರಿ ಮೇಲೆ ದೋಷಾರೋಪಣೆ ಮಾಡಲು ಸಾಧ್ಯವಿಲ್ಲ. ಆದರೂ ಒಂದಷ್ಟು ಸವಾಲು ಎದುರಾಗಬಹುದು. ರಾಹು ಕೇತು ಬದಲಾವಣೆಯಿಂದ ಚೈನಾದಿಂದ ಯುದ್ಧಭೀತಿ ಇರಲಿದೆ. ಲಂಕಾ, ಬಾಂಗ್ಲಾದವರು ಚೈನಾ ದಾಸ್ಯಕ್ಕೆ ಸಿಲುಕಿ ಜಾಗ ಕಳೆದುಕೊಳ್ಳುವ ಭೀತಿ ಉಂಟಾಗಬಹುದು.

    ಸೆ. 23ರ ನಂತರ ಮಳೆ, ಗಾಳಿ ಹೆಚ್ಚಾಗಿ ಬೆಳೆ ನಷ್ಟಕ್ಕೆ ಹೋಗುತ್ತದೆ. ಹಿಮಾಲಯ ವಿಸ್ತಾರ ಕುಗ್ಗುತ್ತಿದೆ. ಉತ್ತರ ದಕ್ಷಿಣದ ನಡುವೆ ಅನುದಾನ ಹಂಚಿಕೆ ತಾರತಮ್ಯ ವಿಚಾರದ ದನಿ ದೊಡ್ಡದಾಗಲಿದೆ. ಶನಿ ಕುಂಭ ರಾಶಿಗೆ ಬಂದ ಕೂಡಲೇ ಅಗತ್ಯ ವಸ್ತುಗಳ ಬೆಲೆ ಏರಿಕೆ ಕಾಣಿಸುತ್ತದೆ. ಮುಂದೆ ರಾಹು ಕೇತು ಬದಲಾವಣೆ ಸಮಯದಲ್ಲಿ ಚಂಡಮಾರುತ, ವಿಮಾನ ದುರಂತ ಪರಿಸ್ಥಿತಿ ಒದಗಿ ಬರಲಿದೆ.

    ಇದನ್ನೂ ಓದಿ: ಬೆರಳ ತುದಿಯಲ್ಲೇ ಇದೆ ಬದಲಿಸುವ ಶಕ್ತಿ; ಚುನಾವಣೆ ಸುಧಾರಣೆಗೆ ಆಗಲಿ ಬದಲಾವಣೆ..

    ಪ್ರಧಾನಿ ಹತ್ಯೆಗೆ ಪ್ರಯತ್ನ ನಡೆದೇ ನಡೆಯಲಿದೆ. ಗುರು ರಾಹು ಸಂಧಿ ಹಾಗೂ ರಾಹು ಕೇತುಗಳ ಸ್ಥಾನ ಬದಲಾವಣೆ ಆಗುತ್ತದೆ. ಅಲ್ಲಿಂದ ಮುಂದಿನ ಏಪ್ರಿಲ್​ವರೆಗೂ ಜೀವರಕ್ಷಣೆಗೆ ಹೆಚ್ಚಿನ ಗಮನ ಕೊಡಬೇಕಾಗುತ್ತದೆ.

    2024ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿಯವರು ಸೋಲುತ್ತಾರೆ ಎಂದು ಹೇಳಲು ಯಾವುದೇ ಗ್ರಹವಿಲ್ಲ. ಎರಡು ಮೂರು ಸಂವತ್ಸರ ಅವರೇ ಇರುತ್ತಾರೆ, ಆದರೆ, ಸ್ವಂತ ಪಕ್ಷದಲ್ಲಿ ಒಂದು ಸುದ್ದಿ ಪ್ರಸಾರವಾಗಿ ಒಡಕು ಕಾಣಬಹುದು. ಪೂರ್ತಿ ಬಹುಮತ ಬಾರದೇ ಹೋದರೆ ಗೊಂದಲ ಸೃಷ್ಟಿಯಾಗುತ್ತದೆ.

    ಇದನ್ನೂ ಓದಿ: ಹತ್ತು ವರ್ಷಗಳಿಗೂ ಅಧಿಕ ಕಾಲ ಒಂದಾದ ಮೇಲೊಂದು ಹೆರಿಗೆ; 28ನೇ ವಯಸ್ಸಿನಲ್ಲೇ 9 ಮಕ್ಕಳ ಮಹಾತಾಯಿ!

    ಇವತ್ತಿನ ಪರಿಸ್ಥಿತಿಯಲ್ಲಿ ಮುಂದಿನ ವರ್ಷ ಏಪ್ರಿಲ್ 9ರವರೆಗೂ ನೋಡಿರುವ ವಿಶ್ಲೇಷಣೆಯ ಪ್ರಕಾರ ಮುಂದಿನ ಚುನಾವಣೆ ಹೊತ್ತಿಗೆ ಮೇಷದಲ್ಲಿರುವ ಗುರು ವೃಷಭ ರಾಶಿಗೆ ಹೋಗುತ್ತಾನೆ, ಅಲ್ಲಿರುವ ಶನಿ ಮುಂದೆ ಹೋಗುತ್ತಾನೆ. 2025ರಲ್ಲಿ ಶನಿ ವಕ್ರವಾಗುತ್ತಾನೆ. 2025ರಲ್ಲಿ ಶನಿ ಗುರು ಮನೆಗೆ ಹೋಗುತ್ತಾನೆ. ಶನಿ ವಕ್ರವಾಗಲಿದ್ದು, ಪರಿಣಾಮ 280 ಸ್ಥಾನ ಪಡೆಯಲು ಮೋದಿ ಹರಸಾಹಸ ಪಡಬೇಕಾಗುತ್ತದೆ. ನ್ಯಾಯಾಂಗದ ವಿಚಾರದಲ್ಲಿ ಅವರು ಸಾಧ್ಯವಾದಷ್ಟು ದೂರ ಇದ್ದರೆ ಸೂಕ್ತವಾದೀತು. ತುಂಬಾ ಮುಂದೆ ಹೋದರೆ ಅವರ ಕೈಕಟ್ಟಲಿದೆ. ಈಗಿನ ವಾತಾವರಣದಲ್ಲಿ ಏಕರೂಪ ನಾಗರಿಕ ಸಂಹಿತೆಯಂತಹ ವಿಚಾರದಲ್ಲಿ ಕೈಹಾಕದೇ ಇರುವುದು ಸೂಕ್ತ. ಏಪ್ರಿಲ್ 21ರಿಂದ ವಿವಿಧ ಕಾರಣಗಳಿಂದ ಜನವಿರೋಧದ ಅಲೆ ಎದುರಿಸಬೇಕಾಗುತ್ತದೆ. ದೇಶದೊಳಗಿನ ಆಂತರಿಕ ಉಪಟಳ ಹೆಚ್ಚಾಗಲಿದ್ದು, ಗುಪ್ತಚರ ಇನ್ನಷ್ಟು ಬಲಗೊಳ್ಳಬೇಕಾಗಿದೆ. ಸೈನ್ಯ ಸಿದ್ಧವಾಗಿರಬೇಕಾಗುತ್ತದೆ. ರಾಹು ತನ್ನ ಪಥ ಬದಲಾವಣೆ ಮಾಡುವ ಕಾರಣ ಪ್ರಧಾನ ಪ್ರತಿಪಕ್ಷದಲ್ಲೂ ಆದರೆ ಎಲ್ಲ ವಿರೋಧ ಪಕ್ಷಗಳು ಒಂದಾಗುವ ಪ್ರಯತ್ನ ಮಾಡುತ್ತಾರೆ.

    ಒಬ್ಬರು ಅಥವಾ ಇಬ್ಬರು ಮಕ್ಕಳಿರುವ ದಂಪತಿಗೆ ಭರ್ಜರಿ ಆಫರ್​: ಮೂರನೇ ಮಗುವಿಗೆ ಜನ್ಮನೀಡಿದರೆ 50 ಸಾವಿರ ರೂಪಾಯಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts