More

    ಹೊರಗಿನವರಿಗೂ ಊಟದ ವ್ಯವಸ್ಥೆ

    ನಿಪ್ಪಾಣಿ: ಪರ ರಾಜ್ಯದಿಂದ ಗಡಿಭಾಗದ ಮೂಲಕ ರಾಜ್ಯಕ್ಕೆ ಬರುತ್ತಿರುವವರಿಗೆ ಊಟದ ಮತ್ತು ಆರೋಗ್ಯ ತಪಾಸಣೆ ಮಾಡುವ ವ್ಯವಸ್ಥೆ ಕುರಿತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಪ್ರಧಾನ ಕಾರ್ಯದರ್ಶಿ ವಿಜಯಭಾಸ್ಕರ್ ಅವರಿಗೆ ತಿಳಿಸಲಾಗಿದೆ.

    ಶೀಘ್ರದಲ್ಲೇ ಈ ಕುರಿತು ಆದೇಶ ಬರಲಿದ್ದು, ತಕ್ಷಣ ಅವರಿಗೆ ವ್ಯವಸ್ಥೆ ಕಲ್ಪಿಸಲಿದ್ದೇವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು. ಸ್ಥಳೀಯ ನಗರಸಭೆಯ ಸಭಾಗೃಹದಲ್ಲಿ ಮಂಗಳವಾರ ಆಯೋಜಿಸಿದ್ದ ತಾಲೂಕಿನ ಸರ್ವ ಪಕ್ಷದವರ ಸಭೆಯಲ್ಲಿ ಮಾತನಾಡಿದರು. ಮಹಾರಾಷ್ಟ್ರದಿಂದ ನೂರಾರು ಜನರು ಗಡಿಯಲ್ಲಿ ನುಸುಳಿ ಬರಲು ಪ್ರಯತ್ನಿಸುತ್ತಿದ್ದಾರೆ.

    ಅವರಲ್ಲಿ ನಮ್ಮ ರಾಜ್ಯದವರಿಗೆ ಮಾತ್ರ ಪ್ರವೇಶಕ್ಕೆ ಅನುಮತಿ ನೀಡಲಾಗುತ್ತಿದೆ. ಕರೊನಾ ವೈರಸ್ ತಾಲೂಕಿನಲ್ಲಿ ಬರದಂತೆ ಅಗತ್ಯ ಎಚ್ಚರಿಕೆ ವಹಿಸಲಾಗಿದೆ ಎಂದರು. ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ, ಸ್ಥಳೀಯ ಪೊಲೀಸ್ ಹಾಗೂ ಆರೋಗ್ಯ ಇಲಾಖೆ ಮತ್ತು ನಗರಸಭೆ ಸಿಬ್ಬಂದಿ ಕರೊನಾ ಸೋಂಕು ಹರಡದಂತೆ ತಡೆಯಲು ಶ್ರಮಿಸುತ್ತಿದ್ದಾರೆ. ಆದ್ದರಿಂದ ತಾಲೂಕಿನಲ್ಲಿ ಯಾವುದೇ ಶಂಕಿತರು ಕಂಡು ಬಂದಿಲ್ಲ.

    ಕೇಂದ್ರ ಸರ್ಕಾರವು ಘೋಷಿಸಿದ ಪ್ಯಾಕೇಜ್ ಬಡವರ ಖಾತೆಗೆ ಜಮೆ ಆಗಲಿದೆ. ನೋಂದಣಿಯಾದ ಕಟ್ಟಡ ಕಾರ್ಮಿಕರಿಗೆ ಒಂದು ಸಾವಿರ ರೂ. ಪ್ರತಿ ತಿಂಗಳಂತೆ ಮೂರು ತಿಂಗಳವರೆಗೆ ಸಿಗಲಿದೆ. ಪಡಿತರ ಅಂಗಡಿಯಿಂದ ಧಾನ್ಯ ಸಿಗಲಿದೆ. ನೋಂದಣಿ ಮಾಡಿಕೊಳ್ಳದವರಿಗೂ ಸೌಲಭ್ಯ ಕಲ್ಪಿಸಲು ಪ್ರಯತ್ನ ನಡೆಸಿದ್ದೇವೆ. ರೈತರಿಗೆ ತಮ್ಮ ಬೆಳೆಗಳನ್ನು ಮಾರಲು ಪೊಲೀಸರಿಂದ ಅನುಮತಿ ನೀಡಲಾಗುತ್ತಿದೆ ಎಂದರು.

    ಮಾಜಿ ಶಾಸಕ ಕಾಕಾಸಾಹೇಬ ಪಾಟೀಲ ಮಾತನಾಡಿ, ಜಿಲ್ಲೆಯಲ್ಲಿ ಎಲ್ಲೂ ಟಾಸ್ಕ್‌ಫೋರ್ಸ್ ಸಭೆ ನಡೆದಿಲ್ಲ. ತಹಸೀಲ್ದಾರರಿಗೆ ಈ ಕುರಿತು ತಿಳಿಸಿದ ನಂತರ ಈ ಸಭೆ ಆಯೋಜಿಸಲಾಗಿದೆ ಎಂದು ದೂರಿದ ಅವರು, ನಮಗೂ ಸಹ ಜನಜಾಗೃತಿ ಮಾಡಲು ಅನುಮತಿ ನೀಡಬೇಕು ಎಂದರು.

    ಮಾಜಿ ಸಚಿವ ವೀರಕುಮಾರ್ ಪಾಟೀಲ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಲಕ್ಷ್ಮಣರಾವ ಚಿಂಗಳೆ, ನಗರಸಭೆ ಮಾಜಿ ಅಧ್ಯಕ್ಷ ವಿಲಾಸ್ ಗಾಡಿವಡ್ಡರ ಮಾತನಾಡಿದರು. ತಹಸೀಲ್ದಾರ್ ಪ್ರಕಾಶ ಗಾಯಕವಾಡ, ಮಾಜಿ ಶಾಸಕ ಸುಭಾಷ ಜೋಶಿ, ಸುನೀತಾ ಹೊನಕಾಂಬಳೆ, ಶಿವಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಬಾಬಾಸಾಹೇಬ ಖಾಂಬೆ, ಸಿ.ಎ. ಖರಾಡೆ, ನಗರಸಭೆ ಸದಸ್ಯೆ ಸೋನಲ್ ಕೋಠಾಡಿಯಾ, ಸಂಜಯ ಸಾಂಗಾವಕರ, ದಿಲೀಪ ಪಠಾಡೆ, ಅವಿನಾಶ ಕಟ್ಟಿ, ಜಯರಾಮ ಮಿರಜಕರ, ಚಿಕ್ಕೋಡಿ ಡಿವೈಎಸ್‌ಪಿ ಮನೋಜ್‌ಕುಮಾರ್ ನಾಯಕ್, ಸಿಪಿಐ ಸಂತೋಷ್ ಸತ್ಯನಾಯಕ್, ಪೌರಾಯುಕ್ತ ಮಹಾವೀರ ಬೋರಣ್ಣವರ, ನಗರಸಭೆ ಸದಸ್ಯರು, ಅಧಿಕಾರಿಗಳು, ವಿವಿಧ ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts