More

    ಯಾರೋ ಮಾಡಿದ ತಪ್ಪಿಗೆ, ಇನ್ನಾರಿಗೋ ಶಿಕ್ಷೆ

    ಶ್ರೀನಿವಾಸಪುರ ರೈತರ ಬದುಕು ಕಸಿದ ತೆರವು ಕಾರ್ಯಾಚರಣೆ

    ಯಾರೋ ಮಾಡಿದ ತಪ್ಪಿಗೆ, ಇನ್ನಾರಿಗೋ ಶಿಕ್ಷೆ

    ಕೋಲಾರ: ದೇಶಕ್ಕೆ ಸ್ವಾತಂತ್ರ ಬರುವುದಕ್ಕೂ ಮೊದಲಿನಿಂದಲೇ ಅನುಭವದಲ್ಲಿರುವ ಹಾಗೂ ಸಂಬಂಧಪಟ್ಟ ದಾಖಲೆಗಳಿದ್ದರೂ ರೈತರ ಜಮೀನುಗಳನ್ನು “ಒತ್ತುವರಿ’ ನೆಪದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಇತ್ತೀಚಿಗೆ ತೆರವುಗೊಳಿಸಿದ್ದು, ಇದರಿಂದಾಗಿ ನೂರಾರು ರೈತರು ಬೀದಿಪಾಲಾಗುವಂತಾಗಿದೆ.
    ಅರಣ್ಯ ಮತ್ತು ಕಂದಾಯ ಇಲಾಖೆ ನಡುವಿನ ಭೂಮಿ ಗೊಂದಲ ಇಂದು&ನಿನ್ನೆಯದಲ್ಲ. ಈ ಸಮಸ್ಯೆ ನಿರಂತರವಾಗಿ ಮುಂದುವರಿದುಕೊಂಡು ಬಂದಿದ್ದು, ಶ್ರೀನಿವಾಸಪುರದಲ್ಲಿ ಆಗಿರುವ ತೆರವು ಕಾರ್ಯಚರಣೆಯಿಂದ ಯಾರೋ ಮಾಡಿದ ತಪ್ಪಿಗೆ, ಮತ್ಯಾರಿಗೋ ಶಿಕ್ಷೆ ಎಂಬಂತಾಗಿದೆ…?.
    ಹಲವು ದಶಕಗಳ ಹಿಂದೆಯೇ ನಿಯಮಗಳ ಪ್ರಕಾರ ರೈತರಿಗೆ ಭೂಮಿ ಮಂಜೂರಾಗಿರುವುದಕ್ಕೆ ದಾಖಲೆಗಳು ಇವೆ. ಮೈಸೂರು ಮಹಾರಾಜರ ಕಾಲದಿಂದಲೂ ಜಮೀನಿನಲ್ಲಿ ಉಳುಮೆ ಮಾಡಿಕೊಂಡು ಬರಲಾಗುತ್ತಿದೆ. ಆ ನಂತರ ಬದಲಾದ ಸರ್ಕಾರಗಳು ತೆಗೆದುಕೊಂಡ ತೀರ್ಮಾನಗಳಿಂದ ಕಾನೂನುಗಳ ಪ್ರಕಾರ ದಾಖಲೆಗಳನ್ನು ನಿರ್ವಹಿಸಿ ರೈತರಿಗೆ ಮಂಜೂರು ಮಾಡಲಾಗಿದೆ.
    ಕಂದಾಯ ಇಲಾಖೆಯಿಂದ ರೈತರ ಜಮೀನಿಗೆ ಸಂಬಂಧಪಟ್ಟ ಹಂಗಾಮಿ ಸಾಗುವಳಿ ಚೀಟಿ, ಕೈ ಬರಹ ಪಹಣಿ, ನಕಾಶೆ, ಕಚೇರಿ ಟಿಪ್ಪಣಿ, ಮೆಮೋ, ಫೈಸಲ್​ ಪತ್ರಿಕೆಯ ಎಕ್ಸ್​ಟ್ರಾಕ್ಟ್​, ಗ್ರಾಮಸ್ಥರ ಮಹಜರು, ದರಖಾಸ್ತು ಅಪ್ಲಿಕೇಷನ್​ ಫಾರ್ಮ ದಾಖಲೆಗಳ ಕಡತ ನಿರ್ವಹಣೆ ಮಾಡಿಯೇ ತಾಲೂಕು ಕಚೇರಿಯ ಅಮಲ್ದಾರ್​ ಮಂಜೂರು ಮಾಡಿದ್ದಾರೆ.
    ಸ್ವಾತಂತ್ರ್ಯ ನಂತರವೂ ಒಬ್ಬರಿಂದ ಮತ್ತೊಬ್ಬರಿಗೆ ಮಾರಾಟವಾಗಿರುವುದಕ್ಕೆ ದಾಖಲೆಗಳು ಇವೆ. ಬ್ಯಾಂಕಿನಿಂದ ಬೆಳೆ, ಮಾರ್ಟ್​ಗೇಜ್​ ಸಾಲ, ತೋಟಗಾರಿಕೆ, ಕೃಷಿ ಇಲಾಖೆಗಳಿಂದ ಹಲವು ಯೋಜನೆಗಳಡಿ ಸೌಲಭ್ಯಗಳು ಈಗ ತೆರವುಗೊಳಿಸಿರುವ ಜಮೀನಿನ ಆಧಾರದ ಮೇಲೆಯೇ ಸಿಕ್ಕಿವೆ. ಪವರ್​ಗ್ರೀಡ್​ ಕಾಪೋರ್ರೇಷನ್​ ಆ್​ ಇಂಡಿಯಾದಿಂದ ಜಮೀನಿನಲ್ಲಿ ಟವರ್​ ಅಳವಡಿಕೆ ಮೇಲೆೆ ಹಾನಿಯಾಗಿರುವಾಗ ಅಂಥ ಜಮೀನಿಗೆ ಪರಿಹಾರವೂ ಸಿಕ್ಕಿದೆ.
    ಜಮೀನಿನಲ್ಲಿ ರೈತರು ಬೆಳೆಸಿದ್ದ ದೊಡ್ಡ ದೊಡ್ಡ ಮಾವಿನ ಮರ, ಜಂಬು ನೇರಳೆ ಮರಗಳನ್ನು ನಾಶಪಡಿಸಲಾಗಿದೆ. ಮಾವಿನ ಸಲನ್ನೇ ನಂಬಿ ಜೀವನ ಮಾಡುತ್ತಿದ್ದ ರೈತರ ಬದುಕು ಮತ್ತಷ್ಟು ಹುಳಿಯಾಗಿದೆ. ಇದರಿಂದಾಗಿ ಬೇಸತ್ತಿರುವ ರೈತರು ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ಅರಣ್ಯ ಇಲಾಖೆ ವ್ಯಾಪ್ತಿಗೆ ಸೇರಿರುವ ಜಮೀನಿನ ಗಡಿ ಗುರುತಿಸಿ ಹಿಂದೆಯೇ ಟ್ರಂಚ್​ ನಿರ್ಮಿಸಿ, ನೀಲಗಿರಿ, ಹೊಂಗೆ, ಗಿಡ ಮರಗಳನ್ನು ನೆಡಲಾಗಿತ್ತು. ಕಾಡು ಪ್ರಾಣಿ, ಪಗಳಿಗೆ ನೀರಿನ ವ್ಯವಸ್ಥೆ ಮಾಡಲು ತೊಟ್ಟಿಗಳನ್ನು ನಿರ್ಮಿಸಲಾಗಿತ್ತು. ಇದೀಗ ಅರಣ್ಯ ಇಲಾಖೆ ತೀರ್ಮಾನಕ್ಕೆ ತೀವ್ರ ಪ್ರತಿರೋಧ ವ್ಯಕ್ತವಾಗಿದೆ.

    ನೋಟಿಸ್​ ನೀಡಿಲ್ಲ: ಒತ್ತುವರಿ ತೆರವು ಗೊಳಿಸಬೇಕಾದರೆ ಸಂಬಂಧಪಟ್ಟ ಇಲಾಖೆಯಿಂದ ನೋಟಿಸ್​ ನೀಡಬೇಕು. ಆದರೆ ಅರಣ್ಯ ಇಲಾಖೆ ಅಧಿಕಾರಿಗಳು ನೋಟಿಸ್​ ನೀಡದೆ ಒತ್ತುವರಿ ತೆರವಿಗೆ ಆಗಮಿಸಿದ್ದಾಗ ರೈತರು ಅಡ್ಡಿಪಡಿಸಿದ್ದಾರೆ. ನಮ್ಮ ಜಮೀನಿಗೆ ಸಂಬಂಧಿಸಿದ ಸಂಪೂರ್ಣ ದಾಖಲೆಗಳು ಇವೆ. ಪರಿಶೀಲನೆ ನಡೆಸಿ ಕ್ರಮಕೈಗೊಳ್ಳಿ ಎಂದು ಒತ್ತಾಯಿಸಿದ್ದಾರೆ. ಸೌಜನ್ಯಕ್ಕೂ ರೈತರ ಅಹವಾಲುಗಳನ್ನು ಪರಿಗಣಿಸದ ಇಲಾಖೆ ಸಿಬ್ಬಂದಿ ಜಮೀನಿನಿಂದ ಹೊರಗೆ ತಂದು ಹಾಕಿ ತೆರವು ಮುಂದುವರಿಸಿದ್ದು, ರೈತರ ಆಕ್ರೋಶಕ್ಕೆ ಕಾರಣವಾಗಿದೆ.

    ಸ್ವಾತಂತ್ರ್ಯಕ್ಕೂ ಪೂರ್ವದಲ್ಲೇ ರೈತರಿಗೆ ನೀಡಿದ್ದ ಜಾಗ
    ಬರಗಾಲ ಎದುರಾಗಿದ್ದಾಗ ಸಮಾಜದಲ್ಲಿ ಆಹಾರ ಸಮಸ್ಯೆ ಹೆಚ್ಚಾಯಿತು. ಇದನ್ನು ತಡೆಗಟ್ಟಲು ರೈತರು ಸಾಗುವಳಿ ಮಾಡಿ ರಾಜ್ಯಕ್ಕೆ ಆಹಾರ ಧಾನ್ಯಗಳನ್ನು ಪೂರೈಕೆ ಮಾಡಲು 1942&43ರ ಸಾಲಿನಲ್ಲಿ ಷರತ್ತುಗಳನ್ನು ವಿಧಿಸಿ ಜಾಗ ನೀಡಲಾಗಿತ್ತು. 5 ವರ್ಷ ಪೂರೈಸಿದ ನಂತರವೂ ಸಾಗುವಳಿ ಮುಂದುವರಿಸಿದ್ದ ರೈತರಿಂದ ಸರ್ಕಾರವೇ ಕಿಮ್ಮತ್ತು ಪಾವತಿಸಿಕೊಂಡು ಮಂಜೂರು ಮಾಡಿದೆ.

    ತಾಲೂಕು ಕಚೇರಿಯಲ್ಲಿ ಕಾಂಚಾಣ ಕುಣಿತ!
    ನಮ್ಮ ಜಮೀನಿಗೆ ಸಂಬಂಧಿಸಿದ ಹಾಲಿ ದಾಖಲೆಗಳನ್ನು ಪಡೆದುಕೊಳ್ಳಲು ತಾಲೂಕು ಕಚೇರಿಯ ದಾಖಲೆ ವಿಭಾಗಕ್ಕೆ ಅರ್ಜಿ ಹಾಕಲಾಗಿತ್ತು. ಅಲ್ಲಿ ದಾಖಲೆಗಳ ನಕಲುಗಳ ಪ್ರತಿಗಳನ್ನು ಪಡೆದುಕೊಳ್ಳಲು ಹಣ ನೀಡಿದ್ದೇವೆ. ಇಲ್ಲದಿದ್ದರೆ ನಮಗೆ ದಾಖಲೆಗಳು ಸುಲಭವಾಗಿ ಸಿಗುತ್ತಿರಲಿಲ್ಲ. ತಾಲೂಕು ಕಚೇರಿಯಲ್ಲಿ ದುಡ್ಡು ಕೊಡದಿದ್ದರೆ ಕೆಲಸ ಆಗುವುದಿಲ್ಲ ಎಂಬ ಮಾತು ನಿಜವಾಗಿದೆ ಎಂದು ರೈತರು ಆರೋಪಿಸಿದ್ದಾರೆೆ.

    ಪವರ್​ಗ್ರೀಡ್​ ಟವರ್​ ತೆರವುಗೊಳಿಸಿ
    ಹಲವು ದಶಕಗಳಿಂದ ಜಮೀನಿನಲ್ಲಿ ಸಾಗುವಳಿ ಮಾಡಿಕೊಂಡು ಬರಲಾಗಿದೆ. ಮಾವಿನ ಗಿಡಗಳನ್ನು ನೆಟ್ಟು ಮಕ್ಕಳಂತೆ ಪೋಷಿಸಲಾಗಿದೆ. ಅರಣ್ಯ ಇಲಾಖೆಯವರು ಏಕಾಏಕಿ ಒತ್ತುವರಿ ಮಾಡಿ ಮರಗಳನ್ನು ನಾಶಪಡಿಸುವ ಮೂಲಕ ಬದುಕು ಕಸಿದುಕೊಂಡಿದ್ದಾರೆ ಎಂದು ರೈತ ಚೌಡರೆಡ್ಡಿ ಅಳಲು ತೊಡಿಕೊಂಡಿದ್ದಾರೆ. ಸರ್ಕಾರದಿಂದ ಮಂಜೂರಾಗಿರುವ ಸಂಬಂಧ ದಾಖಲೆಗಳು ಲಭ್ಯವಿದೆ. ಅರಣ್ಯ ಅಧಿಕಾರಿಗಳು ನೋಟಿಸ್​ ನೀಡದೆ ಒಕ್ಕಲೆಬ್ಬಿಸಿದ್ದಾರೆ. ನಮ್ಮ ಜಮೀನಿನಲ್ಲಿದ್ದ ಬಹು ವರ್ಷಗಳ ಮಾವು ಮರಗಳು, ಕೊಳವೆಬಾವಿ, ಶೆಡ್​ಗಳನ್ನು ಹಾನಿ ಪಡಿಸಿದ್ದಾರೆ. ಪವರ್​ ಗ್ರೀಡ್​ ಕಾಪೋರ್ರೇಷನ್​ನಿಂದ ಅಳವಡಿಸಲಾಗಿರುವ ಟವರ್​ಗಳನ್ನು ತೆರವುಗೊಳಿಸಿ ಅರಣ್ಯ ಇಲಾಖೆಗೆ ಸೇರಿರುವ ಜಾಗ ಎಂದು ಸಾಬೀತುಪಡಿಸಲಿ ಎಂದು ಸವಾಲು ಹಾಕಿದ್ದಾರೆ.

    ಅಧಿಕಾರಿಗಳ ಅಮಾನತಿಗೆ ಪಟ್ಟು
    ಇತ್ತೀಚೆಗೆ ರೈತರ ತೋಟಗಳಿಗೆ ಭೇಟಿ ನೀಡಿದ್ದ ಮಾಜಿ ಸಚಿವ ಸಿ.ಟಿ.ರವಿ ನೇತೃತ್ವದ ಬಿಜೆಪಿ ಬರ ಅಧ್ಯಯನ ತಂಡವು ರೈತರಿಗೆ ಆಗಿರುವ ಅನ್ಯಾಯ ಖಂಡಿಸಿ, ಸರ್ಕಾರ, ಜಿಲ್ಲಾಡಳಿತ, ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಜಮೀನು ಕಳೆದುಕೊಂಡಿರುವ ರೈತರ ಪರವಾಗಿ ಕಾನೂನು ಹೋರಾಟ ನಡೆಸಲು ನೆರವಾಗುತ್ತೇವೆ. ರೈತರನ್ನು ಒಕ್ಕಲೆಬ್ಬಿಸಿರುವ ಅಧಿಕಾರಿಗಳ ಅಮಾನತಿಗೆ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು ಎಂದು ಸಿ.ಟಿ.ರವಿ ಭರವಸೆ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts